ಶನಿವಾರ, ಆಗಸ್ಟ್ 24, 2019
28 °C

‘ಫ್ಯಾನ್’ ಪ್ರೇಮಗಾಳಿ ಸಿದ್ಧ

Published:
Updated:
Prajavani

‘ನಮ್ಮ ಹಿಂದೆ ದೊಡ್ಡ ಸಿನಿಮಾವೊಂದು ಬಿಡುಗಡೆ ಆಗಿದೆ. ನಮ್ಮ ಮುಂದೆ ದೊಡ್ಡ ಸಿನಿಮಾವೊಂದು ಬಿಡುಗಡೆ ಆಗಲಿದೆ. ಇವೆರಡರ ನಡುವೆ, ನಮ್ಮ ಸಿನಿಮಾ ತೆರೆಗೆ ಬರಲಿದೆ...’

‘ಫ್ಯಾನ್’ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮದ ಆರಂಭದಲ್ಲಿ ನಿರ್ದೇಶಕ ದರ್ಶಿತ್ ಭಟ್ ಹೇಳಿದ ಮಾತು ಇದು. ಅದ್ದೂರಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್‌ 9ರಂದು ಬಿಡುಗಡೆ ಕಂಡಿದೆ. ಇನ್ನೊಂದು ಅದ್ದೂರಿ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ಸೆಪ್ಟೆಂಬರ್‌ ಮೊದಲ ವಾರದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ಇವೆರಡು ಚಿತ್ರಗಳ ನಡುವೆ, ಭಟ್ ನಿರ್ದೇಶನದ ‘ಫ್ಯಾನ್’ ಚಿತ್ರ ಆಗಸ್ಟ್‌ 24ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ‘ಎರಡು ದೊಡ್ಡ ಸಿನಿಮಾಗಳ ನಡುವಿನಲ್ಲಿ ನಿಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಹೋಗಬೇಡಿ. ನಿಮ್ಮ ಸಿನಿಮಾ ಕಳೆದುಹೋಗುವ ಸಾಧ್ಯತೆ ಇದೆ ಎಂದು ಕೆಲವರು ನಮ್ಮ ಬಳಿ ಎಚ್ಚರಿಕೆಯ ಮಾತು ಕೂಡ ಆಡಿದ್ದಾರೆ’ ಎಂದರು ಭಟ್.

ಆದರೂ, ತಮ್ಮ ಸಿನಿಮಾ ಬಗ್ಗೆ ವಿಶ್ವಾಸ ಇರುವುದು ಅವರ ಮಾತಿನಲ್ಲಿ ಕಾಣಿಸುತ್ತಿತ್ತು. ‘ಒಳ್ಳೆಯ ಹೂರಣದ ಸಿನಿಮಾಗಳನ್ನು ಕನ್ನಡದ ಜನ ಯಾವತ್ತೂ ಕೈಬಿಟ್ಟಿಲ್ಲ. ಬಾಹುಬಲಿಯಂತಹ ಅದ್ದೂರಿ ಚಿತ್ರ ತೆರೆಯ ಮೇಲಿದ್ದ ಸಮಯದಲ್ಲೇ, ರಂಗಿತರಂಗ ಸಿನಿಮಾವನ್ನು ಜನ ಗೆಲ್ಲಿಸಿದ್ದಾರೆ. ನಮ್ಮದು ಕೂಡ ಒಳ್ಳೆಯ ಹೂರಣ ಇರುವ ಚಿತ್ರ’ ಎಂದರು ಭಟ್.

‘ನಮ್ಮ ಚಿತ್ರವು ಎಲ್ಲ ಅಂಶಗಳನ್ನೂ ಚೆನ್ನಾಗಿ ಪೋಣಿಸಿದ ಮುತ್ತಿನ ಹಾರದಂತೆ ಇದೆ’ ಎಂದೂ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಒಂದು ಸೂಪರ್‌ಹಿಟ್‌ ಧಾರಾವಾಹಿಯ ನಾಯಕ ನಟ ಹಾಗೂ ಆತನನ್ನು ಸಿಕ್ಕಾಪಟ್ಟೆ ಇಷ್ಟಪಡುವ ಯುವತಿ ಈ ಕಥೆಯ ಕೇಂದ್ರಬಿಂದುವಿನಲ್ಲಿ ಇದ್ದಾರೆ. ಆರ್ಯನ್ ಮತ್ತು ಅದ್ವಿತಿ ಶೆಟ್ಟಿ ಚಿತ್ರದ ನಾಯಕ–ನಾಯಕಿ.

Post Comments (+)