ಸನಾತನಿಯ ಸಿನಿಮಾ ಯಾನ

7

ಸನಾತನಿಯ ಸಿನಿಮಾ ಯಾನ

Published:
Updated:

‘ಜೀವನ ಎಂಬುದು ಅನುಭವಗಳ ಭಂಡಾರ, ಬದುಕಿನ ಪ್ರತಿ ಹೆಜ್ಜೆಯಲ್ಲೂ ಅನುಭವಗಳಿರುತ್ತವೆ. ಆ ಅನುಭವಗಳೇ ನಮಗೆ ಬದುಕಿನ ಪಾಠವನ್ನು ಕಲಿಸುತ್ತವೆ’ ಎಂದು ಜೀವನದ ಆಳ–ಅರ್ಥವನ್ನು ಅನುಭವಿಯಂತೆ ಉಸುರುವ ಈ ಕನಸು ಕಂಗಳ ನಟಿ ಸನಾತನಿ.

ಹುಬ್ಬಳ್ಳಿ ಮೂಲದ ಇವರು ಬೆಳೆದಿದ್ದು ದಾವಣಗೆರೆಯಲ್ಲಿ. ಫ್ಯಾಷನ್ ಡಿಸೈನಿಂಗ್ ಡಿಪ್ಲೊಮಾ ಕೋರ್ಸ್ ಮಾಡಿರುವ ಇವರು ಭರತನಾಟ್ಯ ಕಲಾವಿದೆ.

ಚಂದನವನಕ್ಕೆ ಕಾಲಿರಿಸಿದ್ದು ಬಾಲನಟಿಯಾಗಿ. ಬಾಲ್ಯದಲ್ಲಿ ನಿರ್ದೇಶಕ ಸಿದ್ಧಲಿಂಗಯ್ಯನವರು ಇವರನ್ನು ನೋಡಿ ನಟನೆಗೆ ಅವಕಾಶ ನೀಡಿದ್ದರು. ಮೊದಲು ನಟಿಸಿದ ಸಿನಿಮಾ ‘ಬಾ ನನ್ನ ಪ್ರೀತಿಸು’. ನಂತರ ‘ಗೋಪಿಕೃಷ್ಣ’, ‘ಮೋಜಿನ ಮದುವೆ’, ‘ಕಲಿಯುಗ ಸೀತೆ’ ಸಿನಿಮಾಗಳಿಗೂ ಬಣ್ಣ ಹಚ್ಚಿದರು. ಮುಂದೆ ಓದುವ ಸಲುವಾಗಿ ಬಣ್ಣದ ಲೋಕ ಬಿಟ್ಟು ಶಾಲೆಯತ್ತ ಮುಖ ಮಾಡಿದರು.

ತಾಯಿಯ ಆಸೆಯಂತೆ ನಟನೆ ಮುಂದುವರಿಸಬೇಕು ಎಂದುಕೊಂಡಿದ್ದ ಇವರು ಭರತನಾಟ್ಯ ಕಲಿತರು. ಇವರ ತಾಯಿಗೆ ಬಾಲ್ಯದಿಂದಲೂ ಹಾಡು, ನೃತ್ಯದಲ್ಲಿ ವಿಪರೀತ ಆಸಕ್ತಿ ಇತ್ತು. ಅದೇ ಇವರಿಗೂ ಬಳುವಳಿಯಾಗಿ ಬಂದಿತ್ತು.

ನಟನೆಯ ಬಗ್ಗೆ ಹೆಚ್ಚಿಗೆ ಏನೂ ತಿಳಿದುಕೊಂಡಿರದ ಇವರಿಗೆ 15 ದಿನಗಳ ಎನ್‌ಎಸ್‌ಡಿ ಶಿಬಿರ ನಟನೆಯ ಆಳ–ಅಗಲವನ್ನು ಕಲಿಸಿತ್ತು. ‘ಈಶ್ವರ ಅಲ್ಲಾ ನೀನೆ ಎಲ್ಲಾ’ ಎಂಬ ಧಾರಾವಾಹಿಯಲ್ಲಿ ಒಂದೇ ಒಂದು ಎಪಿಸೋಡ್‌ನಲ್ಲಿ ನೃತ್ಯಗಾರ್ತಿಯಾಗಿ ನಟಿಸಿದ್ದರು. ಅಲ್ಲಿಂದ ಮತ್ತೆ ಅವರ ನಟನಾಯಾತ್ರೆ ಮುಂದುವರಿದಿತ್ತು. ನಂತರ ‘ಮೌನಕ್ರಾಂತಿ’, ‘ಶಿವಲೀಲಾಮೃತ’, ‘ಸಂಗೊಳ್ಳಿ ರಾಯಣ್ಣ’, ‘ಇದ್ರ ಇರಬೇಕು ನಿನ್ ಹಂಗಾ’ ಧಾರಾವಾಹಿಗಳಲ್ಲೂ ನಟಿಸಿದರು.

ಆಕಸ್ಮಿಕವೋ, ಅದೃಷ್ಣವೋ ಎಂಬಂತೆ ಚಂದನವನದಲ್ಲಿ ಕಾಲಿರಿಸುವ ಅವಕಾಶ ಇವರನ್ನು ಹುಡುಕಿಕೊಂಡು ಬಂದಿತ್ತು. ನಟ ರಮೇಶ್ ಅರವಿಂದ್ ನಾಯಕರಾಗಿದ್ದ ‘ಕ್ರೇಜಿ ಕುಟುಂಬ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮೇಲೆ ‘ನಮ್ಮಣ್ಣ ಡಾನ್’, ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾಕ್ಕೂ ಬಣ್ಣ ಹಚ್ಚಿದ್ದರು.

ಇವರಿಗೆ ಪೂರ್ಣಪ್ರಮಾಣದ ಹೆಸರು ತಂದು ಕೊಟ್ಟಿದ್ದು ಜೀ ವಾಹಿನಿಯ ‘ಗೃಹಲಕ್ಷ್ಮೀ’ ಧಾರಾವಾಹಿ. ‘ಈ ಧಾರಾವಾಹಿ ನನ್ನ ಜೀವನಕ್ಕೆ ತಿರುವು ನೀಡಿತ್ತು, ಅದರಲ್ಲಿ 2 ಬಾರಿ ಉತ್ತಮ ನಟಿ ಪ್ರಶಸ್ತಿಯೂ ದಕ್ಕಿತ್ತು. ಅಲ್ಲದೇ ಒಂದೇ ಪಾತ್ರದಲ್ಲಿ ಹಲವು ರೀತಿಯ ವ್ಯಕ್ತಿತ್ವವನ್ನು ನಿರ್ವಹಿಸುವ ಅವಕಾಶ ಸಿಕ್ಕಿತ್ತು’ ಎಂದು ಖುಷಿಯಿಂದ ಹೇಳುತ್ತಾರೆ ಅವರು.

ನಟನೆಗೆ ಕೆಲ ಕಾಲ ಬಿಡುವು ನೀಡಿದ್ದ ಸನಾತನಿ ಈಗ ಮತ್ತೆ ಬಣ್ಣ ಹಚ್ಚುವ ಹಂಬಲದಲ್ಲಿದ್ದಾರೆ.

‘ನಾನು ಈವರೆಗೂ ನಟಿಸಿದ ಪಾತ್ರಗಳನ್ನು ನೋಡಿದವರು ನಾನು ಹೋಮ್ಲಿ ಪಾತ್ರಗಳಿಗೆ ಹೆಚ್ಚು ಒಗ್ಗುತ್ತೇನೆ, ಹಾಗಾಗಿ ಸೈಲೆಂಟ್ ಆದ ಎಮೋಷನಲ್ ಪಾತ್ರಗಳು ಸೂಟ್ ಆಗುತ್ತವೆ ಎನ್ನುತ್ತಾರೆ. ಆದರೆ ನನಗೆ ವೈಯಕ್ತಿಕವಾಗಿ ಎಲ್ಲಾ ಥರದ ಪಾತ್ರಗಳಲ್ಲೂ ನಟಿಸಲು ಇಷ್ಟ. ಅದರಲ್ಲೂ ಹುಚ್ಚಿ ಅಥವಾ ಅಬ್‌ನಾರ್ಮಲ್ ಪಾತ್ರಗಳಲ್ಲಿ ನಟಿಸುವುದು ಹೆಚ್ಚು ಇಷ್ಟ’ ಎಂದು ಪಾತ್ರಗಳ ಆಯ್ಕೆಯ ಬಗ್ಗೆ ತಿಳಿಸುತ್ತಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ ‘ನಾನು ಈವರೆಗೆ ಈ ಕ್ಷೇತ್ರದಲ್ಲಿ ಎಂದಿಗೂ ಅಂಥ ಅನುಭವಗಳನ್ನು ಎದುರಿಸಿಲ್ಲ, ನನಗೆ ಅನ್ನಿಸಿದ ಹಾಗೇ ನಾವು ಹೇಗೆ ಇರುತ್ತೇವೆಯೋ ಜನ ನಮ್ಮನ್ನು ಹಾಗೆ ನಡೆಸಿಕೊಳ್ಳುತ್ತಾರೆ. ಎಲ್ಲವೂ ನಮ್ಮ ಕೈಯಲೇ ಇದೆ’ ಎಂದು ದೃಢವಾಗಿ ಹೇಳುತ್ತಾರೆ ಸನಾತನಿ. 

ರಾತ್ರಿ ವೇಳೆ ಐಸ್‌ಕ್ರೀಂ ಮೆಲ್ಲುತ್ತಾ ಲಾಂಗ್ ಡ್ರೈವ್ ಹೋಗುವುದನ್ನು ಇಷ್ಟ ಪಡುವ ಇವರಿಗೆ, ಕಸೂತಿ ಮಾಡುವುದೆಂದರೂ ತುಂಬಾ ಇಷ್ಟವಂತೆ, ಆದರೆ ಸಮಯವಿಲ್ಲದ ಕಾರಣ ಎಲ್ಲವೂ ಮೂಲೆ ಸರಿದಿದೆ ಎನ್ನುತ್ತಾ ಮಾತು ಮುಗಿಸುತ್ತಾರೆ ಈ ಹುಬ್ಬಳ್ಳಿ ಹುಡುಗಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !