ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ತೀರಾ ಸಂಕಷ್ಟದಲ್ಲಿದ್ದ ನಟಿ ಆತ್ಮಹತ್ಯೆಗೆ ಯತ್ನಿಸಿದ್ದರು

Last Updated 6 ಸೆಪ್ಟೆಂಬರ್ 2020, 7:06 IST
ಅಕ್ಷರ ಗಾತ್ರ

ಬೆಂಗಳೂರಿನ ರಾಜಾಜಿನಗರದ ಗಾಯತ್ರಿನಗರ ಬಡಾವಣೆಯ ಒಂದು ಮುಖ್ಯರಸ್ತೆ. ಅದಾಗಲೇ ರಾತ್ರಿ 8 ದಾಟಿತ್ತು. ಅಗತ್ಯವಿದ್ದ ಔಷಧ ತರಲು ಮಂಜುಶ್ರೀ ಮೆಡಿಕಲ್ಸ್‌ಗೆ ಬಂದಿದ್ದೆ. ಜನಸಂದಣಿ ಇದ್ದ ಕಾರಣ ಬೈಕ್ ಅನ್ನು ದೂರದಲ್ಲಿ ನಿಲ್ಲಿಸಿದ್ದೆ. ಔಷಧಗಳನ್ನು ತೆಗೆದುಕೊಂಡು ಬರಲು ಬೈಕ್ ಬಳಿ ಬರುವಷ್ಟರಲ್ಲಿ 8.30 ದಾಟಿತ್ತು. ಮೊದಲನೇ ಅಡ್ಡರಸ್ತೆಯಲ್ಲೇ ಮನೆ ಕಡೆ ಹೊರಟೆ.ಮಂಜುಶ್ರೀ ಮೆಡಿಕಲ್ಸ್‌ನ ಪಕ್ಕದ ರಸ್ತೆಯ ಆರಂಭದಲ್ಲೇ ಒಂದು ಬೀದಿ ದೀಪವಿದೆ. ಅದರ ಪಕ್ಕದಲ್ಲಿ ಬೆಳೆದಿರುವ ಮರದ ರೆಂಬೆ–ಕೊಂಬೆಗಳು ಚಾಚಿಕೊಂಡ ಕಾರಣ ಬೀದಿ ದೀಪದ ಕೆಳಗೇ ಗಾಢ ಕತ್ತಲು. ಪ್ರತಿದಿನ ಇಲ್ಲಿ ಓಡಾಡುವ ಕಾರಣ ಆ ಕತ್ತಲೇನೂ ಹೊಸದಾಗಿರಲಿಲ್ಲ. ಆದರೆ ಅಂದು ಔಷಧ ತೆಗೆದುಕೊಂಡು ಹೊರಟ ತಕ್ಷಣ ಒಬ್ಬ ಮಹಿಳೆ ಕೈ ಅಡ್ಡ ತೋರಿಸಿದರು. ಧುತ್ತನೆ ಇದು ನಡೆದ ಕಾರಣ ಗಾಬರಿಯಲ್ಲಿ ಬೈಕ್ ನಿಲ್ಲಿಸಿದೆ.

ಆ ಮಹಿಳೆ ಬೈಕ್ ಬಳಿ ಬಂದರು. ನಾನು ಬೈಕ್ ಅನ್ನು ಮುಂದಕ್ಕೆ ಓಡಿಸಬೇಕು ಎಂದು ಪ್ರಯತ್ನಿಸುವಷ್ಟರಲ್ಲೇ ಅವರು, ‘ಪ್ಲೀಸ್ ಸ್ವಲ್ಪ ನಿಲ್ಲಿಸಿ’ ಎಂದರು. ನಾನೂ ಸಾವಧಾನಿಸಿದೆ. ಹೆಂಗಸಿನ ಕಡೆ ನೋಡಿದೆ. ನೋಡಲು ತೀರಾ ಲಕ್ಷಣವಾಗಿಯೇ ಇದ್ದಾರೆ. ಕೈಯಲ್ಲಿ ಕಾಗದದ ಪೊಟ್ಟಣ ಹಿಡಿದಿದ್ದಾರೆ, ಮೆಡಿಕಲ್ ಶಾಪ್‌ಗಳಲ್ಲಿ ಕೊಡುವಂತದ್ದು. ಆ ಹೆಂಗಸು ದುಡ್ಡು ಕೇಳಬಹುದು ಎಂದುಕೊಂಡೆ. ‘50 ರುಪಾಯಿ ಇದ್ರೆ ಕೊಡ್ತೀರಾ. ಮೆಡಿಸನ್ ತಗೋಬೇಕಿತ್ತು. ಇರೋ ದುಡ್ಡಲ್ಲಿ ಸ್ವಲ್ಪ ತಗೊಂಡಿದೀನಿ. ಎಮರ್ಜೆನ್ಸಿ ಇದೆ’ ಎಂದು ತೀರಾ ಸಂಕೋಚದಿಂದ ಕೇಳಿದರು. 50 ಕೊಟ್ಟೆ. ‘ತುಂಬಾ ಉಪಕಾರವಾಯಿತು’ ಎಂದು ಅವರು ಹೇಳಿದರು. ಆಗ ಇನ್ನೊಮ್ಮೆ ಅವರ ಮುಖವನ್ನು ಗಮನಿಸಿದೆ. ಕಿವಿಯಲ್ಲಿ ಯಾವುದೇ ಆಭರಣಗಳಿರಲಿಲ್ಲ. ಮೂಗುತಿಯೂ ಇರಲಿಲ್ಲ. ಆದರೆ, ತೀರಾ ಪರಿಚಿತ ಮುಖ ಎನಿಸಿತು. ಚೆನ್ನಾಗಿಯೇ ನೋಡಿರುವ ನೆನಪು. ಆದರೆ ಇವರೇ ಎಂದು ಗುರುತಿಸಲು ಆಗುತ್ತಿಲ್ಲ.

ಅವರು ಯಾರು ಎಂದು ಯೋಚಿಸುತ್ತಾ ಮನೆ ಕಡೆ ಹೊರಟೆ. ಒಂದೆರಡು ನಿಮಿಷದ ದಾರಿಯಷ್ಟೆ. ಆ ಮಹಿಳೆ ಪ್ರಸಿದ್ಧ ನಟಿ ಎಂಬುದು ಗೊತ್ತಾಯಿತು. ನಟ ಪ್ರಕಾಶ್‌ ರೈ ನಾಯಕ ನಟರಾಗಿರುವ ಸಿನಿಮಾದಲ್ಲಿ ನಾಯಕನಟಿಯಾಗಿ ನಟಿಸಿದ್ದಾರೆ. ನಟ ವಿಷ್ಣುವರ್ಧನ್ ಅವರು ನಾಯಕನಟರಾಗಿರುವ ಹಲವು ಸಿನಿಮಾಗಳಲ್ಲಿ ಇವರು ನಾಯಕನಟಿಯಾಗಿದ್ದಾರೆ. ಮನೆ ತಲುಪುವಷ್ಟರಲ್ಲಿ ಯೋಚಿಸಲು ಆಗಿದ್ದು ಇಷ್ಟು ಮಾತ್ರ.

ಮನೆಗೆ ಹೋದತಕ್ಷಣವೇ ಅಕ್ಕನ ಬಳಿ ಮತ್ತು ಅತ್ತೆಯ ಬಳಿ ಈ ವಿಷಯ ಹೇಳಿದೆ. ನನಗೆ ಅನುಮಾನವಿದ್ದ ಸಿನಿಮಾಗಳ ನಾಯಕನಟಿಗಾಗಿ ಗೂಗಲಿಸಿದೆ. ನನ್ನ ಅನುಮಾನ ನಿಜವಾಗಿತ್ತು. ಮೆಡಿಕಲ್ ಶಾಪ್‌ ಬಳಿ ದುಡ್ಡು ಕೇಳಿದ ನಟಿ ಅವರೇ ಆಗಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಈ ನಟಿ, ಉತ್ತಮ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರು ಪ್ರಶಸ್ತಿ ಪಡೆದ ಸಿನಿಮಾವು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದೆ. ಅವರ ಈ ಸ್ಥಿತಿ ಬಗ್ಗೆ ಎಲ್ಲರೂ ಮರುಕಪಟ್ಟೆವು. ಅತ್ತೆ, ‘ಅವರು ಇನ್ನೂ ಇಲ್ಲೇ ಎಲ್ಲೋ ಹೋಗುತ್ತಿರಬಹುದು. ಹೋಗಿ ಹುಡುಕಿ’ ಎಂದರು. ನಾನು, ಅಕ್ಕ ಮತ್ತು ಅತ್ತೆಯ ಮಗ ಮಧು ಹೊರಟೆವು. ಗಾಯತ್ರಿನಗರದ ಪ್ರತಿ ರಸ್ತೆಗಳನ್ನೂ ಹುಡುಕಿದೆವು. ಎಲ್ಲೋ ಕಾಣಲಿಲ್ಲ. ನಾವೇಕೆ ಅವರನ್ನು ಹುಡುಕುತ್ತಿದ್ದೇವೆ ಎಂದುದೂ ನಮಗೆ ಗೊತ್ತಿರಲಿಲ್ಲ. ಆದರೆ ಹುಡುಕಿದೆವು ಅಷ್ಟೆ. ಅವರು ಸಿಗದಿದ್ದ ಕಾರಣ ರಸ್ತೆಯಲ್ಲಿ ಒಂದೆಡೆ ನಿಂತು ಬೇಸರಿಸಿದೆವು.

ಮಧು, ‘ಸಂಗೊಳ್ಳಿ ರಾಯಣ್ಣ ಪಾರ್ಕ್ ಹತ್ತಿರ ನೋಡೋಣ ಒಂದ್ಸಲ’ ಎಂದು ಹೇಳಿದ. ಅವನ ಮಾತಿಗೆ ಹೂಗೊಟ್ಟು ಹೊರಟೆವು. ಸಂಗೊಳ್ಳಿ ರಾಯಣ್ಣ ಪಾರ್ಕ್‌ನ ಬಳಿಯೂ ಅವರು ಇರಲಿಲ್ಲ. ಆದರೆ, ಅಲ್ಲೇ ಮುಂದೆ ರಸ್ತೆಯೊಂದರಲ್ಲಿ ಕತ್ತಲಲ್ಲಿ ಯಾರೋ ನಿಂತಿದ್ದಂತೆ ಕಾಣಿಸಿತು. ಹತ್ತಿರ ಹೋದೆವು. ಅದೇ ನಟಿ. ನಮ್ಮನ್ನು ನೋಡಿ ಅವರಿಗೆ ಮುಜುಗರವಾದಂತೆ ಅನಿಸಿತು. ನಾನು ಮತ್ತು ಮಧು ದೂರದಲ್ಲೇ ಇದ್ದೆವು. ಅಕ್ಕ ಅವರ ಬಳಿ ಹೋದರು. ಒಂದೆರಡು ನಿಮಿಷ ಮಾತನಾಡಿದರು. ಆ ನಂತರ ಅಕ್ಕ ಮತ್ತು ಅವರು ಪಾರ್ಕ್‌ ಒಳಗೆ ಹೋದರು. ನಮ್ಮನ್ನೂ ಕರೆದರು.

ನಾವು ಅವರನ್ನು, ‘ನೀವು ಇಂತಹ ನಟಿ ಅಲ್ಲವೇ?’ ಎಂದು ಕೇಳಿದೆವು.

ಅವರು, ‘ಇಲ್ಲ’ ಎಂದರು.

‘ನಮಗೆ ಚೆನ್ನಾಗಿ ಗೊತ್ತಿದೆ. ನೀವು ಅವರೇ’

‘ಇಲ್ಲ ನೀವು ತಪ್ಪು ತಿಳಿದುಕೊಂಡಿದ್ದೀರಾ. ನಾನು ಅವಳಲ್ಲ’

‘ನೀವು ಮುಜುಗರ ಮಾಡ್ಕೋಬೇಡಿ. ನಾವು ಯಾರಿಗೂ ಹೇಳೋದಿಲ್ಲ. ನಮ್ಮ ಮೇಲೆ ನಂಬಿಕೆ ಇಡಿ’ ಎಂದು ಮಧು ಹೇಳಿದ.

ಅವರು ಒಂದು ದೀರ್ಘ ನಿಟ್ಟುಸಿರು ಬಿಟ್ಟರು. ಒಂದೆರಡು ನಿಮಿಷ ಮೌನವಾದರು. ಆನಂತರ, ‘ನಾನೂ ಸಹ ನಟಿಯೇ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ನೀವು ಹೇಳಿದ ನಟಿಯಲ್ಲ. ಅವರ ಅಕ್ಕ’ ಎಂದರು.

ನಾವು ‘ಹೌದೇ?’ ಎಂಬಂತೆ ತಲೆಯಾಡಿಸಿದೆವು.

‘ಸಿನಿಮಾದಲ್ಲಿ ನಮಗೆ ತುಂಬಾ ಮೋಸ ಮಾಡಿದರು. ನಮಗೆ ಬರಬೇಕಿದ್ದ ಹಣ ಬರಲಿಲ್ಲ. ನಮ್ಮ ಬಳಿ ಹಣ ತೆಗೆದುಕೊಂಡವರೂ ಹಣ ನೀಡದೆ ಮೋಸ ಮಾಡಿದರು. ಈಗ ಎಮರ್ಜೆನ್ಸಿ ಮೆಡಿಸನ್ಸ್ ತಗೋಳೋಕೂ ದುಡ್ಡಿಲ್ಲ’ ಎಂದರು.

‘ಯಾಕೆ? ಏನು ಹುಷಾರಿಲ್ಲ ನಿಮಗೆ?’

‘ತೀರಾ ಹುಷಾರಿರಲಿಲ್ಲ. ಆಪರೇಷನ್ ಮಾಡಿಸಬೇಕಿತ್ತು. ಎಮರ್ಜೆನ್ಸಿ ಇತ್ತು. ಹಾಸ್ಪಿಟಲ್‌ಗೆ ಅಡ್ಮಿಟ್ ಆಗಿದ್ದೆ. ಆದರೆ ಆಪರೇಷನ್‌ಗೆ ಫೀ ಕಟ್ಟಲು ದುಡ್ಡಿರಲಿಲ್ಲ. ನಟ ಸುದೀಪ್ ಅವರು 2 ಲಕ್ಷ ನೀಡಿದರು. ಔಷಧ ಮತ್ತಿತರ ಹಲವು ಖರ್ಚನ್ನು ನಟ ಶಿವರಾಜ್‌ಕುಮಾರ್ ನೋಡಿಕೊಂಡರು. ಈಗ ಡಿಸ್ಚಾರ್ಜ್ ಆಗಿ ಮನೆಯಲ್ಲಿದ್ದೇನೆ. ಅವರಿಬ್ಬರು ಅಷ್ಟು ಸಹಾಯ ಮಾಡಿದ್ದಾರೆ. ಈಗ ಔಷಧಕ್ಕೂ ಅವರನ್ನು ಕೇಳಲು ಆಗುತ್ತದೆಯೇ. ನಮಗೆ ದುಡ್ಡು ಕೊಡಬೇಕಿರುವವರು ನನ್ನನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡರು. ಮನೆಯಲ್ಲಿ ಅಮ್ಮ ಮತ್ತು ಅಕ್ಕ ಇದ್ದಾರೆ. ಅವರಿಗೂ ಆರೋಗ್ಯ ಸರಿ ಇಲ್ಲ. ನಮ್ಮಂತ ಒಂಟಿ ಹೆಂಗಸರು ಬದುಕುವುದು ತೀರಾ ಕಷ್ಟ. ಹೀಗಿದೆ ಜೀವನ’ ಎಂದು ಬೇಸರಿಸಿದರು.

ನಾವೂ ಮರುಕಪಡೆದೆ ಬೇರೆ ಏನನ್ನೂ ಮಾಡಲು ಸಾಧ್ಯವಿರಲಿಲ್ಲ. ಅಕ್ಕ ಮತ್ತು ಮಧು ಒಂದಷ್ಟು ದುಡ್ಡು ತಂದಿದ್ದರು. ‘ನೀವು ಬೇಡ ಅನ್ನಬಾರದು. ನಮ್ಮನ್ನು ನಿಮ್ಮ ತಮ್ಮ ತಂಗಿ ಎಂದು ತಿಳಿದುಕೊಳ್ಳಿ. ನಿಮ್ಮ ಅಗತ್ಯಕ್ಕೆ ಬಳಸಿಕೊಳ್ಳಿ’ ಎಂದು ಹಣ ನೀಡಲು ಮುಂದಾದರು. ಆ ನಟಿ ಅದನ್ನು ನಿರಾಕರಿಸಿದರು. ಇವರಿಬ್ಬರು ಮತ್ತಷ್ಟು ಬಲವಂತ ಮಾಡಿದ ನಂತರ, ‘ನೀವು ನಿಮ್ಮನ್ನು ನನ್ನ ತಮ್ಮತಂಗಿ ಎಂದು ಹೇಳುತ್ತಿದ್ದೀರಿ. ಆ ಒಂದು ಕಾರಣಕ್ಕೆ ದುಡ್ಡು ಈಸ್ಕೋತೀನಿ’ ಎಂದರು.

ಅದಾಗಲೇ ರಾತ್ರಿ ಹತ್ತು ಸಮೀಪಿಸಿತ್ತು. ನಾವು ಅವರನ್ನು ಅವರ ಮನೆಯ ಬಳಿ ಬಿಟ್ಟು ಬರಲು ನಿರ್ಧರಿಸಿದ್ದೆವು. ಅವರೂ ಒಪ್ಪಿದರು. ಅವರು ನಮ್ಮ ಜತೆ ಗಾಡಿಯಲ್ಲಿ ಕುಳಿತುಕೊಳ್ಳಲಿಲ್ಲ ಅಥವಾ ಆಪರೇಷನ್ ಆಗಿದ್ದ ಕಾರಣ ಟೂ ವ್ಹೀಲರ್‌ನಲ್ಲಿ ಕೂರಲು ಸಾಧ್ಯವಿರಲಿಲ್ಲವೇನೊ? ನಾವು ಗಾಡಿಯನ್ನು ತಳ್ಳಿಕೊಂಡು ನಡೆದುಕೊಂಡೇ ಹೊರಟೆವು. ರಾಜ್‌ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜ್‌ ಬಳಿಯ ಕೊಳಗೇರಿಯ ಸಮೀಪ ಬಂದಾಗ. ‘ಮನೆ ಇಲ್ಲೇ ಇದೆ. ನಾನು ಹೋಗುತ್ತೇನೆ. ತುಂಬಾ ಥ್ಯಾಂಕ್ಸ್’ ಎಂದರು.ಅಕ್ಕ, ‘ಏನೇ ಇದ್ದರೂ ಕಾಲ್ ಮಾಡಿ. ತಮ್ಮತಂಗಿ ಇದ್ದೇವೆ ಎಂದುಕೊಳ್ಳಿ’ ಎಂದು ತಮ್ಮ ಮೊಬೈಲ್ ನಂಬರ್ ನೀಡಿದರು. ಅವರೂ ಸಹ ಅವರ ನಂಬರ್ ನೀಡಿದರು. ಮನೆಗೆ ಹಿಂತಿರುಗಿದೆವು.

ಮಾರನೇ ದಿನ ನಾವೇ ಕರೆ ಮಾಡಬೇಕೆಂದುಕೊಂಡೆವು. ನಾವೇ ಮಾಡಿದರೆ ಅವರಿಗೆ ಮುಜುಗರವಾಗಬಹುದು ಎಂದುಕೊಂಡೆವು. ಆದರೆ ಮಧ್ಯಾಹ್ನದ ಹೊತ್ತಿಗೆ ಅವರೇ ಕರೆ ಮಾಡಿದರು. ‘ನನ್ನ ತಂಗಿಯೂ ನಿಮ್ಮ ಬಳಿ ಮಾತನಾಡುತ್ತಾರಂತೆ’ ಎಂದರು. ಅಕ್ಕ ಮತ್ತು ಅತ್ತೆಯ ಜತೆ ಸುಮಾರು ಹೊತ್ತು ಮಾತನಾಡಿದರು. ಅತ್ತೆ ಒಮ್ಮೆ ಅವರ ಮನೆಗೆ ಹೋಗಿ ಇಬ್ಬರು ನಟಿಯರನ್ನೂ ಮಾತನಾಡಿಸಿಕೊಂಡು ಬಂದರು.

ಅವರು ಕರೆ ಮಾಡಿ ಮಾತನಾಡುವುದು ನಡೆದೇ ಇತ್ತು. ಅತ್ತೆಯ ಜತೆ ನಿರಂತರ ಸಂಪರ್ಕದಲ್ಲಿ ಇದ್ದರು. ಅವರು ಆರೋಗ್ಯದಲ್ಲೂ ಚೇತರಿಸಿಕೊಂಡಂತೆ ಕಾಣಿಸಿತ್ತು. ಆರ್ಥಿಕ ಸ್ಥಿತಿಯೂ ಸುಧಾರಿಸಿದ್ದಂತೆ ಕಾಣಿಸಿತ್ತು. ಆದರೆ ಎರಡು–ಮೂರು ತಿಂಗಳಿಂದ ಅವರ ಕರೆ ಇರಲಿಲ್ಲ. ಕೊರೊನಾ ಹಾವಳಿಯಲ್ಲಿ ಅಕ್ಕನಾಗಲೀ ಅತ್ತೆಯಾಗಲೀ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ. ಆದರೆ ಕೆಲವೇ ದಿನಗಳ ಹಿಂದೆ ಆ ನಟಿ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಮಾಧ್ಯಮಗಳಲ್ಲಿ ಬಂದಿತು. ಆತ್ಮಹತ್ಯೆಗೂ ಮುನ್ನ ಅವರು ವಿಡಿಯೊ ಮಾಡಿ ಅದನ್ನು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾದರು. ಆದರೆ ಅವರ ಆತ್ಮಹತ್ಯೆ ಯತ್ನವು ಹೆಚ್ಚು ಸುದ್ದಿಯಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT