ಬುಧವಾರ, ಅಕ್ಟೋಬರ್ 21, 2020
26 °C
‘ನ್ಯೂ ನಾರ್ಮಲ್‌ ಬಾಕ್ಸ್‌ ಆಫೀಸ್‌ ಲೆಕ್ಕಾಚಾರ ಒಪ್ಪಿಕೊಳ್ಳಿ’

ಈಗಿನ ಬಾಕ್ಸ್‌ ಆಫೀಸ್‌ ಲೆಕ್ಕಾಚಾರವೇ ಬೇರೆ: ರಮೇಶ್‌

ಶರತ್‌ ಹೆಗ್ಟೆ Updated:

ಅಕ್ಷರ ಗಾತ್ರ : | |

ಚಿತ್ರಮಂದಿರದತ್ತ ಜನ ಮತ್ತೆ ಬರುವ ಬಗ್ಗೆ ವಿಶೇಷವಾದ ಕುತೂಹಲ ನನಗಿದೆ. ಜತೆಗೆ ಒಟಿಟಿ ವೇದಿಕೆಗಳ ಸವಾಲೂ ಇದೆ. ಇವೆಲ್ಲವುಗಳ ನಡುವೆ ನಮ್ಮ ಉಳಿವು ಹೇಗೆ ಎಂದು ಆಲೋಚಿಸಬೇಕು ಎನ್ನುತ್ತಾರೆ ರಮೇಶ್‌.

ಜನರನ್ನು ಚಿತ್ರಮಂದಿರದತ್ತ ಎಳೆದುಕೊಂಡು ಹೋಗುವಂಥ ಅದ್ಭುತವಾದ ಚಿತ್ರ ಬರಬೇಕು...

ಹೀಗೆಂದು ಆಶಯ ವ್ಯಕ್ತಪಡಿಸಿದವರು ನಟ ರಮೇಶ್‌ ಅರವಿಂದ್‌.

‘ಚಿತ್ರಮಂದಿರಗಳು ಮತ್ತೆ ಆರಂಭವಾಗಿವೆ. ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕುತೂಹಲ ನನಗೂ ಇದೆ’ ಎನ್ನುತ್ತಾ ಮಾತಿಗಿಳಿದರು ರಮೇಶ್‌.

ಟಿವಿ, ಒಟಿಟಿ, ಹೋಂ ಥಿಯೇಟರ್‌ ಏನೇ ಇದ್ದರೂ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂಬ ಹಂಬಲ ಹುಟ್ಟಿಸುವ ಚಿತ್ರ ಬರಬೇಕಾದದ್ದು ಸದ್ಯದ ತುರ್ತು ಎಂದರು ಅವರು.

‘ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಇದೊಂಥರಾ ಮರುಹುಟ್ಟು ಅಂತೀವಲ್ಲ ಹಾಗಿದೆ. ಚಿತ್ರರಂಗದ ಇತಿಹಾಸದಲ್ಲೇ ಈ ತರಹ ಒಂದು ಕ್ಷಣ ಇದ್ದಿರಲಿಲ್ಲ. ಹಾಗಾಗಿ ನಾನೂ ಕುತೂಹಲದಿಂದ ಕಾಯ್ತಾ ಇದ್ದೇನೆ. ‌ಹೊಸ ಸಹಜ ಸ್ಥಿತಿಯ, ಬದಲಾವಣೆಯ ಕಾಲಘಟ್ಟ ಇದು. ಆದ್ದರಿಂದ ಹಿಂದಿನ ಲೆಕ್ಕಾಚಾರವನ್ನು, ಆಲೋಚನೆಗಳನ್ನು ಬದಲಾಯಿಸಲೇಬೇಕು’ ಎನ್ನುತ್ತಾರೆ ಅವರು.

‘ನಾಲ್ಕೈದು ವಾರಗಳಿಂದ ಜನ ಕೋವಿಡ್‌ ಪೂರ್ವದ ಸ್ಥಿತಿಯಲ್ಲಿ ಹೇಗಿದ್ದರೋ ಈಗಲೂ ಹಾಗಿದ್ದಾರೆ. ಕೆಲವು ಕಡೆ ಬಹಳಷ್ಟು ಸಹಜ ಸ್ಥಿತಿ ಇದೆ. ಮನೆಯೊಳಗೇ ಕುಳಿತು ಜನರೂ ಸುಸ್ತಾಗಿಬಿಟ್ಟಿದ್ದಾರೆ. ಆದರೆ, ಜನ ಥಿಯೇಟರ್‌ಗೆ ಬರುತ್ತಾರೋ ಹೇಗೆ? ಯಾವ ತರಹದ ಜನ ಬರುತ್ತಾರೆ ಎಂಬುದನ್ನು ನೋಡಬೇಕು’

‘ಈ ಅವಧಿಯಲ್ಲಿ ಚಿತ್ರಗಳ ಗಳಿಕೆಯನ್ನು ನ್ಯೂ ನಾರ್ಮಲ್‌ ಬಾಕ್ಸ್‌ ಆಫೀಸ್‌ ಎಂದು ಕರೆಯಬೇಕಾಗುತ್ತದೆ. ಇದನ್ನು ಹೀಗೆಯೇ ಎಂದು ಊಹಿಸಲಾಗುವುದಿಲ್ಲ. ಕೋವಿಡ್‌ ಪೂರ್ವದಲ್ಲಿ ಈ ಚಿತ್ರ ಅಷ್ಟು ಕೋಟಿ ಗಳಿಸಿತು, ಇಷ್ಟು ಕೋಟಿ ಗಳಿಸಿತು ಎಂದೆಲ್ಲಾ ಹೇಳುತ್ತಿದ್ದೆವಲ್ಲಾ. ಹೊಸ ಸಹಜ ಸ್ಥಿತಿಯಲ್ಲಿ ಬಾಕ್ಸ್‌ ಆಫೀಸ್‌ ಯಶಸ್ಸು, ಲೆಕ್ಕಾಚಾರವೇ ಬೇರೆ. ಅದನ್ನು ಚಿತ್ರರಂಗ ಒಪ್ಪಿಕೊಳ್ಳಬೇಕಾಗುತ್ತದೆ’

ಥಿಯೇಟರ್‌ ಮತ್ತು ಒಟಿಟಿ
‘ಥಿಯೇಟರ್‌ ಅಂದಾಗ ಅದರಲ್ಲಿ ಸಿಗುವ ಮಜಾ, ಅನುಭವವೇ ಬೇರೆ. ಇಲ್ಲಿ ಸುರಕ್ಷತಾ ಕ್ರಮಗಳನ್ನು ನಾವು ಪಾಲಿಸಿದರೆ ತಪ್ಪುಗಳಿಗೆ ಅವಕಾಶ ಇರುವುದಿಲ್ಲ ಅಷ್ಟೆ’ ಎನ್ನುವ ರಮೇಶ್‌, ‘ಒಟಿಟಿ ವೇದಿಕೆಗಳ ಮೂಲಕ ಸಿನಿಮಾ ನೋಡುವ ದೊಡ್ಡ ಗುಂಪೇ ಇದೆ. ಇದೂ ಒಂದು ಸಣ್ಣ ಸವಾಲು. ಟಿವಿ ಬಂದಾಗ ಸಿನಿಮಾ ಮಂದಿರಕ್ಕೆ ಹೋಗುವವರು ಇಲ್ಲ ಎಂದೆಲ್ಲಾ ಹೇಳುತ್ತಿದ್ದರಲ್ಲಾ. ಹಾಗೆಯೇ ಇದೂ ಕೂಡಾ. ಆದರೆ, ಇವೆಲ್ಲಾ ಒಂದು ಸವಾಲು ಅಷ್ಟೆ. ಒಟಿಟಿಯಲ್ಲಿ ಬರುವ ವಿಷಯವೇ ಬೇರೆ. ಅದನ್ನು ಬೇರೆಯೇ ರೀತಿ ನಿರ್ಮಿಸಲಾಗುತ್ತಿದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೊಂದು ಬದಲಾವಣೆಯ ಕಾಲ. ಇದರ ನಡುವೆ ನಾವು ಹೇಗೆ ಉಳಿತೀವೆ ಎಂಬುದೇ ಈಗಿರುವ ವಿಷಯ.

ಈಗಾಗಲೇ ಟಿವಿ, ಒಟಿಟಿಯಲ್ಲಿ ಬಂದಿರುವ ಸಿನಿಮಾಗಳನ್ನು ಮರು ಪ್ರದರ್ಶನ ಯಶಸ್ವಿ ಆದೀತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್‌, ‘ನೋಡಿ ಅದನ್ನೆಲ್ಲಾ ಹೀಗೆ ಅಂತ ಹೇಳಲಿಕ್ಕಾಗುವುದಿಲ್ಲ. ಉದಾ: ಶಿವಾಜಿ ಸುರತ್ಕಲ್‌ನಂಥ ಸಿನಿಮಾ ಥಿಯೇಟರ್‌ನಲ್ಲಿ ನೋಡಿದಂಥ ಪರಿಣಾಮ ಒಟಿಟಿಯಲ್ಲಿ ಸಿಗಬಹುದು ಎಂದು ನನಗನಿಸಿಲ್ಲ. ಥಿಯೇಟರ್‌ನಿಂದ ತೆಗೆದಾಕ್ಷಣ ಇನ್ನೊಮ್ಮೆ ಹಾಕ್ತೀರಾ ಅಂತ ಕೇಳಿದವರಿದ್ದಾರೆ’

ಸಿನಿಮಾ ಮಾರುಕಟ್ಟೆ ಜೂಜು ಇದ್ದ ಹಾಗೆ..
‘ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ನಾವೂ ಮಾರುಕಟ್ಟೆಯನ್ನು ಗಮನಿಸುತ್ತಲೇ ಇದ್ದೇವೆ. ಏಕೆಂದರೆ ಸಿನಿಮಾಕ್ಕೆ ತುಂಬಾ ದುಡ್ಡು ಹಾಕಿಬಿಟ್ಟಿದ್ದೇವೆ. ಇದು ದೊಡ್ಡ ಜೂಜು ಇದ್ದ ಹಾಗೆ. ಹಾಗಾಗಿ ಕಾದು ನೋಡಬೇಕು. ಸಿನಿಮಾ ಕಲೆ ಹೇಗೆಯೋ ಹಾಗೆಯೇ ಉದ್ಯಮ ಕೂಡಾ ಅಲ್ವಾ. ಸಿನಿಮಾಕ್ಕೆ ದುಡ್ಡು ಹಾಕಿದ ವ್ಯಕ್ತಿ ಕೂಡಾ ರಿಸ್ಕ್‌ ಫ್ಯಾಕ್ಟರ್‌ಗಳನ್ನು ನೋಡುತ್ತಾನೆ. ಕೋವಿಡ್‌ ಸಂಬಂಧಿಸಿ ಸರ್ಕಾರ ಏನು ಮಾರ್ಗಸೂಚಿ ಕೊಟ್ಟಿದೆಯೋ ಅದನ್ನು ಸರಿಯಾಗಿ ಪಾಲಿಸಿ. ಅತ್ಯಂತ ಪರಿಣತರು ಕೊಟ್ಟ ಸೂಚನೆಗಳು ಅವು’ ಎಂದರು. 

‌‘ಲಾಕ್‌ಡೌನ್‌‌ ಅವಧಿ ಹಿತವಾಗಿಯೇ ಇತ್ತು. ಕೆಲವು ಸ್ಕ್ರಿಪ್ಟ್‌ ಬರೆಯೋದು ಇತ್ತು. ಅದನ್ನು ಬಹುತೇಕ ಮುಗಿಸಿದ್ದೇನೆ. ಒಂದು ಕ್ರೀಡಾ ವಿಷಯ ಆಧರಿತ ಚಿತ್ರ. ಮತ್ತೊಂದು ಒಂದು ಯುವ ಜೋಡಿ ಮತ್ತು ನಾನು ಇಂಥ ವಿಷಯ ಇಟ್ಟುಕೊಂಡು ಪ್ರೀತಿಯ ಸುತ್ತ ಸಿನಿಮಾ ಮಾಡಬೇಕೆಂದಿದ್ದೇನೆ. ಜನವರಿ ನಂತರ ಶೂಟಿಂಗ್‌ ಇಟ್ಟುಕೊಳ್ಳೋಣ ಅಂತಿದ್ದೇನೆ’ ಎಂದು ಮಾತು ಮುಗಿಸಿದರು ರಮೇಶ್‌. 

ಪೂರ್ಣ ಸಂದರ್ಶನ ಕೇಳಿ: ಕನ್ನಡ ಧ್ವನಿ ಪ್ರಜಾವಾಣಿ ಪಾಡ್‌ಕಾಸ್ಟ್‌ನಲ್ಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು