ಬಹುತೇಕ ಹೊಸಬರೇ ಇರುವ ‘ಡಾಲರ್ಸ್ ಪೇಟೆ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮೋಹನ್ ಎನ್.ಮುನಿನಾರಾಯಣಪ್ಪ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಸೆ.6ರಂದು ತೆರೆಕಾಣಲಿದೆ.
ಇದು ಮೋಹನ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ಇದು ಸತ್ಯ ಘಟನೆ ಆಧರಿತ ಸಿನಿಮಾವಾಗಿದೆ. ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್ ಆಕಸ್ಮಿಕವಾಗಿ ₹13 ಕೋಟಿಗಳನ್ನು ನೂರು ಜನರ ಖಾತೆಗೆ ಹಾಕಿಬಿಡುತ್ತಾನೆ. ಅದು ಹೇಗೆ, ಏನು ಅನ್ನುವುದರ ಸುತ್ತ ಈ ಸಿನಿಮಾ ಸಾಗುತ್ತದೆ ಎಂದಿದೆ ಚಿತ್ರತಂಡ. ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ‘ಲೂಸಿಯಾ’ ಪವನ್ ಪತ್ನಿ ಸೌಮ್ಯ ಜಗನ್‌ಮೂರ್ತಿ, ‘ಮೆಟ್ರೊ ಸಾಗಾ’ದ ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್ಸ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘು ರಾಮಕೊಪ್ಪ, ಹೊನ್ನವಳ್ಳಿ ಕೃಷ್ಣ, ಡ್ರಾಮಾ ಜೂನಿಯರ್ಸ್ ಮಹೇಂದ್ರ ತಾರಾಬಳಗದಲ್ಲಿದ್ದಾರೆ.
ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಚಿತ್ರಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಪೆಂಟ್ರಿಕ್ಸ್ ಎಂಟರ್‌ಟೇನ್ಮೆಂಟ್ ಬ್ಯಾನರ್‌ನಡಿ ಪೂಜಾ ಟಿ.ವೈ. ಚಿತ್ರ ನಿರ್ಮಾಣ ಮಾಡಿದ್ದಾರೆ.