ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲ್ವಾನ್‌ ಕೃಷ್ಣನ ಕನಸಿನ ಕೂಸು

Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಪೈಲ್ವಾನ್‌ ನನ್ನ ಕೂಸು. ಅದರ ಬೆಳವಣಿಗೆಯ ಪ್ರತಿ ಹಂತವೂ ನನಗೆ ಖುಷಿ ಕೊಟ್ಟಿದೆ’ –ನಿರ್ದೇಶಕ ಕೃಷ್ಣ ‘ಪೈಲ್ವಾನ್’ ಸಿನಿಮಾ ಕುರಿತು ಒಂದೇ ಸಾಲಿನಲ್ಲಿ ವ್ಯಾಖ್ಯಾನಿಸುವುದು ಹೀಗೆ.

‘ಹೆಬ್ಬುಲಿ’ ಚಿತ್ರ ನಿರ್ದೇಶಿಸಿದ ಬಳಿಕ ಸುದೀಪ್‌ ಅವರೊಟ್ಟಿಗೆ ಕುಸ್ತಿ ಕುರಿತು ಸಿನಿಮಾ ಮಾಡಬೇಕೆಂದು ಅವರು ಹವಣಿಸಿದ್ದರು. ಆ ಹವಣಿಕೆಯ ಫಲವೇ ‘ಪೈಲ್ವಾನ್’. ಬಾಲ್ಯದಿಂದಲೂ ಗರಡಿ ಮನೆಗಳಲ್ಲಿ ನಡೆಯುತ್ತಿದ್ದ ಕಸರತ್ತಿನ ಬಗ್ಗೆ ಇದ್ದ ಅಪರಿಮಿತ ಪ್ರೀತಿಯೇ ಅವರು ಕುಸ್ತಿಯ ಅಖಾಡಕ್ಕಿಳಿಯಲು ಮೂಲ ಪ್ರೇರಣೆಯಂತೆ.

ಪೈಲ್ವಾನ್‌ ಎಂದಾಕ್ಷಣ ನಿಮ್ಮ ಕಣ್ಣಿನ ಮುಂದೆ ಏನೆಲ್ಲಾ ಬರುತ್ತದೆ ಎಂಬ ಪ್ರಶ್ನೆಗೆ ಅವರು ಉತ್ತರಿಸುವುದು ಹೀಗೆ. ‘ಥಟ್ಟನೆ ಬರುವುದು ನಮ್ಮತನ. ನಾನು ಚಿಕ್ಕವಯಸ್ಸಿನಲ್ಲಿ ನೋಡಿದ ಗರಡಿ ಮನೆಗಳು ಬರುತ್ತವೆ. ಕುಸ್ತಿ ಗ್ರಾಮೀಣ ಜಗತ್ತಿನ ಕ್ರೀಡೆ. ಹಬ್ಬದ ವೇಳೆ ಸಾಮಾನ್ಯವಾಗಿ ಕುಸ್ತಿ ಪಂದ್ಯಾವಳಿ ನಡೆಯುತ್ತಿದ್ದವು. ಈಗ ಗರಡಿ ಮನೆಗಳು ಕಡಿಮೆಯಾಗುತ್ತಿವೆ. ಈ ಚಿತ್ರ ಕುಸ್ತಿಯ ಮಹತ್ವದ ಬಗ್ಗೆಯೂ ಮಾತನಾಡುತ್ತದೆ’ ಎಂದು ಸಿನಿಮಾದ ಕಥೆ ಬಗ್ಗೆ ಕುತೂಹಲ ಹುಟ್ಟಿಸುತ್ತಾರೆ.

‘ಪೈಲ್ವಾನ್‌ ಯಾರು ಎನ್ನುವುದು ಆ ಊರಿನ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಕುಸ್ತಿಪಟುವಿನದು ಸ್ಟ್ರಾಂಗ್‌ ಕ್ಯಾರೆಕ್ಟರ್‌. ಇಂತಹ ವಿಷಯವಿಟ್ಟುಕೊಂಡು ಕಥೆ ಮಾಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಕಥೆಗೊಂದು ಹೀರೊಯಿಸಂ ಬೇಕು. ಹಾಗಾಗಿ, ಸುದೀಪ್‌ ಅವರು ಸ್ಪೋರ್ಟ್‌ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡೆ. ಆಗ ಜೀವ ತಳೆದಿದ್ದೇ ಈ ಸಿನಿಮಾ’ ಎಂದು ಕಥೆ ಹುಟ್ಟಿದ ಬಗೆಯನ್ನು ಹಂಚಿಕೊಂಡರು.

‘ಪೈಲ್ವಾನ್‌’ನ ಅಖಾಡಕ್ಕೆ ಇಳಿಯುವ ಮೊದಲು ಅವರು ಸಾಕಷ್ಟು ತಯಾರಿ ನಡೆಸಿದರಂತೆ. ‘ಕುಸ್ತಿ ಎಂದರೇನು, ಪೈಲ್ವಾನ್‌ಗಳು ಹೇಗಿರುತ್ತಾರೆ, ಗರಡಿ ಮನೆಗಳು ಹೇಗಿರುತ್ತವೆ ಎನ್ನುವ ಬಗ್ಗೆ ಮೊದಲಿಗೆ ಸಂಶೋಧನೆ ಮಾಡಿದೆ. ಕುಸ್ತಿಪಟುಗಳೊಟ್ಟಿಗೆ ಮಾತುಕತೆ ನಡೆಸಿದೆ. ಅವರ ಜೀವನಶೈಲಿ ಅಭ್ಯಾಸಿಸಿದೆ. ಅವರ ಸಂದರ್ಶನವನ್ನೂ ಮಾಡಿದೆ. ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿರುವ ಗರಡಿ ಮನೆಗಳಿಗೆ ಭೇಟಿ ನೀಡಿದೆ. ಆ ಬಳಿಕ ಸಣ್ಣದಾಗಿ ತಯಾರಿ ಮಾಡಿಕೊಂಡು ಕುಸ್ತಿಗೆ ಸಿನಿಮ್ಯಾಟಿಕ್‌ ಸ್ಪರ್ಶ ನೀಡಿದೆ’ ಎಂದು ವಿವರಿಸಿದರು.

ಸುದೀಪ್‌ಗೂ ಮೊದಲಿಗೆ ಈ ಚಿತ್ರದ ಒಂದು ಎಳೆಯನ್ನಷ್ಟೇ ಅವರು ಹೇಳಿದ್ದರಂತೆ. ತಕ್ಷಣಕ್ಕೆ ಕಿಚ್ಚ ಒಪ್ಪಿಕೊಳ್ಳಲಿಲ್ಲವಂತೆ. ‘ಜನರಿಗೆ ಸೃಜನಾತ್ಮಕವಾಗಿ ಹೊಸದನ್ನು ಹೇಳಬೇಕೆಂಬ ತುಡಿತ ಇಬ್ಬರಲ್ಲೂ ಇದೆ. ನಾವು ಬಹುಬೇಗ ಕನೆಕ್ಟ್‌ ಆಗುವುದು ಇದೇ ಕಾರಣಕ್ಕೆ. ಅವರಿಗೆ ನನ್ನ ಮೇಲೊಂದು ಸಣ್ಣ ನಂಬಿಕೆಯಿದೆ. ಪೈಲ್ವಾನ್‌ ಅಖಾಡ ಸಿದ್ಧವಾಗಿದ್ದು ಅದರ ಮೇಲೆಯೇ. ಕಥೆಯ ಎಳೆಯ ಮೇಲೆ ಏನನ್ನಾದರೂ ಮಾಡುತ್ತಾನೆ ಎಂದು ನಂಬಿದರು. ಸಿನಿಮಾದಲ್ಲಿ ಹೊಸತನ ತರಬಹುದು ಎಂದು ಅವರ ಅರಿವಿಗೆ ಬಂದಾಗಲೇ ಹಸಿರು ನಿಶಾನೆ ತೋರಿದರು’ ಎಂದು ನೆನಪಿಸಿಕೊಂಡರು.

‘ಪೈಲ್ವಾನ್‌ನಲ್ಲಿ ಮನರಂಜನೆ ಇದೆ. ಸ್ಫೂರ್ತಿ ತುಂಬುವ ಕಥೆ ಇದೆ. ಚಿಕ್ಕದಾದ ಸಂದೇಶವೂ ಇದೆ. ಗ್ರಾಮೀಣ ಜಗತ್ತಿನಲ್ಲಿ ಹಲವಾರು ಪ್ರತಿಭಾವಂತರಿದ್ದಾರೆ. ಅವರಿಗೆ ಸಣ್ಣದೊಂದು ಅವಕಾಶ ಲಭಿಸಿದರೆ ದೊಡ್ಡ ಸಾಧನೆ ಮಾಡುತ್ತಾರೆ. ಜೊತೆಗೆ, ಜೀವನದಲ್ಲಿ ಕ್ರೀಡೆಗೆ ಎಷ್ಟು ಪ್ರಾಮುಖ್ಯತೆ ನೀಡಬೇಕಿದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ’ ಎಂದು ಪ್ರೇಕ್ಷಕರಿಗೆ ಆಹ್ವಾನ ನೀಡಿದರು. ಕಥೆ ಹೊಸೆಯುವುದರಲ್ಲೂ ಅವರದು ಭಿನ್ನ ಹಾದಿಯ ಪಯಣ. ‘ಯಾವುದೇ ಸಿನಿಮಾದ ಕಥೆಯು ಒಂದು ಎಳೆಯಲ್ಲಿರುತ್ತದೆ. ಅದು ಏಕೆ ಕಾಡುತ್ತದೆ ಎನ್ನುವುದರ ಮೇಲೆ ಕಥೆ ಬರೆಯಲು ಶುರು ಮಾಡುತ್ತೇನೆ. ನನ್ನ ಮನಸ್ಸಿಗೆ ಒಪ್ಪಿಗೆಯಾದ ಬಳಿಕವಷ್ಟೇ ಅದರ ಅಲಂಕಾರಕ್ಕೆ ಕೂರುವುದು. ಚಿತ್ರಕಥೆ ಹೆಣೆಯುತ್ತಲೇ ಪಾತ್ರಗಳು, ಸನ್ನಿವೇಶಗಳನ್ನು ಜೋಡಣೆ ಮಾಡುತ್ತೇನೆ’ ಎಂದು ವಿವರಿಸಿದರು.

‘ವೆರೈಟಿಯಾದ, ಕುತೂಹಲಭರಿತ ಸಿನಿಮಾ ಮಾಡಬೇಕು ಎನ್ನುವುದಷ್ಟೇ ನನ್ನ ಗುರಿ. ಯಾರೂ ಮಾಡಿಲ್ಲದ ಕಥಾವಸ್ತು ಅದಾಗಿರಬೇಕು. ಜೊತೆಗೆ, ಅದು ಸವಾಲಿನಿಂದಲೂ ಕೂಡಿರಬೇಕು. ಗೊತ್ತಿಲ್ಲದಿರುವ ವಿಷಯವನ್ನು ತೆರೆಯ ಮೇಲೆ ತರುವುದು ನನಗಿಷ್ಟವಿಲ್ಲ. ನೋಡುಗರಿಗೆ ಹೊಸದನ್ನು ಹೇಳಬೇಕು ಎನ್ನುವುದು ನನ್ನಾಸೆ. ಸುಲಭವಾಗಿರುವುದು ನನಗಿಷ್ಟವಿಲ್ಲ. ಕಷ್ಟದ ಕೆಲಸವೆಂದರೆ ನನಗೆ ಬಹುಪ್ರೀತಿ’ ಎಂದರು.

ಛಾಯಾಗ್ರಾಹಕನಾಗಿ ಬಣ್ಣದಲೋಕ ಪ್ರವೇಶಿಸಿದ ಅವರ ವೃತ್ತಿಬದುಕಿಗೆ ಒಂದೂವರೆ ವರ್ಷ ಕಳೆದಿದೆ. ‘ಚಿತ್ರರಂಗಕ್ಕೆ ಬಂದಾಗ ಅವಕಾಶಕ್ಕಾಗಿ ಒದ್ದಾಡುತ್ತಿದ್ದೆ. ಅವಕಾಶ ಸಿಕ್ಕಿದಾಗ ಒಳ್ಳೆಯ ಸಿನಿಮಾ ಮಾಡಬೇಕೆಂದು ಹಂಬಲಿಸುತ್ತಿದ್ದೆ. ‘ಮುಂಗಾರು ಮಳೆ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ ಬಳಿಕವೂ ಒಳ್ಳೆಯ ಸಿನಿಮಾಗಳಿಗೆ ಕೆಲಸ ಮಾಡಿದ ಸಂತಸವಿದೆ’ ಎಂದು ಹೇಳಿದರು. ‘ಛಾಯಾಗ್ರಹಣದಲ್ಲಿ ಮುಳುಗಿದ್ದ ನನಗೆ ನಿರ್ದೇಶಕನಾಗುವಂತೆ ನಿರ್ಮಾಪಕ ಜಯಣ್ಣ ಕೇಳಿದರು. ಜೀವನ ಹೇಗೆ ಸಾಗುತ್ತದೆಯೋಹಾಗೆ ನಾನೂ ಸಾಗುತ್ತಿದ್ದೇನೆ. ಪ್ರೊಡಕ್ಷನ್‌ ಶುರುಮಾಡಲು ಸುದೀಪ್‌ ಸರ್‌ ಸಹಕಾರ ನೀಡಿದರು. ವೃತ್ತಿಬದುಕಿನ ಪ್ರತಿ ಹಂತದಲ್ಲೂ ಪ್ರೋತ್ಸಾಹ ಸಿಕ್ಕಿದೆ. ಈ ಪಯಣದಲ್ಲಿ ಸಾಕಷ್ಟು ಕಲಿತಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಿರುವುದು ನನ್ನ ಮೇಲಿರುವ ಜವಾಬ್ದಾರಿ’ ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT