ಅಂತಿಮ ದರ್ಶನದ ವ್ಯವಸ್ಥೆ ಅರಮನೆ ಮೈದಾನದಲ್ಲಿ ಎಂದು ಮೊದಲು ಸರ್ಕಾರದ ಅಧಿಕಾರಿಗಳು ಹೇಳಿದರೆಂದು ವಾಹಿನಿಗಳಲ್ಲಿ ಸುದ್ದಿ. ನಿಮಿಷಗಳಲ್ಲೇ ಅಲ್ಲಿ ಜನಸ್ತೋಮ. ಆಮೇಲೆ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಇಡುವ ನಿರ್ಧಾರ ಹೊಮ್ಮಿತೆಂಬ ಇನ್ನೊಂದು ಸುದ್ದಿ. ಅಲ್ಲಿಗೆ ಜನ ಧಾವಿಸುವ ಮೊದಲೇ ಪೊಲೀಸ್ ಬಂದೋಬಸ್ತ್ ಇತ್ತೆನ್ನಿ. ಆಮೇಲೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂಬ ಪಕ್ಕಾ ಸುದ್ದಿ ಬಂತು.

2006, ಏಪ್ರಿಲ್ 13. ಬೆಳ್ಳಂಬೆಳಿಗ್ಗೆ ಪೊಲೀಸರೊಬ್ಬರು ಅಭಿಮಾನಿಗಳ ಜತೆಗಿನ ಸಂಘರ್ಷದಿಂದಾಗಿ ಮೃತಪಟ್ಟರೆಂಬ ಸುದ್ದಿ ಎರಗಿತು. ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೊ ಆವರಣದವರೆಗೆ ವಾಹನದಲ್ಲಿ ರಾಜ್ಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ ಎಂಬ ತೀರ್ಮಾನವಾಯಿತು. ಅದೆಲ್ಲಿದ್ದರೋ ಜನ, ಆ ಮಾರ್ಗದುದ್ದಕ್ಕೂ ಜಮೆಯಾದರು.

ರಾಜ್ಕುಮಾರ್ ಅವರನ್ನು ಹೊತ್ತಿದ್ದ ವಾಹನ ವಿಂಡ್ಸರ್ ಮ್ಯಾನರ್ ಸೇತುವೆ ದಾಟುವ ಹೊತ್ತಿಗೆ ಕೆಲವರ ಕೈಗಳಲ್ಲಿ ಕಲ್ಲುಗಳಿದ್ದುದು ಕಂಡಿತು. ಅವೆಲ್ಲಿಂದ ಬಂದವೋ ಎನ್ನುವುದು ಪೊಲೀಸರಿಗೆಲ್ಲ ದೊಡ್ಡ ತಲೆಬಿಸಿ ತಂದಿತು. ನೋಡನೋಡುತ್ತಲೇ ಗಾಳಿಯಲ್ಲಿ ಜನರು ಕಲ್ಲುಗಳನ್ನು ತೂರಿದರು. ಹಿರಿಯ ಪೊಲೀಸರಿಂದ ಸಂದೇಶ ಬಂದದ್ದೇ ಅಶ್ರುವಾಯು ಪ್ರಯೋಗವಾಯಿತು. ಮೆರವಣಿಗೆ ಸಾಗಿದ ಹಾದಿಯುದ್ದಕ್ಕೂ ಹಿಂಸಾಚಾರ ವ್ಯಾಪಕವಾಗತೊಡಗಿದ್ದು ಪೊಲೀಸರಿಗೆ ಅಡಿಗಡಿಗೂ ಸವಾಲುಗಳು ಎದುರಾಗತೊಡಗಿದವು.

ಯಶವಂತಪುರ ಪೊಲೀಸ್ ಠಾಣೆಯ ಪಕ್ಕದಲ್ಲಿ ನಿಂತಿದ್ದ ಅಂಬಾಸಿಡರ್ ಕಾರನ್ನು ಮಗುಚಿಹಾಕಿ, ಡೀಸೆಲ್ ಸೋರುವಂತೆ ಮಾಡಿ, ದುಷ್ಕರ್ಮಿಗಳು ಬೆಂಕಿ ಇಟ್ಟರು. ಕಂಠೀರವ ಸ್ಟುಡಿಯೊವನ್ನು ಗೊರಗುಂಟೆಪಾಳ್ಯದಿಂದ ಸಂಪರ್ಕಿಸುವ ಹಾದಿಯ ಮಧ್ಯ ಇದ್ದ ಪೆಟ್ರೋಲ್ ಬಂಕ್ಗೂ ಬೆಂಕಿ ಇಟ್ಟರು. ಪೊಲೀಸರು ವಿಧಿಯಿಲ್ಲದೆ ಉನ್ಮತ್ತರಾದವರ ಮೇಲೆ ಗುಂಡು ಹಾರಿಸಬೇಕಾಯಿತು.

ನಿಜವಾದ ಅಭಿಮಾನಿಗಳೂ ದುಷ್ಕರ್ಮಿಗಳ ಕೃತ್ಯಗಳಿಂದಾಗಿ ಜೀವತೆತ್ತರು. ಎಂಟು ಶವಗಳ ಲೆಕ್ಕ ಪೊಲೀಸರಿಗೆ ಸಿಕ್ಕಿತು. ಕಂಠೀರವ ಸ್ಟುಡಿಯೊ ಆವರಣದ ಗೇಟಿನ ಬಗಲಲ್ಲೇ ಅಭಿಮಾನದ ಉನ್ಮಾದ ಹೊತ್ತು ಎಲ್ಲೆಲ್ಲಿಂದಲೋ ಬಂದಿದ್ದ ತರುಣರ ಶವಗಳನ್ನು ಪೊಲೀಸರು ಎಳೆದುಹಾಕಿದ್ದರು.

ಈ ಎಲ್ಲ ವಿದ್ಯಮಾನಗಳ ಅರಿವಿರುವುದು ಹಾಗಿರಲಿ, ರಾಜ್ಕುಮಾರ್ ಅವರ ಮುಖವನ್ನೇ ಸರಿಯಾಗಿ ಅವರ ಕುಟುಂಬದವರಿಗೆ ನೋಡಲು ಆ ದಿನ ಸಾಧ್ಯವಾಗಲಿಲ್ಲ. ಅಂತಿಮ ಸಂಸ್ಕಾರ ನಡೆದದ್ದೂ ತರಾತುರಿಯಲ್ಲಿ. ಆ ದಿನ ರಾತ್ರಿ ಪೊಲೀಸರಲ್ಲದೆ ಒಂದಿಷ್ಟು ಸ್ವಯಂ ಸೇವಕರೂ ರಾಜ್ಕುಮಾರ್ ಅವರನ್ನು ಮಣ್ಣುಮಾಡಿದ ಜಾಗದಲ್ಲಿ ಉಳಿದುಕೊಂಡು, ಕಾವಲಿಗೆ ನಿಂತರು.

’ನಮಗೆ ಸರಿಯಾಗಿ ಅಪ್ಪಾಜಿ ಮುಖವನ್ನು ನೋಡುವ ಅವಕಾಶವೂ ಸಿಗಲಿಲ್ಲ. ಅಂತಿಮ ಸಂಸ್ಕಾರ ಈ ಜಾಗದಲ್ಲಿ ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಾಗ ಒಪ್ಪಿದೆವು. ಉಳಿದ ಗಲಭೆಗಳ ಬಗ್ಗೆ ಏನೊಂದು ಕಲ್ಪನೆ ಇರಲಿಲ್ಲ. ಅಪ್ಪಾಜಿ ಅವರ ಅಂತ್ಯಸಂಸ್ಕಾರ ಆದಮೇಲೂ ಯಾರಾದರೂ ಅಲ್ಲಿಗೆ ನುಗ್ಗಿ ಶವವನ್ನು ಎಳೆದುಕೊಂಡು ಹೋದರೆ ಏನು ಗತಿ ಎಂಬ ಆತಂಕ ದಿನಗಟ್ಟಲೆ ನಮ್ಮನ್ನು ಕಾಡಿತ್ತು. ಯಾಕೆಂದರೆ, ಅವರು ಕೊನೆಯುಸಿರೆಳೆದ ಮೇಲೂ ಅವರನ್ನು ಒಮ್ಮೆ ನೋಡುವ ಅತೀವ ಉತ್ಸಾಹ ಇದ್ದ ಅಷ್ಟೊಂದು ಜನರನ್ನು ಆ ದಿನವೇ ನೋಡಿದ್ದು. ಆ ಜಾಗದಲ್ಲಿ ಒಂದಿಷ್ಟು ಜನ ನಿತ್ಯವೂ ಸರತಿಯ ಮೇಲೆ ಕಾಯುತ್ತಾ ಕೂತದ್ದು ನಮಗೆಲ್ಲ ತುಸು ಸಮಾಧಾನ ತಂದಿತು‘ ಎಂದು ರಾಘವೇಂದ್ರ ರಾಜ್ಕುಮಾರ್ 2006ರ ಮೇ ತಿಂಗಳಿನಲ್ಲಿ ಪ್ರತಿಕ್ರಿಯಿಸಿದ್ದರು.

ಬೇರೆ ರಾಜ್ಯಗಳ ಐಪಿಎಸ್ ಅಧಿಕಾರಿಗಳಿಗೆ ರಾಜ್ಕುಮಾರ್ ಇಂಥದೊಂದು ’ಸಾಂಸ್ಕೃತಿಕ ವಿದ್ಯಮಾನ‘ ಎನ್ನುವ ಸಣ್ಣ ಅಂದಾಜೂ ಇರಲಿಲ್ಲ. ಗಲಭೆಗಳು ನೋಡನೋಡುತ್ತಲೇ ಉಲ್ಬಣಿಸಿದ್ದು ಅವರ ಕಲ್ಪನೆಗೂ ಮೀರಿದ್ದಾಗಿತ್ತು. ಸ್ಥಳೀಯ ಪೊಲೀಸರ ಅಭಿಪ್ರಾಯಕ್ಕೆ ಅವರೆಲ್ಲ ಕಿವಿಗೊಡಲಿಲ್ಲ ಎಂಬ ಆರೋಪ ಕೂಡ ಆಗ ಕೇಳಿಬಂದಿತ್ತು.

ರಾಜ್ಕುಮಾರ್ ಅವರಿಗೆ ಕಂಠೀರವ ಸ್ಟುಡಿಯೊದಲ್ಲಿ ಸಮಾಧಿಗೆ ಸ್ಥಳ ಒದಗಿಸಿದ ಸರ್ಕಾರವು ವಿಷ್ಣುವರ್ಧನ್ ಅವರಿಗೆ ಯಾಕೆ ನೀಡಲಿಲ್ಲ ಎಂಬೊಂದು ಪ್ರಶ್ನೆ ಇಟ್ಟುಕೊಂಡು ಈಗ ಕೆಲವರು ಚರ್ಚೆ ನಡೆಸುತ್ತಿದ್ದಾರೆ. ಜನಪ್ರಿಯ ನಟರು ಮೃತಪಟ್ಟಾಗ ಹೇಗೆ ಎಷ್ಟೋ ನಿರ್ಧಾರಗಳು ಅವರ ಕುಟುಂಬದವರ ಒಪ್ಪಿಗೆ ಹಾಗೂ ಸರ್ಕಾರದ ನಿಲುವುಗಳಿಂದ ಹೊಮ್ಮುತ್ತವೆ ಎಂಬ ಅಂದಾಜು ಬಹುತೇಕರಿಗೆ ಇರಲಿಕ್ಕಿಲ್ಲ. ರಾಜ್ಕುಮಾರ್ ಮೃತಪಟ್ಟಾಗ ಅವರ ಮುಖವನ್ನು ದಿಟ್ಟಿಸಿ ನೋಡುತ್ತಾ ಕಣ್ಣೀರಾಗುವ ಅವಕಾಶದಿಂದಲೂ ವಂಚಿತರಾದ ಅವರ ಕುಟುಂಬದವರ ಬಿಕ್ಕು ಕೇಳುವುದಾದರೂ ಹೇಗೆ?

ರಾಜ್ಕುಮಾರ್ ನಿಧನರಾದ ನಂತರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವೊಂದು ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಸಾಹಿತಿ ಗಿರೀಶ ಕಾರ್ನಾಡರು ಅದ್ಭುತವಾಗಿ ಮಾತನಾಡಿದರು. ಜನರು ತಮ್ಮನ್ನು ತಾವು ರಾಜ್ಕುಮಾರ್ ಅವರೊಟ್ಟಿಗೆ ’ಕನೆಕ್ಟ್’ ಮಾಡಿಕೊಳ್ಳುವಂಥ ಸಾಂಸ್ಕೃತಿಕ ವಿದ್ಯಮಾನಗಳನ್ನು ಅವರು ಪರಾಮರ್ಶಿಸಿ ಮಾತಾಡಿದರು. ರಾಜ್ಕುಮಾರ್ ವರ್ತನೆ, ಭಾಷೆ, ನಡೆ–ನುಡಿ, ಹಾಡು, ಸರಳತೆ ಇವೆಲ್ಲವೂ ಕನ್ನಡಿಗರ ಪಾಲಿಗೆ ಮಾದರಿ ಆದದ್ದು ಹೇಗೆ ಎಂದು ಅರ್ಥೈಸಿದರು.

ರಾಜ್ ಅಗಲಿದ ಒಂದೂವರೆ ದಶಕದ ನಂತರ ಅವರ ಚಿಕ್ಕ ಮಗ ಪುನೀತ್ ರಾಜ್ಕುಮಾರ್ ದಿಢೀರನೆ ನಿಧನರಾದರು. ಆಗ ಕಂಡದ್ದು ’ಕೊಡುಗೈ ಕೆಲಸದ‘ ಬೇರೆಯದೇ ವಿದ್ಯಮಾನಗಳು. ರಾಜ್ಕುಮಾರ್ ಅಗಲಿದಾಗ ಪೊಲೀಸ್ ವ್ಯವಸ್ಥೆ ನಿಕಷಕ್ಕೆ ಒಳಗಾದಂತೆ, ಪುನೀತ್ ಮೃತಪಟ್ಟಾಗ ಆಗಲಿಲ್ಲ ಎನ್ನುವುದು ಇನ್ನೊಂದು ಸಾಂಸ್ಕೃತಿಕ ಪಾಠವೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.