
ಧ್ರುವ ಸರ್ಜಾ ನಟನೆಯ ‘KD’ ಚಿತ್ರ ಏ.30ರಂದು ತೆರೆಕಂಡಿದೆ. ವರ್ಷಕ್ಕೆ ಎರಡು ಸಿನಿಮಾಗಳನ್ನು ನೀಡಬೇಕೆಂಬ ಗುರಿ ಹೊಂದಿರುವ ಅವರು ತಮ್ಮ ಸಿನಿಪಯಣ ಕುರಿತು ಮಾತನಾಡಿದ್ದಾರೆ.
ಕಾಳಿದಾಸನಿಗೂ ರಕ್ತಪಾತಕ್ಕೂ ಸಂಬಂಧ ಏನು?!
ಕಾಳಿದಾಸ ಪಾತ್ರದ ಹೆಸರಷ್ಟೆ. ಕಾಳಿಯ ದಾಸ ಅಂತಲೂ ಅಂದುಕೊಳ್ಳಬಹುದು. ಸಾಮಾನ್ಯ ಕುಟುಂಬದ ಮುಗ್ಧ ಹುಡುಗ. ಪ್ರೀತಿ, ಪ್ರೇಮ, ತುಂಟಾಟಗಳಿಂದ ಕೂಡಿದ ಪಾತ್ರ. ಆದರೆ ಬದುಕಿನ ಕೆಲ ಸನ್ನಿವೇಶಗಳು ಆತನನ್ನು ಕೆರಳುವಂತೆ ಮಾಡುತ್ತವೆ. ಯಾಕೆ ಆತ ಆ ರೂಪ ತಾಳುತ್ತಾನೆ? ಅದರಿಂದ ಏನೆಲ್ಲ ಆಗುತ್ತದೆ ಎಂಬುದೇ ಒಟ್ಟಾರೆ ಕಥೆ.
ನಿಮ್ಮ ಹಿಂದಿನ ಸಿನಿಮಾಗಳ ರೀತಿಯಲ್ಲಿಯೇ ಇದು ಸಂಪೂರ್ಣ ಆ್ಯಕ್ಷನ್ ಸಿನಿಮಾವೇ?
ಇದು ಸಂಪೂರ್ಣ ಪ್ರೇಮ್ ಸಿನಿಮಾ! ಅವರ ಕಲ್ಪನೆಯಲ್ಲಿ ಮೂಡಿದ ಕಥೆಯಿದು. ನಮ್ಮ ನೆಲದ ಬೇರುಗಳು, ಸಂಸ್ಕೃತಿ ಎಲ್ಲವೂ ಕಥೆಯ ಭಾಗ. ಮಂಡ್ಯ, ಮೈಸೂರು ಭಾಗದ ಭಾಷೆ, ಆಚರಣೆಗಳಿವೆ. ಪ್ರೇಮ್ ಅವರ ಬ್ರ್ಯಾಂಡ್ ಸಿನಿಮಾ. ಈ ಕಥೆಗೆ ಇಷ್ಟು ಆ್ಯಕ್ಷನ್ ಅವಶ್ಯಕತೆಯಿತ್ತು. ಹಿಂದಿನ ಸಿನಿಮಾಗಳ ಹೋಲಿಕೆ ಇಲ್ಲ.
ನೀವು ಆ್ಯಕ್ಷನ್ ಕಥೆಗಳಿಗಷ್ಟೇ ಸೀಮಿತವಾಗುತ್ತಿರುವಿರಾ?
ನಟನಾಗಿ ಬೇರೆ, ಬೇರೆ ರೀತಿಯ ಪಾತ್ರಗಳನ್ನು ಯತ್ನಿಸುವ ಉದ್ದೇಶವಿತ್ತು. ನಟನಾಗಿ ಎಲ್ಲ ರೀತಿಯ ಪಾತ್ರ ಮಾಡಬೇಕು. ಪ್ರೇಮ್ ರೀತಿಯ ನಿರ್ದೇಶಕರು ಸಿಕ್ಕಾಗ ಅವರ ಕಲ್ಪನೆಯ ಪಾತ್ರಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ. ‘ಭರ್ಜರಿ’ ಆದ ನಂತರ ಈ ರೀತಿ ಪಾತ್ರ ಮಾಡಿರಲಿಲ್ಲ. ‘KD’ ಚಿತ್ರದಲ್ಲಿ ಆ್ಯಕ್ಷನ್ ಮಾತ್ರವಲ್ಲ, ಪ್ರೇಮ ಸಲ್ಲಾಪ, ಹಾಸ್ಯ ಎಲ್ಲವೂ ಇವೆ.
ಈ ಚಿತ್ರಕ್ಕಾಗಿ ನೀವು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದೀರಿ...
ಎಲ್ಲ ನಟರಿಗೂ ರಿಸ್ಕ್ ಅನ್ನೋದು ಇದ್ದೇ ಇರುತ್ತೆ. ಕೇವಲ ನಟನೆಯಲ್ಲಿ ಮಾತ್ರವಲ್ಲ, ಎಲ್ಲ ಕೆಲಸದಲ್ಲಿಯೂ ರಿಸ್ಕ್ ಇರುತ್ತದೆ. ಅಷ್ಟು ರಿಸ್ಕ್ ತೆಗೆದುಕೊಂಡರೆ ಮಾತ್ರ ತಕ್ಕ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯ. ನಾವು ಹಿಂದೆ ಮಾಡಿದ್ದನ್ನು ಮೀರುವ ಯತ್ನವನ್ನಾದರೂ ಮಾಡಲೇಬೇಕಲ್ಲವೆ? ಆ ರೀತಿ ಪ್ರಯತ್ನ ಇಲ್ಲಿದೆಯಷ್ಟೆ.
ಹಾಡಿನ ವಿವಾದ, ಸೆನ್ಸಾರ್ ಸಮಸ್ಯೆ ಮೊದಲಾದವು ನಿಮ್ಮ ವರ್ಚಸ್ಸಿಗೆ ಧಕ್ಕೆ ಮಾಡಬಹುದೇ?
ಕೆಲವು ವಿಷಯಗಳು ಕೆಲವರಿಗೆ ಇಷ್ಟವಾಗುತ್ತೆ. ಕೆಲವರಿಗೆ ಆಗಲ್ಲ. ಅದನ್ನು ಸರಿಪಡಿಸಲೆಂದೇ ಸೆನ್ಸಾರ್ ಮಂಡಳಿ ಇರುತ್ತದೆ. ಅವರ ಕೆಲಸ ಅವರು ಮಾಡಿದ್ದಾರೆ. ಇದರಿಂದ ಯಾರ ವರ್ಚಸ್ಸಿಗೂ ಧಕ್ಕೆ ಇಲ್ಲ. ಕೆಲವೊಮ್ಮೆ ನಾವು ತಪ್ಪು ಮಾಡಿರುತ್ತೇವೆ. ಅದನ್ನು ತಿದ್ದಲು ಮೇಲಿನವರು ಇರುತ್ತಾರೆ. ಅದೇ ರೀತಿ ಸೆನ್ಸಾರ್ ಮಂಡಳಿ ಸಮಾಜಕ್ಕೆ ಪೂರಕವಲ್ಲದ ಅಂಶಗಳನ್ನು ಸರಿಪಡಿಸುವಂತೆ ಕೇಳಿದೆ. ಅದನ್ನು ಮಾಡಿದ್ದರಿಂದಲೇ ಸಿನಿಮಾ ಬಿಡುಗಡೆಯಾಗುತ್ತಿದೆ. ಅದು ಸಿನಿಮಾಕ್ಕಿರುವ ಕಾನೂನು. ಅದನ್ನು ಎಲ್ಲರೂ ಪಾಲಿಸಲೇಬೇಕು.
ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?
ನಾನು ಪ್ರತಿ ಹಂತದಲ್ಲಿಯೂ ಎಲ್ಲರಿಂದಲೂ ಕಲಿಯುತ್ತೇನೆ ಎಂಬ ಮನಸ್ಥಿತಿಯವನು. ಸಂಜಯ್ ದತ್, ರವಿಚಂದ್ರನ್, ಸುದೀಪ್ ಸೇರಿದಂತೆ ಇಲ್ಲಿನ ಪ್ರತಿ ನಟರೊಂದಿಗೆ ನಟಿಸಿದ್ದು ಒಂದೊಂದು ರೀತಿಯ ಪಾಠ. ಕೆಲವು ಸನ್ನಿವೇಶಗಳು ಎಂದಿಗೂ ಮರೆಯಲಾಗದ ಅನುಭವ ನೀಡುತ್ತವೆ.
ನಿಮ್ಮ ಸಿನಿಮಾಕ್ಕೆ ಉದ್ದುದ್ದ ಸಾಲಿನ ಸಂಭಾಷಣೆಯೇ ಶಕ್ತಿಯೇ?
‘ನನ್ನ ಚಿತ್ರದಲ್ಲಿ ಸಂಭಾಷಣೆಗಳನ್ನು ನಿರೀಕ್ಷೆ ಮಾಡುತ್ತಾರೆ. ಕುಟುಂಬ ಕೇಂದ್ರಿತ ವಿಷಯಗಳನ್ನು ಬಯಸುತ್ತಾರೆ. ಅಂಥ ಸ್ಕ್ರಿಪ್ಟ್‌ಗಳನ್ನು ಆಯ್ದುಕೊಳ್ಳುವೆ.
ಹೆಚ್ಚು ಸಿನಿಮಾಗಳನ್ನು ಮಾಡಬೇಕೆಂಬ ನಿಮ್ಮ ಸಂಕಲ್ಪ ಈಡೇರುತ್ತಿದೆಯಾ?
ಸುಮಾರು 50–60 ಕಥೆ ಕೇಳಿರುವೆ. ಅದರಲ್ಲಿ ಉತ್ತಮವಾಗಿದ್ದನ್ನು ಮಾಡುವೆ. ನಿರ್ದೇಶಕರು ಹೊಸಬರಾಗಿರಲಿ, ಹಳೆಬರಾಗಿರಲಿ. ಕಥೆ ಮನರಂಜಿಸುವಂತಿರಬೇಕು. ವರ್ಷಕ್ಕೆ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗಬೇಕೆಂಬ ಹಾದಿಯಲ್ಲಿಯೇ ಕೆಲಸ ಮಾಡುತ್ತಿರುವೆ.
ನಿಮ್ಮ ಮುಂದಿನ ಸಿನಿಮಾಗಳು...
ಸದ್ಯಕ್ಕೆ ‘ಕ್ರಿಮಿನಲ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆ ಸಿನಿಮಾವನ್ನು ಈ ವರ್ಷದ ಅಂತ್ಯದೊಳಗೆ ತೆರೆಗೆ ತರುವ ಯೋಜನೆಯಿದೆ. ಅದರ ಹೊರತಾಗಿ ಎರಡು ಕಥೆಗಳನ್ನು ಕೇಳಿರುವೆ. ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.