ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಕಿ: ಭಾವುಕ ಹಳಿಯ ಮೇಲೆ ರೋಚಕ ಕಥನ

Last Updated 5 ಜುಲೈ 2019, 10:47 IST
ಅಕ್ಷರ ಗಾತ್ರ

ಚಿತ್ರ: ದೇವಕಿ

ನಿರ್ಮಾಪಕರು: ರವೀಶ್‌ ಆರ್‌.ಸಿ. ಮತ್ತು ಅಕ್ಷಯ್‌ ಸಿ.ಎಸ್‌.

ನಿರ್ದೇಶನ: ಲೋಹಿತ್‌ ಎಚ್‌.

ತಾರಾಗಣ: ಪ್ರಿಯಾಂಕಾ ಉಪೇಂದ್ರ, ಕಿಶೋರ್‌, ಐಶ್ವರ್ಯ ಉಪೇಂದ್ರ, ಸಂಜೀವ್‌ ಜೈಸ್ವಾಲ್

**

ಇತ್ತೀಚಿನ ದಿನಗಳಲ್ಲಿ ಸಮಾಜ ಮತ್ತು ಕಾನೂನಿಗೆ ಕಂಟಕವಾಗಿರುವ ಕಥನಗಳ ಕುರಿತು ನಿರ್ದೇಶಕರಿಗೆ ವಿಪರೀತ ಮೋಹ. ತೆರೆಯ ಮೇಲೆ ಇಂತಹ ಕರಾಳ ಕಥನಗಳನ್ನು ಕಟ್ಟುವುದರಲ್ಲಿಯೇ ಹಲವು ನಿರ್ದೇಶಕರು ತಲ್ಲೀನ. ಆದರೆ, ಸಿನಿಮಾ ಪರಿಧಿಯಲ್ಲಿ ಇಂತಹ ನೈಜ ಕಥಾವಸ್ತುವನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದು ಸವಾಲಿನ ಕೆಲಸ. ಗಂಭೀರ ಹಾಗೂ ಸೂಕ್ಷ್ಮ ಎಳೆಗೆ ಚಿತ್ರಕಥೆ ಹೊಸೆಯುವುದು ಸುಲಭವಲ್ಲ.

‘ದೇವಕಿ’ ಚಿತ್ರದಲ್ಲಿ ಸಮಾಜದ ಕರಾಳಮುಖವನ್ನು ಬಿಚ್ಚಿಡುತ್ತಲೇ ತಾಯಿಯ ವಾತ್ಸಲ್ಯದ ಕಥನವನ್ನೂ ಹೇಳಿದ್ದಾರೆ ನಿರ್ದೇಶಕ ಲೋಹಿತ್‌ ಎಚ್‌.

ಅಮ್ಮನ ವಾತ್ಸಲ್ಯದ ಮೂಲಕ ಅನಾವರಣಗೊಳ್ಳುವ ಸಂಕಟಗಳೇ ಈ ಚಿತ್ರದ ಕಥಾವಸ್ತು. ಒಂದು ಮಗ್ಗುಲಲ್ಲಿ ಜೀವನದ ಕರಾಳಮುಖವಿದೆ. ಇನ್ನೊಂದೆಡೆ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಡುವ ಮುಗ್ಧ ಮನಸ್ಸುಗಳ ಚಿತ್ರಣ. ಈ ಮಗ್ಗಲಿನ ಕಥೆ ನೋಡುಗರಿಗೆ ಹೆಚ್ಚು ಕಾಡುತ್ತದೆ. ಜೊತೆಗೆ, ಹೆಣ್ಣುಮಕ್ಕಳ ಬಾಲ್ಯ ಅರಳುವ ಮುನ್ನವೇ ಕಮರಿ ಹೋಗುತ್ತಿರುವುದನ್ನು ಕಂಡಾಗ ಕರುಳು ಚುರುಗುಟ್ಟುತ್ತದೆ.

ಕಮರ್ಷಿಯಲ್‌ ಚಿತ್ರವೊಂದನ್ನು ಭಾವನೆಗಳ ತಳಹದಿ ಮೇಲೆ ಗಟ್ಟಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇಲ್ಲಿ ಜೀವನದ ಎರಡು ಆಯಾಮಗಳ ಗಾಢ ಚಿತ್ರಣವಿದೆ. ಇಡೀ ಚಿತ್ರ ನಡೆಯುವುದು ಕೋಲ್ಕತ್ತದಲ್ಲಿ. ಅಲ್ಲಿನ ನೆಲದ ಕಥೆಯನ್ನು ಕನ್ನಡದ ಪ್ರೇಕ್ಷಕರ ಜಾಯಮಾನಕ್ಕೆ ಒಗ್ಗಿಸಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ.

ಕೆಲವೆಡೆ ಅನಗತ್ಯವಾಗಿ ಚೂಯಿಂಗ್‌ ಗಮ್‌ ಜಗಿದಂತೆ ಕಥೆ ಸಾಗುವುದರಿಂದ ಸಿನಿಮಾ ಅಲ್ಲಲ್ಲಿ ಬೇಸರಕ್ಕೂ ಕಾರಣವಾಗುತ್ತದೆ. ಮಗುವಿನ ಅಪಹರಣದೊಂದಿಗೆ ಶುರುವಾಗುವ ಕಥೆಗೆ ಒಂದಷ್ಟು ತಿರುವುಗಳನ್ನು ನೀಡಿ ರೋಚಕತೆ ಹುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ. ಇದು ಕೆಲವೆಡೆ ಪ್ರಹಸನ ಸೃಷ್ಟಿಸುತ್ತದೆ.

ಗಂಡನೇ ದೇವಕಿಗೆ ಸರ್ವಸ್ವ. ಆತ ವ್ಯವಹಾರದಲ್ಲಿ ನಷ್ಟಕ್ಕೆ ತುತ್ತಾಗುತ್ತಾನೆ. ಆಗ ಇಬ್ಬರ ಸಂಬಂಧ ಬೇರ್ಪಡುತ್ತದೆ. ಮತ್ತೊಂದೆಡೆ ಮಗಳು ಆರಾಧ್ಯಳ ಅಪಹರಣವಾಗುತ್ತದೆ. ಮಗಳು ಸಿಕ್ಕಿದಳು ಎನ್ನುವಾಗಲೇ ದೇವಕಿಗೆ ಮರೆಗುಳಿತನ ಕಾಯಿಲೆ ಕಾಡುತ್ತದೆ. ಕೊನೆಗೆ, ಮಗಳು ಆಕೆಗೆ ಸಿಕ್ಕಿದಳೇ ಎನ್ನುವುದೇ ಈ ಚಿತ್ರದ ತಿರುಳು.

ತಾರಾಗಣದಲ್ಲಿ ಹೆಚ್ಚು ಅಂಕ ಗಿಟ್ಟಿಸುವುದು ಅಮ್ಮನ ಪಾತ್ರಧಾರಿ ಪ್ರಿಯಾಂಕಾ ಉಪೇಂದ್ರ. ಕಿಶೋರ್‌ ನಟನೆಯೂ ಚೆನ್ನಾಗಿದೆ. ಐಶ್ವರ್ಯ ಪಾತ್ರ ಗಿಳಿಪಾಠ ಒಪ್ಪಿಸುವುದಕ್ಕೆ ಸೀಮಿತ. ಕೋಲ್ಕತ್ತದ ಬೀದಿಗಳನ್ನು ಎಚ್‌.ಸಿ. ವೇಣು ಸೊಗಸಾಗಿ ಸೆರೆ ಹಿಡಿದಿದ್ದಾರೆ. ನೋಬಿನ್‌ ಪಾಲ್ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT