ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ: ಕೊನೆಯ ದಿನದ ಭರಾಟೆ

ಬಿಜೆಪಿಯಿಂದ ಅಮರೇಶ್‌ ಕರಡಿ, ಜೆಡಿಎಸ್‌ನಿಂದ ಕೆ.ಎಂ. ಸೈಯದ್‌, ಪಕ್ಷೇತರರಾಗಿ ರಾಜಶೇಖರ ಹಿಟ್ನಾಳ್‌
Last Updated 25 ಏಪ್ರಿಲ್ 2018, 10:05 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ 10 ನಾಮಪತ್ರಗಳು ಸಲ್ಲಿಕೆಯಾದವು.

ಬಿಜೆಪಿಯಿಂದ ಸಂಸದ ಸಂಗಣ್ಣ ಕರಡಿ, ಅವರ ಪುತ್ರ ಅಮರೇಶ್‌ ಕರಡಿ, ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್‌ ಸಹೋದರ ಕೆ.ರಾಜಶೇಖರ ಹಿಟ್ನಾಳ್‌ (ಪಕ್ಷೇತರ) ಅವರೂ ಕೂಡಾ ನಾಮಪತ್ರ ಸಲ್ಲಿಸಿದ್ದು ವಿಶೇಷ.

ಜೆಡಿಎಸ್‌ ಅಭ್ಯರ್ಥಿ ಕೆ.ಎಂ. ಸೈಯದ್‌ ಅವರು ಗವಿಮಠದ ಆವರಣದಿಂದ ಜವಾಹರ ರಸ್ತೆ ಮೂಲಕವಾಗಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಅಮರೇಶ ಕರಡಿ ಅವರು ಸಿರಸಪ್ಪಯ್ಯ ಸ್ವಾಮಿ ಮಠದಿಂದ ಮೆರವಣಿಗೆ ನಡೆಸಿದರು. ಜನಜಂಗುಳಿ ತಪ್ಪಿಸಲು ಪೊಲೀಸರು ಎರಡೂ ಮೆರವಣಿಗೆಗಳ ಪಥ ಬದಲಿಸಿದರು. ಅಮರೇಶ್‌ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಪ್ರಮುಖ ನಾಯಕರ ಗೈರು ಎದ್ದು ಕಾಣುತ್ತಿತ್ತು.

ಮಧ್ಯಾಹ್ನ ವೇಳೆ ನಾಮಪತ್ರ ಸಲ್ಲಿಕೆ ಭರಾಟೆಯಿಂದ ನಗರದಲ್ಲಿ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.

9 ನಾಮಪತ್ರ ಸಲ್ಲಿಕೆ

ಯಲಬುರ್ಗಾ: ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಎಂಇಎಸ್, ಶಿವಸೇನೆ, ಜನಹಿತ ಪಕ್ಷದಿಂದ ಸ್ಪರ್ಧೆ ಬಯಸಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸ್ಥಳೀಯ ಶರಣಬಸಪ್ಪ ದಾನಕೈ ಶಿವಸೇನೆ ಪಕ್ಷದಿಂದ ನಾಮಪತ್ರ ಸಲ್ಲಿಸಿದರೆ, ಅಲ್ಲಾಭಕ್ತಿ ಕಲ್ಲೂರು ಎಂವಿಪಿಯಿಂದ ಸ್ಪರ್ಧೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜನಹಿತ ಪಕ್ಷದಿಂದ ಸಿಂಧನೂರು ತಾಲ್ಲೂಕಿನ ಊಮಲೂಟಿಯ ಅಂದಾನರಾಜ ನಾಡಗೌಡ ನಾಮಪತ್ರ ಸಲ್ಲಿಸಿದರು.

ಕರಮುಡಿಯ ಶಿವಪ್ಪ ರಾಂಪೂರ, ಮುಧೋಳದ ಶಾಮೀದಸಾಬ ಮುಲ್ಲಾ, ಕುಕನೂರಿನ ಝಾಕೀರಹುಸೇನ ತಹಶೀಲ್ದಾರ, ಹೊಸಪೇಟೆಯ ನವೀನ ಹೊಸಪೇಟೆ, ಗುದ್ನೆಪ್ಪನಮಠದ ಶರಣಯ್ಯ ಬಂಡಿ, ತಳಕಲ್ಲ ಗ್ರಾಮದ ನಿಂಗಪ್ಪ ತಾಯಮ್ಮನವರ ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಶಿವಸೇನೆ ಪಕ್ಷದಿಂದ ಸ್ಪರ್ಧಿಸಿದ ಶರಣಬಸಪ್ಪ ದಾನಕೈ ಮಾತನಾಡಿ, ಎಲ್‌ಜಿಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಪಕ್ಷ ಸಂಘಟಿಸಲಾಗಿತ್ತು, ಜಿಲ್ಲೆಯ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಗುರುತಿಸಲಾಗಿತ್ತು. ಆದರೆ, ರಾಜ್ಯ ಘಟಕದ ಅಧ್ಯಕ್ಷರು ಹೈದಾರಬಾದ್‌ ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಪಕ್ಷದಿಂದ ಯಾರನ್ನು ಸ್ಪರ್ಧೆಗೆ ಅವಕಾಶವಿಲ್ಲ, ಪಕ್ಷ ಮತ್ತಷ್ಟು ಬಲಗೊಳಿಸಬೇಕಾಗಿದೆ ಎಂದು ನೆಪ ಹೇಳಿ ಟಿಕೆಟ್ ನೀಡದೆ ವಂಚಿಸಿದ್ದರಿಂದ ಶಿವಸೇನೆ ಪಕ್ಷದಿಂದ ಸ್ಪರ್ಧೆಗೆ ಅಣಿಯಾಗಿರುವುದಾಗಿ ಹೇಳಿದರು.

ಅನೇಕ ಚುನಾವಣೆಯನ್ನು ಎದುರಿಸಿದ ಅನುಭವವಿದ್ದು, ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಹೇಳಿ ಅವರ ವಿಶ್ವಾಸಕ್ಕೆ ಪಾತ್ರನಾಗಿ ಮತ ಪಡೆಯಲಾಗುವುದು, ಶ್ರೀಮಂತ ಅಭ್ಯರ್ಥಿಗಳು ಆಡುವ ಬಣ್ಣದ ಮಾತಿಗೆ ಜನರು ಮರುಳಾಗದೆ ಯೋಗ್ಯ ವ್ಯಕ್ತಿಯನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಪಕ್ಷೇತರ ಅಭ್ಯರ್ಥಿ ಶರಣ್ಯ ಬಂಡಿ ಮಾತನಾಡಿ, ಮೂಲತ ಬಿಜೆಪಿ ಕಟ್ಟಾ ಬೆಂಬಲಿಗ ಹಾಗೂ ಇದೇ ಪಕ್ಷದಿಂದ ಪತ್ನಿ ಪಂಚಾಯಿತಿಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಬಿಜೆಪಿ ಮುಖಂಡರು ತಮ್ಮನ್ನು ವಿಶ್ವಾಸಕ್ಕೆ ತಗೆದುಕೊಂಡಿಲ್ಲ, ಕಾಂಗ್ರೆಸ್‌ ಮುಖಂಡರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರೂ ಬೆಂಬಲಕ್ಕೆ ನಿಲ್ಲದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿರುವುದಾಗಿ ಹೇಳಿದರು.

ತಳಕಲ್ಲ ಗ್ರಾಮದ ನಿಂಗಪ್ಪ ತಾಯಮ್ಮನವರ ಮಾತನಾಡಿ, ನಿರಂತರವಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಾಗಿದೆ. ಮುಂದೆ ಬಂದರೂ ಮಾತನಾಡದ ಕಾಂಗ್ರೆಸ್‌ ಮುಖಂಡರು ಹಾಗೂ ಶಾಸಕರಿಗೆ ತಕ್ಕ ಪಾಠ ಕಲಿಸಲು ಉಮೇದುವಾರಿಕೆ ಸಲ್ಲಿಸಲಾಗಿದೆ ಎಂದು ನುಡಿದರು.

ಚುನಾವಣಾಧಿಕಾರಿ ವಿಜಯ ಮೆಕ್ಕಳಿಕೆ, ಸಹಾಯಕ ಅಧಿಕಾರಿ ಜಿ.ಎಸ್‌. ಹಿರೇಮಠ, ಸಹಾಯಕ ವಿಜಯಕುಮಾರ ಗುಂಡೂರ ಇದ್ದರು.

21 ನಾಮಪತ್ರ ಸಲ್ಲಿಕೆ

ಕುಷ್ಟಗಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಯ ಕ್ಷೇತ್ರಕ್ಕೆ 21 ಜನ ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸುವ ಕೊನೆಯ ದಿನ ಮಂಗಳವಾರ ಆರು ಅಭ್ಯರ್ಥಿಗಳಿಂದ 7 ನಾಮಪತ್ರಗಳು ಬಂದಿವೆ. ಮಂಜುಳಾ ಮಡಿವಾಳರ (ನ್ಯೂ ಇಂಡಿಯನ್‌ ಕಾಂಗ್ರೆಸ್‌ ಪಕ್ಷ), ರಾಮನಗೌಡ ಮಾಲಿಪಾಟೀಲ (ಪಕ್ಷೇತರ), ಶಿವರೆಡ್ಡಿ ಸಾಹೇಬಗೌಡ (ಹಿಂದುಸ್ತಾನ ಜನತಾ ಪಾರ್ಟಿ), ಎಚ್‌.ಸಿ.ನೀರಾವರಿ (ಜೆಡಿಎಸ್), ಯಲ್ಲನಗೌಡ ಗಣೇಶಗೌಡ (ಜನ ಸಂಭಾವನಾ ಪಾರ್ಟಿ), ವೆಂಕಟೇಶ ವಡ್ಡಿಗೇರಿ (ಜನಹಿತ ಪಕ್ಷ) ನಾಮಪತ್ರ ಸಲ್ಲಿಸಿದ್ದಾರೆ.

ಏ 25 ರಂದು ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪಿ.ಬಿ.ಪ್ರಶಾಂತ್‌ ತಿಳಿಸಿದ್ದಾರೆ.

ಸಮಯದೊಂದಿಗೆ ಸೆಣಸಾಟ

ಮೆರವಣಿಗೆ ನಡೆಸಿ 2.30ರ ವೇಳೆಗೆ ಸಂಸದ ಸಂಗಣ್ಣ ಬೆಂಬಲಿಗರು ತಹಶೀಲ್ದಾರ್‌ ಕಚೇರಿ ತಲುಪಿದರು. ಆ ವೇಳೆಗಾಗಲೇ ಸುಸ್ತಾಗಿದ್ದ ಸಂಗಣ್ಣ ಕೆಲಕಾಲ ವಿಶ್ರಾಂತಿ ಪಡೆದರು. ಚುನಾವಣಾಧಿಕಾರಿ ಕಚೇರಿಯೊಳಗೆ ಹೋಗಲು ಮುಂದಾದಾಗ ಅದಾಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸರದಿಯಲ್ಲಿದ್ದರು. ಕೊನೇ ಕ್ಷಣದಲ್ಲಿ ಸಮಯ ಮೀರುವ ಮುನ್ನ ನಾಮಪತ್ರ ಸಲ್ಲಿಸಲೇಬೇಕಾದ್ದರಿಂದ ಅಭ್ಯರ್ಥಿಗಳನ್ನು ಮಾತ್ರ ಕೊಠಡಿಯೊಳಗೆ ಬಿಡಲಾಯಿತು. ಸೂಚಕರನ್ನು ಹೊರಗಿರಿಸಿ ತಾಂತ್ರಿಕ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಕೊಪ್ಪಳದಲ್ಲಿ ನಾಮಪತ್ರ ಸಲ್ಲಿಸಿದವರು

ಅಭ್ಯರ್ಥಿ; ಪಕ್ಷ

ಕೆ.ಎಂ.ಸೈಯದ್‌; ಜೆಡಿಎಸ್‌

ಅಮರೇಶ್‌ ಕರಡಿ; ಬಿಜೆಪಿ

ಸಂಜಯ್‌ ವಿಠಲರಾವ್‌; ಪಕ್ಷೇತರ

ಮಂಜುನಾಥ ಪಲ್ಲೇದ; ಜನಹಿತ ಪಕ್ಷ

ಹನುಮಪ್ಪ ಮ್ಯಾಗಳಮನಿ; ಸಿಪಿಐ(ಎಂಎಲ್‌)

ಪಂಪಾಪತಿ ಪರಪ್ಪ; ಪಕ್ಷೇತರ

ಕೆ.ರಾಜಶೇಖರ ಹಿಟ್ನಾಳ; ಪಕ್ಷೇತರ

ಸಂಗಣ್ಣ ಕರಡಿ; ಬಿಜೆಪಿ

ಸಿದ್ದರಾಮಪ್ಪ; ಪಕ್ಷೇತರ

ಕನಕಗಿರಿ

ಡಾ.ಎಂ.ಪಿ.ದಾರುಕೇಶ್ವರಯ್ಯ; ಪಕ್ಷೇತರ

ಈರಣ್ಣ ಗರುಡಯ್ಯ; ಪಕ್ಷೇತರ

ಹನುಮಂತ ಭೋವಿ; ಪಕ್ಷೇತರ

ಮುಕ್ಕಣ್ಣ; ಎಂಇಪಿ

ಗಂಗಾವತಿ

ನಾಗರಾಜ ಗುರುಶಾಂತನವರ; ಸಿಪಿಐ (ಎಂಎಲ್‌)

ಟಿಎನ್‌ಎಸ್‌ ವರಪ್ರಸಾದ; ಪಕ್ಷೇತರ

ರಮೇಶ ಹುಲುಗಪ್ಪ; ಪಕ್ಷೇತರ

ಕರಿಯಣ್ಣ ಸಂಗಟಿ; ಜೆಡಿಎಸ್‌

ಸೈಯದ್‌ ಜರೀನಾ; ಪಕ್ಷೇತರ

ಬಾಳಪ್ಪ ದೊಡ್ಡಪ್ಪ; ಜೆಡಿಎಸ್‌

ವಿನಯಕುಮಾರ ರೆಡ್ಡಿ; ಎಂಐಎಂಇಪಿ

ದಿಗಂಬರರಾವ್‌; ಪಕ್ಷೇತರ

ಫಾತಿಮಾ ರಾಜಾಭಕ್ಷಿ; ಪಕ್ಷೇತರ

ಶರಣಬಸವ; ಪಕ್ಷೇತರ

ಮಹಮದ್‌ ನಾತಿಬ್‌ ಆಲಂ; ಪಕ್ಷೇತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT