ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ, ಮಗಳ ಅನುಬಂಧ

Last Updated 15 ಮೇ 2019, 10:30 IST
ಅಕ್ಷರ ಗಾತ್ರ

ನಟಿ ಹರಿಪ್ರಿಯಾ ಡಬಲ್‌ ಟೆನ್ಷನ್‌ನಲ್ಲಿದ್ದರು. ತೆರೆಯ ಮೇಲಿನ ಅಮ್ಮ ಮತ್ತು ಜನ್ಮ ನೀಡಿದ ಅಮ್ಮ ಇಬ್ಬರೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದೇ ಅವರ ಟೆನ್ಷನ್‌ಗೆ ಕಾರಣವಾಗಿತ್ತು. ಕೊನೆಗೆ, ಸಾವರಿಸಿಕೊಂಡ ಅವರು ಪಕ್ಕದಲ್ಲಿದ್ದ ಸುಮಲತಾ ಅವರನ್ನು ನೋಡುತ್ತಲೇ ಮಾತಿಗೆ ಇಳಿದರು.

‘ಹೀರೊಯಿಸಂ ಮೇಳೈಸಿರುವ ಸಿನಿಮಾಗಳಲ್ಲಿ ಭರ್ಜರಿ ಸಾಹಸ ದೃಶ್ಯಗಳಿರುತ್ತವೆ. ಆದರೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ನಿರೀಕ್ಷಿಸುವುದು ಕಷ್ಟ. ಚಿತ್ರದಲ್ಲಿ ಸಹಜವಾಗಿ ಸಾಹಸ ದೃಶ್ಯಗಳು ಮೂಡಿಬರಲು ಒತ್ತು ನೀಡಿದ್ದೇವೆ’ ಎಂದರು ಹರಿಪ್ರಿಯಾ.

‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದಲ್ಲಿ ಅವರು ವೈದೇಹಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರದು ತನಿಖಾಧಿಕಾರಿ ಪಾತ್ರವಂತೆ. ಚಿತ್ರದ ಟೈಟಲ್‌ನಲ್ಲಿ ‘ಪಾರ್ವತಮ್ಮ’ ಅವರ ಹೆಸರು ಕೇಳಿದಾಗಲೇ ಅವರಿಗೆ ಭಯವಾಗಿತ್ತಂತೆ. ಅಂದಹಾಗೆ ಇದು ಅವರ 25ನೇ ಚಿತ್ರ.

‘ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಎಂಬ ಹೆಸರಿಗೆ ದೊಡ್ಡ ಶಕ್ತಿಯಿದೆ. ಈ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ನನಗೂ ಇತ್ತು. ಕೊನೆಗೆ, ಸುಮಲತಾ ಮೇಡಂ ನಟಿಸುತ್ತಾರೆ ಎಂದಾಗ ಖುಷಿಯಾಯಿತು. ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಜೀವ ತುಂಬುವ ಮತ್ತೊಬ್ಬ ಕಲಾವಿದೆ ಇಲ್ಲ’ ಎಂದು ಹೊಗಳಿದರು.

ಮೈಕ್‌ ಕೈಗೆತ್ತಿಕೊಂಡ ನಟಿ ಸುಮಲತಾ ಆಯಾ ಕಾಲಘಟ್ಟದಲ್ಲಿ ನಾಯಕಿಯರು ಅನುಭವಿಸುವ ತಾಕಲಾಟದ ಪರಾಮರ್ಶೆಗೆ ಇಳಿದರು. ‘ನಮ್ಮ ಕಾಲದಲ್ಲಿ ನಾಯಕಿಯರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಅವಕಾಶ ಇರುತ್ತಿತ್ತು. ಇಂದು ಅಂತಹ ವಾತಾವರಣವೇ ಇಲ್ಲ. ನಟಿಯೊಬ್ಬಳು 25 ಚಿತ್ರಗಳಲ್ಲಿ ನಟಿಸಿದ್ದಾಳೆ ಎನ್ನುವುದು ದೊಡ್ಡ ಸಾಧನೆ’ ಎಂದು ವಿವರಿಸಿದರು.

‘ಇದು ನನ್ನ ಸಿನಿಮಾವಲ್ಲ. ಸಂಪೂರ್ಣ ಕ್ರೆಡಿಟ್‌ ಹರಿಪ್ರಿಯಾಗೆ ಸಲ್ಲಬೇಕು. ಪುತ್ರಿಯರ ಬದುಕು ಚೆನ್ನಾಗಿರಬೇಕು ಎಂದು ಬಯಸುವ ತಾಯಂದಿರೇ ಹೆಚ್ಚಿರುತ್ತಾರೆ. ಮಗಳನ್ನು ಸಮಾಜದ ಸಂಕಷ್ಟ ಎದುರಿಸುವಂತೆ ಬೆಳೆಸುವ ತಾಯಿಯಾಗಿ ನಾನು ತೆರೆಯ ಮೇಲೆ ಕಾಣಿಸಿಕೊಂಡಿದ್ದೇನೆ. ನನ್ನ ವೃತ್ತಿಬದುಕಿನಲ್ಲಿ ಇದೊಂದು ವಿಭಿನ್ನವಾದ ಚಿತ್ರ’ ಎಂದು ಹೇಳಿದರು.

‘ಕ್ರೈಮ್‌ ಥ್ರಿಲ್ಲರ್‌ ಚಿತ್ರ ಇದು. ಇದಕ್ಕೆ ಕಮರ್ಷಿಯಲ್‌ ಸ್ಪರ್ಶ ನೀಡಿದ್ದೇವೆ’ ಎಂದರುನಿರ್ದೇಶಕ ಶಂಕರ್‌ ಜೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ‘ಡಾಲಿ‘ ಖ್ಯಾತಿ ಧನಂಜಯ್‌ ‘ಜೀವಕ್ಕಿಲ್ಲಿ ಜೀವ ಬೇಟೆ’ ಹಾಡು ಬರೆದಿದ್ದಾರೆ. ‘ನೀಲಿ ಬಾನಿನಲ್ಲಿ’ ಹಾಡಿಗೆ ಕಿರಣ್‌ ಕಾವೇರಪ್ಪ ಪದಗಳ ಜೋಡಣೆ ಮಾಡಿದ್ದಾರೆ.

ಇದೇ 24ರಂದು ಚಿತ್ರ ತೆರೆಕಾಣುತ್ತಿದೆ. ಶಶಿಧರ ಕೆ.ಎಂ., ವಿಜಯಲಕ್ಷ್ಮಿ ಕೃಷ್ಣೇಗೌಡ, ಸಂದೀಪ್‌ ಶಿವಮೊಗ್ಗ, ಶ್ವೇತಾ ಮಧುಸೂದನ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಛಾಯಾಗ್ರಹಣ ಅರುಳ್‌ ಕೆ. ಸೋಮಸುಂದರಂ ಅವರದು. ಮಿಧುನ್‌ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಇದೇ ವೇಳೆ ಚಿತ್ರದ ಟ್ರೇಲರ್‌ ಮತ್ತು ಆಡಿಯೊ ಬಿಡುಗಡೆ ಮಾಡಲಾಯಿತು. ಸೂರಜ್‌ಗೌಡ, ತರಂಗ ವಿಶ್ವ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT