ತೆರೆ ಮೇಲೂ ರಣ್‌ವೀರ್ ಪತ್ನಿಯಾಗಿ ದೀಪಿಕಾ!

ಭಾನುವಾರ, ಜೂನ್ 16, 2019
22 °C
‘83’ ಸಿನಿಮಾ

ತೆರೆ ಮೇಲೂ ರಣ್‌ವೀರ್ ಪತ್ನಿಯಾಗಿ ದೀಪಿಕಾ!

Published:
Updated:
Prajavani

ತೆರೆಯ ಹಿಂದೆ ಪತಿ–ಪತ್ನಿಯಾಗಿರುವ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಈಗ ತೆರೆಯ ಮೇಲೂ ಪತಿ–ಪತ್ನಿಯಾಗಿ ಕಾಣಿಸಿಕೊಳ್ಳುವ ಅದೃಷ್ಟಕ್ಕೆ ಭಾಜನರಾಗಿದ್ದಾರೆ. ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್ ಜೀವನವನ್ನಾಧರಿಸಿದ ‘83’ ಸಿನಿಮಾದಲ್ಲಿ ರಣ್‌ವೀರ್ ಕಪಿಲ್ ಪಾತ್ರ ಮಾಡುತ್ತಿದ್ದಾರೆ. ಇದೀಗ ಕಪಿಲ್ ಪತ್ನಿ ರೋಮಿ ಪಾತ್ರಕ್ಕೆ ದೀಪಿಕಾ ಆಯ್ಕೆಯಾಗಿದ್ದಾರೆ. 

ಈ ಆಯ್ಕೆಯ ಹಿಂದೆ ವೈಯಕ್ತಿಕ ಹಿತಾಸಕ್ತಿ ಖಂಡಿತಾ ಇಲ್ಲವೆಂದು ದೀಪಿಕಾ–ರಣ್‌ವೀರ್ ಸ್ಪಷ್ಟಪಡಿಸಿದ್ದಾರೆ. ಕಪಿಲ್ ಪತ್ನಿಯಾಗಿ ಅಭಿನಯಿಸುತ್ತಿರುವ ಕುರಿತು ದೀಪಿಕಾ ದೃಢಪಡಿಸಿದ್ದು, ತೆರೆಯ ಮೇಲೂ ರಣ್‌ವೀರ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

‘ನಿರ್ದೇಶಕ ಕಬೀರ್ ಖಾನ್ ನನ್ನನ್ನು ರೋಮಿ ಪಾತ್ರಕ್ಕೆ ಆಯ್ಕೆ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಕಬೀರ್, ‘83’ ಸಿನಿಮಾಕ್ಕೆ ಇನ್ನೂ ನಟರ ಹುಡುಕಾಟದಲ್ಲಿದ್ದರು. ಆಗ ನಾನು ‘ಚಪಾಕ್’ ಸಿನಿಮಾದ ಬ್ಯುಸಿಯಲ್ಲಿದ್ದೆ. ಕಪಿಲ್ ಪತ್ನಿ ಪಾತ್ರದ ಘೋಷಣೆಗಾಗಿ ನಾವು ಒಂದೊಳ್ಳೆ ಕಾಲಕ್ಕಾಗಿ ಕಾಯುತ್ತಿದ್ದೆವು. ಅದೀಗ ಒದಗಿ ಬಂದಿದೆ’ ಎಂದು ದೀಪಿಕಾ ಹೇಳಿದ್ದಾರೆ. 

‘83’ ಸಿನಿಮಾ 1983ರಲ್ಲಿ ಭಾರತ–ಇಂಗ್ಲೆಂಡ್ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ವಿಶ್ವಕಪ್ ಗೆದ್ದ ಕಥೆಯನ್ನೊಳಗೊಂಡಿದೆ. 

‘ಕಪಿಲ್ ದೇವ್‌ ಪಾತ್ರಕ್ಕೆ ರಣ್‌ವೀರ್ ಅವರನ್ನು ಬಿಟ್ಟರೆ ಮತ್ತೊಬ್ಬರು ನ್ಯಾಯ ಸಲ್ಲಿಸಲಾರರು. ಒಂದು ವೇಳೆ ಈ ಸಿನಿಮಾದಲ್ಲಿ ರಣ್‌ವೀರ್ ಬದಲಿಗೆ ಬೇರೊಬ್ಬರು ಕಪಿಲ್ ಪಾತ್ರ ಮಾಡುತ್ತಿದ್ದು, ನನಗೆ ಕಪಿಲ್ ಪತ್ನಿ ಪಾತ್ರಕ್ಕೆ ಕೇಳಿಕೊಂಡಿದ್ದರೂ ನಾನು ಅಭಿನಯಿಸುತ್ತಿದ್ದೆ. ಇಲ್ಲಿ ವೈಯಕ್ತಿಕ ಹೊಂದಾಣಿಕೆಗಿಂತ ಸಿನಿಮಾದ ಬಗೆಗಿರುವ ಪ್ಯಾಷನ್ ಮುಖ್ಯ’ ಎಂದು ದೀಪಿಕಾ ಹೇಳಿಕೆ ನೀಡಿದ್ದಾರೆ. 

‘ಕಪಿಲ್ ಪತ್ನಿ ರೋಮಿ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ರೋಮಿ ಅವರನ್ನು ನಾಲ್ಕೈದು ಸಲ ಭೇಟಿಯಾಗಿದ್ದೇನೆ. ನಮ್ಮ ಮದುವೆಯ ಆರತಕ್ಷತೆಗೆ ಅವರು ಕಪಿಲ್ ದೇವ್ ಸರ್ ಜೊತೆಗೆ ರೋಮಿ ಬಂದಿದ್ದರು. ಆದರೆ, ನನ್ನ ಅಪ್ಪ–ಅಮ್ಮ ಕಪಿಲ್ ಕುಟುಂಬವನ್ನು ಬಹಳಷ್ಟು ವರ್ಷಗಳಿಂದ ಬಲ್ಲವರು. ಈ ಬಂಧದ ಹಿನ್ನೆಲೆಯಲ್ಲಿ ರೋಮಿ ಅವರು ನಮ್ಮ ಸಿನಿಮಾದ ಬಗ್ಗೆ ಸಂತಸಪಡುತ್ತಾರೆ ಅನ್ನುವ ನಂಬಿಕೆ ನನ್ನದು. ಸಿನಿಮಾ ಚಿತ್ರೀಕರಣದ ಆರಂಭವಾಗುವುದಕ್ಕೂ ಮುನ್ನ ರೋಮಿ ಪಾತ್ರದ ಕುರಿತು ಅರಿಯಲು ನಾನು ರೋಮಿ ಅವರೊಂದಿಗೆ ಕೆಲ ತಾಸುಗಳನ್ನು ಕಳೆಯಬಯಸುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ.

ರೋಮಿ ಅವರಂತೆಯೇ ನಿಮ್ಮ ಹೇರ್‌ಸ್ಟೈಲ್ ಬದಲಾಗುವುದೇ ಎನ್ನುವ ಪ್ರಶ್ನೆಗೆ. ‘ಅಭಿಮಾನಿಗಳು ಕಾದು ನೋಡಬೇಕು’ಎಂದು ದೀಪಿಕಾ ಕುತೂಹಲಭರಿತ ಉತ್ತರ ನೀಡಿದ್ದಾರೆ.

ಮದುವೆಗೂ ಮುನ್ನ ದೀಪಿಕಾ–ರಣ್‌ವೀರ್ ‘ರಾಮ್‌ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್‌’ನಲ್ಲಿ ಜೋಡಿಯಾಗಿ ನಟಿಸಿದ್ದರು. ಮದುವೆಯ ನಂತರ ಜೋಡಿಯಾಗಿ ನಟಿಸುತ್ತಿರುವ ಮೊದಲ ಚಿತ್ರ ‘83’. ಹಾಗಾಗಿ, ಸಿನಿಮಾದ ಬಗ್ಗೆ ದೀಪಿಕಾಗೆ ಬಹಳಷ್ಟು ನಿರೀಕ್ಷೆಗಳಿವೆ. ‘83’ ಸಿನಿಮಾ 2020ರ ಏಪ್ರಿಲ್ 10ರಂದು ತೆರೆ ಕಾಣಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !