ಪ್ರಾಣಿಗಳೂ ಮಕ್ಕಳಂತೆ: ಡಿನೊ ಮೊರಿಯಾ

7

ಪ್ರಾಣಿಗಳೂ ಮಕ್ಕಳಂತೆ: ಡಿನೊ ಮೊರಿಯಾ

Published:
Updated:

ನಾಯಿಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸುವ ಸಲುವಾಗಿ ಆರಂಭಗೊಂಡಿರುವ ಉತ್ಸವ ‘ಪೆಟ್‌ಫೆಡ್‌’.  ಬೆಂಗಳೂರಿನಲ್ಲಿ ಇತ್ತೀಚೆಗೆ ಎರಡು ದಿನ ನಡೆದ ಈ ಉತ್ಸವ ಹಲವು ಆಕರ್ಷಣೆಗಳಿಗೆ ಸಾಕ್ಷಿಯಾಯಿತು. ಲಲನೆಯರ ಅಪ್ಪುಗೆಯಲ್ಲಿ ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದ ಅಲಂಕೃತ ನಾಯಿಗಳನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ ಮಾತಿಗೆ ಸಿಕ್ಕವರು ಬಾಲಿವುಡ್‌ ನಟ, ಉದ್ಯಮಿ ಡಿನೊ ಮೊರಿಯಾ. ಪ್ರಾಣಿ ಪ್ರೀತಿಯನ್ನು ಸಾರುತ್ತಲೇ ಹಲವು ವಿಷಯಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ...

ಪ್ರಾಣಿ ಪ್ರೀತಿ ಬೆಳೆದಿದ್ದು ಹೇಗೆ?

ನಾನು ನಾಲ್ಕು ವರ್ಷದವನಿದ್ದಾಗ ಮನೆಯಲ್ಲಿ ನಾಯಿ ಮರಿಯೊಂದನ್ನು ತಂದಿದ್ದರು. ಅದರ ತುಂಟಾಟ ಮನಸ್ಸಿಗೆ ಕಚಗುಳಿ ನೀಡುತ್ತಿತ್ತು. ನನ್ನ ತಂದೆ ಪರಿಸರ ಪ್ರೇಮಿ. ಆಗಾಗ್ಗೆ ಕಾಡು ಮೇಡು ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದರು. ತಿಂಗಳಿಗೊಮ್ಮೆಯಾದರೂ ಕಾಡು ಸುತ್ತಬೇಕೆಂಬ ನಿಯಮ ಅವರದು. ಅವರ ಪರಿಸರ ಕಾಳಜಿ ನನ್ನಲ್ಲೂ ಬೆಳೆದಿದೆ. ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ನನಗೆ. ಅಳಿಲು, ಬೆಕ್ಕು, ನಾಯಿ, ಮೊಲ, ಹಕ್ಕಿಗಳನ್ನು ಸಾಕಿದ್ದೇನೆ. 

ಪ್ರಾಣಿ ಹಿಂಸೆ ನಿಯಂತ್ರಿಸುವುದು ಹೇಗೆ?

ಪ್ರಾಣಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕು. ಆಗಲೇ ಅವುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ. ಪ್ರಾಣಿಗಳು ಅಪಾಯಕಾರಿಯಲ್ಲ, ನಾವು ತೊಂದರೆ ಕೊಟ್ಟಾಗ ಮಾತ್ರವೇ ಅವುಗಳು ದಾಳಿ ನಡೆಸುತ್ತವೆ. ಕ್ರೂರ ಮನುಷ್ಯರು ಮಾತ್ರವೇ ಪ್ರಾಣಿಗಳಿಗೆ ಹಿಂಸೆ ಕೊಡಲು ಸಾಧ್ಯ. 

ಪೆಡ್‌ಫೆಡ್‌ಗೆ ಹೂಡಿಕೆ ಮಾಡಲು ಕಾರಣ?

ಪ್ರಾಣಿಗಳು ಸ್ವಾರ್ಥ ವಿಲ್ಲದೆ ಮನುಷ್ಯರಿಗೆ ಪ್ರೀತಿ ತೋರಿಸುತ್ತವೆ. ಪ್ರಾಣಿಗಳು ಪ್ರದರ್ಶನಕ್ಕಿರುವ ವಸ್ತುಗಳಷ್ಟೇ ಅಲ್ಲ. ಅವುಗಳು ಮಕ್ಕಳಂತೆ. ಅವುಗಳ ಆರೈಕೆ ನಮ್ಮ ಜವಾಬ್ದಾರಿ. ಸಾಕು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಕಾರಣಕ್ಕಾಗಿಯೇ ಆರಂಭಗೊಂಡಿರುವ ಉತ್ಸವವಿದು. ಪ್ರಾಣಿಗಳ ಬಗ್ಗೆ ನನಗಿರುವ ಪ್ರೀತಿಯೇ ಈ ಉತ್ತಮ ಕಾರ್ಯಕ್ಕೆ ಹೂಡಿಕೆ ಮಾಡಲು ಪ್ರೇರೇಪಿಸಿತು.

ಬೆಂಗಳೂರು ಜತೆಗಿನ ಸಂಬಂಧದ ಬಗ್ಗೆ ತಿಳಿಸಿ? 

ನಾನು ಬೆಳೆದಿದ್ದು ಇದೇ ನಗರದಲ್ಲಿ. ಹಾಗಾಗಿ ಬೆಂಗಳೂರಿನ ಬಗ್ಗೆ ಭಾವನಾತ್ಮಕ ಸೆಳೆತವಿದೆ. ಇಲ್ಲಿ ಹಲವು ಸ್ನೇಹಿತರಿದ್ದಾರೆ. ನಗರಕ್ಕೆ ಬಂದಾಗಲೆಲ್ಲ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೇನೆ. ಬಾಲ್ಯದಲ್ಲಿ ಸೈಕಲ್‌ ಏರಿ ನಗರ ಸುತ್ತುತ್ತಿದ್ದ ದಿನಗಳು ನೆನಪಾಗುತ್ತವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಗರ ಈಗ ಬೆಳೆದಿರುವ ರೀತಿ ಕಂಡಾಗ ಬೇಸರವಾಗುತ್ತದೆ. ಆದರೂ ಈ ನಗರವನ್ನು ನಾನು ಪ್ರೀತಿಸುತ್ತೇನೆ. ಇಲ್ಲಿಗೆ ಬರಲು ಸದಾ ಉತ್ಸುಕನಾಗಿರುತ್ತೇನೆ. ಇಲ್ಲಿಯ ವಾತಾವರಣ ಅದ್ಭುತ. ನನ್ನನ್ನು ಬೆಳೆಸಿರುವ ನಗರವಿದು. ಈಗ ನಾನಿರುವ ಸ್ಥಿತಿಗೆ ಈ ನಗರವೇ ಕಾರಣ. 

ಅಂದ ಹಾಗೆ ಬೆಳ್ಳಿ ಪರದೆಯ ಮೇಲೆ ನಿಮ್ಮ ದರ್ಶನ ಯಾವಾಗ?

ಬಹುಶಃ ಮುಂದಿನ ವರ್ಷ. ನನ್ನದೇ ‘ಕ್ಲಾಕ್‌ವರ್ಕ್‌ ಫಿಲ್ಮ್ಸ್‌’ ಪ್ರೊಡಕ್ಷನ್‌ನಿಂದ ಸಿನಿಮಾ ತಯಾರಾಗುತ್ತಿದೆ. 

ನಂ.1 ರೂಪದರ್ಶಿ ಎನಿಸಿಕೊಂಡವರು ನೀವು... ನಟನೆ ಮತ್ತು ಮಾಡೆಲಿಂಗ್‌ಗೂ ನೀವು ಕಂಡ ವ್ಯತ್ಯಾಸವೇನು?

ಹೆಚ್ಚೇನೂ ವ್ಯತ್ಯಾಸವಿಲ್ಲ. ಮಾಡೆಲಿಂಗ್‌ನಲ್ಲಿಯೂ ಭಾವನೆಗಳನ್ನು ವ್ಯಕ್ತಪಡಿಸಬೇಕು. ಕಡಿಮೆ ಅವಧಿಯಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದು ಸವಾಲು. ಹಾಗೆಯೇ ನಟನೆಯಲ್ಲಿಯೂ ಪಾತ್ರಕ್ಕೆ ಅನುಗುಣವಾಗಿ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತೇವೆ. ಆದರೆ ಇಲ್ಲಿ ಪಾತ್ರದಲ್ಲಿಯೇ ಹೆಚ್ಚು ಹೊತ್ತು ಜೀವಿಸುತ್ತೇವೆ.  

ಇಷ್ಟದ ತಿನಿಸು...

ನಾನು ಆಹಾರಪ್ರಿಯ, ಫುಡ್ಡಿ. ಹೊಸ ರುಚಿಗಳನ್ನು ಸವಿಯುತ್ತಿರುತ್ತೇನೆ. ದಕ್ಷಿಣ ಭಾರತ, ಬಂಗಾಳಿ, ಜಪಾನಿಸ್‌ ಖಾದ್ಯಗಳೆಂದರೆ ಇಷ್ಟ. ಅಮ್ಮ ಮಾಡುವ ಅಪ್ಪಂ ಇದ್ದರೆ ಬೇರೇನೂ ಬೇಡ.

ಸ್ಟೈಲ್‌ ಸ್ಟೇಟ್‌ಮೆಂಟ್‌...

ಸರಳತೆ ಮತ್ತು ಅನನ್ಯತೆ

 

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !