ಶನಿವಾರ, ಆಗಸ್ಟ್ 17, 2019
24 °C

ಡಿಪ್ಪಿ ಮದ್ವೆ ಹಾಗಂತೆ ಹೀಗಂತೆ...

Published:
Updated:
Deccan Herald

ಮೊನ್ನೆ ಭಾನುವಾರ ಮಧ್ಯಾಹ್ನದಿಂದ ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲದಲ್ಲಿ ಅತ್ಯಧಿಕ ತಲಾಶ್‌ ಆದ ಸುದ್ದಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆಯದ್ದು. ಈ ಜೋಡಿ ಆಮಂತ್ರಣ ಪತ್ರಿಕೆಯನ್ನು ತಮ್ಮ ತಮ್ಮ ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದೇ ತಡ ಮದುವೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕಾತರ ಎಲ್ಲರಿಗೂ.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ ಮದುವೆ ಸಂದರ್ಭದಲ್ಲಿಯೂ ಹೀಗೇ ಎಲ್ಲರೂ ಸುದ್ದಿಗಾಗಿ ಜಾಲಾಡಿದ್ದರು, ಜಾಲತಾಣಗಳಿಗೆ ಮುಗಿಬಿದ್ದಿದ್ದರು. ಈಗ, ರೊಮ್ಯಾಂಟಿಕ್‌ ಜೋಡಿ ದೀಪಿಕಾ–ರಣವೀರ್‌ ಮದುವೆಯ ಸರದಿ.

ಈ ಜಾಣ ಜೋಡಿ ತಮ್ಮ ಮದುವೆ ಸ್ಥಳವನ್ನು ಆಮಂತ್ರಣ ಪತ್ರಿಕೆಯಲ್ಲಿ ಬರೆದಿಲ್ಲ. ಅಂದ ಮೇಲೆ ಮುಹೂರ್ತ ವಗೈರೆ ವಿವರಗಳನ್ನು ನಿರೀಕ್ಷಿಸುವುದುಂಟೆ?

ಇಷ್ಟಾದರೂ ಮುಂಬೈ ಮೂಲದ ಗಾಸಿಪ್‌ವೀರರು ಮದುವೆಯ ಬಗ್ಗೆ ಹಲವು ಮಾಹಿತಿಗಳನ್ನು ಜಾಹೀರು ಮಾಡುತ್ತಲೇ ಇದ್ದಾರೆ. 

ಸೆಲೆಬ್ರಿಟಿಗಳ ಮದುವೆಯ ನೆಚ್ಚಿನ ತಾಣವಾಗಿ ಬೆಳೆಯುತ್ತಿರುವ ಇಟಲಿಯಲ್ಲಿಯೇ ದೀಪಿಕಾ– ರಣವೀರ್‌ ಹಸೆಮಣೆಯೇರಲಿದ್ದಾರೆ ಎಂಬುದು ಅತಿಚರ್ಚಿತ ಗಾಸಿಪ್‌. ಅಷ್ಟೇ ಅಲ್ಲ, ಇಟಲಿಯ ಲೇಕ್‌ ಕೊಮೊ ಎಂಬಲ್ಲಿನ ವಿಲ್ಲಾ ದೆ ಬಾಲ್ಬಿಯಾನೆಲೊದಲ್ಲಿ ಮದುವೆ ನಡೆಯುವುದು ಖಚಿತವಾಗಿದ್ದು, ದೆಹಲಿ ಮೂಲದ ಮದುವೆ ಆಯೋಜಕ ಕಂಪನಿಯೊಂದು ಈಗಾಗಲೇ ಮೊದಲ ಸುತ್ತಿನ ತಯಾರಿ ನಡೆಸಿ ಬಂದಿದೆ, ಮದುವೆಯ ಹಿಂದಿನ ದಿನ ಅಂದರೆ ನವೆಂಬರ್‌ 13ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದೂ ಹೇಳಲಾಗುತ್ತಿದೆ.

ಬೆಂಗಳೂರಿನಲ್ಲೂ ಆರತಕ್ಷತೆ

ದೀಪಿಕಾ ಪಡುಕೋಣೆ ತಂದೆ ಪ್ರಕಾಶ್‌ ಪಡುಕೋಣೆ ಅವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ನೆಂಟರಿದ್ದಾರೆ. ಹಾಗಾಗಿ ಮುಂಬೈಯ ಬಳಿಕ ಬೆಂಗಳೂರಿನಲ್ಲಿಯೂ ಆರತಕ್ಷತೆ ನಡೆಯಲಿದೆ ಎಂಬುದು ದಟ್ಟವಾದ ವದಂತಿ ಇದೆ.

ವರ್ಷಗಳಿಂದ ಕಾತರಿಸಿದ್ದ ಈ ರೊಮ್ಯಾಂಟಿಕ್‌ ಜೋಡಿಯ ಮದುವೆಯ ಉಡುಗೆ ತೊಡುಗೆಯ ಬಗ್ಗೆಯೂ ಬಹುದೊಡ್ಡ ಚರ್ಚೆ ನಡೆದಿದೆ. ಮದುವೆ ಹಿಂದುಮುಂದಣ ದಿನಗಳ ಸಮಾರಂಭಗಳಲ್ಲಿ ದೀಪಿಕಾ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸವ್ಯಸಾಚಿ ಮುಖರ್ಜಿ ವಿನ್ಯಾಸದ ಉಡುಗೆ ತೊಡುಗೆಗಳನ್ನು ಧರಿಸಲಿದ್ದಾರಂತೆ.

ಇಷ್ಟೇ ಅಲ್ಲ, ಡಿಸೆಂಬರ್‌ ಅಂತ್ಯದಲ್ಲಿ ‘ಸಿಂಬಾ’ದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮೊದಲು ದಂಪತಿ ಮಧುಚಂದ್ರಕ್ಕೆ ಹೋಗಿಬರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ಮದುವೆ ದಿನ ನಿಕ್ಕಿಯಾಗುತ್ತಿದ್ದಂತೆ ಹತ್ತಾರು ಊಹಾಪೋಹಗಳು ಇಬ್ಬರ ಅಭಿಮಾನಿಗಳನ್ನು ಗೊಂದಲದ ಗೂಡಾಗಿಸಿವೆ.

Post Comments (+)