ಶನಿವಾರ, ಮಾರ್ಚ್ 28, 2020
19 °C

ರಾಜಮೌಳಿಯ ‘ಆರ್‌ಆರ್‌ಆರ್‌’ ಸಿನಿಮಾ ಶೀರ್ಷಿಕೆಯ ಅರ್ಥವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಆರ್‌ಆರ್‌ಆರ್‌’ ಸಿನಿಮಾದ ಅರ್ಥವೇನು?

–ಎಸ್.ಎಸ್. ರಾಜಮೌಳಿ ಅವರು ‘ಬಾಹುಬಲಿ’ ಸಿನಿಮಾದ ಬಳಿಕ ಈ ಚಿತ್ರ ಘೋಷಿಸಿದ ದಿನದಿಂದಲೂ ಅಭಿಮಾನಿಗಳು ಕೇಳುತ್ತಿರುವ ಸಾಮಾನ್ಯ ಪ್ರಶ್ನೆ ಇದು. ಆದರೆ, ಅಪ್ಪಿತಪ್ಪಿಯೂ ಶೀರ್ಷಿಕೆಯ ಅರ್ಥ ಹೇಳಲು ಚಿತ್ರತಂಡ ಮುಂದಾಗಿರಲಿಲ್ಲ. ಆದರೆ, ಇದರ ಅರ್ಥದ ಹುಡುಕಾಟದಲ್ಲಿ ಅಭಿಮಾನಿಗಳು ಹಿಂದೆ ಬಿದ್ದಿಲ್ಲ. 

‘ಆರ್‌ಆರ್‌ಆರ್‌’ ಚಿತ್ರ ಘೋಷಣೆಯಾಗಿದ್ದು 2018ರಲ್ಲಿ. ‘ರಾಮ ರಾವಣ ರಾಜ್ಯಂ’ ಎಂಬುದು ಇದರರ್ಥ ಎಂಬ ಸುದ್ದಿ ಆಗ ಟಾಲಿವುಡ್‌ ಪಡಸಾಲೆಯಲ್ಲಿ ಹರಿದಾಡಿತ್ತು. ಆದರೆ, ಚಿತ್ರತಂಡ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಕಳೆದ ವರ್ಷ ಚಿತ್ರತಂಡವು ‘ರಾಮ ರೌದ್ರ ಋಷಿತಂ’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಿ ಸಿನಿಮಾಕ್ಕೆ ಬಂಡವಾಳ ಹೂಡಿರುವ ಡಿ.ವಿ.ವಿ. ಎಂಟರ್‌ಟೈನ್‌ಮೆಂಟ್ಸ್‌ಗೆ ಕಳುಹಿಸಿತ್ತು. ಆದರೆ, ಈ ಶೀರ್ಷಿಕೆಗೆ ಒಮ್ಮತದ ಅಭಿಪ್ರಾಯ ಮೂಡಿರಲಿಲ್ಲ. ಇಂತಹ ಟೈಟಲ್‌ ಜನರನ್ನು ಬಹುಬೇಗ ಸೆಳೆಯುವುದಿಲ್ಲ ಎನ್ನುವುದೇ ತಿರಸ್ಕಾರಕ್ಕೆ ಮೂಲ ಕಾರಣ. ಕೊನೆಗೆ, ‘ರಾಮ ರಾವಣ ರಾಜ್ಯಂ’ ಶೀರ್ಷಿಕೆಯನ್ನೇ ಅಂತಿಮಗೊಳಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.  

ಈ ಟೈಟಲ್‌ ಅಂತಿಮಗೊಳಿಸಲು ಹಲವು ಕಾರಣಗಳಿವೆ. ‘ಆರ್‌ಆರ್‌ಆರ್‌’ ಸಿನಿಮಾ ಹತ್ತು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ‘ರಾಮ ರಾವಣ ರಾಜ್ಯಂ’ ಶೀರ್ಷಿಕೆಯು ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಬಹುಬೇಗ ಅರ್ಥವಾಗುತ್ತದೆ ಎನ್ನುವ ಕಾರಣಕ್ಕೆ ಇದೇ ಶೀರ್ಷಿಕೆಯನ್ನು ಅಧಿಕೃತಗೊಳಿಸಲಾಗಿದೆಯಂತೆ.

ಈ ನಡುವೆ 2019ರ ಡಿಸೆಂಬರ್‌ನಲ್ಲಿ ವಿ3 ಫಿಲ್ಸ್ಮ್‌ ಸಂಸ್ಥೆಯು ‘ಆರ್‌ಆರ್‌ಆರ್‌’ ಶೀರ್ಷಿಕೆಯನ್ನು ನೋಂದಣಿ ಮಾಡಿಸಿತ್ತು. ಆದರೆ, ರಾಜಮೌಳಿ ಮತ್ತು ಡಿ.ವಿ.ವಿ. ಎಂಟರ್‌ಟೈನ್‌ಮೆಂಟ್ಸ್‌ನಡಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ಸಿನಿಮಾಕ್ಕೆ ಶೀರ್ಷಿಕೆಯನ್ನು ತ್ಯಾಗ ಮಾಡಿದೆ ಎಂಬ ಸುದ್ದಿ ಇದೆ.

ಜೂನಿಯರ್‌ ಎನ್‌.ಟಿ.ಆರ್‌., ರಾಮ್‌ ಚರಣ್‌, ಅಜಯ್‌ ದೇವಗನ್‌, ಅಲಿಯಾ ಭಟ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಮುಂದಿನ ವರ್ಷ ಜನವರಿ 8ರಂದು ತೆರೆ ಕಾಣಲಿದೆ. ಇದಕ್ಕೆ ₹ 350 ಕೋಟಿಗೂ ಹೆಚ್ಚು ಬಂಡವಾಳ ಹೂಡಲಾಗಿದೆ. ಎಂ.ಎಂ. ಕೀರ್ವಾಣಿ ಸಂಗೀತ ಸಂಯೋಜಿಸಿದ್ದಾರೆ. ಕೆ.ಕೆ. ಸೆಂಥಿಲ್‌ಕುಮಾರ್‌ ಅವರ ಛಾಯಾಗ್ರಹಣವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು