ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವ್ಯಾ ಎಂಬ ಕಂದೀಲು

Last Updated 11 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಕತ್ತಲಲ್ಲಿ ನಿಧಾನವಾಗಿ, ಹನಿಹನಿಯಾಗಿ, ಅಸ್ತಿತ್ವ ಇಲ್ಲವಾಗಿಸಿಕೊಳ್ಳುತ್ತ ಬೆಳಕು ನೀಡುವ ಕಂದೀಲು ಅಬ್ಬರದ ಬೆಳಕಿನ ಮಧ್ಯೆ ಗೌಣವಾಗುತ್ತದೆ. ಎಷ್ಟೇ ಜೋರಾಗಿ ಉರಿದರೂ ಅದರೊಳು ಬೆಳಕಿದೆ ಎಂಬುದು ಝಗಮಗಿಸುವ ಬೆಳಕಿನಲ್ಲಿ ಗ್ರಹಿಕೆಗೆ ಬರುವುದಿಲ್ಲ. ಅಂಥ ಕಂದೀಲುಗಳ ಸಂಖ್ಯೆ ಬಾಲಿವುಡ್‌ನಲ್ಲಿ ಕಡಿಮೆಯೇನಿಲ್ಲ. ದಟ್ಟ ಬೆಳಕಿನ ಮಧ್ಯೆ ದಣಿವರಿಯದೇ ಬೆಳಗುತ್ತಿರುವ ಅಂಥ ಕಂದೀಲು ದೀಪಗಳಲ್ಲಿ ದಿವ್ಯಾ ದತ್ತಾ ಕೂಡ ಒಬ್ಬರು.

ದಿವ್ಯಾ ದತ್ತಾ ಬಾಲಿವುಡ್ ಪ್ರವೇಶಿಸಿ 24 ವರ್ಷಗಳು ಸಂದಿವೆ. ಅವರ ಎದುರು ಅದೆಷ್ಟೋ ಮಂದಿ ಸೂಪರ್‌ಸ್ಟಾರ್‌ಗಳಾದರು. ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಾಚಿಕೊಂಡರು, ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತ ಸದಾ ಸುದ್ದಿಯಲ್ಲಿ ಉಳಿದರು. ಲೆಕ್ಕವಿಲ್ಲದಷ್ಟು ಮಂದಿ ಪ್ರತಿಭಾವಂತರು ಅವರ ಸಲಹೆ, ಮಾರ್ಗದರ್ಶನ ಪಡೆದು ಖ್ಯಾತನಾಮರಾದರು. ಆದರೆ ದಿವ್ಯಾ ಮಾತ್ರ ಸದಾ ನಗುಮೊಗವಿರಿಸಿಕೊಂಡು ನಿರ್ಲಿಪ್ತವಾಗಿ ಕಂದೀಲಿನಂತೆ ಬೆಳಗಿದರು. ಈಗಲೂ ಬೆಳಗುತ್ತಿದ್ದಾರೆ.

ಪಂಜಾಬ್‌ನ ಲೂಧಿಯಾನದ ದಿವ್ಯಾ 1994ರಲ್ಲಿ ಸಲ್ಮಾನ್ ಖಾನ್ ಅಭಿನಯದ ‘ವೀರ್‌ಗತಿ’, ‘ಇಷ್ಕ್ ಮೇ ಜೀನಾ ಇಷ್ಕ್ ಮೇ ಮರನಾ’ ಚಿತ್ರಗಳಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡರು. ಆದರೆ ನಂತರದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಿಗೆ ಮಾತ್ರವೇ ಸೀಮಿತರಾದರು. 2004ರಲ್ಲಿ ತೆರೆ ಕಂಡ ಶಾರೂಖ್ ಖಾನ್-ಪ್ರೀತಿ ಜಿಂಟಾ ಅಭಿನಯದ ‘ವೀರ್ ಜಾರಾ’ ಚಿತ್ರದಲ್ಲಿ ಶಬ್ಬು, ಫರ್ಹಾನ್ ಅಖ್ತರ್ ಅಭಿನಯದ ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಇಶ್ರೀ ಕೌರ್ ಪಾತ್ರಗಳಲ್ಲಿ ಕಂಡ ಅವರು ಮನದಲ್ಲಿ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತೆ ನಟಿಸಿದರು. ‘ವೆಲ್‌ಕಂ ಟು ಸಜ್ಜನ್‌ಪುರ’, ‘ಹೀರೋಇನ್’ ಮುಂತಾದ ಚಿತ್ರಗಳಲ್ಲೂ ಅವರು ಗಮನ ಸೆಳೆದರು. ನಾಯಕಿಯಾಗುವ ಲಕ್ಷಣ ಮತ್ತು ಅರ್ಹತೆಗಳಿದ್ದರೂ ಅವರಿಗೆ ಮಾತ್ರ ಅಂಥ ಅವಕಾಶ ಸಿಗಲೇ ಇಲ್ಲ.

ಹಾಗಂತ, ದಿವ್ಯಾ ದತ್ತಾ ಬಾಲಿವುಡ್‌ಗೆ ಮಾತ್ರವೇ ಸೀಮಿತರಾಗಲಿಲ್ಲ. ಪಂಜಾಬಿ, ಮಲೆಯಾಳಂ ಅಲ್ಲದೇ ಇಂಗ್ಲಿಷ್ ಚಿತ್ರಗಳಲ್ಲೂ ಅಭಿನಯ ಮುಂದುವರೆಸಿದರು. ರೂಪದರ್ಶಿ, ಲೈವ್ ಶೋ ನಿರೂಪಕಿಯಾಗಿ ಅಲ್ಲದೇ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಮಿಂಚಿದರು. ಕಿರುತೆರೆಯಲ್ಲೂ ಪ್ರತಿಭೆ ತೋರಿದರು. ‘ಸಂವಿಧಾನ’ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಅವರು ಪೂರ್ಣಿಮಾ ಬ್ಯಾನರ್ಜಿ ಪಾತ್ರದಲ್ಲಿ ಕಾಣಿಸಿಕೊಂಡರು. ಪಂಜಾಬಿ ಗಾಯಕ, ನಟ ಗುರುದಾಸಮಾನ್ ಜೊತೆ ‘ಶಹೀದ್-ಎ-ಮೊಹಬ್ಬತ್ ಭೂಟಾ ಸಿಂಗ್’ ಚಿತ್ರದಲ್ಲಿ ನಾಯಕಿಯಾದರು.

2009ರಲ್ಲಿ ತೆರೆ ಕಂಡ ಅಭಿಷೇಕ್ ಬಚ್ಚನ್ ನಟನೆಯ ‘ದಿಲ್ಲಿ–6’ ಬಾಕ್ಸ್ ಆಫೀಸ್‌ನಲ್ಲಿ ಅಂಥ ಅಬ್ಬರವೇನೂ ಮಾಡಲಿಲ್ಲ. ಆದರೆ ಅದರಲ್ಲಿ ಜಿಲೇಬಿ ಪಾತ್ರದಲ್ಲಿ ಕಾಣಿಸಿಕೊಂಡ ದಿವ್ಯಾ ರಾಷ್ಟ್ರದ ಗಮನ ಸೆಳೆದರು. ಚಿತ್ರವು ಸೂಪರ್‌ ಹಿಟ್‌ ಆಗದಿದ್ದರೂ ದಿವ್ಯಾ ಮಾತ್ರ ಹಿಟ್‌ ಅಭಿನಯ ನೀಡಿದರು ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ವ್ಯಕ್ತವಾಯಿತು. ‘ದಿ ಲಾಸ್ಟ್ ಲಿಯರ್’, ‘ಹಾರ್ಟ್‌ಲ್ಯಾಂಡ್’ ಇಂಗ್ಲಿಷ್‌ ಚಿತ್ರಗಳಲ್ಲಿ ಗಮನ ಸೆಳೆದರು.

‘ಇರಾದಾ’ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ದಿವ್ಯಾ, ವೀರ್‌ ಜಾರಾ ಮತ್ತು ಭಾಗ್‌ ಮಿಲ್ಖಾ ಭಾಗ್ ಚಿತ್ರಗಳಿಗೂ ಪೋಷಕ ನಟಿಯಾಗಿ ಝೀ ಸಿನೆ ಪ್ರಶಸ್ತಿ ಗಳಿಸಿದರು. ಇವುಗಳು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೂ ಅವರು ಪಾತ್ರರಾದರು.

‘ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದಿಲ್ಲ. ಗಾಡ್‌ಫಾದರ್‌ಗಳಿಲ್ಲ. ಬಹುತೇಕ ಚಿತ್ರಗಳನ್ನು ಕಳೆದುಕೊಂಡಿದ್ದೇನೆ. ಆದರೆ ದೊರೆತ ಪಾತ್ರಗಳನ್ನು ಬದ್ಧತೆಯಿಂದ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ’ ಎಂದು ದಿವ್ಯಾ ದತ್ತಾ ಹೇಳುತ್ತಾರೆ. ಈಗಲೂ ಅವರು ಸವಾಲಿನಿಂದ ಕೂಡಿರುವ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

ತಾಯಿಗಾಗಿ ಕೃತಿ ರಚನೆ
ಏಳನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ದಿವ್ಯಾ ಬೆಳೆದಿದ್ದು ತಾಯಿ ಡಾ. ನಳಿನಿ ದತ್ತಾ ಆಶ್ರಯದಲ್ಲಿ. ತಾಯಿ ಮತ್ತು ಸಹೋದರನ ಪ್ರಭಾವ ದಿವ್ಯಾ ಮೇಲೆ ಗಾಢವಾಗಿ ಬೀರಿತು. ‘ಸಿಂಗಲ್ ಪೇರೆಂಟಿಂಗ್’ ಎಷ್ಟು ಸವಾಲಿನದ್ದು ಎಂಬುದು ಅರಿವಿಗೆ ಬಂತು. ತಾಯಿಗಾಗಿ 2017ರಲ್ಲಿ ‘ಮೀ ಅಂಡ್ ಮಾ’ ಪುಸ್ತಕವೊಂದನ್ನು ಹೊರತಂದರು. ಪೆಂಗ್ವಿನ್ ರ‍್ಯಾಂಡಂ ಹೌಸ್‌ ಅದನ್ನು ಪ್ರಕಟಿಸಿತು.

ಯೂ ಟ್ಯೂಬ್ ಕಿರುಚಿತ್ರದಲ್ಲೂ ಅಭಿನಯ
ದಿವ್ಯಾ ದತ್ತಾ ಬಾಲಿವುಡ್‌ ಚಿತ್ರಗಳಲ್ಲಿ ಅಲ್ಲದೇ ’ಪ್ಲಸ್‌ಮೈನಸ್‌’ ಯೂಟ್ಯುಬ್‌ ಕಿರುಚಿತ್ರದಲ್ಲೂ ಮಿಂಚಿರುವುದು ವಿಶೇಷ. ಜ್ಯೋತಿ ಕಪೂರ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ದಿವ್ಯಾ ಯೂ ಟ್ಯೂಬ್ ಸೃಜನಶೀಲ ಕಲಾವಿದ ಭುವನ್ ಬಾಮ್ ಜೊತೆ ಅಭಿನಯಿಸಿದ್ದಾರೆ.
ರೈಲಿನಲ್ಲಿ ಇಬ್ಬರು ಅಪರಚಿತರು ಭೇಟಿಯಾಗುವುದು ಮತ್ತು ಸಂವಾದದ ಮೂಲಕ ಅವರ ಜೀವನದಲ್ಲಿ ಆಗುವ ಬದಲಾವಣೆ ಆಧರಿಸಿದ ಈ ಚಿತ್ರವು ಯೂ ಟ್ಯೂಬ್‌ನಲ್ಲಿ ಡುಗಡೆಗೊಂಡ ಮೂರೇ ದಿನದಲ್ಲಿ 10 ದಶಲಕ್ಷ ಮಂದಿ ವೀಕ್ಷಿಸಿದರು. ಭುವನ್‌ ಬಾಮ್ ಅವರು ಯೂ ಟ್ಯೂಬ್‌ನಲ್ಲಿ ಹೊಂದಿರುವ ‘ಬಿಬಿ ಕಿ ವೈನ್ಸ್‌’ ಚಾನೆಲ್‌ನಲ್ಲಿ ಈ ಚಿತ್ರವನ್ನು (16 ನಿಮಿಷ) ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT