ಗುರುವಾರ , ಮೇ 6, 2021
25 °C

‘ರಾಬರ್ಟ್‌’ಗೆ ಟಾಲಿವುಡ್‌ನಲ್ಲಿ ನಿರ್ಬಂಧ: ಚೆನ್ನೈ ಸಭೆಯಲ್ಲಿ ಇಂದು ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾರ್ಚ್‌ 11ರಂದು ಬಿಡುಗಡೆಗೆ ಸಿದ್ಧವಾಗಿರುವ ‘ರಾಬರ್ಟ್‌’ ಚಿತ್ರದ ತೆಲುಗು ಆವೃತ್ತಿಯ ಬಿಡುಗಡೆಗೆ ಆಂಧ್ರ ಪ್ರದೇಶದಲ್ಲಿ ಸಹಕಾರ ಕೊಡಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತೆಲುಗು ನಿರ್ಮಾಪಕರ ಪರಿಷತ್‌ಗೆ ಪತ್ರ ಬರೆಯಲು ನಿರ್ಧರಿಸಿದೆ. ಜ. 31ರಂದು ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗಳ ಒಕ್ಕೂಟದ ಸಭೆ ನಡೆಯಲಿದ್ದು, ಅಲ್ಲಿಯೂ ವಿಷಯ ಪ್ರಸ್ತಾಪಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ತಿಳಿಸಿದ್ದಾರೆ.  

ಮಾರ್ಚ್‌ 11ರಂದೇ ತೆಲುಗಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದೇ ಹೊತ್ತಿನಲ್ಲಿ ಕನ್ನಡದ ಡಬ್‌ ಸಿನಿಮಾ ‘ರಾಬರ್ಟ್‌’ನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಅಲ್ಲಿನ ಚಿತ್ರರಂಗ ನಿರ್ಧರಿಸಿದ್ದು, ರಾಬರ್ಟ್‌ಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಅವಕಾಶ ಕೊಡಬಾರದು ಎಂದು ಸೂಚನೆ ನೀಡಿತ್ತು. ತೆಲುಗು ಚಿತ್ರರಂಗದ ಈ ನಿರ್ಧಾರದಿಂದ ರಾಬರ್ಟ್‌ ಚಿತ್ರತಂಡವೂ ಆತಂಕಕ್ಕೆ ಒಳಗಾಗಿತ್ತು. ನಟ ದರ್ಶನ್‌ ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಸಂಬಂಧಿಸಿ ನಡೆದ ಸಭೆಯಲ್ಲಿ ಭಾಗವಹಿಸಿದ ದರ್ಶನ್‌, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರು ಈ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದರು. 

ಜೈರಾಜ್‌ ಪ್ರತಿಕ್ರಿಯಿಸಿ, ‘ಒಕ್ಕೂಟದ ಸಭೆಯಲ್ಲಿ ತೆಲುಗು ನಿರ್ಮಾಪಕರ ಪರಿಷತ್‌ನ ಅಧ್ಯಕ್ಷರಿಗೂ ಮನವಿ ಸಲ್ಲಿಸುತ್ತೇನೆ. ಇದು ತೆಲುಗು ಭಾಷೆಗಷ್ಟೇ ಅಲ್ಲ. ಯಾವುದೇ ಭಾಷೆಯಲ್ಲೂ ಸಿನಿಮಾಗಳ ಬಿಡುಗಡೆಗೆ ಅಡ್ಡಿಪಡಿಸಬಾರದು’ ಎಂದು ಕೋರುವುದಾಗಿ ಹೇಳಿದರು.

ಈ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವ ಹಂತಕ್ಕೆ ಬಂದಿದೆ. ಏನಿದ್ದರೂ ಪರಸ್ಪರ ಮಾತುಕತೆಯಿಂದ ಬಗೆಹರಿಸಬಹುದು. ಚಿತ್ರ ನಿರಾತಂಕವಾಗಿ ಬಿಡುಗಡೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಲಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು