ಶುಕ್ರವಾರ, ಸೆಪ್ಟೆಂಬರ್ 25, 2020
23 °C

ವೇಶ್ಯೆ ಪಾತ್ರದ ಕನವರಿಕೆಯಲ್ಲಿ ಇಶಾ ರೆಬ್ಬಾ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

‘ನಿಮ್ಮ ಕನಸಿನ ಪಾತ್ರ ಯಾವುದು’ ಎಂದರೆ ಬಹಳಷ್ಟು ನಟೀಮಣಿಯರು ಹೇಳುವ ಸಿದ್ಧ ಉತ್ತರ ವೇಶ್ಯೆ ಅಥವಾ ಮಾನಸಿಕ ಅಸ್ವಸ್ಥೆ. ವೇಶ್ಯೆ ಪಾತ್ರ ತೀರಾ ಸಂಕೀರ್ಣವಾದುದು. ತನ್ನ ಬದುಕನ್ನು ಒಂದು ಕಡೆಯಿಂದ ಬಿಚ್ಚುತ್ತಾ, ಮತ್ತೊಂದು ಕಡೆಯಿಂದ ಅದೇ ಬದುಕನ್ನು ಕಟ್ಟುತ್ತಾ ಸಾಗುವ ಈ ಪಾತ್ರವನ್ನು ಪರದೆ ಮೇಲೆ ನಿಭಾಯಿಸುವುದು ಅಷ್ಟೊಂದು ಸುಲಭವಲ್ಲ. ಕಪ್ಪು ಛಾಯೆಯುಳ್ಳ ಈ ಪಾತ್ರವನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳುವ ನಟಿಯರ ಸಂಖ್ಯೆ ವಿರಳ.

ಕೆಲವು ನಟಿಯರು ತಮಗೆ ಇಂಥದ್ದೇ ಪಾತ್ರ ಬೇಕೆಂದು ನಿರ್ದೇಶಕರು ಮತ್ತು ನಿರ್ಮಾಪಕರ ಮೇಲೆ ಒತ್ತಡ ಹೇರುತ್ತಾರೆ. ಆದರೆ, ವೇಶ್ಯೆಯ ಪಾತ್ರ ನಿಭಾಯಿಸಲು ಬಂದಾಗ ಹಿಂದಡಿ ಇಡುವುದೇ ಹೆಚ್ಚು. ಆದರೆ, ಕೆಲವು ಸ್ಟಾರ್‌ನಟಿಯರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ನಟನೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿರುವುದು ಉಂಟು. ವೇಶ್ಯೆಯ ಪಾತ್ರದ ಮೂಲಕ  ಹೆಣ್ಣಿನ ಆತ್ಮಗೌರವ ಮತ್ತು ಘನತೆಯನ್ನು ಹೇಳಲು ಹೊರಟ ನಿರ್ದೇಶಕರ ಪ್ರಯತ್ನವೂ ಯಶಸ್ಸು ಕಂಡಿದೆ. ಇದಕ್ಕೆ ಹಲವು ಸಿನಿಮಾಗಳು ಇಂದಿಗೂ ನಿದರ್ಶನವಾಗಿವೆ. 

ಬಾಲಿವುಡ್‌ ನಟಿ ರಾಣಿ ಮುಖರ್ಜಿ ‘ಲಾಗಾ ಚುನಾರಿ ಮೇ ದಾಗ್’ ಚಿತ್ರದಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ‘ಚಮೇಲಿ’ ಚಿತ್ರದಲ್ಲಿ ಕರೀನಾ ಕಪೂರ್‌ ಕೂಡ ನಿಭಾಯಿಸಿದ್ದು ಅದೇ ಪಾತ್ರ. ‘ದೇವದಾಸ್‌’ ಚಿತ್ರದಲ್ಲಿ ಮಾಧುರಿ ದೀಕ್ಷಿತ್‌ ನಟಿಸಿದ ಚಂದ್ರಮುಖಿ ಎಂಬ ವೇಶ್ಯೆಯ ಪಾತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿತ್ತು. ‘ಬೇಗಂ ಜಾನ್‌‘ ಚಿತ್ರದಲ್ಲಿ ವಿದ್ಯಾ ಬಾಲನ್‌ ನಿಭಾಯಿಸಿದ ಪಾತ್ರವು ಇಂದಿಗೂ ಜನಮಾನಸದಲ್ಲಿದೆ.

ಬಾಲಿವುಡ್‌ನಲ್ಲಿ ಜೀನತ್‌ ಅಮ್ಮಾನ್‌, ರೇಖಾ, ಸ್ಮಿತಾ ಪಾಟೀಲ್, ಶಬನಾ ಅಜ್ಮಿ, ಮನಿಶಾ ಕೊಯಿರಾಲ, ಸುಶ್ಮಿತಾ ಸೇನ್, ಟಬು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾವಿತ್ರಿ, ಲಕ್ಷ್ಮಿ, ಜಯಸುಧಾ, ಜಯಪ್ರದಾ, ಲಕ್ಷ್ಮಿ, ಅನುಷ್ಕಾ ಶೆಟ್ಟಿ, ಹರಿಪ್ರಿಯಾ ಬೆಳ್ಳಿತೆರೆಯ ಮೇಲೆ ವೇಶ್ಯೆಯ ಪಾತ್ರಕ್ಕೆ ಜೀವ ತುಂಬಿ ಹೆಣ್ಣಿನ ಅಂತರಂಗವನ್ನು ತೆರೆದಿರುವ ಪ್ರಯತ್ನ ಮಾಡಿದ್ದಾರೆ. 

ಈಗ ಟಾಲಿವುಡ್‌ ನಟಿ ಇಶಾ ರೆಬ್ಬಾ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಅವರು ಸಿನಿಮಾದಲ್ಲಿ ಈ ಪಾತ್ರ ನಿರ್ವಹಿಸುತ್ತಿಲ್ಲ. ಈ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿರುವುದು ನಿರ್ದೇಶಕ ಸಂಪತ್‌ ನಂದಿ ಅವರ ಸಹಾಯಕ ನಿರ್ದೇಶಕ ಅಶೋಕ್‌ ನಿರ್ದೇಶನದ ವೆಬ್‌ ಸರಣಿಯಲ್ಲಿ.

ನಗರ ಬದುಕಿನಲ್ಲಿ ವೇಶ್ಯೆ ಅನುಭವಿಸುವ ತವಕ, ತಲ್ಲಣವೇ ಈ ಸರಣಿಯ ಹೂರಣ. ಈ ಸರಣಿಯು ಜೀ5ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇಶಾ ರೆಬ್ಬಾಗೆ ವೆಬ್‌ ಸರಣಿ ಹೊಸದೇನಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಲಸ್ಟ್‌ ಸ್ಟೋರಿಸ್’ ಸರಣಿಯಲ್ಲೂ ಆಕೆ ನಟಿಸಿದ್ದರು. ಅದರಲ್ಲಿ ಅವರು ಬೋಲ್ಡ್‌ ಆಗಿ  ಕಾಣಿಸಿಕೊಂಡಿದ್ದರು. ಈಗ ಮತ್ತೆ ಅಂತಹದ್ದೇ ಪಾತ್ರದಲ್ಲಿ ನಟಿಸಲು ಆಕೆಗೆ ಅವಕಾಶ ಹುಡುಕಿಕೊಂಡು ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು