‘ಎಲ್ಲಿದ್ದೆ ಇಲ್ಲಿ ತನಕ’ ಸೃಜನ್ ಲೋಕೇಶ್ ಡಬಲ್ ಪಾರ್ಟ್‌!

7

‘ಎಲ್ಲಿದ್ದೆ ಇಲ್ಲಿ ತನಕ’ ಸೃಜನ್ ಲೋಕೇಶ್ ಡಬಲ್ ಪಾರ್ಟ್‌!

Published:
Updated:
Deccan Herald

ಸೃಜನ್‌ ಲೋಕೇಶ್ ಚಿತ್ರರಂಗಕ್ಕೆ ಎಲ್ಲಿಂದಲೋ ಬಂದವರೇನಲ್ಲ. ಆದರೆ ತಂದೆಯ ಜನಪ್ರಿಯತೆ ಮಗನನ್ನು ಹಿರಿತೆರೆಯ ಮೇಲೆ ಹಿಡಿದೆತ್ತಲಿಲ್ಲ. ಚಂದನವನದಲ್ಲಿ ಗಟ್ಟಿ ಕಾಲೂರಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗದೆ ಕಿರುತೆರೆಯಲ್ಲಿ ‘ಮಜಾ ಟಾಕೀಜ್‌’ ಮಾಡ್ಕೊಂಡಿರುವ ಸೃಜನ್‌ ಈಗ ಮತ್ತೆ ಹಿರಿತೆರೆಗೆ ಮರಳುತ್ತಿದ್ದಾರೆ. ಈ ಸಲ ಅವರದ್ದು ಡಬಲ್ ಪಾರ್ಟ್‌! ಸಿನಿಮಾದೊಳಗಿನ ದ್ವಿಪಾತ್ರ ಅಲ್ಲ, ನಟನೆ ಮತ್ತು ನಿರ್ಮಾಣ ಎರಡು ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ.

ಲೋಕೇಶ್ ನಟಿಸಿದ್ದ ‘ಪರಸಂಗದ ಗೆಂಡೆತಿಮ್ಮ’ ಚಿತ್ರದ ‘ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ’ ಹಾಡಿನ ಮೊದಲೆರಡು ಪದ ಇಟ್ಟುಕೊಂಡೇ ಸಿನಿಮಾ ಮಾಡಲು ಹೊರಟಿದ್ದಾರೆ. ಮಜಾ ಟಾಕೀಸ್‌ನಲ್ಲಿ ಸೃಜನ್‌ ಜತೆ ಕೆಲಸ ಮಾಡುತ್ತಿರುವ ಕೊಳ್ಳೇಗಾಲದ ತೇಜಸ್ವಿ ಈ ಚಿತ್ರಕ್ಕೆ ಆ್ಯಕ್ಷನ್–ಕಟ್‌ ಹೇಳುತ್ತಿದ್ದಾರೆ. ಹರಿಪ್ರಿಯಾ ಇಂಟೀರಿಯರ್ ಡಿಸೈನರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅರ್ಜುನ್‌ ಜನ್ಯಾ ಸಂಗೀತ ಹೊಸೆಯುವ ಹೊಣೆ ಹೊತ್ತಿದ್ದಾರೆ. ಸಾಮಾನ್ಯ ಹುಡುಗನೊಬ್ಬನ ಪ್ರೇಮಪ್ರಹಸನವೇ ಈ ಚಿತ್ರದ ಹೂರಣ. ಬೆಂಗಳೂರು ಮತ್ತು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಸುವ ಸಿದ್ಧತೆಯನ್ನೂ ಅವರು ನಡೆಸಿದ್ದಾರೆ. 

ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಸೃಜನ್‌ ಲೋಕೇಶ್‌ ಮಗನೂ ಈ ಚಿತ್ರದಲ್ಲಿ ನಟಿಸುತ್ತಿದ್ದಾನೆ. ಹಾಗೆಯೇ ಸೃಜನ್ ಅಮ್ಮ ಗಿರಿಜಾ ಲೋಕೇಶ್‌ ಕೂಡ ಇರಲಿದ್ದಾರೆ. ಒಂದೇ ಕುಟುಂಬದ ಮೂವರನ್ನು ತೆರೆಯ ಮೇಲೆ ನೋಡಬಹುದು. ಮಗ ನಟಿಸಿದ ಚಿತ್ರಕ್ಕೆ ಸ್ವತಃ ಸೃಜನ್‌ ಲೋಕೇಶ್ ಅವರೇ ಆ್ಯಕ್ಷನ್–ಕಟ್‌ ಹೇಳಿ ತಮ್ಮ ನಿರ್ದೇಶನದ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ. ಈ ಚಿತ್ರವನ್ನು ನೋಡಿದ ಪ್ರೇಕ್ಷಕನೂ ಹೊಟ್ಟೆ ಹುಣ್ಣಾಗುವಂತೆ ನಗುತ್ತ ‘ಎಲ್ಲಿದ್ದೆ ಇಲ್ಲೀತನಕ’ ಎಂದು ತಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾರೆ ಎಂಬ ನಂಬಿಕೆ ಸೃಜನ್‌ ಅವರಿಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !