ಗುರುವಾರ , ಅಕ್ಟೋಬರ್ 17, 2019
24 °C

ಸೃಜನ್ ಲೋಕೇಶ್ ಕನಸಿನ ಕೂಸು 'ಎಲ್ಲಿದ್ದೆ ಇಲ್ಲಿ ತನಕ'

Published:
Updated:

ಅದು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿ. ನಟ ಸೃಜನ್‌ ಲೋಕೇಶ್‌ ಅವರ ಮೊಗದಲ್ಲಿ ಶ್ರದ್ಧೆಯಿಂದ ದೊಡ್ಡ ಕೆಲಸವೊಂದನ್ನು ಮಾಡಿ ಮುಗಿಸಿದ ನಿರಾಳಭಾವವಿತ್ತು. ಪ್ರೇಕ್ಷಕರ ಮಡಿಲಿಗೆ ತನ್ನ ಕನಸಿನ ಕೂಸನ್ನು ಇಡುತ್ತಿರುವ ಖುಷಿಯೂ ಎದ್ದುಕಾಣುತ್ತಿತ್ತು.

ಮೊದಲ ಬಾರಿಗೆ ಸಿನಿಮಾ ನಿರ್ಮಾಪಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರಲ್ಲಿ ದುಗುಡವೂ ಕಾಣುತ್ತಿತ್ತು. ಮೈಕ್‌ ಕೈಗೆತ್ತಿಕೊಂಡ ಸೃಜಾ ಅವರು ಮಾತುಗಳು ಇದಕ್ಕೆ ಪುಷ್ಟಿ ನೀಡಿದವು. ‘ಬಂಡವಾಳ ಹೂಡುವುದಕ್ಕೆ ನನಗೆ ಚಿಂತೆಯಿಲ್ಲ. ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ, ದುಗುಡ ಶುರುವಾಗಿದೆ’ ಎಂದರು. ಬಳಿಕ ಅವರ ಮಾತು ತನ್ನ ತಾತ ಸುಬ್ಬಯ್ಯನಾಯ್ಡು ಅವರ ಕಷ್ಟದ ದಿನಗಳತ್ತ ಹೊರಳಿತು.


ಸೃಜನ್ ಲೋಕೇಶ್‌ ಮತ್ತು ಹರಿಪ್ರಿಯಾ

‘ನನ್ನ ತಾತನ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಪಡೆಯುವ ಆಸೆಯಿದೆ. ಅವರು ತನ್ನ  ಕೊನೆಗಾಲದಲ್ಲಿ ಕಷ್ಟದಲ್ಲಿದ್ದರು. ಅಪ್ಪನಿಗೂ (ಲೋಕೇಶ್) ಸಿನಿಮಾ ನಿರ್ಮಾಣ ಮಾಡುವಾಗ ರಕ್ತದೊತ್ತಡ ಹೆಚ್ಚಾಗಿತ್ತು ಎಂದು ತಿಳಿದಿದ್ದೆ. ಶೀರ್ಷಿಕೆಯಂತೆ ನಾನು ಸಿನಿಮಾರಂಗದಲ್ಲಿಯೇ ಇರುತ್ತೇನೆ; ಇದೇ ನನಗೆ ಸ್ವರ್ಗ’ ಎಂದರು ಸೃಜಾ.

ನಟಿ ಗಿರಿಜಾ ಲೋಕೇಶ್ ಅವರು ಸೃಜನ್‌ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ‘ಸೃಜಾ ನನಗೂ ಮತ್ತು ಲೋಕೇಶ್‌ಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ. ಇಬ್ಬರಿಗೂ ಶೂಟಿಂಗ್‍ಗೆ ಹೋಗಲು ಬಿಡುತ್ತಿರಲಿಲ್ಲ. ಎಂತಹ ಮಗ ಹುಟ್ಟಿದ ಎಂದು ಬೇಸರವಾಗಿತ್ತು. ಈಗ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಭಾವುಕರಾದರು.

ನಟಿ ತಾರಾ ಅವರು ಚಿತ್ರದಲ್ಲಿ ಸೃಜಾನ ತಾಯಿಯಾಗಿ ಬಣ್ಣ ಹಚ್ಚಿದ್ದಾರೆ. ‘ಸಿನಿಮಾ ಸುಂದರವಾಗಿ ಮೂಡಿಬಂದಿದೆ’ ಎಂದಷ್ಟೇ ಹೇಳಿದರು. ನಾಯಕಿ ಹರಿಪ್ರಿಯಾ, ‘ಸೃಜನ್‌ಗೆ ಈ ಸಿನಿಮಾ ದೊಡ್ಡ ಹೆಸರು ತಂದುಕೊಡಲಿದೆ. ಅವರಲ್ಲಿನ ಶ್ರದ್ಧೆ, ಪ್ರಾಮಾಣಿಕತೆಯಿಂದ ಚಿತ್ರಕ್ಕೆ ಒಳ್ಳೆಯದಾಗುತ್ತದೆ’ ಎಂದು ಆಶಿಸಿದರು.

‘ಸಿನಿಮಾ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಲೋಕೇಶ್‌ ಪ್ರೊಡಕ್ಷನ್‌ನಿಂದ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಎಚ್‌.ಸಿ. ವೇಣು ಅವರ ಕ್ಯಾಮೆರಾ ಕೈಚಳಕ ಸಿನಿಮಾಕ್ಕೆ ಶಕ್ತಿ ತುಂಬಿದೆ’ ಎಂದು ಮೆಚ್ಚುಗೆ ಸೂಚಿಸಿದರು ನಿರ್ದೇಶಕ ತೇಜಸ್ವಿ.

ಇದನ್ನೂ ಓದಿ: ಕಿಡ್ನಾಪ್‌ ಆಗಿದ್ದ ಹರಿಪ್ರಿಯಾ ಪಾರಾಗಿದ್ದು ಹೇಗೆ ಗೊತ್ತೆ?


ಹರಿಪ್ರಿಯಾ

 

Post Comments (+)