ಇದು ದೆವ್ವದ ಮನೆ!

ದಟ್ಟ ಕಾಡಿನ ಮಧ್ಯದ ಒಂಟಿ ಮನೆ, ಪಾಳು ಬಿದ್ದ ಅರಮನೆ, ಬಂಗಲೆಗಳಲ್ಲಿ ದೆವ್ವ ಅಟಕಾಯಿಸಿಕೊಂಡು ಅಲ್ಲಿಗೆ ಬರುವ ಜನರನ್ನು ಆಟವಾಡಿಸುವುದನ್ನು ನೋಡಿದ್ದೇವೆ. ಆದರೆ ಯುವ ನಿರ್ದೇಶಕ ಜಯಕುಮಾರ್ ಅವರು ದೆವ್ವದ ವಾಸಸ್ಥಳವನ್ನು ತುಸು ಬದಲಾಯಿಸಿ ಸಿಲಿಕಾನ್ ಸಿಟಿಗೆ ತಂದಿದ್ದಾರೆ.
ಈ ಚಿತ್ರದ ಹೆಸರೇ ‘ಮನೆ ನಂ: 67’. ‘ಎಂಜಿನಿಯರಿಂಗ್ ಮುಗಿಸಿದ ಹುಡುಗನೊಬ್ಬ ಹಳ್ಳಿಯಿಂದ ಪಟ್ಟಣಕ್ಕೆ ಬಂದು ದಲ್ಲಾಳಿ ಮುಖಾಂತರ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸಕ್ಕೆ ತೊಡಗುತ್ತಾನೆ. ಆ ಮನೆಯಲ್ಲಿಯೇ ಅವನಿಗೆ ದೆವ್ವದ ಕಾಟ ಶುರುವಾಗುತ್ತದೆ. ಹಾರರ್ ಥ್ರಿಲ್ಲರ್ ರೂಪದಲ್ಲಿ ಚಿತ್ರವನ್ನು ಕಟ್ಟಿದ್ದೇವೆ’ ಎಂದು ನಿರ್ದೇಶಕರು ಚಿತ್ರದ ಕುರಿತು ವಿವರಿಸುತ್ತಾರೆ. ಸತ್ಯಜಿತ್ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿ ಇದೆ. ಕೊನೆಯ ತನಕ ಏನಾಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಹಾಗೆ ಚಿತ್ರವನ್ನು ಕಟ್ಟಲಾಗಿದೆ’ ಎಂದು ಹೇಳಿಕೊಂಡರು ಸತ್ಯಜಿತ್. ವಸಂತಿ, ಗಾಯತ್ರಿ, ಸುಮಿತ್ರಾ ಮತ್ತು ಸ್ವಪ್ನ ಹೀಗೆ ನಾಲ್ಕು ನಾಯಕಿಯರಿದ್ದಾರೆ ಈ ಚಿತ್ರದಲ್ಲಿ. ಇವರಲ್ಲಿ ದೇವತೆಯರು, ಯಾರು ದೆವ್ವ ಯಾರು ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು. ಅಪ್ಪ ಅಮ್ಮನ ನೋವಿಗೆ ಕಾರಣವಾದವರ ಕಥೆಯನ್ನು ಈ ಚಿತ್ರ ಒಳಗೊಂಡಿದೆಯಂತೆ.
‘ಹಲಸೂರು ಸಮೀಪ ಗೌತಂಪುರದಲ್ಲಿ ಒಬ್ಬಳಿಗೆ ದೆವ್ವ ಆವರಿಸಿಕೊಂಡಿತ್ತು. ಈಗ ಸರಿ ಹೋಗಿದೆಯಂತೆ. ಈ ಸತ್ಯಘಟನೆಯನ್ನೇ ಪ್ರಧಾನವಾಗಿಟ್ಟುಕೊಂಡು ಕತೆ ಬರೆದು ನಿರ್ದೇಶನ ಮಾಡಿದ್ದೇನೆ’ ಎಂದರು ಜಯಕುಮಾರ್.
ಮಂತ್ರವಾದಿ ಪಾತ್ರದಲ್ಲಿ ದೊಂಬರ ಕೃಷ್ಣ ಸುರೇಶ್ ನಟಸಿದ್ದಾರೆ. ಜೀವನ್ ಸುರೇಶ್, ದೆವ್ವದ ಆರ್ಭಟದ ನಡುವೆಯೂ ನಗಿಸಲು ಸಿದ್ಧರಾಗಿದ್ದಾರೆ. ಗಣೇಶ್ ಕನ್ನಡ ಭಾಷೆಯ ಅಭಿಮಾನದಿಂದ ಈ ಮನೆಗೆ ಹಣ ಹೂಡಿದ್ದಾರಂತೆ. ಹರ್ಷಕಾಗೋಡ್ ಸಂಗೀತ ನಿರ್ದೇಶಿಸಿದ್ದಾರೆ. ಸಿ ಮ್ಯೂಸಿಕ್ ಸಂಸ್ಥೆಯು ಆಡಿಯೊ ಸಿಡಿಯನ್ನು ಹೊರತಂದಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.