ಶನಿವಾರ, ನವೆಂಬರ್ 23, 2019
17 °C

ದ್ರೋಣ ತೆರೆಗೆ ಸಿದ್ಧ

Published:
Updated:
Prajavani

ಸ್ಟಾರ್‌ ನಟರು ತಮ್ಮ ಇಮೇಜ್‌ನಿಂದ ಹೊರತಾದ ಪಾತ್ರಗಳಲ್ಲಿ ನಟಿಸುವುದು ಕಡಿಮೆ. ಆದರೆ, ನಟ ಶಿವರಾಜ್‌ಕುಮಾರ್‌ ಯಾವುದೇ ಇಮೇಜ್‌ಗೆ ಜೋತುಬಿದ್ದವರಲ್ಲ. ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಉಣ ಬಡಿಸುವುದಷ್ಟೇ ಅವರ ಕಾಯಕ.

ಸಾಮಾಜಿಕ ಕಾಳಜಿ ಇರುವ ಸಿನಿಮಾಗಳಲ್ಲಿ ನಟಿಸುವುದೆಂದರೆ ಅವರಿಗೆ ಬಹುಪ್ರೀತಿ. ಈಗ ಅವರು ಶಿಕ್ಷಣ ಅವ್ಯವಸ್ಥೆ ವಿರುದ್ಧ ‘ದ್ರೋಣ’ ಅಸ್ತ್ರದ ಪ್ರಯೋಗಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಆಕಾಶ್ ಸ್ಟುಡಿಯೊದಲ್ಲಿ ಈ ಚಿತ್ರದ ಹಿನ್ನೆಲೆ ಸಂಗೀತ ಪ್ರಕ್ರಿಯೆ ಪೂರ್ಣಗೊಂಡಿತು.

‘ದ್ರೋಣ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಪ್ರಮೋದ್ ಚಕ್ರವರ್ತಿ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರದು ಶಿಕ್ಷಕನ ಪಾತ್ರ. ಅವರ ಅಭಿಮಾನಿಗಳಿಗೆ ಇಷ್ಟವಾಗುವ ಕಮರ್ಷಿಯಲ್ ಅಂಶಗಳ ಮೇಲೆಯೇ ಸಿನಿಮಾ ಕಟ್ಟಲಾಗಿದೆಯಂತೆ. ಅವರು ಬೋಧನೆಗಷ್ಟೇ ಸೀಮಿತಗೊಂಡಿಲ್ಲ. ಹಾಸ್ಯ, ಆ್ಯಕ್ಷನ್ ಮತ್ತು ಸೆಂಟಿಮೆಂಟ್‍ ಕೂಡ ಇದೆ ಎನ್ನುವುದು ಚಿತ್ರತಂಡದ ವಿವರಣೆ. ಪ್ರತಿದಿನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಶಾಲೆಗಳ ಕಣ್ಣೀರ ಕಥೆಗಳು ಪ್ರಕಟಗೊಳ್ಳುತ್ತವೆ. ಆದರೆ, ರೆಗ್ಯುಲರ್‌ ಫಾರ್ಮೆಟ್‌ನಿಂದ ಹೊರತಾದ ಚಿತ್ರ ಇದು. ಜನರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಂಬೋಣ.

ಬಿ. ಮಹದೇವ, ಬಿ. ಸಂಗಮೇಶ್‌ ಮತ್ತು ಶೇಷು ಚಕ್ರವರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ಶೂಟಿಂಗ್‌ ನಡೆದಿರುವುದು ನೆಲಮಂಗಲ, ಹೆಸರಘಟ್ಟ, ಚನ್ನಪಟ್ಟಣ ಮತ್ತು ಎಚ್‌.ಎಂ.ಟಿ. ಪ್ಯಾಕ್ಟರಿಯಲ್ಲಿ. ಜೆ.ಎಸ್. ವಾಲಿ ಅವರ ಛಾಯಾಗ್ರಹಣವಿದೆ. ಚಿತ್ರದ ಐದು ಹಾಡುಗಳಿಗೆ ರಾಮ್ ಕ್ರಿಷ್ ಸಂಗೀತ ಸಂಯೋಜಿಸಿದ್ದಾರೆ. ಬಹುಭಾಷಾ ನಟಿ ಇನಿಯಾ ಈ ಚಿತ್ರದ ನಾಯಕಿ.

ಪ್ರತಿಕ್ರಿಯಿಸಿ (+)