‘ಕಿಷ್ಕಿಂಧೆ’ಯಲ್ಲಿ ಭರತ್ ಸ್ನೇಹಲೋಕ...

7
film

‘ಕಿಷ್ಕಿಂಧೆ’ಯಲ್ಲಿ ಭರತ್ ಸ್ನೇಹಲೋಕ...

Published:
Updated:
Deccan Herald

‘ಡೈಯಾನ ಹೌಸ್’ ಎಂಬ ಹಾರರ್‌ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿ, ಗಾಂಧಿನಗರದ ಗಮನ ಸೆಳೆದವರು ನಿರ್ದೇಶಕ ಭರತ್‌ ನಂದ. ಯಾವುದೇ ಅಬ್ಬರವಿಲ್ಲದೆ ವರ್ಷದ ಹಿಂದೆ ತೆರೆ ಕಂಡಿದ್ದ ಚಿತ್ರ ಥಿಯೇಟರ್‌ಗಳಲ್ಲಿ ಹೆಚ್ಚು ದಿನ ಉಳಿಯದಿದ್ದರೂ, ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮೊದಲ ಚಿತ್ರದಲ್ಲೇ ತಾನೊಬ್ಬ ಭರವಸೆಯ ನಿರ್ದೇಶಕ ಎಂಬ ಛಾಪು ಮೂಡಿಸಿದ್ದ ಭರತ್, ಇದೀಗ ಮತ್ತೊಮ್ಮೆ ನಿರ್ದೇಶಕನ ಟೋಪಿ ಧರಿಸಲು ಅಣಿಯಾಗಿದ್ದಾರೆ. ಅಂದಹಾಗೆ, ಅವರ ಹೊಸ ಚಿತ್ರದ ಶೀರ್ಷಿಕೆ ಹೆಸರು ‘ಕಿಷ್ಕಿಂಧೆ’. ಆಂಜನೇಯ ಹುಟ್ಟಿದ ಸ್ಥಳದ ಶೀರ್ಷಿಕೆಯನ್ನು ಹೊಂದಿರುವ ಚಿತ್ರದ ಪೋಸ್ಟರ್‌ ಅನ್ನು ನಟ ಶಿವರಾಜಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸ್ನೇಹ ಲೋಕದ ಸುತ್ತ...

‘ಕಿಷ್ಕಿಂಧೆ’ಯಲ್ಲಿ ಸ್ನೇಹ ಲೋಕವೊಂದನ್ನು ಅನಾವರಣಗೊಳಿಸಲು ಭರತ್ ತಯಾರಿ ನಡೆಸುತ್ತಿದ್ದಾರೆ. ಕಿಷ್ಕಿಂಧೆಯಂತಹ ಊರಿನ ಐವರು ಪ್ರಾಣ ಸ್ನೇಹಿತರ ಕಥೆ ಚಿತ್ರದ್ದಾಗಿದೆ. ನೈಜ ಘಟನೆಯ ಯಾವುದೇ ಸೋಂಕಿಲ್ಲದ, ಪಕ್ಕಾ ಕಾಲ್ಪನಿಕ ಕಥೆ ಇದಾಗಿದೆ.

‘ಒಂದೇ ಊರಿನ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಪ್ತಮಿತ್ರರ ಸುತ್ತ ಹೆಣೆದ ಕಥೆ ‘ಕಿಷ್ಕಿಂಧೆ’ಯದ್ದಾಗಿದೆ. ಶಾಲಾ ಹಂತದಲ್ಲಿನ ತುಂಟಾಟ, ಕಾಳಜಿ, ತ್ಯಾಗ ಸೇರಿದಂತೆ ಸ್ನೇಹದ ಬೆಸುಗೆಯನ್ನು ಚಿತ್ರದಲ್ಲಿ ಹೇಳಲು ಯತ್ನಿಸಿದ್ದೇನೆ. ಸ್ನೇಹ ಅಥವಾ ಸ್ನೇಹಿತರನ್ನು ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವೇ ಈ ಚಿತ್ರ’ ಎನ್ನುತ್ತಾರೆ ಭರತ್.

ಎಂಬಿಎ ಓದಿಕೊಂಡು, ಸೇಲ್ಸ್‌ ಎಕ್ಸಿಕ್ಯೂಟಿವ್ ಆಗಿ ಬೆಂಗಳೂರಿನಲ್ಲಿ ಸೈಕಲ್ ತುಳಿದಿರುವ ಆಂಧ್ರಪ್ರದೇಶ ಮೂಲದ ಭರತ್, ವೃತ್ತಿ ಜತೆಗೆ ಸಿನಿಮಾ ವೀಕ್ಷಣೆ ಮತ್ತು ಕಥೆ ಬರೆಯುವುದನ್ನು ಪ್ರವೃತ್ತಿಯಾಗಿಸಿಕೊಂಡವರು. ಆದರೆ, ಸಿನಿಮಾ ಮೇಲಿನ ಅತಿಯಾದ ಮೋಹದಿಂದಾಗಿ, ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಪ್ರವೃತ್ತಿಯನ್ನೇ ವೃತ್ತಿಯಾಗಿ ಸ್ವೀಕರಿಸಿದರು.

ಆ್ಯಕ್ಷನ್ ಕಟ್ ಕನಸು ಹೊತ್ತು, ಕಥೆಗಳೊಂದಿಗೆ ಗಾಂಧಿನಗರದಲ್ಲಿ ನಿರ್ಮಾಪಕರಿಗಾಗಿ ಅಲೆದ ಅವರೊಳಗಿನ ನಿರ್ದೇಶಕನಿಗೆ ಅಂತರ್ಜಾಲವೇ ಗುರು. ಯಾವ ನಿರ್ದೇಶಕರ ಜತೆಗೂ ಕೆಲಸ ಮಾಡದೆ, ಅಂತರ್ಜಾಲದಲ್ಲಿ ನೂರಾರು ಸಿನಿಮಾಗಳ ವೀಕ್ಷಿಸುತ್ತಲೇ, ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡವರು ಭರತ್. ಬಳಿಕ, ನಿರ್ಮಿಸಿದ ಕಿರುಚಿತ್ರ ನಾನೂ ಒಬ್ಬ ನಿರ್ದೇಶಕನಾಗಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿತು. ಅದರ ಫಲವೇ ‘ಡೈಯಾನ ಹೌಸ್’.

ಪ್ರಜ್ಞಾಪೂರ್ವಕ ಆಯ್ಕೆ

‘ಮೊದಲ ಚಿತ್ರದ ಬಳಿಕ, ಕೆಲ ನಿರ್ಮಾಪಕರು ನನ್ನನ್ನು ಭೇಟಿ ಮಾಡಿ ಮತ್ತೊಂದು ಹಾರರ್‌ ಚಿತ್ರ ಮಾಡಿದರೆ, ನಾವು ಬಂಡವಾಳ ಹಾಕುತ್ತೇವೆ ಎಂದರು. ಆದರೆ, ಒಂದೇ ಬಗೆಯ ಕಥೆಯನ್ನು ನಿರ್ದೇಶಿಸಲು ನನ್ನ ಮನಸ್ಸು ಒಪ್ಪಲಿಲ್ಲ. ಆಯ್ಕೆಯ ವಿಷಯದಲ್ಲಿನಾನು ತುಂಬಾ ಪ್ರಜ್ಞಾಪೂರ್ವಕ. ಹಾಗಾಗಿ, ಹಾರರ್‌ ಆಚೆಗೆ ಬಂದು ಐವರು ಸ್ನೇಹಿತರ ಕುರಿತು ಕಥೆ ಬರೆಯಲು ಕೂತೆ. ಹೊಸ ಕಥೆಗಾಗಿ ಒಂದು ವರ್ಷ ಹಿಡಿಯಿತು. ಸೋಮಶೇಖರ್ ಶೆಟ್ಟಿ ಕಥೆ ಮೆಚ್ಚಿಕೊಂಡು ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ’ ಎನ್ನುತ್ತಾರೆ ಭರತ್.

ಚಿತ್ರದ ಪೋಸ್ಟರ್‌ ಅನ್ನು ನಟ ಶಿವರಾಜಕುಮಾರ್ ಬಿಡುಗಡೆಗೊಳಿಸಿರುವುದು ನನ್ನ ಪಾಲಿಕೆ ‘ಗುಡ್ ಸ್ಟಾರ್ಟ್‌, ಹಾಫ್ ಡನ್‌’ ಎಂಬಂತಾಗಿದೆ ಎನ್ನುವ ಅವರು, ಸದ್ಯದಲ್ಲೇ ಕಲಾವಿದರ ಆಯ್ಕೆ ಮತ್ತು ಶೂಟಿಂಗ್ ಶೆಡ್ಯೂಲ್‌ ಅಂತಿಮಗೊಳ್ಳಲಿದೆ ಎನ್ನುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !