ಸೋಮವಾರ, ಸೆಪ್ಟೆಂಬರ್ 20, 2021
23 °C

ಪ್ರಭಾವಳಿಯ ಹಂಗಿಲ್ಲದ ಪ್ರಯೋಗಮುಖಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಕೊಚ್ಚಿಯಲ್ಲಿ ಹುಟ್ಟಿದ ದುಲ್ಖರ್ ಸಲ್ಮಾನ್ ಓದಿದ್ದು ಚೆನ್ನೈನಲ್ಲಿ. ಹೀಗಾಗಿಯೇ ತಮಿಳು ಭಾಷೆಯೂ ಗೊತ್ತು. ಬಿಸಿನೆಸ್ ಹಾಗೂ ಫೈನಾನ್ಸ್ ವಿಷಯಗಳಲ್ಲಿ ಪದವಿ ಕಲಿಯಲೆಂದು ಹಾರಿದ್ದು ಪರ್ಡ್ಯೂ ವಿಶ್ವವಿದ್ಯಾಲಯಕ್ಕೆ. ಬಹುತೇಕ ಯುವಕರಂತೆ ದುಬೈನ ಫೈನಾನ್ಸ್ ಕಂಪನಿಯಲ್ಲಿ ಕೆಲಸವನ್ನೂ ಮಾಡಿದ ಅವರಿಗೆ ತನ್ನ ಕೆಲಸ ಅದಲ್ಲ ಅನ್ನಿಸಿತು.

ಮುಂಬೈನ ಬ್ಯಾರಿ ಜಾನ್ ಆಕ್ಟಿಂಗ್ ಸ್ಟುಡಿಯೊನಲ್ಲಿ ಅಭಿನಯದ ಕೋರ್ಸ್ ಸೇರಿದ್ದು 2010ರಲ್ಲಿ. 

ಇವನ್ನೆಲ್ಲ ಓದಿಕೊಂಡಾಗ ಇವರೂ ಮಾಮೂಲಿ ಸಿನಿಮಾ ಪ್ರೇಮಿ ಯುವಕ ಎಂದಷ್ಟೇ ಭಾವಿಸುತ್ತೇವೆ. ಮಲಯಾಳಂನ ಸೂಪರ್ ಸ್ಟಾರ್ ನಟ ಮಮ್ಮುಟ್ಟಿ ಮಗ ಎಂಬ ಗುಣವಿಶೇಷಣವನ್ನು ಪಕ್ಕಕ್ಕೆ ಸೇರಿಸಿಬಿಟ್ಟರೆ ದುಲ್ಖರ್ ಸಲ್ಮಾನ್ ಬಯೊಡೇಟಾ ಪೂರ್ತಿ ಬದಲಾಗಿ ಬಿಡುತ್ತದೆ.

ಬದುಕಿನ ಹಲವು ಮುಖಗಳನ್ನು ನೋಡಿದ ಮೇಲೆ ನಟನಾಗಬೇಕು ಎಂಬ ಕಿಚ್ಚು ಹತ್ತಿಸಿಕೊಂಡ ಅಪರೂಪದ ವ್ಯಕ್ತಿಯಾಗಿ ದುಲ್ಖರ್ ಕಡೆಗೆ ನೋಡಬೇಕಿದೆ. ಅವರು ಅಪ್ಪನ ಸ್ಟಾರ್‌ಗಿರಿಯನ್ನು ಉಜ್ಜಿಕೊಂಡು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರಲ್ಲ. ತನ್ನನ್ನು ತಾನು ತಿದ್ದಿಕೊಂಡೇ ಕ್ಯಾಮೆರಾಗೆ ಮುಖಾಮುಖಿಯಾದದ್ದು. ಅವರ ಮೊದಲ ಸಿನಿಮಾ ‘ಸೆಕೆಂಡ್ ಷೋ’ (ಮಲಯಾಳಂ) ನಿರ್ದೇಶಕ ಶ್ರೀನಾಥ್ ರಾಜೇಂದ್ರನ್ ಅವರ ಸಿನಿಮಾ ಮಾಡಲು ಸಹಿ ಹಾಕಿದ್ದು 2012ರಲ್ಲಿ. ದುಲ್ಖರ್ ತಾವಷ್ಟೇ ಅಲ್ಲದೆ ನಿರ್ದೇಶಕನನ್ನೂ ಸಾಣೆಗೆ ಒಡ್ಡಿಕೊಳ್ಳಲು ಅವಕಾಶ ಕೊಟ್ಟರು. ಅಕ್ರಮ ಮರಳುಗಾರಿಕೆ ದಂಧೆ ಮಾಡುವ ನಾಯಕ ಡಾನ್ ಆಗುವವರೆಗೆ ಕಥನದ ವಿಸ್ತಾರ ಇದ್ದ ಸಿನಿಮಾ ‘ಸೆಕೆಂಡ್ ಷೋ’. ಸಿನಿಮಾ ತಯಾರಾದದ್ದು ಬರೀ ಎರಡೂವರೆ ಕೋಟಿ ರೂಪಾತಿ ಬಜೆಟ್‌ನಲ್ಲಿ. ಅಪ್ಪನಿಗೆ ಮಗನನ್ನು ದೊಡ್ಡಮಟ್ಟದಲ್ಲಿ ಮುಂಚೂಣಿಗೆ ತರಬೇಕು ಎಂಬ ತೆವಲೇನೂ ಇರಲಿಲ್ಲ. ದೊಡ್ಡ ನಿರ್ದೇಶಕರ ಕೈಗೆ ಮಗನ ಜುಟ್ಟನ್ನು ಕೊಟ್ಟು, ‘ನೀವೇ ಉದ್ಧರಿಸಿ’ ಎಂದು ಹೇಳುವವರ ಪೈಕಿಯೂ ಅವರಲ್ಲ.

ಹೀಗೆ ಮೊದಲಿನಿಂದಲೂ ದುಲ್ಖರ್ ಪ್ರಯೋಗ ಮುಖಿಯಾದದ್ದರ ಫಲವೇ ಅವರಿಂದು ಭಾರತದ ಯುವ ಐಕಾನ್ ನಟರಲ್ಲಿ ಒಬ್ಬರೆನಿಸಿರುವುದು. ‘ಉಸ್ತಾದ್ ಹೋಟೆಲ್’ ಸಿನಿಮಾದಲ್ಲಿ ಅಡುಗೆಯವನಾಗುವ ಹೆಬ್ಬಯಕೆ ಇಟ್ಟುಕೊಂಡ ಪಾತ್ರಕ್ಕೆ ಜೀವ ತುಂಬಿದ ಮೇಲೆ ಮಲಯಾಳ ಚಿತ್ರರಂಗ ಅವರತ್ತ ಬೆರಗುಗಣ್ಣಿನಿಂದ ನೋಡಿತು.

ಸದಾ ಹಸನ್ಮುಖಿಯಂತೆ ಕಾಣುವ ಈ ನಟ ಎಂದೂ ದೇಹವನ್ನು ಹುರಿಗಟ್ಟಿಸಲಿಲ್ಲ. ಹಾಗಂತ ಹೊಟ್ಟೆಯನ್ನೂ ಬೆಳೆಸಿಕೊಳ್ಳಲಿಲ್ಲ. ತಣ್ಣಗಿನ ಚಹರೆಯ ಈ ಹುಡುಗನನ್ನು ಕರೆದುಕೊಂಡು ಬಂದು ಮಣಿರತ್ನಂ ಲಿವ್-ಇನ್ ಸಂಬಂಧದ ಕಥನದ ‘ಕಾದಲ್ ಕಣ್ಮಣಿ’ ತಮಿಳು ಸಿನಿಮಾ ನಿರ್ದೇಶಿಸಿದರು. ನಿತ್ಯಾ ಮೆನನ್ ಹಾಗೂ ದುಲ್ಖರ್ ಇಬ್ಬರ ಜಗಳ್ ಬಂದಿ-ಜುಗಲ್ ಬಂದಿ ಎರಡೂ ದೇಶದ ಉದ್ದಗಲದ ಯುವಕರಿಗೆ ಹಿಡಿಸಿತು. ಇದೇ ಸಿನಿಮಾ ಹಿಂದಿಗೆ ರೀಮೇಕ್ ಆಯಿತೆನ್ನುವುದೂ ಹೆಗ್ಗಳಿಕೆ.

ಜನರ ನಡುವಿನ ಪ್ರತಿನಿಧಿಯಂಥ ಪಾತ್ರಗಳನ್ನೇ ನಟಿಸುತ್ತಾ ಬಂದ ದುಲ್ಖರ್ ಆರು ವರ್ಷದ ಅವಧಿಯಲ್ಲಿ ಅಬ್ಬರವಿಲ್ಲದಂತೆ ಸ್ಟಾರ್ ಆಗಿಬಿಟ್ಟರು. ‘ಬ್ಯಾಂಗಲೋರ್ ಡೇಸ್’ ಮಲಯಾಳ ಸಿನಿಮಾ ಬಂದಾಗ ಬೆಂಗಳೂರಿನ ಪಡ್ಡೆಗಳೂ ಈ ಹುಡುಗನನ್ನು ಮೆಚ್ಚುಗೆಯ ನೋಟದಿಂದ ನೋಡಿದ್ದಿದೆ.

ಅಪ್ಪನ ಪ್ರಭಾವಳಿಯಿಂದ ಆಚೆ ಬಂದು, ಹೊಸ ನಿರ್ದೇಶಕರ ಕನಸುಗಳನ್ನು ಮಾರಾಟ ಮಾಡುವ ನಟನಾಗಿ ಬೆಳೆದಿರುವ ದುಲ್ಖರ್ ಈಗ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾಗಿದೆ. ‘ಕಾರ್ವಾ’ ಅವರ ಅಭಿನಯದ ಮೊದಲ ಹಿಂದಿ ಚಲನಚಿತ್ರ. ಮಾಗಿದ ನಟ ಇರ್ಫಾನ್ ಖಾನ್ ಸಾಥ್‌ನಲ್ಲಿ ನಟಿಸಿರುವುದು ಇನ್ನೊಂದು ವಿಶೇಷ.

ದಕ್ಷಿಣ ಭಾರತದ ಸ್ಟಾರ್ ನಟರು ಅಬ್ಬರ, ಸದ್ದುಗಳಿಂದಲೇ ಬೆಳಗಿರುವ ಉದಾಹರಣೆಗಳ ಮಧ್ಯೆ ದುಲ್ಖರ್ ವಿಭಿನ್ನ ಎನಿಸುವುದೇ ಈ ಎಲ್ಲ ಕಾರಣಗಳಿಂದ. ಈಗ ಹೊಸ ತಲೆಮಾರಿನ ಹುಡುಗರು, ‘ದುಲ್ಖರ್ ತಂದೆ ಮುಮ್ಮಟ್ಟಿ ಕೂಡ ದೊಡ್ಡ ನಟರಂತೆ’ ಎಂದು ಉದ್ಗರಿಸಿರುವ ಸುದ್ದಿಯಾಗಿದೆ. ಅದನ್ನು ಕೇಳಿ ಮುಮ್ಮಟ್ಟಿ ಕೂಡ ಪುಳಕಗೊಂಡಿರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು