ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುಷ್‌ನ ಗ್ಯಾಂಗ್‌ಸ್ಟರ್ ಕಥಾನಕ

Last Updated 4 ಮೇ 2020, 19:30 IST
ಅಕ್ಷರ ಗಾತ್ರ

ಧನುಷ್‌ ನಟನೆಯ ‘ಜಗಮೆ ತಂಧಿರಾಮ್‌’ ಕಾಲಿವುಡ್‌ನ‌ ಬಹುನಿರೀಕ್ಷಿತ ಚಿತ್ರ. ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶಿಸಿರುವ ಈ ಸಿನಿಮಾ ಮೇ ಒಂದರಂದು ಬಿಡುಗಡೆಯಾಗಬೇಕಿತ್ತು. ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಆ್ಯಕ್ಷನ್‌– ಥ್ರಿಲ್ಲರ್‌ ಚಿತ್ರ ಇದು. ಲಾಕ್‌ಡೌನ್‌ ಅವಧಿಯಲ್ಲಿಯೇ ಚಿತ್ರತಂಡವು ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ. ಪಾಸ್‌ಪೋರ್ಟ್‌ ಸ್ಟಾಂಪ್‌ಗಳನ್ನು ಬಳಸಿ ಪೋಸ್ಟರ್‌ ನಿರ್ಮಿಸಿರುವುದು ಇದರ ವಿಶೇಷ. ಕಳೆದ ವರ್ಷ ಧನುಷ್‌ ನಟಿಸಿದ್ದ ‘ಅಸುರನ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಅವರ ನಟನೆ ಬಗ್ಗೆ ಸಿನಿ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ, ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ.

‘ಕೊರೊನಾ ಸೋಂಕು ಕಡಿಮೆಯಾದ ಬಳಿಕ ಜಗಮೆ ತಂಧಿರಾಮ್‌ ಥಿಯೇಟರ್‌ಗೆ ಬರಲಿದೆ’ ಎಂದು ಧನುಷ್‌ ಟ್ವೀಟ್‌ ಮಾಡಿದ್ದಾರೆ. ‘ಪ್ರಸ್ತುತ ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿದೆ. ಈ ಮಾರಣಾಂತಿಕ ವೈರಸ್‌ನ ಹಾವಳಿ ಇಲ್ಲದಿದ್ದರೆ ಚಿತ್ರ ತೆರೆಗೆ ಬರುತ್ತಿತ್ತು’ ಎಂದು ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ಟ್ವೀಟ್‌ ಮಾಡಿದ್ದಾರೆ.

ಮದ್ರಾಸ್‌ ಮೂಲದ ಗ್ಯಾಂಗ್‌ಸ್ಟರ್‌ ಮತ್ತು ಇಂಟರ್‌ನ್ಯಾಷನಲ್‌ ಮಾಫಿಯಾದ ನಡುವೆ ನಡೆಯುವ ಕಥಾನಕ ಇದು. ಲಂಡನ್‌ ಭಾಗದ ಕಥೆಗೆ ನಟಿ ಐಶ್ವರ್ಯ ಲಕ್ಷ್ಮಿ ಹೀರೊಯಿನ್. ಭಾರತದಲ್ಲಿ ನಡೆಯುವ ಕಥೆಯಲ್ಲಿ ಸಂಜನಾ ನಟರಾಜನ್‌ ಅವರು ಧನುಷ್‌ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಚಿತ್ರತಂಡ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಇದು ಲಿಯೊನಾರ್ಡೋ ಡಾವಿಂಚಿ ಬರೆದ ‘ದಿ ಲಾಸ್ಟ್‌ ಸಪ್ಪರ್‌’ ಕಲಾಕೃತಿಯಂತೆ ಇತ್ತು. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿರುವುದು ಲಂಡನ್‌ನಲ್ಲಿ. ಸ್ಕಾಟ್ಲೆಂಡ್‌ ನಟ ಜೇಮ್ಸ್‌ ಕಾಸ್ಮೋ ಖಳನಟನಾಗಿ ಬಣ್ಣ ಹಚ್ಚಿದ್ದಾರೆ.

ಸಂತೋಷ್‌ ನಾರಾಯಣನ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ರೇಯಸ್‌ ಕೃಷ್ಣ ಅವರದ್ದು. ಎಸ್. ಶಶಿಕಾಂತ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT