ಕರಾವಳಿ ಕುವರನ ತೆಲುಗು ಯಾನ

ಬುಧವಾರ, ಜೂನ್ 19, 2019
23 °C

ಕರಾವಳಿ ಕುವರನ ತೆಲುಗು ಯಾನ

Published:
Updated:
Prajavani

ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಹ ಆ್ಯಕ್ಷನ್‌, ಮೈನವಿರೇಳಿಸುವಂತಹ ಸ್ಟೆಪ್ಸ್‌, ಮುದ್ದು ಮುದ್ದಾದ ಲವ್‌ ಸ್ಟೋರಿ... ಹೀಗೆ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುವಂತಹ ರಂಜನೆಯ ಸೂತ್ರಗಳನ್ನು ಒಂದೇ ತಟ್ಟೆಯಲ್ಲಿಟ್ಟು ಸಿನಿರಸಿಕರಿಗೆ ಉಣಬಡಿಸುವ ಕಲೆ ತೆಲುಗು ನಿರ್ದೇಶಕರಿಗೆ ಕರಗತ. ಕನ್ನಡದ ಪ್ರತಿಭೆ, ಕರಾವಳಿ ಹುಡುಗ ಅದ್ವೈತ್‌ ಅವರು ಈಗ ಒಂದು ದೊಡ್ಡ ಬ್ಯಾನರ್‌ನ ತೆಲುಗು ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ಲಾಂಚ್‌ ಆಗುತ್ತಿದ್ದಾರೆ.

ತುಳು ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ತೆರೆದುಕೊಂಡ ನಟ ಅದ್ವೈತ್‌ ಈಗ ತೆಲುಗು ಸಿನಿಮೋದ್ಯಮದ ಅಂಗಳಕ್ಕೆ ಬಂದು ನಿಂತಿದ್ದಾರೆ. ತೆಲುಗು ಚಿತ್ರಗಳ ವೈಭವದಂತೆಯೇ ಅವರ ಕಣ್ಣುಗಳಲ್ಲಿ ಈಗ ಸಾವಿರ ವೋಲ್ಟ್‌ನ ಬಣ್ಣಬಣ್ಣದ ಕನಸುಗಳು ಪ್ರಕಾಶಿಸುತ್ತಿವೆ. ಅದ್ವೈತ್‌ ಅಭಿನಯದ ‘ಎಂತವಾರಲೈನಾ’ ತೆಲುಗು ಸಿನಿಮಾ ಇದೇ 17ರಂದು (ಶುಕ್ರವಾರ) ಆಂಧ್ರ ಮತ್ತು ತೆಲಂಗಾಣದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ತಮ್ಮ ಮೊದಲ ತೆಲುಗು ಸಿನಿಮಾ ಕುರಿತಂತೆ ಅವರು ಇಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

‘ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ‘ಎಂತವಾರಲೈನಾ’. ಅದರಲ್ಲಿ ತೆಲುಗು ಅವತರಣಿಕೆಯ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ತಪ್ಪು ಮಾಡಿದ ವ್ಯಕ್ತಿ ಎಷ್ಟೇ ದೊಡ್ಡ ಮನುಷ್ಯ ಆದರೂ ಶಿಕ್ಷೆ ಆಗಲೇಬೇಕು ಎಂಬುದು ಚಿತ್ರ ಶೀರ್ಷಿಕೆಯ ಅರ್ಥ. ತೆಲುಗು ಪ್ರೇಕ್ಷಕರು ಬಯಸುವ ಮಾಸ್‌ ದೃಶ್ಯಗಳು ಚಿತ್ರದಲ್ಲಿ ಢಾಳಾಗಿವೆ. ಜತೆಗೆ ಕ್ರೈಂ ದೃಶ್ಯಗಳು ಹಾಗೂ ಕ್ಯೂಟ್‌ ಲವ್‌ ಸ್ಟೋರಿ ಇರುವಂತಹ ಕಥಾಹಂದರದ ಸಿನಿಮಾ ಇದು. ತೆಲುಗಿನಲ್ಲಿ ನನ್ನ ಫಸ್ಟ್‌ ಎಂಟ್ರಿ ಇದು. ಒಂದರ್ಥದಲ್ಲಿ ದೊಡ್ಡ ಮಟ್ಟದ ಎಂಟ್ರಿ ಅಂತಲೇ ಹೇಳಬಹುದು. ದೊಡ್ಡ ನಟರ ಚಿತ್ರಗಳನ್ನೆಲ್ಲಾ ಡಿಸ್ಟ್ರಿಬ್ಯೂಷನ್‌ ಮಾಡುವ ಬಿ.ಎ.ರಾಜು ಅವರೇ ಈ ಸಿನಿಮಾದ ಹಂಚಿಕೆದಾರರು’ ಎಂದು ತಮ್ಮ ಪ್ರಥಮ ತೆಲುಗು ಸಿನಿಮಾದ ಬಗ್ಗೆ ಖುಷಿಯಿಂದ ಹೇಳಿಕೊಂಡರು ಅದ್ವೈತ್‌.

ಖಡಕ್‌ ಲುಕ್ಕು, ತೆಲುಗು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ ಮುಖಭಾವ, ಫಿಟ್‌ನೆಸ್‌ ಹೊಂದಿರುವ ಅದ್ವೈತ್‌ ಅವರ ಬಗ್ಗೆ ತೆಲುಗು ಚಿತ್ರದ ಅನೇಕ ಗಣ್ಯರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಮೆಚ್ಚುಗೆಯ ಮಾತುಗಳು ಅದ್ವೈತ್‌ ಅವರ ಚಿತ್ರಯಾನದ ಕನಸಿಗೆ ಮತ್ತಷ್ಟು ಕಸುವು ಕೊಡುತ್ತಿವೆ.

‘ಟಾಲಿವುಡ್‌ನ ಅನೇಕರು ಹೇಳುವಂತೆ ನನ್ನ ಫೇಸ್‌ ತೆಲುಗು ಸಿನಿಮಾಗಳಿಗೆ ಚೆನ್ನಾಗಿ ಒಪ್ಪುತ್ತದೆ. ಇಲ್ಲೇ ಸೆಟಲ್‌ ಆಗಿ ಬಿಡಿ ಎಂದೂ ಕೆಲವರು ಹೇಳಿದ್ದಿದೆ. ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆಯೋ ಗೊತ್ತಿಲ್ಲ. ಆದರೆ, ಚಿತ್ರ ನೋಡಿದ ಪ್ರೇಕ್ಷಕರಿಂದ ಹೀರೊ ಚೆನ್ನಾಗಿದ್ದಾನೆ, ಉತ್ತಮವಾಗಿ ಅಭಿನಯಿಸಿದ್ದಾನೆ, ಡಾನ್ಸ್‌, ಫೈಟ್‌ಗಳನ್ನು ಚೆನ್ನಾಗಿ ನಿಭಾಯಿಸಿದ್ದಾನೆ ಎಂಬ ಮಾತುಗಳನ್ನು ಕೇಳುವುದಕ್ಕೆ ಕಾತರನಾಗಿದ್ದೇನೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಜನರು ಗುರುತಿಸಿ ಮೆಚ್ಚಿಕೊಂಡಾಗಲೇ ಅದಕ್ಕೊಂದು ಅರ್ಥ ಬರುವುದು’ ಎಂಬುದು ಅದ್ವೈತ್‌ ಮಾತು.

ಕನ್ನಡದ ಹುಡುಗನಾದರೂ ತೆಲುಗು ಚೆನ್ನಾಗಿ ಮಾತನಾಡುವ ಅದ್ವೈತ್‌ ತಮ್ಮ ಮುಂದಿನ ತೆಲುಗು ಸಿನಿಮಾಗಳಿಗೆ ತಾವೇ ಡಬ್ಬಿಂಗ್‌ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

‘ಭಾಷೆ ಎಂಬುದು ಕಲಾವಿದನಿಗೆ ಎಂದಿಗೂ ತೊಡಕಾಗುವುದಿಲ್ಲ. ಆದರೆ, ನನಗೆ ಅನ್ನಿಸುವಂತೆ ಒಬ್ಬ ಕಲಾವಿದ ಪರಭಾಷೆಯ ಸಿನಿಮಾದಲ್ಲಿ ನಟಿಸುವಾಗ ಆ ಭಾಷೆಯ ಸೊಗಡು ಅರಿಯಬೇಕು. ಆಗಲೇ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ನನಗೆ ತೆಲುಗು ಬರುತ್ತಿದ್ದುದು ಪ್ಲಸ್‌ ಆಯಿತು. ಚಿತ್ರದ ನಿರ್ದೇಶಕರು, ಸಹನಟರು, ತಂತ್ರಜ್ಞರು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತೆಲುಗು ಪ್ರೇಕ್ಷಕರನ್ನು ಸೆಳೆಯಬೇಕು ಅಂದರೆ ನಮಗೆ ಆ ಭಾಷೆ ಗೊತ್ತಿರಲೇಬೇಕು. ತೆಲುಗು ಕಷ್ಟದ ಭಾಷೆ ಏನಲ್ಲ. ನನ್ನ ಮುಂದಿನ ತೆಲುಗು ಸಿನಿಮಾದಲ್ಲಿ ನಾನೇ ಡಬ್ಬಿಂಗ್‌ ಮಾಡಬೇಕು ಅಂತ ಅಂದುಕೊಂಡಿದ್ದೇನೆ’ ಎನ್ನುತ್ತಾರೆ ಅವರು.

‘ಎಂತವಾರಲೈನಾ’ ಸಿನಿಮಾದ ಬಗ್ಗೆ ನಿಮ್ಮ ನಿರೀಕ್ಷೆಗಳು ಏನು ಎಂಬ ಪ್ರಶ್ನೆಗೆ ಅದ್ವೈತ್‌ ಉತ್ತರಿಸಿದ್ದು ಹೀಗೆ: ‘ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇರಿಸಿಕೊಂಡಿಲ್ಲ. ಭ್ರಮ ನಿರಸನ ಆಗಿಬಿಟ್ಟರೆ ಕಷ್ಟ ಎಂಬ ಕಾರಣಕ್ಕಾಗಿ ಈ ಭಾವ ತಳೆದಿದ್ದೇನೆ. ಚಿತ್ರದಲ್ಲಿ ಕ್ಯೂಟ್‌ ಲವ್‌ ಸ್ಟೋರಿ ಇದೆ. ನಾಲ್ಕು ಭರ್ಜರಿ ಫೈಟ್‌ಗಳಿವೆ. ಜತೆಗೆ ಮೂರು ಇಂಪಾದ ಹಾಡುಗಳಿವೆ. ಪ್ರೇಕ್ಷಕರ ಮನರಂಜನೆಗೆ ಎಲ್ಲೂ ಕೊರತೆ ಇಲ್ಲ. ಚಿತ್ರಕ್ಕಾಗಿ ಅನೇಕ ಉತ್ತಮ ತಂತ್ರಜ್ಞರು ದುಡಿದಿದ್ದಾರೆ. ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಚಿತ್ರದ ಸ್ಕ್ರೀನಿಂಗ್‌ ವೇಳೆ ಸಿನಿಮಾ ನೋಡಿದ ಅನೇಕ ಮಂದಿ ನನ್ನ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನು ಆಡಿದರು. ನಿನ್ನ ಅಭಿನಯ ಪ್ರೇಕ್ಷಕರ ಮನಸ್ಸಿಗೆ ಇಷ್ಟವಾಗುತ್ತದೆ. ಭಾವಾಭಿನಯ, ಡಾನ್ಸ್‌, ಸಾಹಸ ಸನ್ನಿವೇಶಗಳಲ್ಲಿ ಪಕ್ಕಾ ಟಾಲಿವುಡ್‌ ನಟನಂತೆಯೇ ಕಾಣಿಸಿಕೊಂಡಿದ್ದೀಯಾ ಎಂದರು. ಅವರ ಈ ಮಾತುಗಳು ಧೈರ್ಯ ತುಂಬಿವೆ. ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳಿಂದ ಒಟ್ಟು 200 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆಗುತ್ತದೆ. ಒಬ್ಬ ಹೊಸಬನ ಚಿತ್ರಕ್ಕೆ ಇಷ್ಟು ಚಿತ್ರಮಂದಿರಗಳು ಸಿಕ್ಕಿರುವುದಕ್ಕಿಂತ ಖುಷಿ ಇನ್ನೇನಿದೆ’ ಎನ್ನುವಾಗ ಅವರ ಕಣ್ಣುಗಳಲ್ಲಿ ಪ್ರಕಾಶಿಸುತ್ತಿದ್ದುದು ಮತ್ತದೇ ಸಾವಿರ ವೋಲ್ಟ್‌ನ ಹೊಳಪು!

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !