ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಟರ್ ಆದ ಎಂಜಿನಿಯರ್ ವಿಕ್ಕಿ

Last Updated 13 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸಾಹಸನಟರು ಅಥವಾ ನಿರ್ದೇಶಕರ ಮಕ್ಕಳು ಚಿತ್ರರಂಗದಲ್ಲಿ ಯಶಸ್ಸು ಕಾಣುವುದು ಕಡಿಮೆ ಎಂಬ ಮಾತಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ವೀರೂ ದೇವಗನ್ ಪುತ್ರ ಅಜಯ್ ದೇವಗನ್ ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದರೆ, ಈಗ ಅದೇ ಸಾಲಿನಲ್ಲಿ ನಟ ವಿಕ್ಕಿ ಕೌಶಲ್ ಇದ್ದಾರೆ. ಸಾಹಸ ನಿರ್ದೇಶಕ ಶಾಮ್ ಕೌಶಲ್ ಪುತ್ರ ವಿಕ್ಕಿ ಕಲಿತಿದ್ದು ಎಂಜಿನಿಯರಿಂಗ್.

ಬೆರಳೆಣಿಕೆಯಷ್ಟೇ ಚಿತ್ರಗಳನ್ನು ಕಾಣಿಸಿಕೊಂಡರೂ ವಿಕ್ಕಿ ನಟನೆಗೆ ರಾಷ್ಟ್ರೀಯ ಪುರಸ್ಕಾರ ಮತ್ತು ಫಿಲಂಫೇರ್ ಪ್ರಶಸ್ತಿ ಗಳಿಸಿದ್ದು ವಿಶೇಷ. ಪರ್ಯಾಯ ಚಿತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಚಿತ್ರನಿರ್ದೇಶಕ ಅನುರಾಗ ಕಶ್ಯಪ್ ಜೊತೆಗೆ ‘ಗ್ಯಾಂಗ್ಸ್ ಆಫ್‌ ವಾಸ್ಸೀಪುರ’ (2012) ಚಿತ್ರಕ್ಕೆ ಸಹ ನಿರ್ದೇಶನ ಮಾಡಿದರು. ಕ್ರಮೇಣ ಅಭಿನಯದತ್ತ ಗಮನ ಹರಿಸಿದ ಅವರು ಕಶ್ಯಪ್ ಅವರ ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದರು.

2015ರಲ್ಲಿ ತೆರೆ ಕಂಡ ‘ಮಸಾನ್‌’ನಲ್ಲಿ ವಿಕ್ಕಿ ನಿರ್ವಹಿಸಿದ ನಾಯಕ ನಟನ ಪಾತ್ರವು ಐಐಎಫ್‌ಎ ಮತ್ತು ಸ್ಕ್ರೀನ್‌ ಪ್ರಶಸ್ತಿ ತಂದು ಕೊಟ್ಟಿತು. ಅಷ್ಟೇ ಅಲ್ಲ, ‘ರಮಣ್‌ ರಾಘವ 2.0’ (2016) ಚಿತ್ರದಲ್ಲೂ ಪಾತ್ರ ಗಿಟ್ಟಿಸಿಕೊಳ್ಳುವಂತೆ ಮಾಡಿತು. 2018ರಲ್ಲಿ ತೆರೆ ಕಂಡ ‘ರಾಝಿ’ ಮತ್ತು ‘ಸಂಜು’ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಅದರ ಪ್ರಭಾವವು ಮುಖ್ಯಪಾತ್ರಕ್ಕಿಂತ ಕಡಿಮೆಯೇನೂ ಇರಲಿಲ್ಲ. ಬಾಲಿವುಡ್‌ನಲ್ಲಿ ಅವರು ಸದ್ದಿಲ್ಲದೇ ನೆಲೆಯೂರತೊಡಗಿದರು.

‘ಉರಿ–ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದಲ್ಲಿನ ಸೇನಾಧಿಕಾರಿ ಪಾತ್ರವು ಅತ್ಯುತ್ತಮ ನಟನೆ ರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟರೆ, ನೆಟ್‌ಫ್ಲಿಕ್ಸ್‌ನ ‘ಲವ್ ಪೆರ್ ಸ್ಕ್ವೇರ್‌ ಫುಟ್’ ಮತ್ತು ‘ಲಸ್ಟ್ ಸ್ಟೋರೀಸ್’ ಚಿತ್ರದಲ್ಲಿನ ಸೂಕ್ಷ್ಮ ಪಾತ್ರಗಳು ಚಿತ್ರ ರಸಿಕರ ಗಮನ ಸೆಳೆದವು. ಅಬ್ಬರವಿಲ್ಲದ ಸೂಕ್ಷ್ಮ ಮತ್ತು ಹಸನ್ಮುಖಿ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ವಿಕ್ಕಿಗೆ ಅವಕಾಶ ದೊರೆತ ಎಲ್ಲ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರಗಳ ಆಯ್ಕೆ ವಿಷಯದಲ್ಲಿ ಎಚ್ಚರ ವಹಿಸುತ್ತಾರೆ.

ಸ್ಥಿರ ಬದುಕು ಕಂಡುಕೊಳ್ಳಲಿಯೆಂದೇ ತಂದೆ ಶಾಮ್ ಕೌಶಲ್ ಅವರು ವಿಕ್ಕಿಗೆ ಮುಂಬೈಯ ರಾಜೀವ್ ಗಾಂಧಿ ತಾಂತ್ರಿಕ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸಿದರು. ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್‌–ಟೆಲೆಕಮ್ಯುನಿಕೇಷನ್) ಪದವೀಧರರಾಗಿ ಐಟಿ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ವಿಕ್ಕಿಗೆ ದೈನಂದಿನ ಒಂದೇ ತರಹದ ದುಡಿಮೆಗಿಂತ ಭಿನ್ನ ಕೆರಿಯರ್ ರೂಪಿಸಿಕೊಳ್ಳಲು ಮನಸ್ಸು ಹಾತೊರೆಯಿತು. ಅದಕ್ಕೆ ಉದ್ಯೋಗ ತ್ಯಜಿಸಿ ಕಿಶೋರ್ ನಮಿತ್ ಕಪೂರ್ ಅಕಾಡೆಮಿಯಲ್ಲಿ ಅಭಿನಯ ತರಬೇತಿ ಪಡೆದರು.

‘ಜುಬಾನ್’ ಚಿತ್ರದಲ್ಲಿ ವಿಕ್ಕಿಗೆ ಸವಾಲಿನ ಪಾತ್ರವಿತ್ತು. ತಂದೆ ಸಾವಿನ ಆಘಾತಕ್ಕೆ ಒಳಗಾಗಿ ಪುತ್ರ ಉಗ್ಗುವ ಪಾತ್ರ ನಿಭಾಯಿಸಬೇಕಿತ್ತು. ಪಾತ್ರದ ಸಲುವಾಗಿ ಅವರು ಉಗ್ಗುವುದನ್ನು ರೂಢಿಸಿಕೊಂಡರು. ಉಗ್ಗುವುದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಮಟ್ಟಿಗೆ ವೈದ್ಯರ ಬಳಿ ಮಾರ್ಗದರ್ಶನ ಪಡೆದು ಅವರು ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು. ಆದರೆ, ಅದು ಯಾವ ಪರಿ ಪರಿಣಾಮ ಬೀರಿತೆಂದರೆ ಕೆಲ ದಿನ ಅವರು ನಿಜಜೀವನದಲ್ಲೂ ಉಗ್ಗಿಕೊಂಡೇ ಮಾತನಾಡಿದರು!

ವಿಕ್ಕಿ ಕೌಶಲ್ ಸದ್ಯಕ್ಕೆ ಬ್ಯುಸಿ ನಟಗಳಲ್ಲಿ ಒಬ್ಬರು. ಕರಣ್ ಜೋಹರ್ ನಿರ್ಮಾಣದ ‘ಭೂತ್‌–1 ದಿ ಹಾಂಟೆಡ್ ಶಿಪ್‌’ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಿರ್ದೇಶಕ ಶೂಜಿತ್ ಸರ್ಕಾರ್‌ ನಿರ್ದೇಶನದ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ‘ಉಧಮ ಸಿಂಗ್’ ಪಾತ್ರ ನಿಭಾಯಿಸುತ್ತಿದ್ದಾರೆ. ಮುಂಬರುವ ಕೆಲ ಚಿತ್ರಗಳಲ್ಲಿ ಅವರು ‘ಔರಂಗಜೇಬ್’ ಮತ್ತು ‘ಅಶ್ವತ್ಥಾಮ’ ಪಾತ್ರ ಕೂಡ ನಿರ್ವಹಿಸಲಿದ್ದಾರೆ. ‘ಸ್ಯಾಮ್ ಮಾನೆಕ್‌ಶಾ’ ಜೀವನ ಆಧಾರಿತ ಚಿತ್ರದಲ್ಲೂ ಅವರದ್ದು ಪ್ರಮುಖ ಪಾತ್ರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT