ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಲಗ' ಬಂತು ದಾರಿ ಬಿಡಿ

ದುನಿಯಾ ವಿಜಯ್ ಹೊಸ ಅವತಾರದಲ್ಲಿ
Last Updated 21 ನವೆಂಬರ್ 2019, 19:45 IST
ಅಕ್ಷರ ಗಾತ್ರ

‘ಸಲಗ’ ಚಿತ್ರದ ಮೂಲಕ ನಟ ‘ದುನಿಯಾ’ ವಿಜಯ್‌ ನಿರ್ದೇಶಕನ ಟೊಪ್ಪಿಗೆ ಧರಿಸಿದ್ದಾರೆ. ಗಟ್ಟಿಯಾದ ಕಥೆ ಹಾಗೂ ಮೇಕಿಂಗ್‌ನಿಂದಲೇ ಕುತೂಹಲ ಹೆಚ್ಚಿಸಿರುವ ಇದರ ಅಂತಿಮ ಹಂತದ ಶೂಟಿಂಗ್‌ ನಡೆಯುತ್ತಿದೆ. ಜನವರಿಗೆ ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು

‘ದುನಿಯಾ’ ಚಿತ್ರ ಮಾಡುವಾಗ ನನ್ನಲ್ಲಿ ಇದ್ದದ್ದು ಕನಸಷ್ಟೆ. ಅದೊಂದು ಕಾಲ. ನನ್ನ ಬಳಿ ಏನೊಂದು ಇರಲಿಲ್ಲ. ಆಗ ಬದುಕು ತುಂಬಾ ಚೆನ್ನಾಗಿತ್ತು. ಈಗ ಚೆನ್ನಾಗಿದ್ದುದು ಏನೇನೊ ಆಗಿ ಹೋಯಿತು. ಕನಸು ನನಸಾದ ಪಯಣದಲ್ಲಿ ನಮಗೆ ಅರಿವು ಇಲ್ಲದೆಯೇ ಏನೆಲ್ಲಾ ನಡೆದುಹೋಗುತ್ತದೆ. ಬದುಕಿನಲ್ಲಿ ಇದೆಲ್ಲಾ ಆಗುತ್ತದೆಯೇ ಎಂಬ ಪ್ರಶ್ನೆ ನನಗೆ ಕಾಡುತ್ತಿರುತ್ತದೆ. ಆದರೆ, ಆ ಘಟನೆಗಳ ಬಗ್ಗೆ ನನಗೆ ನೋವಿಲ್ಲ. ಉಳಿದಿರುವುದು ಆಶ್ಚರ್ಯಕರ ಚಿಹ್ನೆ ಮಾತ್ರ’

–ನಟನಾ ವೃತ್ತಿಯ ಮಹತ್ವದ ತಿರುವಿನಲ್ಲಿರುವ ನಟ ವಿಜಯ್ ಅವರು ‘ದುನಿಯಾ’ವನ್ನು ನೆನಪಿಸಿಕೊಂಡಿದ್ದು ಹೀಗೆ. ‘ಸಲಗ’ ಚಿತ್ರದ ಮೂಲಕ ತಮ್ಮೊಳಗಿನ ನಿರ್ದೇಶನದ ಪ್ರತಿಭೆಯ ಅನಾವರಣಕ್ಕೆ ಅವರು ಮುಂದಾಗಿದ್ದಾರೆ.

ಅವರೊಳಗೆ ನಿರ್ದೇಶನದ ಆಸೆ ಚಿ‌ಗುರೊಡೆದ ಹಿಂದೆ ಒಂದು ಕಥೆ ಇದೆ. ‘ಸಂಭಾಷಣೆಕಾರ ಮಾಸ್ತಿ ಮತ್ತು ನಾನು ಬಹುಕಾಲದ ಗೆಳೆಯರು. ನಾನೊಂದು ಕಥೆ ಹೊಸೆದೆ. ಅದರ ಬಗ್ಗೆ ಮಾಸ್ತಿ ಬಳಿ ಹಂಚಿಕೊಂಡೆ. ಎಂದಿಗೂ ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ಬೇರೊಬ್ಬರು ನೋಡಿದಾಗಲೇ ಅದರ ಸ್ಥಿತಿಗತಿ ಅರ್ಥವಾಗುತ್ತದೆ. ನನಗೂ ಸಿನಿಮಾ ನಿರ್ದೇಶಿಸುವ ಆಸೆಯಿತ್ತು. ಈ ಕಥೆಗೆ ಆ್ಯಕ್ಷನ್‌ ಕಟ್‌ ಹೇಳಬಹುದೇ ಎಂದು ಮಾಸ್ತಿಗೆ ಕೇಳಿದೆ. ಡೈರೆಕ್ಷನ್‌ ಮಾಡು ಎಂದು ಆತ್ಮಸ್ಥೈರ್ಯ ತುಂಬಿದ. ಆಗಲೇ, ಸಲಗ ನಡೆಯಲು ಶುರುವಾಗಿದ್ದು’ ಎಂದು ವಿವರಿಸುತ್ತಾರೆ.

ಭೂಗತಲೋಕದ ಸುತ್ತ ‘ಸಲಗ’ ಕಥೆ ಹೆಣೆಯಲಾಗಿದೆ. ‘ಅಮಾಯಕರಿಗೆ ಅನ್ಯಾಯವಾಗಬಾರದು’ ಎನ್ನುವುದೇ ಇದರ ಕಥೆಯ ಎಳೆ. ಒಂದಷ್ಟು ಕಟು ಸತ್ಯವನ್ನು ಬಿಚ್ಚಿಡಲು ವಿಜಿ ಹೊರಟಿದ್ದಾರಂತೆ. ‘ಸಮಾಜದಲ್ಲಿನ ವಾಸ್ತವ ಬಿಚ್ಚಿಡುವ ಕೆಲಸ ಮಾಡುತ್ತಿದ್ದೇನೆ’ ಎಂದು ದೃಢವಾಗಿ ಹೇಳುತ್ತಾರೆ.

‘ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಬಹುತೇಕರು ಅಮಾಯಕರಿರುತ್ತಾರೆ. ನಾವು ಅವರಿಗೆ ಮುಗ್ಧರು ಎಂದು ಕರೆಯುತ್ತೇವೆ. ಚಿತ್ರದಲ್ಲಿ ಅಮಾಯಕ ಕ್ರಿಮಿನಲ್‌ ಒಬ್ಬನ ಕಥೆ ಹೇಳುತ್ತಿದ್ದೇನೆ. ನನ್ನ ಹಿಂದಿನ ಚಿತ್ರಗಳಿಗೂ ಇದಕ್ಕೂ ವ್ಯತ್ಯಾಸವಿದೆ. ಇದು ರೆಗ್ಯುಲರ್‌ ಫಾರ್ಮೆಟ್‌ನ ಚಿತ್ರವಲ್ಲ. ಸಂಪೂರ್ಣ ವಿಭಿನ್ನವಾದ ಚಿತ್ರ’ ಎಂದು ಕಥೆಯ ಬಗ್ಗೆ ಕುತೂಹಲದ ಬೀಜ ಬಿತ್ತುತ್ತಾರೆ.

ಸಿನಿಮಾದ ಕಥೆ ಬಗ್ಗೆ ಅವರು ವಿವರಿಸುವುದು ಹೀಗೆ: ‘ನಾನು ಕಂಡ ಒಂದಷ್ಟು ಜಗತ್ತು ಈ ಚಿತ್ರದಲ್ಲಿದೆ. ಇದು ನನ್ನ ವೈಯಕ್ತಿಕ ಜಗತ್ತಲ್ಲ. ನಾನು ನೋಡಿರುವ ಸಮಾಜ ಮತ್ತು ಅದರೊಟ್ಟಿಗಿನ ನನ್ನ ಅನುಭವವೇ ಇದರ ತಿರುಳು’.

‘ನಾನೂ ಸೇರಿದಂತೆ ಬಹುತೇಕರ ಹುಟ್ಟೂರು ಬೆಂಗಳೂರು ಅಲ್ಲ. ನನ್ನ ಮೂಲ ಆನೇಕಲ್‌. ನಾವೆಲ್ಲ ಬೆಂಗಳೂರಿಗೆ ವಲಸೆ ಬಂದಿದ್ದೇವೆ. ವಲಸೆ ಬಂದಿರುವವರ ಮಧ್ಯೆಯೇ ವಿದ್ಯಾವಂತ, ಅವಿದ್ಯಾವಂತ, ಬಲಹೀನ, ಶಕ್ತಿವಂತ ಎಂದು ವಿಂಗಡಿಸಿಕೊಂಡು ಬದುಕುತ್ತಿರುತ್ತೇವೆ.ನಾನು ಅದನ್ನೇ ನಿಜವಾದ ‘ಜಾತಿ’ ಎಂದು ಕರೆಯುವುದು. ವಲಸೆ ಬಂದವರು ಶರಣಾಗಿ ಬದುಕಲು ಇಷ್ಟಪಡುತ್ತಾರೆ. ಅವರಿಗೆ ಕಾಯಕವೇ ದೇವರು. ಆದರೆ, ಅವರಿಂದ ಕೆಲಸ ಮಾಡಿಸಿಕೊಳ್ಳುವವರು ಹೇಗೆ ಅವರನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎನ್ನುವುದೇ ಈ ಚಿತ್ರದ ಕಥಾಹಂದರ’ ಎಂದು ಮಾಹಿತಿ ನೀಡುತ್ತಾರೆ.

ವಿಜಯ್‌ಗೆ ನಟನೆ ಮತ್ತು ನಿರ್ದೇಶನದ ನಡುವಿನ ಸ್ಪಷ್ಟ ಅರಿವು ಇದೆ. ‘ನನ್ನೆಲ್ಲಾ ಅನುಭವದ ಮೂಸೆಯಲ್ಲಿ ಅರಳಿರುವುದೇ ನಿರ್ದೇಶನ. ನಟನೆ ನನ್ನ ವೃತ್ತಿ ಅಷ್ಟೇ. ಈ ವೃತ್ತಿಗೆ ನಿರ್ದೇಶಕ ಎಂಬ ಮತ್ತೊಂದು ರೆಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ’ ಎಂದು ತುಟಿಯಂಚಿನಲ್ಲಿ ನಗು ಉಕ್ಕಿಸುತ್ತಾರೆ.

‘ಡಾಲಿ’ ಖ್ಯಾತಿಯ ನಟ ಧನಂಜಯ್‌ ಅವರದು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ. ಸೂಜಿಗಲ್ಲಿನಂತೆ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಅದಕ್ಕಿದೆಯಂತೆ. ‘ಧನಂಜಯ್‌ ಉತ್ತಮ ನಟ. ಆತನಿಗೂ ಪಾತ್ರದ ಬಗ್ಗೆ ತುಂಬಾ ಖುಷಿಯಾಗಿದೆ. ಅಷ್ಟು ಹೊರತಾಗಿ ಉಳಿದದ್ದನ್ನು ಸಿಕ್ರೇಟ್‌ ಆಗಿ ಇಟ್ಟಿದ್ದೇವೆ’ ಎನ್ನುತ್ತಾರೆ ಅವರು. ‘ಟಗರು’ ಚಿತ್ರದ ತಂತ್ರಜ್ಞ ತಂಡವೇ ‘ಸಲಗ’ದಲ್ಲೂ ಕೆಲಸ ಮಾಡುತ್ತಿದೆ. ಹಾಗಾಗಿ, ಚಿತ್ರತಂಡದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ. ‘ಟಗರು ತಂಡವೇ ಇಲ್ಲಿ ಮಾಡುತ್ತಿರುವುದಕ್ಕೆ ವಿಶೇಷವೇನಿಲ್ಲ. ಇಲ್ಲಿ ಸಲಗ ಇದೆ ಅಷ್ಟೇ. ‘ಟಗರು 2’ ಹಾಗೂ ‘ಸಲಗ 2’ ಸಿನಿಮಾವೂ ಬರಲಿ ಎನ್ನುವುದೇ ನನ್ನಾಸೆ’ ಎನ್ನುತ್ತಾರೆ ವಿಜಯ್‌. ಅವರಿಗೆ ಐತಿಹಾಸಿಕ ಪಾತ್ರದಲ್ಲಿ ನಟಿಸುವ ಆಸೆ ಇದೆಯಂತೆ. ಈ ನಿಟ್ಟಿನಲ್ಲಿ ಒಂದು ಅವಕಾಶವೂ ಬಂದಿದೆಯಂತೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ ಎನ್ನುವುದು ಅವರ ಸ್ಪಷ್ಟನೆ.

‘ಕಲಾವಿದನಿಗೆ ದುರಾಸೆ ಹೆಚ್ಚು. ಎಲ್ಲಾ ಪಾತ್ರಗಳನ್ನೂ ನಾನೇ ಮಾಡಬೇಕೆಂಬ ಆಸೆ ಸಹಜ. ಐತಿಹಾಸಿಕ ಪಾತ್ರದಲ್ಲಿ ನಟಿಸುವ ಆಸೆಯಂತೂ ಇದೆ. ಆದರೆ, ‘ಸಲಗ’ದ ಟೆನ್ಷನ್‌ ಮುಗಿಯಬೇಕು. ಇದರ ಬಳಿಕ ‘ಕುಸ್ತಿ’ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT