‘ಭೀಮ’ ಸಿನಿಮಾ ಮೂಲಕ ಅಶ್ವಿನಿ ಅಂಬರೀಶ್ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‘ಸ್ಯಾಂಡಲ್‌ವುಡ್ ಸಲಗ’ ದುನಿಯಾ ವಿಜಯ್‌ಗೆ ಜೋಡಿಯಾಗಿ ಅಶ್ವಿನಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಕನಸು ನನಸಾದ ಸಂಭ್ರಮದಲ್ಲಿ ಅವರಿದ್ದಾರೆ. ‘ಸಿನಿಮಾ ಪುರವಣಿ’ ಜೊತೆ ‘ಭೀಮ’ನ ಅನುಭವಗಳನ್ನು ಹಂಚಿಕೊಳ್ಳುತ್ತಾ ಅಶ್ವಿನಿ ಹೆಜ್ಜೆ ಹಾಕಿದರು...
ಅಶ್ವಿನಿ ಹಿನ್ನೆಲೆ...
ನಾನು ಬೆಂಗಳೂರಿನವಳು. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಡಿಗ್ರಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿಸ್ಟೆನ್ಸ್‌ನಲ್ಲಿ ಎಂಬಿಎ ಮುಗಿಸಿದೆ. ಎಂಬಿಎ ಶಿಕ್ಷಣದ ಸಂದರ್ಭದಲ್ಲೇ ಮಲ್ಲೇಶ್ವರದಲ್ಲಿರುವ ಡಿಸಿ ಲ್ಯಾಬ್ಸ್ ಎಂಬ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಚಿಕ್ಕವಯಸ್ಸಿನಲ್ಲೇ ನಟನೆಯ ಆಸಕ್ತಿ ಇತ್ತು. ಬೆಂಗಳೂರಿನಲ್ಲಿ ಹಲವು ನಟನೆ, ಮಾಡೆಲಿಂಗ್‌ನ ಕ್ಲಾಸ್‌ಗಳು ಇದ್ದರೂ ಯಾವುದೂ ನನ್ನನ್ನು ಸೆಳೆಯಲಿಲ್ಲ. ನಟನೆಯನ್ನು ಕಲಿಯುವ ಮೊದಲ ಹೆಜ್ಜೆಯಾಗಿ ರಂಗಭೂಮಿ ನನ್ನನ್ನು ಆಕರ್ಷಿಸಿತು. ಈ ವೇದಿಕೆಯಲ್ಲೇ ನಟನೆ ಕಲಿಯಬೇಕು ಎನ್ನುವ ಆಸಕ್ತಿ ಹುಟ್ಟಿಕೊಂಡಿತು. ಅದೇ ಸಂದರ್ಭದಲ್ಲಿ ಸಹೋದ್ಯೋಗಿಯೊಬ್ಬರು ನಾಟಕದ ಉಚಿತ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ್ದರು. ಈ ಮೂಲಕ ರಂಗಭೂಮಿಯ ನಂಟು ಬೆಳೆಯಿತು. ‘ಥಿಯೇಟರ್ ತತ್ಕಾಲ್’ ತಂಡದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಗರಡಿಯಲ್ಲಿ ಬೆಳೆದೆ. ‘ವಿಗಡ ವಿಕ್ರಮರಾಯ’ ನಾಟಕದ ಮೂಲಕ ರಂಗಭೂಮಿಯಲ್ಲಿ ಪಯಣ ಆರಂಭವಾಯಿತು.
‘ಜೀವನದಿ’ ಹಾಗೂ ‘ಮಗಳು ಜಾನಕಿ’ ಎಂಬ ಧಾರಾವಾಹಿಗಳಲ್ಲೂ ನಾನು ನಟಿಸಿದ್ದೇನೆ. ಇವೆರಡೂ ನನಗೆ ಒಳ್ಳೆಯ ಅನುಭವ ನೀಡಿದವು. ಆದರೆ, ಕೋವಿಡ್ ಸಂದರ್ಭದಲ್ಲಿ ಇವುಗಳ ಪ್ರಸಾರ ಕೊನೆಗೊಂಡಿತು.
‘ಭೀಮ’ನಿಗೆ ಜೋಡಿಯಾಗಿದ್ದು ಹೇಗೆ?
ನಾನು ಕೆಲಸ ಮಾಡುತ್ತಿರುವಾಗ, ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಸಿನಿಮಾದಲ್ಲಿ ನಟನೆಯ ಅವಕಾಶ ಹುಡುಕುತ್ತಿದ್ದೆ. ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜಯ್ ಅವರು ನನ್ನನ್ನು ಗುರುತಿಸಿ ‘ಭೀಮ’ ಸಿನಿಮಾದಲ್ಲಿ ನಟನೆಯ ಆಫರ್ ನೀಡಿದ್ದರು. ಇದು ಆಕಸ್ಮಿಕವಾಗಿ ಬಂದ ಅವಕಾಶ. ‘ಭೀಮ’ನಿಗೆ ಜೋಡಿಯಾಗಿ ಫ್ರೆಶ್ ಫೇಸ್ ಬೇಕಿತ್ತು. ಹೀಗಾಗಿ ಆಯ್ಕೆಯಾದೆ. ನಟಿಯಾಗಬೇಕು ಎನ್ನುವ ಕನಸು ಆಕಸ್ಮಿಕವಲ್ಲ. ಆದರೆ ಅವಕಾಶ ಏಕಾಏಕಿ ಸಿಕ್ಕಿತು. ಸದ್ಯ ಕೆಲಸ ಬಿಟ್ಟು ಪೂರ್ಣಪ್ರಮಾಣದಲ್ಲಿ ರಂಗಭೂಮಿ ಹಾಗೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ.
ವಿಜಯ್ ಜೊತೆ ನಟನೆಯ ಅನುಭವ...
ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನುವುದೇ ಕನಸು ನನಸಾದ ಕ್ಷಣ. ಇದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಸಿನಿಮಾ ಕೆಲಸ, ಅನುಭವ ಖುಷಿ ನೀಡಿದೆ. ನನ್ನ ಸಿನಿ ಪಯಣದ ಆರಂಭದಲ್ಲೇ ದೊಡ್ಡ ದಾರಿಯಾಗಿ ಈ ‘ಭೀಮ’ ಪ್ರಾಜೆಕ್ಟ್ ದೊರಕಿತ್ತು. ಈ ಸಿನಿಮಾ, ಕಲಿಕೆಯ ಅನುಭವ ನೀಡಿದೆ. ಸಿನಿಮಾದ ಎಲ್ಲ ವಿಭಾಗಗಳ ವಿಷಯ ತಿಳಿದುಕೊಂಡೆ. ನಟನೆ, ತಾಂತ್ರಿಕ ವಿಷಯಗಳ ಬಗ್ಗೆ ಅರಿತೆ. ವಿಜಯ್ ಅವರ ಅನುಭವ ಅಗಾಧ. ಅವರು ಓರ್ವ ನಿರ್ದೇಶಕರಾಗಿ, ನಟನಾಗಿ ತಿಳಿಸಿಕೊಡುವ ಅಂಶಗಳು ನನ್ನನ್ನು ನಟಿಯಾಗಿ ರೂಪಿಸಿದೆ. ನನಗೆ ಪ್ರತಿಯೊಂದು ದಿನವೂ ಕಲಿಕೆಯಾಗಿತ್ತು. ಚಿತ್ರೀಕರಣದ ಅನುಭವವೂ ಭಿನ್ನವಾಗಿತ್ತು.
ನಿಮ್ಮ ಪಾತ್ರಕ್ಕೆ ತೆರೆ ಅವಧಿ ಎಷ್ಟಿದೆ?
ವಿಜಯ್ ಅವರ ಬರವಣಿಗೆಯ ವಿಶೇಷತೆ ಏನೆಂದರೆ, ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೂಕವನ್ನು ಕಥೆ ಮೂಲಕ ತುಂಬುತ್ತಾರೆ. ಕಥೆಯನ್ನು ಬಿಟ್ಟು ಬೇರೇನೂ ಮಾಡಿಸುವುದಿಲ್ಲ. ‘ಸಲಗ’ದಲ್ಲಿ ನಾಯಕಿಗೆ ತೆರೆ ಅವಧಿ ಉಳಿದ ಪಾತ್ರಗಳಿಗೆ ಹೋಲಿಸಿದರೆ ಕಡಿಮೆ ಇತ್ತು. ಆದರೆ ಆ ಪಾತ್ರ ಪರಿಣಾಮಕಾರಿಯಾಗಿತ್ತು. ಅಲ್ಲಿ ಪ್ರತೀಕಾರದ ಕಥೆಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ‘ಭೀಮ’ ಸಿನಿಮಾ ‘ಸಲಗ’ದ ನೂರು ಪಟ್ಟು ಇದೆ ಎಂದು ವಿಜಯ್ ಅವರು ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ‘ಭೀಮ’ನ ನಾಯಕಿಯ ಪಾತ್ರಕ್ಕೂ ತೂಕ ತುಂಬಿದ್ದಾರೆ. ‘ಭೀಮ’ನ ಕಥೆಗೆ ನಾಯಕಿಯ ಪಾತ್ರ ಬಹಳ ಅವಶ್ಯವಾಗಿದೆ. ಇದು ಪ್ರತಿಯೊಬ್ಬ ಪ್ರೇಮಿಗಳಿಗೂ ಕನೆಕ್ಟ್ ಆಗುವ ಪಾತ್ರ.
ನಿಮ್ಮ ಪಾತ್ರದ ಬಗ್ಗೆ...
ನನ್ನ ಪಾತ್ರದ ಗುಣಲಕ್ಷಣಗಳನ್ನು ತೆರೆಯ ಮೇಲೆಯೇ ನೋಡಬೇಕು. ನನ್ನ ಪಾತ್ರದ ಹೆಸರನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. (ನಗುತ್ತಾ) ಎಲ್ಲರನ್ನೂ ಕಮಾಂಡ್ ಮಾಡುವ ಪಾತ್ರ ಇರಬಹುದೇನೋ..ಬಹಳ ಪರಿಣಾಮಕಾರಿಯಾಗಿ ಈ ಪಾತ್ರ ಹೊರಬರಲಿದೆ ಎಂದಷ್ಟೇ ಹೇಳಬಲ್ಲೆ.
ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೀರಾ?
‘ಭೀಮ’ನ ಪಯಣ ಆರಂಭವಾಗಿ ಮೂರು ವರ್ಷವಾಯಿತು. ಈ ಅವಧಿಯಲ್ಲಿ ವೈಯಕ್ತಿಕವಾಗಿ ಹಲವು ವಿಷಯಗಳನ್ನು ಕಲಿತಿದ್ದೇನೆ. ಹಲವು ಕಥೆಗಳು ಚರ್ಚೆಯ ಹಂತದಲ್ಲಿದೆ. ನಾನು ಯಾವುದನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಇಷ್ಟು ವರ್ಷ ಕಾದಿದ್ದೇನೆ, ಇನ್ನೊಂದು ತಿಂಗಳು ಕಾಯುವುದರಲ್ಲಿ ತಪ್ಪೇನು ಇಲ್ಲ ಎಂದುಕೊಂಡಿದ್ದೇನೆ. ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳಲಿದ್ದೇನೆ. ರಂಗಭೂಮಿಗೆ ಹೆಜ್ಜೆ ಇಟ್ಟಿದ್ದು ನಟನೆಯ ಕಲಿಕೆಗೋಸ್ಕರ. ಈಗ ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರುವುದರಿಂದ ರಂಗಭೂಮಿಗೆ ಸಮಯ ನೀಡುವುದು ಕಷ್ಟಸಾಧ್ಯ. ಹಾಗೆಂದು ಪೂರ್ಣಪ್ರಮಾಣದಲ್ಲಿ ನಟನೆ ಕಲಿತಿದ್ದೇನೆ ಎಂದಲ್ಲ. ಸಮಯ, ಅವಕಾಶ ಸಿಕ್ಕಾಗ ರಂಗಭೂಮಿಯಲ್ಲೂ ತೊಡಗಿಸಿಕೊಳ್ಳುತ್ತೇನೆ.
ಅಶ್ವಿನಿ ಅಂಬರೀಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.