ಶುಕ್ರವಾರ, ನವೆಂಬರ್ 22, 2019
19 °C

ಈದ್‌ಗೆ ಬರಲಿದೆ ಸಲ್ಮಾನ್‌ ಅಭಿನಯದ ‘ರಾಧೆ’

Published:
Updated:

2020ರ ಈದ್‌ಗೆ ಸಲ್ಮಾನ್‌ ಖಾನ್‌ ಅಭಿನಯದ ಯಾವ ಸಿನಿಮಾ ಬಿಡುಗಡೆಯಾಗಲಿದೆ? ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

‘ರಾಧೆ: ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಕಾಪ್‌’ ಸಿನಿಮಾದಲ್ಲಿ ಸಲ್ಮಾನ್‌ ನಟಿಸುವುದು ಖಚಿತವಾಗಿದೆ. ಈ ಸಿನಿಮಾಕ್ಕೆ ಅನುಷ್ಕಾ ಶರ್ಮಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗೆ ಹುರುಳಿಲ್ಲ ಎಂದು ಸಿನಿಮಾ ತಂಡ ಸ್ಪಷ್ಟಪಡಿಸಿದೆ. ದಿಶಾ ಪಟಾನಿ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬುದು ತಂಡದ ಅಭಿಪ್ರಾಯ.‌

‘ದಬಾಂಗ್‌ 3’ ಹಾಗೂ ‘ಕಿಕ್‌ 2’ ಸಿನಿಮಾದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಆದರೆ ಈ ಎರಡೂ ಸಿನಿಮಾವನ್ನು ಅವರು ಈದ್ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಇನ್‌ಶಾ ಅಲ್ಲಾಹ್‌’ ಸಿನಿಮಾವನ್ನು ಈದ್‌ಗೆ ಬಿಡುಗಡೆ ಮಾಡುವ ಉದ್ದೇಶ ಇತ್ತು. ಆದರೆ ಈ ಸಿನಿಮಾ ಸೆಟ್ಟೇರದ ಕಾರಣ ಸಲ್ಮಾನ್‌, ವಿಶೇಷವಾದ ಸ್ಕ್ರಿಪ್ಟ್‌ವೊಂದರ ನಿರೀಕ್ಷೆಯಲ್ಲಿದ್ದರು.

‘ವಾಂಟೆಡ್‌’ ಹಾಗೂ ‘ದಬಾಂಗ್‌ 3’ ಬಳಿಕ ಪ್ರಭುದೇವ ಕೂಡ ‘ರಾಧೆ’ಯಲ್ಲಿ ಸಲ್ಮಾನ್ ಜೊತೆ ನಟಿಸಲಿದ್ದಾರೆ. ‘ಭಾರತ್‌’ ಸಿನಿಮಾದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ದಿಶಾ ಪಟಾನಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಸಿನಿ ತಂಡದ ಮೂಲಗಳು ಹೇಳಿವೆ.

ನವೆಂಬರ್‌ 4 ರಿಂದ ಶೂಟಿಂಗ್ ಆರಂಭವಾಗಲಿದೆ. ಮುಂಬೈನಲ್ಲಿ ಮೊದಲ ಭಾಗದ ಚಿತ್ರೀಕರಣ ನಡೆಯಲಿದೆ. 2017ರಲ್ಲಿ ತೆರೆಕಂಡ ಕೊರಿಯಾದ ಸಿನಿಮಾ ‘ದಿ ಔಟ್‌ಕ್ಲಾಸ್‌’ ರಿಮೇಕ್‌ ಇದಾಗಿದೆ.

‘ದಬಾಂಗ್ 3’ ಡಿಸೆಂಬರ್ 20ಕ್ಕೆ ಬಿಡುಗಡೆಯಾಗಲಿದೆ. ‘ಕಿಕ್‌ 2’ ಚಿತ್ರೀಕರಣ ಹಂತದಲ್ಲಿದೆ.

ಪ್ರತಿಕ್ರಿಯಿಸಿ (+)