ಶುಕ್ರವಾರ, ಜುಲೈ 30, 2021
28 °C
ಪ್ರಾಣ ಕೊಡುವಷ್ಟು ಇಂಡಸ್ಟ್ರಿ‌ ಒಳ್ಳೆಯದಲ್ಲ: ಹಿರಿಯ ನಟ ಧರ್ಮೆಂದ್ರ ಭಾವನಾತ್ಮಕ ಟ್ವೀಟ್‌

ಪ್ಯಾರೇ ಸುಶಾಂತ್, ಈ ಬಾಲಿವುಡ್‌ ಒಂದು ಕ್ರೂರ ಜಗತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊರ ಜಗತ್ತಿಗೆ ಗ್ಲಾಮರಸ್ ಆಗಿ ಕಾಣುವ‌ ಬಾಲಿವುಡ್‌ನ ಥಳಕು, ಬಳಕಿನ ಲೋಕದ ಕೊಳಕು ಮತ್ತು ಹುಳುಕುಗಳು ನಟ ಸುಶಾಂತ್ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ನಂತರ ಒಂದೊಂದಾಗಿ ಹೊರಬರುತ್ತಿವೆ. ಬಾಲಿವುಡ್‌ನಲ್ಲಿ ಹೊಸಬರು ಅನುಭವಿಸುವ ಮಾನಸಿಕ ಯಾತನೆ, ಅವಮಾನಗಳ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಲು  ಸುಶಾಂತ್ ಆತ್ಮಹತ್ಯೆ ನಾಂದಿ ಹಾಡಿದಂತಿದೆ.

ಅರ್ಧದಲ್ಲಿಯೇ ಜೀವನದ ಪಯಣ ಮುಗಿಸಿ ತೆರಳಿದ ಯುವನಟನ ನಿರ್ಧಾರದ ಬಗ್ಗೆ ಬಹಳಷ್ಟು ಜನರು ಮರುಕ ಪಡುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಭಾವನಾತ್ಮಕ ಪೋಸ್ಟ್‌ ಮೂಲಕ ನೋವು ತೋಡಿಕೊಳ್ಳುತ್ತಿದ್ದಾರೆ. 

ನಟಿ ಕಂಗನಾ ರನೋಟ್ ನಿರ್ದೇಶಕ ಅನುರಾಗ್ ಕಶ್ಯಪ್‌ ಅವರಂತಹ ಸೆಲೆಬ್ರಿಟಿಗಳು ಬಹಿರಂಗವಾಗಿಯೇ ಬಾಲಿವುಡ್‌ ಪರಿವಾರವಾ ದದ ವಿರುದ್ಧ ಸಮರ ಸಾರಿದ್ದಾರೆ. ನೇರ ನಡೆ, ನುಡಿಗಳಿಗೆ ಹೆಸರಾದ ಹಿರಿಯ ನಟ ಧರ್ಮೇಂದ್ರ  ಅವರಂತೂ ಸುಶಾಂತ್‌ ನೆನಪಿನಲ್ಲಿ ಬಾಲಿವುಡ್‌ ಬಣ್ಣದ ಜನರ ಜನ್ಮ ಜಾಲಾಡಿದ್ದಾರೆ. 

ಷೊ ಬಿಸಿನೆಸ್ ವಿಷ ವರ್ತುಲ 

‘ಪ್ಯಾರೇ ಸುಶಾಂತ್‌, ಸುಂದರ ಕನಸು ಬಿತ್ತುವ ಈ ಬಾಲಿವುಡ್ ಒಂದು ದೊಡ್ಡ ವಿಷ ವರ್ತುಲ. ಷೊ ಬಿಸಿನೆಸ್‌ನ ಅತ್ಯಂತ ಕ್ರೂರ ಜಗತ್ತು. ನಾನು, ನೀನು ತಿಳಿದುಕೊಂಡಷ್ಟು ಒಳ್ಳೆಯದಲ್ಲ. ಒಮ್ಮೆಯೂ ನಿನ್ನನ್ನೂ ಮುಖತಃ ಭೇಟಿಯಾದ ನೆನಪಿಲ್ಲ. ನಿಜ ಹೇಳುತ್ತೇನೆ, ನಿನ್ನ ಸಿನಿಮಾವನ್ನೂ ನಾನು  ನೋಡಿಲ್ಲ. ಆದರೂ, ಅದೇಕೊ ನಿನ್ನ ಅಕಾಲಿಕ ಸಾವು ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ’ ಎಂದು ಧರಂ ಭಾವುಕರಾಗಿದ್ದಾರೆ.

ಹಿರಿಯ ನಟನ ಮನದಾಳದಿಂದ ಬಂದ ಮಾತುಗಳು ಇಡೀ ಇಂಡಸ್ಟ್ರಿಯನ್ನು ನಡುಬೀದಿಯಲ್ಲಿ ತಂದು ಬೆತ್ತಲುಗೊಳಿಸಿವೆ. ಬಹಳಷ್ಟು ಜನರಿಗೆ ಗೊತ್ತಿರದ ಬಾಲಿವುಡ್‌ನ ಮತ್ತೊಂದು ವಿಕಾರ ರೂಪವನ್ನು ಧರ್ಮೇಂದ್ರ  ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. 

ಪಂಜಾಬ್‌ ಕ ಪುತ್ಥರ್‌ ಧರಂ ಪಾಜಿ ಅವರ ಈ ‘ಅಂದರ್ ಕಿ ಬಾತ್‌’ ಮಾತುಗಳು ಇಂಡಸ್ಟ್ರಿ ಪ್ರವೇಶಿಸುವವರಿಗೆ ಮನೆಯ ಹಿರಿಯರು ಹೇಳುವ ಬುದ್ಧಿಮಾತಿನಂತಿವೆ. ಯುವಕರ ಭವಿಷ್ಯದ ಬಗ್ಗೆ ಈ ಧರಂ ಪಾಜಿ ಆಡಿರುವ ಕಳಕಳಿಯ ಮಾತುಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. 

ನನಗೂ ಯೌವ್ವನದಲ್ಲಿ ಇಂಡಸ್ಟ್ರಿ ಪ್ರವೇಶಿಸುವ ಹುಚ್ಚಿತ್ತು. ಪಂಜಾಬ್‌ನ ಪುಟ್ಟ ಗ್ರಾಮ ಸಾನೇವಾಲ್‌ನಿಂದ ಮುಂಬೈಗೆ ಬಂದಿಳಿದಾಗ ನಾನು ಕೂಡ ಹೊರಗಿನವನೇ ಆಗಿದ್ದೆ. ಹೆಮ್ಮೆಯಿಂದ ಹೇಳಿಕೊಳ್ಳಲು ನನಗೂ ದೊಡ್ಡ ಮನೆತನದ ಹೆಸರು, ಆದರೆ ಸಿನಿಮಾ ಹಿನ್ನೆಲೆ ಇರಲಿಲ್ಲ. ಇಲ್ಲಿಗೆ ಬಂದ ಮೇಲೆ ತಿಳಿಯಿತು. ದೂರದಿಂದ ನಾನು ನೋಡಿದ ಜಗತ್ತು ಇದಾಗಿರಲಿಲ್ಲ.. 

ಸುಶಾಂತ್‌, ಈ ಫಿಲ್ಮಂ ಇಂಡಸ್ಟ್ರಿ ನಾವು ಅಂದುಕೊಂಡಷ್ಟು ಸುಂದರವಾಗಿಲ್ಲ. ಇದೊಂದು ಸುಳ್ಳಿನ ಜಗತ್ತು. ಕೊಳಕು ತುಂಬಿದ ಲೋಕ. ಬಣ್ಣ, ಬಣ್ಣದ‌ ಕನಸುಗಳನ್ನು ಮಾರಾಟ ಮಾಡುವ ಈ ಮಾರುಕಟ್ಟೆಯಲ್ಲಿ ಬರೀ ಸುಳ್ಳು ಕತೆಗಳು, ಸಿಹಿಯಾದ ಮಾತು ಮತ್ತು ಮೊಸಳೆ ಕಣ್ಣೀರು ಕೂಡ ಬಿಕರಿಯ ಸರಕುಗಳೇ!

ಓ ಪ್ಯಾರೇ...ಈ ಚಿತ್ರರಂಗ ಸಕ್ಕರೆಯಂತಹ ಸಿಹಿ ಮಾತುಗಳನ್ನಾಡಿ ಸಂದರ್ಭ ಬಂದರೆ ಬೆನ್ನಲ್ಲಿ ಚೂರಿ ಹಾಕಲು ತುದಿಗಾಲ ಮೇಲೆ ನಿಂತಿರುತ್ತದೆ. ಗಿಲೀಟಿನ ಮಾತು, ಆಡಂಬರ, ಕೃತ್ರಿಮ ನಗು, ನಾಟಕೀಯ ನಡವಳಿಕೆ ಬಿಟ್ಟರೆ ಇಲ್ಲಿ ಸಹಜವಾದದ್ದು ಏನೂ ಇಲ್ಲ. ಸತ್ಯ, ಪ್ರಾಮಾಣಿಕತೆ, ನೈಜತೆಗೆ ಇಲ್ಲಿ ಬೆಲೆ ಇಲ್ಲ ಎಂಬ ಸತ್ಯ ನನಗೆ ಆರಂಭದಲ್ಲೇ ಅರ್ಥವಾಯಿತು. 

ಮಾನ, ಸಮ್ಮಾನ, ಆಸ್ತಿ, ಐಶ್ವರ್ಯ, ಖ್ಯಾತಿ... ಹೀಗೆ ಒಬ್ಬ ಮನುಷ್ಯ ಜೀವನದಲ್ಲಿ ಬಯಸುವ ಎಲ್ಲವನ್ನೂ ಈ ಇಂಡಸ್ಟ್ರಿ ನನಗೆ ಕೊಟ್ಟಿದೆ. ಆದರೂ, ನಮ್ಮೂರಿನ ಕೆಸರು ತುಂಬಿದ ಹೊಲ,ಗದ್ದೆಗಳು ನೀಡುವ ಖುಷಿಯನ್ನು ಬಾಲಿವುಡ್‌ ನನಗೆ ನೀಡಲಿಲ್ಲ. ಅದು ನೀಡಲೂ ಸಾಧ್ಯವಿಲ್ಲ.

ಹುಚ್ಚು ಹುಡುಗ... ಇಂಥ ಇಂಡಸ್ಟ್ರಿಗಾಗಿ ನಾವು ನಮ್ಮ ಜೀವನ ಪಣಕ್ಕಿಡಬೇಕಾಗಿಲ್ಲ. ನಾವು ಪ್ರಾಣ ಕೊಡುವಷ್ಟು ಇಂಡಸ್ಟ್ರಿ ಒಳ್ಳೆಯದಾಗಿಲ್ಲ. ಇಲ್ಲಿ ಯಾರ ಎದುರೂ ತಲೆ ಬಾಗುವ, ರಾಜಿಯಾಗುವ ಅಗತ್ಯವಿಲ್ಲ. ಇಲ್ಲಿ ನಮ್ಮ ತ್ಯಾಗ, ಬಲಿದಾನಗಳಿಗೆ ಬೆಲೆ ಇಲ್ಲ. ಯಾರೂ ನಮ್ಮ ಉಪಕಾರವನ್ನು ಸ್ಮರಿಸುವುದಿಲ್ಲ. 

ಸುಂದರವಾದ ಜೀವನವನ್ನು ನಮ್ಮಿಷ್ಟದಂತೆ ಜೀವಿಸಲು ನೂರಾರು ಮಾರ್ಗಗಳಿವೆ. ಜೀವನ ದೊಡ್ಡದು. ಜಗತ್ತು ವಿಶಾಲವಾಗಿದೆ. ಬಾಲಿವುಡ್‌ ಸಹವಾಸ ಬಿಟ್ಟು, ನಿಮ್ಮಿಷ್ಟದ ಬೇರೆ ಮಾರ್ಗಗಳನ್ನು ಆರಿಸಿಕೊಳ್ಳಿ. ನಾನು ಹೇಳುವ ಮಾತುಗಳು ಕಹಿ ಎನಿಸಬಹುದು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು