ಪಾತು ಪಾತ್ರದಲ್ಲಿ ಶುಭಾರಕ್ಷಾ

ಶನಿವಾರ, ಏಪ್ರಿಲ್ 20, 2019
29 °C

ಪಾತು ಪಾತ್ರದಲ್ಲಿ ಶುಭಾರಕ್ಷಾ

Published:
Updated:
Prajavani

ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ನೆಲೆಕಂಡುಕೊಳ್ಳುತ್ತಿರುವ ನಟಿ ಶುಭಾರಕ್ಷಾ, ಈಗ ‘ಮೂಕವಿಸ್ಮಿತ’ ಮತ್ತು ‘ದಿಗ್ದರ್ಶಕ’ ಎಂಬ ಎರಡು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಅವರು ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರಂತೆ. ಸಿನಿಮಾ ಸಾಂಗತ್ಯದ ಜತೆಗೆ ಶುಭಾರಕ್ಷಾ ಅವರು ಈಗ ವೆಬ್‌ ಸೀರಿಸ್‌ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನಲ್ಲಿ ಪ್ರಸಾರಗೊಳ್ಳುವ ವೆಬ್‌ಸೀರಿಸ್‌ಗೆ ಅವರು ಶೀಘ್ರವೇ ಬಣ್ಣಹಚ್ಚಲಿದ್ದಾರಂತೆ.

‘ಸಂಜಯ್‌ ಮತ್ತು ಜನಾರ್ದನ್‌ ಅವರು ನಿರ್ದೇಶಿಸಿರುವ ‘ದಿಗ್ದರ್ಶಕ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಜನಾರ್ದನ್‌ ಅವರು ಈ ಹಿಂದೆ ‘ಬಾಯ್‌ ಫ್ರೆಂಡ್‌’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಜಯಪ್ರಕಾಶ್‌ ಚಿತ್ರದ ನಾಯಕನಟರು. ಇದೊಂದು ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. ಈ ಚಿತ್ರದಲ್ಲಿ ನಾನು ನಾಯಕನಟನ ಅತ್ತೆ ಮಗಳ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ಪೊಲೀಸ್‌ ಕತೆಯನ್ನು ಹೇಳಲಾಗಿದೆ. ಈ ಸಿನಿಮಾದಲ್ಲಿ ನಾಲ್ಕು ಗೀತೆಗಳಿದ್ದು, ಅವುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ’ ಎನ್ನುತ್ತಾರೆ ನಟಿ ಶುಭಾರಕ್ಷಾ.

‘ಪ್ರಹಸನ ಪಿತಾಮಹ’ ಎಂದೇ ಜನಪ್ರಿಯತೆ ಗಳಿಸಿರುವ ಟಿ.ಪಿ.ಕೈಲಾಸಂ ಅವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ರಂಗದ ಮೇಲೆ ಚಟ್‌ ಪಟ್‌ ಅಂತ ಸಿಡಿಯುತ್ತಿದ್ದ ಅವರ ಹಾಸ್ಯ ಚಟಾಕಿಗಳು ಇಂದಿಗೂ, ಎಂದೆಂದಿಗೂ ಜನರನ್ನು ನಗಿಸುತ್ತಲೇ ಇರುತ್ತವೆ. ರಂಗಭೂಮಿಗೊಂದು ಹೊಸ ಆಯಾಮ ನೀಡಿದ ಟಿ.ಪಿ.ಕೈಲಾಸಂ ಅವರ ನಾಟಕವನ್ನು ಆಧರಿಸಿದ ಸಿನಿಮಾ ‘ಮೂಕವಿಸ್ಮಿತ’. ಈ ಚಿತ್ರದಲ್ಲಿ ಶುಭಾರಕ್ಷಾ ಅವರು ಪಾತು ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

‘‘ಮೂಕವಿಸ್ಮಿತ’ ಸಿನಿಮಾ ಟಿ.ಪಿ.ಕೈಲಾಸಂ ಅವರ ‘ಟೊಳ್ಳುಗಟ್ಟಿ’ ನಾಟಕವನ್ನು ಆಧರಿಸಿದ ಚಿತ್ರ. 1920ರ ಕತೆಯನ್ನು ಈ ಕಾಲಕ್ಕೆ ಒಗ್ಗಿಸಿ ಚಿತ್ರವನ್ನು ನಿರೂಪಿಸಲಾಗಿದೆ. ಸಾತು– ಪಾತು ಈ ಚಿತ್ರದ ಎರಡು ಪ್ರಮುಖ ಪಾತ್ರಗಳು. ಸಾತು ಸಾಧು ಸ್ವಭಾವದ ಹುಡುಗಿ. ಪಾತು ತುಂಬ ಜೋರು ಸ್ವಭಾವದ ಹುಡುಗಿ. ಈ ಸಿನಿಮಾದಲ್ಲಿ ನಾನು ಪಾತು ಪಾತ್ರವನ್ನು ನಿಭಾಯಿಸಿದ್ದೇನೆ. ಆಗಿನ ಕಾಲದಲ್ಲಿ ಒಂದು ಬ್ರಾಹ್ಮಣ ಕುಟುಂಬದ ಹುಡುಗಿ ಹೇಗಿರುತ್ತಿದ್ದಳೋ ಅದಕ್ಕೆ ತದ್ವಿರುದ್ಧವಾಗಿ ಪಾತು ಇರುತ್ತಾಳೆ. ವೇಷಭೂಷಣ, ಹಾವ ಭಾವ ಎಲ್ಲದರಲ್ಲೂ ಭಿನ್ನತೆ ಮೆರೆಯುತ್ತಾಳೆ. ಸಾತು ಪಾತ್ರವನ್ನು ವಾಣಿಶ್ರೀ ಭಟ್‌ ನಿರ್ವಹಿಸಿದ್ದಾರೆ. ಸಂದೀಪ್‌ ಮಲಾನಿ ಅವರು ಮಾವನ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಿರುವ ಹೆಚ್ಚಿನ ಕಲಾವಿದರೆಲ್ಲರೂ ರಂಗಭೂಮಿ ಹಿನ್ನೆಲೆ ಉಳ್ಳವರು. ಚಿತ್ರದ ನಿರ್ದೇಶಕ ಗುರುದತ್‌ ಅವರಿಗೆ ಇದು ಮೊದಲನೇ ಸಿನಿಮಾ’ ಎಂದು ಚಿತ್ರದಲ್ಲಿ ಪಾತ್ರದ ಕುರಿತು ಹೇಳಿದರು ಶುಭಾರಕ್ಷಾ.

ಅಂದಹಾಗೆ, ಮೂಕವಿಸ್ಮಿತ ಚಿತ್ರ ಆರಂಭಗೊಂಡು ಎರಡು ವರ್ಷಗಳೇ ಕಳೆದಿದ್ದವು. ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ತಡವಾಗಿದೆ. ಈ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಈಚೆಗಷ್ಟೇ ನಡೆದಿತ್ತು. ಎಲ್ಲ ಅಂದುಕೊಂಡಂತೆ ಆದರೆ ‘ಮೂಕವಿಸ್ಮಿತ’ ಸಿನಿಮಾ ಮುಂದಿನ ತಿಂಗಳು ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಮೂಕವಿಸ್ಮಿತ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ. ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ’ ಎನ್ನುವ ನಟಿ ಶುಭಾರಕ್ಷಾ ಅವರಿಗೆ ಈಗ ತೆಲುಗು ಚಿತ್ರವೊಂದರಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆಯಂತೆ. ‘ಅದಕ್ಕೂ ಮುನ್ನ ತಮಿಳು ವೆಬ್‌ಸೀರಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುವ ಶುಭಾರಕ್ಷಾ ಅವರು ತಮ್ಮ ದೇಹಾಕಾರವನ್ನು ಕಾಪಿಟ್ಟುಕೊಳ್ಳಲು ಈಗ ಜಿಮ್‌ನಲ್ಲಿ ದಂಡಿಯಾಗಿ ಬೆವರು ಸುರಿಸುತ್ತಿದ್ದಾರಂತೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !