ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನಂಗೆ ಗ್ರಾಂಟೆಡ್ ಅಲ್ಲ: ಧ್ರುವ ಸರ್ಜಾ

Last Updated 18 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ಒಂದು ಹಾಡು ನೋಡಿ ಸಿನಿಮಾ ಜಡ್ಜ್ ಮಾಡುವ ಹಾಗಿದ್ದರೆ ಯಾರೂ ಸಿನಿಮಾನೇ ನೋಡ್ತಿರ್ಲಿಲ್ಲ. ಟೀಕಿಸುವ ಜನರು ಮೊದಲು ಸಿನಿಮಾ ನೋಡಲಿ. ಆಮೇಲೆ ಮಾತಾಡಲಿ’ –ತುಸು ಅಸಮಾಧಾನದಿಂದಲೇ ಹೇಳುವಾಗಲೂ ಧ್ರುವ ಅವರ ಧ್ವನಿ ಮಂದ್ರದಿಂದ ತುಸುವೂ ಮೇಲಕ್ಕೇರಲಿಲ್ಲ. ಇಷ್ಟು ಹೇಳಿ ತಮ್ಮನ್ನು ತಾನೇ ಸಮಾಧಾನಿಸಿಕೊಳ್ಳುವವರ ಹಾಗೆ ಸಣ್ಣಗೆ ನಕ್ಕರು. ನಂತರ, ‘ಈ ರೀತಿಯ ಹಾಡುಗಳನ್ನು ಮೊದಲು ಮಾಡಿದ್ದು ನಾನೇ ಏನಲ್ಲವಲ್ಲ? ಹಿಂದೆಯೂ ಸಾಕಷ್ಟು ಜನ ಮಾಡಿದ್ದಾರೆ. ಮತ್ತೆ, ನಾನೇನ್ ಬೇಕಂತ ಹೋಗಿ ಹುಡುಗಿ ಜುಟ್ಟು ಹಿಡಿದು ಎಳೆದಾಡಲ್ಲ. ಸಿನಿಮಾ ನಿರ್ದೇಶಕರು ಏನು ಹೇಳ್ತಾರೋ ಅದನ್ನು ಮಾಡ್ತೀನಷ್ಟೆ’ ಎಂದು ಜವಾಬ್ದಾರಿಯನ್ನು ತಮ್ಮ ಕಟ್ಟುಮಸ್ತಾದ ಭುಜದಿಂದ ಮೆಲ್ಲಗೆ ಜಾರಿಸಿ ನಿರ್ದೇಶಕರ ಟೋಪಿಗೆ ಇಳಿಸಿದರು.

ಅವರ ಈ ಸಮರ್ಥನೆಗೆ ಕಾರಣವಾದ ಪ್ರಶ್ನೆ ‘ಪೊಗರು’ ಸಿನಿಮಾದ ‘ಖರಾಬು...’ ಹಾಡಿನ ನೆಪದಲ್ಲಿ ಹುಟ್ಟಿಕೊಂಡಿದ್ದಾಗಿತ್ತು. ಧ್ರುವ ಸರ್ಜಾ ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲಿ ನಾಯಕಿಯನ್ನು ಚುಡಾಯಿಸಲು ಒಂದು ಹಾಡು ಮೀಸಲಾಗಿದ್ದರೆ, ಇನ್ನೊಂದು ಎಣ್ಣೆ (ಮದ್ಯಪಾನ) ಹಾಡು ಇರುತ್ತದೆ. ಇವು ಸಮಾಜದಲ್ಲಿ ಯಾವ ಮನಃಸ್ಥಿತಿಯನ್ನು ಕಟ್ಟುತ್ತವೆ ಎಂದು ಕೇಳಿದಾಗ ಅವರು ಮೇಲಿನ ಸಮರ್ಥನೆ ಕೊಟ್ಟುಕೊಂಡರು.

ಅಂದಹಾಗೆ, ಧ್ರುವ ಮೂರು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ತಮ್ಮ ‘ಪೊಗರು’ ತೋರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು, ಹಾಡು, ಟೀಸರ್ ಎಲ್ಲವೂ ಅವರು ಗುಡುಗುಡು ಗುಮ್ಮನಾಗಿ ತೆರೆಯ ಮೇಲೆ ಮೆರೆಯಲಿದ್ದಾರೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಆದರೆ ಅವರು ಮಾತ್ರ ಈ ನಿರೀಕ್ಷೆಗೆ ಭಿನ್ನವಾಗಿಯೇ ಮಾತಾಡುತ್ತಾರೆ.

‘ನನ್ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ತುಂಬ ಭಿನ್ನ ಸಿನಿಮಾ ಇದು. ಹಿಂದಿನ ಸಿನಿಮಾಗಳ ಶೇಡ್ ಇಲ್ಲಿ ಬರುವುದೇ ಇಲ್ಲ. ಮತ್ತಿದು ಕೌಟುಂಬಿಕ ಕಥನವುಳ್ಳ ಸಿನಿಮಾ. ಯು/ಎ ಸರ್ಟಿಫಿಕೇಟ್ ಕೊಟ್ಟಿದಾರೆ. ಎಲ್ಲಿಯೂ ಆಶ್ಲೀಲ ದೃಶ್ಯಗಳಿಲ್ಲ. ಎಲ್ಲಿಯೂ ರಕ್ತ, ಹಿಂಸೆ ತೋರಿಸುವುದಿಲ್ಲ. ಇಡೀ ಫ್ಯಾಮಿಲಿ ಕೂತು ನೋಡುವ ಸಿನಿಮಾ. ರುಚಿಗೆ ತಕ್ಕಷ್ಟು ಆ್ಯಕ್ಷನ್ ಇದೆ ಅಷ್ಟೆ’ ಎನ್ನುವುದು ಅವರ ಅಂಬೋಣ.

ಇದು ನಿಜ ಜೀವನಕ್ಕೆ ತುಂಬ ಹತ್ತಿರವಾದ, ಎಲ್ಲರಿಗೂ ಕನೆಕ್ಟ್ ಆಗುವ ರೀತಿಯ ಸಿನಿಮಾವಂತೆ. ‘ನೈಜವಾಗಿ ಕಾಣಿಸುವುದಷ್ಟೇ ಅಲ್ಲ, ನಿಜವಾಗಿಯೂ ನಡೆದಿರುವ ಕಥೆ ಇದು’ ಎಂದೂ ಧ್ರುವ ಸೇರಿಸುತ್ತಾರೆ.

‘ಪೊಗರು’ ನಿರ್ದೇಶಕ ನಂದಕಿಶೋರ್, ‘ಅಧ್ಯಕ್ಷ, ‘ವಿಕ್ಟರಿ’ಯಂಥ ಕಾಮಿಡಿ ಹಿಟ್‌ಗಳನ್ನು ಕೊಟ್ಟವರು. ತನಗೂ ಅಂಥದ್ದೇ ಮಾದರಿಯ ಕಥೆ ಹೇಳುತ್ತಾರೆ ಎಂದುಕೊಂಡೇ ಧ್ರುವ ಕಥೆ ಕೇಳಲು ಹೋಗಿದ್ದು. ಆದರೆ ಅವರಿಗೆ ಅಲ್ಲಿ ಎದುರಾಗಿದ್ದು ಬೇರೆಯೇ ಥರದ ಕಥೆ. ಹಾಗಾಗಿಯೇ ಅವರು ‘ಈ ಕಥೆ ನನಗಾಗಿ ಮಾಡಿದ್ದಲ್ಲ. ಮಾಡಿರುವ ಕಥೆಗೆ ನಾನು ಹೊಂದುತ್ತೇನೆ ಅಂತ ಒಪ್ಪಿಕೊಂಡಿದ್ದು. ಇಲ್ಲಿ ನಾನು ಹೀರೊ ಅಲ್ಲ, ಕಥೆಯೇ ಹೀರೊ’ ಎಂದು ಹಿಂಜರಿಕೆ ಇಲ್ಲದೆ ಹೇಳುತ್ತಾರೆ.

‘ಪೊಗರು’ವಿನ ಪಾತ್ರಕ್ಕಾಗಿ ಧ್ರುವ ಸಾಕಷ್ಟು ಶ್ರಮಪಟ್ಟಿದ್ದಾರೆ. ಕಟ್ಟುಮಸ್ತಾಗಿದ್ದ ತಮ್ಮ ದೇಹವನ್ನು ಮೂವತ್ತು ಕೆ.ಜಿ. ಕುಗ್ಗಿಸಿಕೊಂಡು ಹತ್ತನೇ ತರಗತಿಯ ಹದಿವಯದ ಹುಡುಗನಂತಾಗಿದ್ದಾರೆ; ಮತ್ತೆ ಮೊದಲಿಗಿಂತ ದುಪ್ಪಟ್ಟು ದಪ್ಪವಾಗಿ ಸ್ನಾಯುಗಳನ್ನು ಹುರಿಗೊಳಿಸಿಕೊಂಡು ಖಳರನ್ನು ಖತಂ ಮಾಡಿದ್ದಾರೆ. ಒಂದು ಪಾತ್ರಕ್ಕಾಗಿ ಇಷ್ಟೆಲ್ಲ ಬೆವರು ಹರಿಸುವಾಗ ಅವರ ಮನಸಲ್ಲಿದ್ದದ್ದು ಒಂದೇ ಸಂಗತಿ: ‘ನನಗಿಂತ ನೋಡಲು ಚೆನ್ನಾಗಿರುವವರು, ನನಗಿಂತ ಚೆನ್ನಾಗಿ ಡಾನ್ಸ್ ಮಾಡುವವರು, ಫೈಟ್ ಮಾಡುವವರು, ಸ್ಟಂಟ್ಸ್ ಮಾಡುವವರು, ಡೈಲಾಗ್‌ ಹೇಳುವವರು ಪ್ರಪಂಚದಲ್ಲಿ ಎಷ್ಟೊಂದು ಜನ ಇದಾರೆ. ಆದರೆ ಅವರೆಲ್ಲರ ನಡುವೆ ಜನರು ನನ್ನ ಕೈ ಹಿಡಿದಿದ್ದಾರೆ ಅಂದ್ರೆ ಅದನ್ನು ನಾವು ಯಾವತ್ತೂ ಗ್ರಾಂಟೆಡ್ ಆಗಿ ತಗೋಬಾರ್ದು.ಜನ ನಂಗೆ ಮೂರು ಸಿನಿಮಾಗಳಲ್ಲಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಅವರಿಗೆ ಎಲ್ಲಿಯೂ ನಿರಾಸೆ ಮಾಡಬಾರದು ಎಂಬ ಎಚ್ಚರ ನನ್ನಲ್ಲಿದೆ’.

‘ಡಿಸ್ಟರ್ಬ್‌ ಚೈಲ್ಡ್‌ಹುಡ್‌ ಈ ಸಿನಿಮಾದ ಕಥೆಯ ಭಾಗ. ಬಾಲ್ಯ ನಮಗೆ ಸರಿಯಾಗಿ ಸಿಗಲಿಲ್ಲ ಎಂದರೆ ಅವನು ಯಾವ ಥರ ಆಗ್ತಾನೆ ಎನ್ನುವುದನ್ನು ಈ ಸಿನಿಮಾ ಹೇಳುತ್ತದೆ. ಅಂಥ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆಯೇ ಸಾಕಷ್ಟು ಇವೆ. ಅಂಥ ಪಾತ್ರಕ್ಕೆ ಸ್ವಲ್ಪ ಜಾಸ್ತಿನೇ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು’ ಎಂದು ಕಥೆಯ ಎಳೆಯನ್ನು ತುಸುವೇ ಬಿಟ್ಟುಕೊಟ್ಟು ಕುತೂಹಲದ ಒಗ್ಗರಣೆಯನ್ನು ಮನಸೊಳಗೆ ಚೊಂಯ್ಗುಡಿಸುವ ಧ್ರುವ, ಈ ಸಿನಿಮಾಗಾಗಿಯೇ ಒಂದು ವಿಶೇಷ ಅಭ್ಯಾಸವನ್ನೂ ಮಾಡಿಕೊಂಡಿದ್ದಾರಂತೆ. ‘ಅದೇನು ಅಂತ ಸಿನಿಮಾ ನೋಡಿದಾಗ ತಿಳಿಯುತ್ತದೆ’ ಎಂದು ಮೊದಲು ಹಾಕಿದ ಒಗ್ಗರಣೆಯ ಘಾಟನ್ನು ಇನ್ನಷ್ಟು ಹಬ್ಬಿಸುತ್ತಾರೆ.

ಕಳೆದ ಎಂಟು ವರ್ಷಗಳಲ್ಲಿ ಧ್ರುವ ನಾಯಕನಾಗಿ ನಟಿಸಿರುವ ಸಿನಿಮಾ ಮೂರೇ ಮೂರು. ‘ಪೊಗರು’ ನಾಲ್ಕನೇ ಸಿನಿಮಾ. ಯಾಕಿಷ್ಟು ವಿರಳವಾಗಿ ಸಿನಿಮಾ ಮಾಡುತ್ತೀರಾ ಎಂದು ಕೇಳಿದರೆ ಮತ್ತದೇ ಸಿದ್ಧತೆಯತ್ತ ಬೊಟ್ಟು ಮಾಡುತ್ತಾರೆ. ‘ಪೊಗರು ಪಾತ್ರದ ಕಥೆಯೇ ಹಾಗಿತ್ತು. ಹಾಗಾಗಿ ತುಸು ತಡವಾಗಿದ್ದು ನಿಜ. ಈಗ ಜವಾಬ್ದಾರಿ ಹೆಚ್ಚಿದೆ. ಇನ್ನು ತಡ ಮಾಡುವುದಿಲ್ಲ. ಬೇಗ ಬೇಗ ಸಿನಿಮಾ ಮಾಡುತ್ತೇನೆ’ ಎಂದು ಭರವಸೆ ಕೊಟ್ಟ ಧ್ರುವ, ‘ಕುಟುಂಬದ ಎಲ್ಲರ ಜೊತೆಗೆ ಹೋಗಿ ಸಿನಿಮಾ ನೋಡಿ’ ಎನ್ನಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT