ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯ ದಿನ ಉಣ್ಣುವುದೇನು?

Last Updated 23 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮದುವೆಯ ದಿನ ಉಣ್ಣುವುದೇನು? ಇದೆಂಥ ಪ್ರಶ್ನೆ..? ಮದುವೆಯೂಟವನ್ನೇ ಉಂಡರಾಯ್ತು ಎನ್ನುವ ಉತ್ತರ ನಿಮ್ಮದಾಗಿರಬಹುದು. ಸಾಮಾನ್ಯವಾಗಿ ಮದುಮಕ್ಕಳು ಉಣ್ಣುವ ವೇಳೆಗೆ ಎಲ್ಲವೂ ತಣಿದು, ಎಲ್ಲರೂ ಉಂಡು ಅವರವರ ಮನೆಗೆ ಹೋಗಿರುತ್ತಾರೆ. ಅಡುಗೆಯವರೂ ಇನ್ನೇನು ತಮ್ಮ ಪ್ಯಾಕಿಂಗ್ ಮುಗಿಸಿ ಹೋಗಲು ಸಿದ್ಧರಾಗಿ ಬಡಿಸಲು ನಿಂತಿರುತ್ತಾರೆ. ಇದೆಲ್ಲ ಸಾಮಾನ್ಯ ಚಿತ್ರಣ.

ಬೆಳಗಿನ ಜಾವದಲ್ಲಿಯೇ ಪೂಜೆ, ಪುನಸ್ಕಾರಗಳಿಗೆಲ್ಲ ಎದ್ದವರು, ನಡು ಮಧ್ಯಾಹ್ನದವರೆಗೂ ಊಟವಿಲ್ಲದೇ ನಿಂತರೆ ದಣಿವಾಗುವುದಿಲ್ಲವೇ? ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಇವರೆಲ್ಲ ಹೇಗೆ ನಗುನಗುತ್ತ ಇದ್ದರು? ಅವರೇನು ಉಪವಾಸ ಮಾಡಲಿಲ್ಲವೇ? ಖಾಲಿ ಹೊಟ್ಟೆಯಲ್ಲಿ ಪೂಜೆ ಮಾಡುವುದಿಲ್ಲವೇ?

ಇದಕ್ಕೆ ಉತ್ತರ ನೀಡಿದ್ದಾರೆ ಡಾ. ಮಧು ಚೋಪ್ರಾ. ಈಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಮದುವೆ, ರಿಸೆಪ್ಶನ್‌ ಮುಗಿಸಿ, ಮದುವೆಯ ದಿನ ಮುದದಿಂದ ಇರುವುದು ಹೇಗೆಂದು ಇಲ್ಲಿ ವಿವರಿಸಿದ್ದಾರೆ. ಅವರು ವೃತ್ತಿಯಿಂದ ವೈದ್ಯರೂ ಹೌದು.

ಮದುಮಕ್ಕಳ ದಿರಿಸಿನಷ್ಟೇ ತಿನಿಸಿಗೂ ಮಹತ್ವ ನೀಡಬೇಕು ಎನ್ನುವುದು ಅವರ ಕಾಳಜಿ. ಅದಕ್ಕೆ ಅವರು ಈ ಸಲಹೆಗಳನ್ನು ನೀಡುತ್ತಾರೆ ನೋಡಿ.

ಮದುವೆಯ ದಿನ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಿರಿ. ನಂತರ ಯಾವುದಾದರೂ ಹಣ್ಣಿನ ತಾಜಾ ಜೂಸು ಕುಡಿಯಿರಿ. ಸಕ್ಕರೆಯ ಬಳಕೆ ತಕ್ಕಮಟ್ಟಿಗಿರಲಿ. ಆಯಾಸವಾಗದಂತೆ ಇವೆರಡೂ ನಿಮಗೆ ಆಸರೆ ನೀಡುತ್ತವೆ.

ಸ್ನಾನದ ನಂತರ ಹಸಿವೆನಿಸಿದರೆ ಒಂದು ಮುಷ್ಟಿ ಬಾದಾಮಿಯನ್ನು ತಿಂದುಬಿಡಿ. ಇದೇನು ಆಹಾರದ ಲೆಕ್ಕದಲ್ಲಿ ಪರಿಗಣಿಸಲಾಗುವುದಿಲ್ಲ. ಹಾಗಾಗಿ ನಿರಾತಂಕವಾಗಿ ಪೂಜೆಯನ್ನೂ ಮಾಡಬಹುದು. ಸಾಧ್ಯವಿದ್ದಲ್ಲಿ ಒಂದು ಹಿಡಿ ಬಾದಾಮಿಯನ್ನು ನಿಮ್ಮ ಕೋಣೆಯಲ್ಲಿಯೇ ಹಿಂದಿನ ರಾತ್ರಿ ನೀರಿಗೆ ನೆನೆಸಿಡಿ. ಅದು ಇನ್ನೂ ಶಕ್ತಿಯನ್ನು ನೀಡುತ್ತದೆ. ಇಡೀ ದಿನ ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.

ಮದುವೆಯ ದಿನ ನಿಶ್ಚಿತವಾದಾಗಿನಿಂದಲೂ ಆಹಾರದಲ್ಲಿ ಮಸಾಲೆ ಪದಾರ್ಥ ಹಾಗೂ ಕರಿದ ತಿಂಡಿಗಳು ಕಡಿಮೆಯಾಗಲಿ.

ಹೆಚ್ಚು ಹಸಿ ತರಕಾರಿ, ಸಲಾಡ್‌ಗಳು ಹಾಗೂ ಹಣ್ಣಿನ ಜ್ಯೂಸ್‌ ಕುಡಿಯುತ್ತಿರಿ. ಇದರಿಂದ ಚರ್ಮದ ತೇಜಸ್ಸು ಹೆಚ್ಚುತ್ತದೆ. ಲವಲವಿಕೆಯಿಂದಿರುವಿರಿ. ನಿದ್ದೆಗೆಟ್ಟರೂ ಆಯಾಸವೆನಿಸದು.

ಡಾ. ಮಧು ಚೋಪ್ರಾ
ಡಾ. ಮಧು ಚೋಪ್ರಾ

ನೆಂಟರಿಷ್ಟರು, ಬಂಧು ಬಾಂಧವರು ಬಂದವರೆಲ್ಲ ಬಾಯಿಗೆ ಸಿಹಿಯುಣ್ಣಿಸುವವರೇ ಆಗೆಲ್ಲ ನಿರಾಕರಿಸಲಾಗದು. ಆದರೆ ತುತ್ತು ಎಷ್ಟಿರಬೇಕೆನ್ನುವುದು ನಿಮ್ಮದೇ ನಿರ್ಧಾರವಾಗಿರಲಿ.

ವೇದಿಕೆಯ ಮೇಲೆ ನಿಂತಾಗ ಸಾಮಾನ್ಯವಾಗಿ ತಂಪು ಪಾನೀಯವನ್ನು ತಂದುಕೊಡುತ್ತಾರೆ. ಅವನ್ನು ಕುಡಿದಂತೆ ಮಾಡುವುದು ಒಳ್ಳೆಯದು. ಕುಡಿಯುವುದು ಬೇಡ. ತಂಪು ಪಾನೀಯಗಳ ಬದಲಿಗೆ ಹಣ್ಣಿನ ಜೂಸು, ನಿಂಬೆ ಹಣ್ಣಿನ ಪಾನಕ ಸೇವಿಸುವುದು ಒಳ್ಳೆಯದು. ಬಹಳ ಹೊತ್ತಿನಿಂದ ಖಾಲಿ ಹೊಟ್ಟೆಯಲ್ಲಿರುವವರಿಗೆ ತಂಪು ಪಾನೀಯ ಊಟ ಸೇರದಂತೆ ಮಾಡುತ್ತವೆ. ನಯವಾಗಿ ನಿರಾಕರಿಸುವಷ್ಟು ಆತ್ಮೀಯತೆ ಬೆಳೆದಿದ್ದರೆ ಅದನ್ನು ನಿರಾಕರಿಸಿ, ಪಾನಕ ಕೇಳಬಹುದು.

ಮದುಮಕ್ಕಳೊಂದಿಗೆ ಫೋಟೊ ತೆಗೆಸಿಕೊಳ್ಳುವ ಉತ್ಸಾಹ ಎಲ್ಲರಿಗೂ ಇರುತ್ತದೆ. ನಿಮಗೂ ನಿಮ್ಮ ಮದುವೆಯ ದಿನ ಒಂದೆರಡು ತಲೆಮಾರುಗಳಾದರೂ ನೋಡಲಿ ಎಂಬ ಆಸೆ ಇರುತ್ತದೆ. ಹಾಗಾಗಿ ಲವಲವಿಕೆಯಿಂದ, ನಗುನಗುತ್ತ ಇರಲು ಹಗುರವಾದ ಆಹಾರ ಸೇವಿಸುವುದು ಅತ್ಯವಶ್ಯ.

ನಿಮ್ಮ ಡಯೆಟ್‌ನಲ್ಲಿ ಸಾಕಷ್ಟು ಒಣ ಹಣ್ಣುಗಳು, ತರಕಾರಿ ಸಲಾಡ್‌ಗಳು ಹಾಗೂ ತಾಜಾ ಹಣ್ಣುಗಳನ್ನು ಸಮ್ಮಿಳಿತಗೊಳಿಸಿ. ಮದುವೆಯ ದಣಿವಿದ್ದರೂ ಆಯಾಸ ಕಾಣದಂತೆ, ಲವಲವಿಕೆಯಿಂದಿರಲು ಇವೆಲ್ಲವೂ ಸಹಾಯ ಮಾಡುತ್ತವೆ. ಪ್ರಿಯಾಂಕಾ ಚೋಪ್ರಾಗೂ ಇದೇ ಸರಳ ಸೂತ್ರವನ್ನು ನೀಡಿದ್ದೆವು. ಪ್ರಿಯಾಂಕ ಮದುವೆಯಿದ್ದಾಗಲಷ್ಟೇ ಅಲ್ಲ, ಯಾವಾಗಲೂ ಈ ಸೂತ್ರವನ್ನು ಅನುಸರಿಸುತ್ತಾಳೆ. ಆರೋಗ್ಯವಂತ ಚರ್ಮಕ್ಕೆ, ಚರ್ಮದ ಕಾಂತಿಗೆ ಇಷ್ಟಾದರೂ ಆರೈಕೆ ನೀಡಬಹುದಲ್ಲವೇ? ಚಂದ ಕಾಣಿಸುವುದು ಮೇಕಪ್‌ನಿಂದಲ್ಲ. ಆರೋಗ್ಯದಿಂದ ಎನ್ನುವುದಂತೂ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT