ಶನಿವಾರ, ಅಕ್ಟೋಬರ್ 19, 2019
27 °C

ಮಲಯಾಳ ಹಾಡಿಗೆ ವೀಕ್ಷಕರು ಫಿದಾ

Published:
Updated:
Prajavani

‘ಲವ್‌ ಆ್ಯಕ್ಷನ್‌ ಡ್ರಾಮಾ’ ಮಲಯಾಳ ಸಿನಿಮಾದ ಟೀಸರ್ ಹಾಗೂ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆ ಎಬ್ಬಿಸಿದೆ.

ಧ್ಯಾನ್‌ ಶ್ರೀನಿವಾಸನ್‌ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾವನ್ನು ವಿಕಾಸ್‌ ಸುಬ್ರಹ್ಮಣಿಯಮ್‌ ಹಾಗೂ ಅಜು ವರ್ಗೀಸ್ ನಿರ್ಮಾಣ ಮಾಡಿದ್ದಾರೆ.

ನಿವಿನ್‌ ಪೌಳಿ, ನಯನತಾರಾ, ಶ್ರೀನಿವಾಸನ್‌ ನಟಿಸಿದ್ದಾರೆ. ‘ಕುಡುಕ್ಕು ಪೊಟ್ಟಿಯ ಕುಪ್ಪಾಯಂ’ ಹಾಡು ಯೂಟ್ಯೂಬ್‌ನಲ್ಲಿ 8 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 

ಮಾಲಿವುಡ್‌ನ ಹೊಸ ಅಲೆಯ ಸಿನಿಮಾಗಳಲ್ಲಿ ಗ್ರಾಮೀಣ ನುಡಿಗಟ್ಟು, ಜಾನಪದ ಶೈಲಿಯನ್ನು ಬಳಸಿ ಹಾಡುಗಳನ್ನು ಸಿದ್ಧಪಡಿಸುವುದು ಸಾಮಾನ್ಯವಾಗಿದೆ. ಈ ಹಾಡು ಕೂಡ ಇಂಥ ಅಪರೂಪದ ಪ್ರಯೋಗಗಳಲ್ಲಿ ಒಂದು. ಮಧ್ಯೆ ಮಧ್ಯೆ ಇಂಗ್ಲಿಷ್ ಶಬ್ದಗಳನ್ನೂ ಕೂಡ ಬಳಸಿ ಹಾಡನ್ನು ರಸವತ್ತಾಗಿಸಲಾಗಿದೆ. ಮಲಯಾಳಂನ ಖ್ಯಾತ ಯುವ ನಟ, ವಿನೀತ್ ಶ್ರೀನಿವಾಸನ್ ಈ ಹಾಡಿಗೆ ಕಂಠದಾನ ಮಾಡಿರುವುದು ವಿಶೇಷ.

ಬಾಲ್ಯದ ಗೆಳತಿಗೆ ಹಿಂದಿನ ರಸಮಯ ಗಳಿಗೆಗಳನ್ನು ನೆನಪಿಸುವುದು ಹಾಡಿನ ಆಂತರ್ಯ. ಕುಡುಕ್ಕು ಪೊಟ್ಟಿಯ ಕುಪ್ಪಾಯಂ ಉಡುತ್ತು ಮಂಡಣ ಕಾಲತ್ತ್ ಮಿಡುಕ್ಕಿ ಪೆಣ್ಣೇ ಎನ್ನುಡೆ ನೆಂಜಿನ್ ನಡುಕ್ಕಿರುನ್ನವಳಾಣೇ ನೀ (ಗುಂಡಿ ಇಲ್ಲದ ಹರಕಲು ಬಟ್ಟೆ ಹಾಕುತ್ತ ಓಡುತ್ತಿದ್ದ ಕಾಲದಲ್ಲಿ ನನ್ನ ಹೃದಯದಾಳದಲ್ಲಿ ಮನೆ ಮಾಡಿದ ಚೂಟಿ ಹುಡುಗಿ ನೀನು) ಎಂದು ಆರಂಭವಾಗುವ ಹಾಡು ‘ಈಗ ಸಂಭ್ರಮದಲ್ಲಿ ಜೊತೆಯಾಗು, ಸಾಧ್ಯವಾಗದಿದ್ದರೆ ತೊಲಗಾಚೆ ಎಂದು ಮುಂದುವರಿಯುತ್ತದೆ.

Post Comments (+)