ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀ ಟೂ’ ಅಭಿಯಾನದ ಜತೆ ನಾನಿದ್ದೇನೆ: ಧನ್ಸಿಕಾ

Last Updated 25 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ತಮಿಳಿನ ನಟಿ ಧನ್ಸಿಕಾ ತೆಲುಗು ಭಾಷೆಯಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕಬಾಲಿ’ ಸಿನಿಮಾದಲ್ಲಿ ರಜನೀಕಾಂತ್ ಮಗಳ ಪಾತ್ರದಲ್ಲಿ ಇವರು ಮಾಡಿದ ಸ್ಟಂಟ್‌ಗಳು ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ದೊರಕಿಸಿಕೊಟ್ಟಿವೆ. ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಇಂಗಿತ ಇವರಿಗಿದೆ. ಲೈಂಗಿಕ ಶೋಷಣೆಯ ವಿರುದ್ಧದ ‘ಮೀ ಟೂ’ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ಕೊಡುತ್ತೇನೆ ಎನ್ನುವ ಧನ್ಸಿಕಾ ಜತೆಗಿನ ಮಾತುಕತೆ ಇಲ್ಲಿದೆ.

* ನಿಮ್ಮ ನಟನಾಪಯಣ ಆರಂಭವಾಗಿದ್ದು ಹೇಗೆ?

ನನಗಾಗ 17 ವರ್ಷ ಇರಬೇಕು. ನಾವು ನಮ್ಮ ಕುಟುಂಬ ಸಮೇತ ಸಿನಿಮಾಕ್ಕೆ ಸಂಬಂಧಿಸಿದ ಎಕ್ಸಿಬಿಷನ್‌ಗೆ ಹೋಗಿದ್ದೆವು. ಅಲ್ಲಿ ನಿರ್ದೇಶಕ ಜನಾರ್ದನ್ ಅವರ ಭೇಟಿ ಆಯಿತು. ನನ್ನ ಅಂಕಲ್‌ ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವರು. ಅವರೇ ನನ್ನನ್ನು ಜನಾರ್ದನ್ ಅವರಿಗೆ ಪರಿಚಯಿಸಿದರು. ಆಗ ನನಗೆ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಇತ್ತು. ನನ್ನನ್ನು ನೋಡಿದ ಜನಾರ್ದನ್ ‘ನೀವು ಟಾಮ್ ಬಾಯ್ ಥರ ಕಾಣಿಸುತ್ತೀರಾ. ನನ್ನ ಚಿತ್ರವೊಂದರ ಪಾತ್ರಕ್ಕೆ ಇಂಥದ್ದೇ ನಟಿಯನ್ನು ಹುಡುಕುತ್ತಿದ್ದೆ’ ಎಂದು ಅವರ ಚಿತ್ರದಲ್ಲಿ ಅವಕಾಶ ಕೊಟ್ಟರು. ನನಗೆ ಖುಷಿಯಾಯ್ತು. ಜಯಮ್ ರವಿ ಆ ಚಿತ್ರದ ನಾಯಕ. ಆ ಸಿನಿಮಾ ದೊಡ್ಡ ಹಿಟ್‌ ಆಯ್ತು. ನನ್ನ ಸಿನಿಮಾ ಪಯಣ ಆರಂಭವಾಗಿದ್ದು ಅಲ್ಲಿಯೇ.

* ನಟನೆಯ ತರಬೇತಿ ಪಡೆದುಕೊಂಡಿದ್ದೀರೇ?

ಇಲ್ಲ, ನಾನು ತರಬೇತಿ ಪಡೆದುಕೊಂಡು ಬಂದ ನಟಿ ಅಲ್ಲ. ಆದರೆ ಅದೃಷ್ಟಕ್ಕೆ ಜನಾರ್ದನ್, ಬಾಲಾ, ರಂಜಿತ್ ಹೀಗೆ ಹಲವು ಒಳ್ಳೆಯ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈಗಲೂ ಕಲಿಯುತ್ತಿದ್ದೇನೆ. ಈಗಲೂ ನಾನು ನಟನೆಯ ವಿದ್ಯಾರ್ಥಿನಿ. ಸಾಗಬೇಕಾದ ದಾರಿ ತುಂಬ ದೂರವಿದೆ.

* ‘ಕಬಾಲಿ’ ಸಿನಿಮಾ ನಂತರ ನಿಮ್ಮ ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಗಳೇನಾದರೂ ಆಗಿವೆಯೇ?

ತುಂಬ ವ್ಯತ್ಯಾಸಗಳಾಗಿವೆ. ನಿರೀಕ್ಷೆಯೂ ಹೆಚ್ಚಿದೆ. ಅದರ ಬಗ್ಗೆ ನನಗೆ ಸಂತೋಷ ಇದೆ. ಆದರೆ ಆ ವ್ಯತ್ಯಾಸ ಒಮ್ಮಿಂದೊಮ್ಮೆಲೇ ಆಗಿದ್ದಲ್ಲ. ಅದರ ಹಿಂದೆ ಆರೇಳು ವರ್ಷಗಳ ನನ್ನ ಶ್ರಮವಿದೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದೇನೆ. ಈಗಲೂ ಚಿತ್ರರಂಗದಲ್ಲಿ ನನ್ನ ಗುರ್ತನ್ನು ಮೂಡಿಸಲು ಶ್ರಮಿಸುತ್ತಿದ್ದೇನೆ. ಸರಿಯಾದ ದಾರಿಯಲ್ಲಿ ಇದ್ದೇನೆ ಎಂಬ ನಂಬಿಕೆ ಇದೆ.

* ರಜನೀಕಾಂತ್ ಅವರ ಜತೆ ನಟಿಸಿದ ಅನುಭವ ಹೇಗಿತ್ತು?

ರಜನೀಕಾಂತ್ ಸ್ಟಿರಿಚುವಲ್ ಮನುಷ್ಯ. ಅವರ ಜತೆ ಮಾತನಾಡುವುದು ತುಂಬ ಖುಷಿಕೊಡುತ್ತದೆ. ‘ಕಬಾಲಿ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಾವು ಸಾಕಷ್ಟು ಮಾತನಾಡುತ್ತಿದ್ದೆವು. ಅವರು ದೊಡ್ಡ ಸ್ಟಾರ್. ಆದರೆ ಆ ಪ್ರಭಾವಳಿಯನ್ನು ಎಂದಿಗೂ ಹೊತ್ತುಕೊಂಡವರಲ್ಲ. ತುಂಬ ಸಕಾರಾತ್ಮಕವಾಗಿ ಎಲ್ಲರ ಜತೆಗೂ ಮಾತನಾಡುತ್ತಾರೆ.

* ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವ ಅನುಭವ ಹೇಗಿದೆ?

ನಟನೆಗೆ ಭಾಷೆಯೆಂಬುದು ಒಂದು ತಡೆ ಎಂದು ನನಗೆ ಯಾವಾಗಲೂ ಅನಿಸಿಲ್ಲ. ತಮಿಳು ನನ್ನ ಮಾತೃಭಾಷೆ. ಆ ಭಾಷೆಯಲ್ಲಿ ಸಿನಿಮಾ ಮಾಡಿದ್ದೇನೆ. ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಈಗ ‘ಉದ್ಘರ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದಿದ್ದೇನೆ. ತೆಲುಗು ಮತ್ತು ಕನ್ನಡ ಭಾಷೆಗಳ ನಡುವೆ ಸಾಕಷ್ಟು ಸಾಮ್ಯತೆ ಇವೆ. ‘ಉದ್ಘರ್ಷ’ ಸಿನಿಮಾವನ್ನು ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಇಲ್ಲಿನ ಕನ್ನಡಿಗರು ನನ್ನನ್ನು ತುಂಬ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಹಾಗಾಗಿ ಕನ್ನಡದಲ್ಲಿ ಕೆಲಸ ಮಾಡುವುದು ತುಂಬ ಕಷ್ಟ ಎಂದೇನೂ ನನಗೆ ಅನಿಸಿಲ್ಲ.

*) ಒಂದು ಸಿನಿಮಾವನ್ನು ನೀವು ಆಯ್ದುಕೊಳ್ಳುವ ಮಾನದಂಡಗಳೇನು?

ಸ್ಕ್ರಿಪ್ಟ್. ನಾನು ಯಾವತ್ತೂ ಸ್ಕ್ರಿಪ್ಟ್‌ಗೆ ಬಹಳ ಮಹತ್ವ ಕೊಡುತ್ತೇನೆ. ನಂತರ ನನ್ನ ಪಾತ್ರವನ್ನು ನೋಡುತ್ತೇನೆ. ನನ್ನ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಎಂದು ಯಾವತ್ತೂ ನಿರ್ದೇಶಕರನ್ನು ಕೇಳುವುದೇ ಇಲ್ಲ. ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕು ಎನ್ನುವುದರ ಕಡೆಗಷ್ಟೇ ನನ್ನ ಗಮನ. ಹಾಗೆಯೇ ಎಲ್ಲ ಬಗೆಯ ಪಾತ್ರಗಳನ್ನು ಮಾಡಬೇಕು ಎನ್ನುವುದು ನನ್ನ ಆಸೆ. ಸಾಮಾನ್ಯವಾಗಿ ಮಹಿಳೆಯರು ಆ್ಯಕ್ಷನ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ನನ್ನ ನಟನಾಜೀವನ ಶುರುವಾಗಿದ್ದೇ ಆ್ಯಕ್ಷನ್ ಪಾತ್ರದ ಮೂಲಕ.

*) ನಿಮ್ಮ ಪ್ರಕಾರ ನಟನೆ ಎಂದರೇನು?

ನಟನೆ ಎನ್ನುವುದು ಎಂದಿಗೂ ಮುಗಿಯದ ಪ್ರಕ್ರಿಯೆ. ಒಂದು ಪಾತ್ರದಲ್ಲಿ ನಟಿಸಿದೆ. ಅದರಲ್ಲಿ ನನಗೆ ಗೊತ್ತಿರುವ ಎಲ್ಲವನ್ನೂ ಧಾರೆಯೆರೆದು ಅಭಿನಯಿಸಿದೆ; ನನ್ನ ಕೆಲಸ ಮುಗಿಯಿತು ಅನ್ನುವಂತಿಲ್ಲ. ಪ್ರತಿಸಲ ನಾನು ನನ್ನ ಪಾತ್ರವನ್ನು ತೆರೆಯ ಮೇಲೆ ನೋಡಿದಾಗಲೂ ಏನೋ ಒಂದು ಮಿಸ್ ಆಗಿದೆ ಅನಿಸುತ್ತಲೇ ಇರುತ್ತದೆ. ಇನ್ನೊಂಚೂರು ಚೆನ್ನಾಗಿ ನಟಿಸಬಹುದಿತ್ತು ಎನ್ನುವ ಸಣ್ಣ ಅತೃಪ್ತಿಯೊಂದು ಉಳಿದುಹೋಗುತ್ತದೆ.

*) ನಟನೆ ಎನ್ನುವುದು ನಿಮ್ಮ ವ್ಯಕ್ತಿತ್ವದಲ್ಲಿ ಏನಾದರೂ ಬದಲಾವಣೆ ತಂದಿದೆಯೇ?

ನನಗೆ ಮೌನ ಎಂದರೆ ತುಂಬ ಇಷ್ಟ. ಜನರೊಂದಿಗೆ ತುಂಬ ಬೇಗ ಬೆರೆಯುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಮೂಡಿಯಾಗಿದ್ದೆ. ಆದರೆ ಚಿತ್ರರಂಗದಲ್ಲಿ ಮಾತೇ ಮುಖ್ಯವಾಗಿರುತ್ತದೆ. ನೀವು ಹೇಗೆ ಮಾತನಾಡುತ್ತೀರಿ ಎನ್ನುವುದು ತುಂಬ ಮುಖ್ಯ. ಹಾಗಾಗಿ ನಾನು ನನ್ನ ಸ್ವಭಾವನ್ನು ಬದಲಾಯಿಸಿಕೊಂಡು ಜನರ ಜತೆ ಹೆಚ್ಚು ಮಾತನಾಡತೊಡಗಿದೆ. ಈ ಬದಲಾವಣೆ ನನಗೂ ಇಷ್ಟವಾಯಿತು.

*) ಸಿನಿಮಾದಿಂದ ನೀವು ಏನು ಕಲಿತುಕೊಂಡಿದ್ದೀರಿ?

ಸಿನಿಮಾ ನಿಮಗೆ ಜೀವನಾನುಭವವನ್ನು ಕಲಿಸುತ್ತದೆ. ನನ್ನ ಕುಟುಂಬದ ಜತೆಗಿದ್ದಾಗ ಬದುಕಿನ ಕುರಿತು ಕಲಿತಿರಲಿಲ್ಲ. ಶಾಲೆಯಲ್ಲಿಯೂ ಬದುಕಿನ ಬಗ್ಗೆ ಕಲಿತಿರಲಿಲ್ಲ. ಆದರೆ ಸಿನಿಮಾರಂಗಕ್ಕೆ ಬಂದಾಗ ಬದುಕಿನ ಬಗ್ಗೆ ಸಾಕಷ್ಟು ಕಲಿತೆ. ಇಲ್ಲಿ ನಿಮಗೆ ಒಂದಿಷ್ಟು ಒಳ್ಳೆಯ– ಇನ್ನೊಂದಿಷ್ಟು ಕೆಟ್ಟ ವ್ಯಕ್ತಿಗಳು ಸಿಗುತ್ತಾರೆ. ಕೆಲವು ಸಲ ಮೋಸಹೋಗುತ್ತೇವೆ. ಅವೆಲ್ಲದರಿಂದಲೂ ಬದುಕಿನ ಹಲವು ಸತ್ಯಗಳು ತಿಳಿಯುತ್ತ ಹೋಗುತ್ತವೆ.

ಸಾಧ್ಯವಾದರೆ ಬೆಂಬಲಿಸಿ; ನಿಂದಿಸಬೇಡಿ.

ಅಭಿಪ್ರಾಯಗಳನ್ನು ನೀಡುವುದು ತುಂಬ ಸುಲಭ. ಮಹಿಳೆಯರ ಮೇಲೆ ಶೋಷಣೆ, ಅತ್ಯಾಚಾರ, ಅವಹೇಳನಗಳು ಜಗತ್ತಿನಾದ್ಯಂತ ನಡೆಯುತ್ತಿರುವುದು ಖಚಿತವಾದ ಸತ್ಯ. ಹಾಗೆ ನೋವಿಗೆ ಒಳಗಾಗಿ ಅನುಭವ ಹಂಚಿಕೊಳ್ಳುತ್ತಿರುವ ಹೆಣ್ಣುಮಕ್ಕಳ ಜತೆಗೆ ನಾವೆಲ್ಲರೂ ನಿಂತುಕೊಳ್ಳಬೇಕು. ‘ಮೀ ಟೂ’ ಎಂಬುದು ತುಂಬ ಒಳ್ಳೆಯ ಅಭಿಯಾನ. ಹೀಗೆ ತಮಗಾದ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಕಷ್ಟು ಧೈರ್ಯ ಬೇಕು. ಎಲ್ಲ ಮಹಿಳೆಯರೂ ಒಂದಲ್ಲ ಒಂದು ಬಗೆಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿಯೇ ಇರುತ್ತಾರೆ. ಆದರೆ ಅದನ್ನು ಹೇಳುವ ಧೈರ್ಯ ಇರುವುದಿಲ್ಲ. ನನಗೂ ಅದನ್ನು ಹಂಚಿಕೊಳ್ಳುವ ಧೈರ್ಯ ಇಲ್ಲ.ಈಗ ‘ಮೀ ಟೂ’ ಅಭಿಯಾನದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡವರರನ್ನು ನಾನು ಬೆಂಬಲಿಸುತ್ತೇನೆ. ಮುಂದೆ ಎಂದಾದರೂ ಸಾಧ್ಯವಾದರೆ ನಾನೂ ಈ ಅಭಿಯಾನದ ಭಾಗ ಆಗುತ್ತೇನೆ.

ಒಂದು ಹೆಣ್ಣು ಮುಂದೆ ಬಂದು ಹೇಳುತ್ತಿದ್ದಾಳೆ ಎಂದರೆ ದಯವಿಟ್ಟು ಅವಳ ಮಾತುಗಳನ್ನು ಕೇಳಿಸಿಕೊಳ್ಳಿ. ಅವಳ ಬಗ್ಗೆ ನಿರ್ಣಯಗಳನ್ನು ನೀಡಬೇಡಿ. ಸಾಧ್ಯವಾದರೆ ಬೆಂಬಲಿಸಿ; ನಿಂದಿಸಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT