ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಡಿಎಲ್‌ಜೆ... 1,200 ವಾರ

ಕಮ್ ಫಾಲ್ ಇನ್ ಲವ್....
Last Updated 2 ನವೆಂಬರ್ 2018, 12:55 IST
ಅಕ್ಷರ ಗಾತ್ರ

‘ಹೇಯ್ ಸೆನರಿಟಾ..ಕೋಯಿ ಬಾತ್ ನಹಿ..
ಬಡೀ ಬಡೀ ದೇಶೋಂ ಮೇ ಐಸಿ ಚೋಟಿ ಚೋಟಿ ಬಾತೇಂ ಹೋತೆ ರೆಹತೇ ಹೈ’

-ಪ್ರವಾಸದ ವೇಳೆ ಗುರುತು-ಪರಿಚಯವಿರದ ಯುರೋಪ್‌ನಲ್ಲಿ ಪದೇ ಪದೇ ಸಂಕಷ್ಟಕ್ಕೆ ಸಿಲುಕುವ ಸಿಮ್ರನ್‌ಗೆ ರಾಜ್ ಸಂತೈಸುವ ಪರಿಯಿದು.

ಇಂತಹ ಅವಕಾಶ ಪುನಃ ಸಿಕ್ಕರೆ, ಅದೇ ರಾಜ್, ‘ಬಡೇ ಬಡೇ ದೇಶೋಂ ಮೇ ಬಡೀ ಬಡೀ ಬಾತೇಂ ಭೀ ಹೋತೆ ರೆಹತೆ ಹೈ’ ಎಂದು ಹೇಳಲೇಬೇಕು. ಅದೂ ಖುಷಿಯಿಂದ. ಕಾರಣ, ಪುಟ್ಟ ವಿಶ್ವದಂತಿರುವ ಭಾರತದಲ್ಲಿ ‘ದಿಲವಾಲೆ ದುಲ್ಹನಿಯಾ ಲೇ ಜಾಯೆಂಗೆ’ (ಡಿಡಿಎಲ್‌ಜೆ) ಚಿತ್ರರಂಗದ ಹಲವು ದಾಖಲೆಗಳನ್ನು ಮುರಿದಿದೆ.

ಮುಂಬೈಯ ಮರಾಠಾ ಮಂದಿರ ಚಿತ್ರಮಂದಿರದಲ್ಲಿ ಸತತ 23 ವರ್ಷಗಳಿಂದ ಪ್ರದರ್ಶನ ಕಾಣುತ್ತಿರುವ ‘ಡಿಡಿಎಲ್‌ಜೆ’ ಮೊನ್ನೆ
ಮೊನ್ನೆಯಷ್ಟೇ ಯಶಸ್ವಿ 1,200 ವಾರ ಪೂರೈಸಿತು. ಬಹುಭಾಷಿಕ ಮತ್ತು ಬಹುಸಂಸ್ಕೃತಿಯ ಈ ವರ್ಣಮಯ ದೇಶದಲ್ಲಿ ಒಂದು ಭಾಷೆಯ ಚಲನಚಿತ್ರವು ಯಾವುದೇ ಅಡತಡೆಯಿಲ್ಲದೇ ನಿರಂತರ ಪ್ರದರ್ಶನ ಆಗಿರುವುದು ಮತ್ತು ಆಗುತ್ತಿರುವುದು ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು.

ಎರಡು ದಶಕದ ಹಿಂದಿನ ಚಿತ್ರವನ್ನು ಇಂದಿನ ಪೀಳಿಗೆಯವರು ಯಾಕೆ ನೋಡುತ್ತಾರೆ? ಒಬ್ಬ ಪ್ರೇಕ್ಷಕ ಅದನ್ನು ಎಷ್ಟು ಸಲ ತಾನೇ ನೋಡಲು ಸಾಧ್ಯ? ಚಿತ್ರ ಈಗಲೂ ಸತತ ಪ್ರದರ್ಶನ ಕಾಣುತ್ತಿರುವುದಕ್ಕೆ ಕಾರಣವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು ಈಗಲೂ ಕಾಡಿದ್ದು ಇದೆ. ಆದರೆ, ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಮಾತ್ರ ಯಾವತ್ತೂ ಕಾಡಿಲ್ಲ. ಬೆಳಗಿನ 11.30ರ ಶೋ ವೀಕ್ಷಣೆಗೆ ಪ್ರೇಕ್ಷಕರು ಟಿಕೆಟ್ ಸಮೇತ ಸಿದ್ಧರಾಗಿರುತ್ತಾರೆ. 60ರ ವೃದ್ಧರಿಂದ ಹಿಡಿದು 20ರ ಹರೆಯದ ಕಾಲೇಜು ವಿದ್ಯಾರ್ಥಿಗಳವರೆಗೂ ಎಲ್ಲರೂ ಹಾಜರ್ . ಕುಟುಂಬ ಸದಸ್ಯರಿಗಂತೂ ಈ ಚಿತ್ರದ ವೀಕ್ಷಣೆ ಬಲು ಪ್ರೀತಿ.

ಮುಂಬೈ ರೈಲ್ವೆ ನಿಲ್ದಾಣದ ಬಳಿಯಿರುವ ಮರಾಠಾ ಮಂದಿರವು ಸಿನಿಪ್ರಿಯರಿಗೆ ಒಲವಿನ ತಾಣವೂ ಹೌದು. ಬರೀ ₹ 15, ₹17 ಮತ್ತು ₹ 20ಕ್ಕೆ ಟಿಕೆಟ್ ಖರೀದಿಸಿ, 3 ಗಂಟೆ 9 ನಿಮಿಷ ಚಿತ್ರದಲ್ಲಿ ಲೀನವಾಗುವುದೇ ಅವರಿಗೆ ಖುಷಿ. 1990ರ ದಶಕದಲ್ಲಿ ಪ್ರೀತಿಯಲ್ಲಿ ಬಿದ್ದವರು ತಮ್ಮ ಮಕ್ಕಳೊಂದಿಗೆ ಆಗಾಗ್ಗೆ ಬಂದು ಈ ಚಿತ್ರವನ್ನು ನೋಡುತ್ತಾರೆ. ಕೆಲ ಜೋಡಿಗಳು ಜಗತ್ತಿನ ಜಂಜಾಟವನ್ನೆಲ್ಲ ಮರೆತು ರಾಜ್-ಸಿಮ್ರನ್‌ರಲ್ಲಿ ತಮ್ಮನ್ನು ತಾವು ಕಾಣುತ್ತಾರೆ.ಜೀವನದಲ್ಲಿ ಕೊಂಚ ಬೇಸರವಾದರೆ, ಸ್ವಲ್ಪ ಉತ್ಸಾಹ ಮೂಡಿಸಿಕೊಳ್ಳಬೇಕಿದ್ದರೆ ಈ ಚಿತ್ರ ವೀಕ್ಷಿಸಲು ಹೊರಟು ಬಿಡುತ್ತಾರೆ.ಜನರು ಹೀಗೆ ಬರುತ್ತಿರುವುದು ಕಂಡು ಚಿತ್ರಮಂದಿರದ ಮಾಲೀಕರು ಸಂತಸ ಮತ್ತು ಸಮಾಧಾನ.

ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಾಪಕ ಯಶ್ ಚೋಪ್ರ ಮಾರ್ಗದರ್ಶನಲ್ಲಿ ಆದಿತ್ಯ ಚೋಪ್ರ ನಿರ್ದೇಶಿಸಿದ ಡಿಡಿಎಲ್‌ಜೆ 1995ರ ಅಕ್ಟೋಬರ್ 20ರಂದು ತೆರೆ ಕಂಡಿತು. ಆದರೆ, ಆ ಕ್ಷಣಕ್ಕೆ ಇಡೀ ಚಿತ್ರ ನಿರ್ಮಾಣ ತಂಡಕ್ಕೆ ಈ ಚಿತ್ರ ಹೀಗೆ ದಾಖಲೆ ಮುರಿದೀತು ಎಂಬ ಕಲ್ಪನೆ ಇರಲಿಲ್ಲ. ಬಾಲಿವುಡ್‌ಗೆ ಆಗಷ್ಟೇ ಕೊಂಚ ಪರಿಚಿತರಾಗಿದ್ದ ಶಾರೂಖ್ ಖಾನ್ ಮತ್ತು ಕಾಜೋಲ್ ಜೋಡಿ ಹೀಗೆ ಮೋಡಿ ಮಾಡುವುದು ಎಂಬ ನಿರೀಕ್ಷೆಯಂತೂ ಖಂಡಿತ ಇರಲಿಲ್ಲ.

**

23 ವರ್ಷಗಳ ಪ್ರಯಾಣದಲ್ಲಿ ನೀವೆಲ್ಲರೂ ಜೊತೆಗಿದ್ದೀರಿ ಎಂಬುದೇ ಖುಷಿ. ರಾಜ್ ಮತ್ತು ಸಿಮ್ರನ್ ಒಲವನ್ನು ಈಗಲೂ ನೀವು ಜೀವಂತವಾಗಿರಿಸಿದ್ದೀರಿ. ಯಾವುದೇ ಷರತ್ತು ಇಲ್ಲದೇ ನಮ್ಮೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದಕ್ಕೆ ಧನ್ಯವಾದ.
–ಶಾರೂಖ್ ಖಾನ್, ನಟ

**

1,200 ವಾರಗಳ ತಡೆರಹಿತ ಪ್ರದರ್ಶನ ಇನ್ನೂ ಮುಂದುವರೆದಿದೆ. ಚಿತ್ರಕ್ಕೆ ನೀವೆಲ್ಲರೂ ತೋರಿದ ಪ್ರೀತಿಅಪರಿಮಿತವಾದದ್ದು. ನಮಗೆಲ್ಲರಿಗೂ ಈ ಚಿತ್ರ ತುಂಬಾ ವಿಶೇಷವಾದದ್ದು. ನಿಮಗೆಲ್ಲರಿಗೂ ಕೃತಜ್ಞತೆಗಳು.
-ಕಾಜೋಲ್, ನಟಿ

***

ಹೊಸ ಟ್ರೆಂಡ್ ಸೃಷ್ಟಿ....

1995ರವರೆಗೆ ಒಂದೇ ತೆರನಾಗಿದ್ದ ಟ್ರೆಂಡ್‌ನ್ನು ಡಿಡಿಎಎಲ್‌ಜೆಗೆ ಬದಲಿಸಿತು. ಮನೆಯಲ್ಲಿ ಒಪ್ಪದಿದ್ದರೆ, ಪ್ರೇಮಿಗಳು ಮನೆ ಬಿಟ್ಟು ಹೋಗಬೇಕು. ಒಂದಾಗಲು ಸಾಧ್ಯವಾಗದಿದ್ದರೆ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಮನೋಭಾವವನ್ನು ಡಿಡಿಎಲ್‌ಜೆ ಬದಲಿಸಿತು.

ಎಂಥದ್ದೇ ಕಷ್ಟ, ಸವಾಲು ಎದುರಾದರೂ ಸಾಕಿ, ಬೆಳೆಸಿದ ಪೋಷಕರಿಗೆ ನೋವುಂಟು ಮಾಡಬಾರದು ಎಂಬ ಸಂದೇಶ ನೀಡಿತು. ಪ್ರೀತಿಯಿಂದ, ನಲ್ಮೆಯ ಮಾತುಗಳಿಂದ, ಕರುಣೆಯಿಂದ ಅವರ ಹೃದಯ ಗೆಲ್ಲಬೇಕೆಂಬ ಆಲೋಚನೆ ಮೂಡಿಸಿತು. ಪೋಷಕರಿಗೂ ಮಕ್ಕಳ ಪ್ರೀತಿಯ ಕುರಿತು ಕಣ್ಣು ತೆರೆಸಿತು. ದುರಂತ ಜೀವನಕ್ಕಿಂತ ಯಶಸ್ವಿ ಪ್ರೇಮದ ಪಾಠ ಹೇಳಿಕೊಟ್ಟಿತು.

**

ಡಿಡಿಎಲ್‌ಜೆ ನಂಟು...

ಮುಂಬೈಯ ಸೆಂಟ್ರಲ್ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಮರಾಠಾ ಮಂದಿರವು 1958 ಅಕ್ಟೋಬರ್ 16ಕ್ಕೆ ಸ್ಥಾಪನೆಗೊಂಡಿತು. ಆಯಾ ಕಾಲಘಟ್ಟದ ಹಲವಾರು ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನ ಕಂಡಿವೆ. ಆದರೆ 1995ರಲ್ಲಿ ಡಿಡಿಎಲ್‌ಜೆ ಜೊತೆಗೆ ಬೆಸೆದ ನಂಟು ಈಗಲೂ ಮುಂದುವರೆದಿದೆ. ಆ ಪ್ರೀತಿಯನ್ನು ಕಳೆದುಕೊಳ್ಳಲು ಅದು ಬಯಸುವುದಿಲ್ಲ.

ಕಾಲಾನುಕ್ರಮವಾಗಿ ಈ ಚಿತ್ರಮಂದಿರ ಹೊಸ ಸ್ವರೂಪ ಪಡೆದುಕೊಂಡಿತು. ಚಿತ್ರರಂಗಕ್ಕೆ ಹೊಸ ನಟ, ನಟಿಯರು ಬಂದರು. ಹಲವು ಬದಲಾವಣೆಗಳಾದವು. ಆದರೆ, ಡಿಡಿಎಲ್‌ಜೆ ಮಾತ್ರ ಎಲ್ಲಿಯೂ ಹೋಗದೇ ಇಲ್ಲಿಯೇ ನೆಲೆ ಕಂಡುಕೊಂಡಿತು.

2015ರಲ್ಲಿ ಡಿಡಿಎಲ್‌ಜೆ 1009 ವಾರನೇ ಪ್ರದರ್ಶನ ಕಂಡಾಗ, ಚಿತ್ರದ ಪ್ರದರ್ಶನ ಕೊನೆಗೊಳಿಸುವ ಬಗ್ಗೆ ಚಿತ್ರಮಂದಿರ ಮಾಲೀಕರು ಚಿಂತನೆ ನಡೆಸಿದರು. ಆದರೆ, ಅದಕ್ಕೆ ಸಿನಿಪ್ರಿಯರು ಆಕ್ಷೇಪಿಸಿದ್ದು ಅಲ್ಲದೇ ಚಿತ್ರ ಪ್ರದರ್ಶನ ಮುಂದುವರೆಸಬೇಕು ಎಂದು ಪಟ್ಟು ಹಿಡಿದರು. ಅದು ದೊಡ್ಡ ಕೋಲಾಹಾಲವೇ ಸೃಷ್ಟಿಯಾಯಿತು. ಎಲ್ಲರನ್ನೂ ಸಮಾಧಾನಪಡಿಸಿದ ಚಿತ್ರಮಂದಿರದ ಮಾಲೀಕರು ಪ್ರದರ್ಶನ ಮುಂದುವರೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT