ಶುಕ್ರವಾರ, ಜೂಲೈ 3, 2020
21 °C

ಕಕ್ಕುಲತೆಯ ಡಿಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಾಯಿ ಮತ್ತು ಮನುಷ್ಯನ ನಡುವಿನ ಮಧುರ ಬಾಂಧವ್ಯದ ಕಕ್ಕುಲತೆಯನ್ನು ಬಿಂಬಿಸುವ ಹಾಗೂ ಮೊದಲ ಬಾರಿಗೆ ಐಪೋನ್‌ನಲ್ಲಿ ಚಿತ್ರೀಕರಿಸಿರುವ ‘ಡಿಂಗ’ ಚಿತ್ರ ಇದೇ ಜ.31ರಂದು ತೆರೆಕಾಣಲಿದೆ.

ಈ ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ಅಭಿಷೇಕ್‌ ಜೈನ್‌ ಚಿತ್ರತಂಡದೊಟ್ಟಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ‘ಇದು ನನ್ನ ಏಳನೇ ಸಿನಿಮಾ. ಮೂರ್ನಾಲ್ಕು ಕೋಟಿ ಬಂಡವಾಳ ಹೂಡಿಸಿ ದೊಡ್ಡ ನಾಯಕರ ಚಿತ್ರ ಮಾಡುವ ಆಸೆ ನನಗೂ ಇತ್ತು. ಆದರೆ, ಯಾರೂ ಮುಂದೆ ಬರಲಿಲ್ಲ. ಇರುವ ಅವಕಾಶದಲ್ಲೇ ಪ್ರಯತ್ನಿಸಿ, ದೊಡ್ಡ ಅವಕಾಶ ಪಡೆಯಬೇಕೆನ್ನುವುದು ನನ್ನ ಗುರಿ. ಐಫೋನ್‌ನಲ್ಲಿ ಚಿತ್ರ ನಿರ್ಮಿಸುತ್ತೇವೆ ಎಂದಾಗ ಹತ್ತಾರು ಮಂದಿ ನಮ್ಮನ್ನು ಹುಚ್ಚರೆಂದರು. ಈಗ ಏಷ್ಯಾದಲ್ಲಿ ಐಫೋನ್‌ ಬಳಸಿ ನಿರ್ಮಿಸಿದ ಮೊದಲ ಚಿತ್ರ ಎನ್ನುವ ಶ್ರೇಯಕ್ಕೆ ನಮ್ಮ ‘ಡಿಂಗ’ ಪಾತ್ರವಾಗುತ್ತಿದೆ’ ಎಂದರು.

ಛಾಯಾಗ್ರಹಣ ಮಾಡಿರುವ ಮಂಜುನಾಥ್‌, ಸಾಮಾನ್ಯವಾಗಿ ಎಲ್ಲರಿಗೂ ದೊಡ್ಡ ಕ್ಯಾಮೆರಾಗಳಲ್ಲಿ ಸಿನಿಮಾ ಚಿತ್ರೀಕರಿಸುವ ಆಸೆ ಇರುತ್ತದೆ. ನನಗೆ ಐಪೋನ್‌ನಲ್ಲಿ ಚಿತ್ರೀಕರಣ ಮಾಡಬೇಕು ಎಂದು ನಿರ್ದೇಶಕರು ಹೇಳಿದಾಗ ದೊಡ್ಡ ಸವಾಲು ಎದುರಾಯಿತು. ನಂತರ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ, ಫೋನೊಗ್ರಫಿ ತಂತ್ರಜ್ಞಾನ ಬಳಸಿಕೊಂಡು ಐಫೋನ್‌ನಿಂದ ಚಿತ್ರೀಕರಿಸಿದೆ. ಎಲ್ಲರೂ ಹುಬ್ಬೇರಿಸುವಂತೆ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರು ಈ ಚಿತ್ರವನ್ನು ಖಂಡಿತ ಗೆಲ್ಲಿಸುತ್ತಾರೆಂಬ ವಿಶ್ವಾಸವೂ ಇದೆ’ ಎಂದರು.

ಚಿತ್ರದ ನಾಯಕ ಆರವ ಗೌಡ್ರು ‘ಐಫೋನ್ ಸಿನಿಮಾ ಹೇಗೆ ಬರಲಿದೆಯೋ ಎನ್ನುವ ಅಂಜಿಕೆ, ಭಯ ಇತ್ತು. ಬಿಡುಗಡೆ ಪೂರ್ವ ಸಿನಿಮಾ ನೋಡಿದ ಮೇಲೆ ಆ ಭಯ, ಅಂಜಿಕೆ ನಿವಾರಣೆಯಾಗಿದೆ. ವಿಭಿನ್ನ ಮಾದರಿಯ ಕಥೆಯ ಚಿತ್ರವಿದು. ಹಾಸ್ಯದ ಜತೆಗೆ ಭಾವುಕತೆಯೂ ಇದೆ’ ಎಂದರು.

ಚಿತ್ರದ ನಾಯಕಿ ಅನುಷಾ ‘ಇದು ನನ್ನ ನಾಲ್ಕನೆಯ ಸಿನಿಮಾ. ಹೊಸಬರ ಸಿನಿಮಾವಾದರೂ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದರು.

ಚಿತ್ರದ ವಿತರಣೆಯ ಹಕ್ಕು ಪಡೆದಿರುವ ಮೋಹನದಾಸ್‌ ಪೈ, ಚಿತ್ರದ ಗುಣಮಟ್ಟದ ಬಗ್ಗೆ ಇದ್ದ ಅನುಮಾನಗಳು ಟ್ರೈಲರ್ ನೋಡಿದ ನಂತರ ನಿವಾರಣೆಯಾಗಿವೆ. ಚಿತ್ರದ ಎಲ್ಲ ಹಾಡುಗಳು ಸೂಪರ್‌ ಆಗಿವೆ. 75ರಿಂದ ನೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ನಿರ್ಮಾಪಕರಲ್ಲಿ ಒಬ್ಬರಾದ ಮಧುಸೂದನ್‌, ಮಾದೇಶ್ವರನ ಅನುಗ್ರಹದಿಂದ ಚಿತ್ರ ತೆರೆ ಕಾಣುತ್ತಿದೆ. ಚಿತ್ರತಂಡ ಸಿನಿಮಾವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಇದು ಕೌಟುಂಬಿಕ ಸಿನಿಮಾ’ ಎಂದರು.

ಹಾಡುಗಳಿಗೆ ಸಂಗೀತ ನಿರ್ದೇಶನ ಮತ್ತು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವ ಶುದ್ಧೋ ರಾಯ್, ಚಿತ್ರವನ್ನು ಮಧ್ಯಂತರದಲ್ಲಿ ನೋಡುವಾಗ ಪ್ರೇಕ್ಷಕ ಕೈಯಲ್ಲಿ ಕರವಸ್ತ್ರ ಇಟ್ಟುಕೊಳ್ಳಬೇಕು, ಅಷ್ಟರಮಟ್ಟಿಗೆ ಈ ಚಿತ್ರ ಭಾವುಕಗೊಳಿಸಲಿದೆ ಎನ್ನುವ ಮಾತು ಸೇರಿಸಿದರು.

ಗೆಳೆತನಕ್ಕೆ ಸಂಬಂಧಿಸಿದ ವಿರಹ ಗೀತೆಯನ್ನು ಬಿಡುಗಡೆ ಮಾಡಲಾಯಿತು. ಗಾಯಕ ನವೀನ್‌ ಸಜ್ಜು ಹಾಡಿರುವ ಈ ಹಾಡು ಕೇಳಲು ಮಧುರವಾಗಿದೆ. ಈ ಹಾಡಿನ ಸಾಹಿತ್ಯ ಈಶ್ವರ್‌ ಸ್ವಾಮಿ ಅವರದ್ದು.

ಚಂದ್ರಕಲಾ ಮೋಹನ್‌ಕುಮಾರ್‌ ಎಂ.ವಿ., ಜ್ಞಾನೇಶ್ವರಿ ಸುರೇಶ, ಸಿ. ಜಗದೀಶ, ಜಿ. ಕಿಶೋರ್‌ ಕುಮಾರ್‌, ಎಂ.ಎಸ್. ರಾಮನಾಥ್‌ ಗುಪ್ತ, ಸುಜನಾ, ಆನಂದ್‌ ಕುಮಾರ್‌, ಎನ್‌. ಶಿವಪ್ರಕಾಶ್‌, ಎಚ್‌.ವಿ. ಸುರೇಶ್‌, ಜೆ.ಇ. ಶಿವಕುಮಾರ್‌, ಪ್ರದೀಪ್‌, ಡಾ.ಎಂ.ಆರ್‌. ಮಧುಸೂದನ್‌ ಬಂಡವಾಳ ಹೂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು