ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿರಂಗದಲ್ಲಿ ‘ಬಿಂದು’ ಮಿಂಚು

Last Updated 5 ಏಪ್ರಿಲ್ 2019, 5:41 IST
ಅಕ್ಷರ ಗಾತ್ರ

ಮಂಗಳೂರು: ಚೇತನ್‌ ಮುಂಡಾಡಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಪ್ರವೇಶ’ ಚಿತ್ರದ ಚಿತ್ರೀಕರಣ ಮುಗಿದು ಹಲವು ತಿಂಗಳುಗಳೇ ಕಳೆದಿವೆ. ಈ ಸಿನಿಮಾದ ಎಡಿಟಿಂಗ್‌ ಕಾರ್ಯ ಈಗ ಭರದಿಂದ ಸಾಗಿದ್ದು, ಈ ತಿಂಗಳ ಎರಡನೇ ವಾರದಿಂದ ಡಬ್ಬಿಂಗ್‌ ಕೆಲಸ ಆರಂಭಗೊಳ್ಳಲಿದೆ.

‘ಪ್ರವೇಶ ಚಿತ್ರದ ಚಿತ್ರೀಕರಣ ಮುಗಿದು ತುಂಬ ದಿನಗಳೇ ಕಳೆದವು. ನಿರ್ದೇಶಕರು ಚಲನಚಿತ್ರೋತ್ಸವ ಹಾಗೂ ಸಿನಿಮಾ ಸಂಬಂಧಿ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ‘ಪ್ರವೇಶ’ ಚಿತ್ರದ ಕೆಲಸಗಳು ಸ್ವಲ್ಪ ಸಮಯ ಮುಂದಕ್ಕೆ ಹೋದವು. ಈಗ ಚಿತ್ರದ ಎಡಿಟಿಂಗ್‌ ಕೆಲಸ ಆರಂಭಗೊಂಡಿದೆ. ಎಡಿಟಿಂಗ್‌ ಮುಗಿದ ನಂತರ, ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಎಲ್ಲ ಕಲಾವಿದರೂ ಡಬ್ಬಿಂಗ್‌ ಮಾಡಬೇಕಿರುವುದರಿಂದ ಈ ಕೆಲಸ ಹತ್ತರಿಂದ ಹದಿನೈದು ದಿನಗಳ ಕಾಲ ನಡೆಯಬಹುದು’ ಎನ್ನುತ್ತಾರೆ ‘ಪಡ್ಡಾಯಿ’ ಚೆಲುವೆ ಬಿಂದು ರಕ್ಷಿದಿ.

ರಂಗಭೂಮಿ ಕಲಾವಿದೆಯಾಗಿರುವ ಬಿಂದು ರಕ್ಷಿದಿ ‘ಪಡ್ಡಾಯಿ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಪ್ರವೇಶ’ ಅವರ ಎರಡನೇ ಸಿನಿಮಾ. ಈ ಚಿತ್ರದಲ್ಲಿ ಅವರು ವಿಭಿನ್ನವಾದಂತಹ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

‘ನನಗೆ ತಿಳಿದಿರುವಂತೆ ಚಿತ್ರದ ಎಡಿಟಿಂಗ್‌ ಕೆಲಸ ಎರಡು ರೀತಿಯಲ್ಲಿ ನಡೆಯುತ್ತಿದೆ. ಅಂದರೆ, ‘ಪ್ರವೇಶ’ ಸಿನಿಮಾದಲ್ಲಿ ಕಲಾತ್ಮಕ ಅಂಶಗಳು ಹೆಚ್ಚಿರುವುದರಿಂದ ಇದನ್ನು ಚಲನಚಿತ್ರೋತ್ಸವಗಳ ಸ್ಪರ್ಧೆಗೆ ಕಳುಹಿಸುವ ಯೋಚನೆ ನಿರ್ದೇಶಕರಿಗೆ ಇದೆ. ಹಾಗಾಗಿ, ಇಡೀ ಸಿನಿಮಾವನ್ನು 90ರಿಂದ 100 ನಿಮಿಷಗಳಿಗೆ ಸಂಕಲನ ಮಾಡಲಿದ್ದಾರೆ. ಹಾಗೆಯೇ, ಮತ್ತೊಂದು ಚಿತ್ರಮಂದಿರಗಳಲ್ಲಿ ತೆರೆಕಾಣಿಸಲು ಅಗತ್ಯವಿರುವಂತೆ ಹೆಚ್ಚು ಸಮಯದ ಚಿತ್ರವನ್ನು ರೂಪಿಸುವ ಸಿದ್ಧತೆಯಲ್ಲಿದ್ದಾರೆ. ಹಾಗಾಗಿ, ಏಕಕಾಲಕ್ಕೆ ಎರಡೂ ಎಡಿಟಿಂಗ್‌ ಕೆಲಸಗಳು ನಡೆಯುತ್ತಿದ್ದು, ಅದರಲ್ಲಿ ಒಂದು ಸ್ಪರ್ಧೆಗೆ ಇನ್ನೊಂದು ಪ್ರದರ್ಶನಕ್ಕೆ ಮೀಸಲುಗೊಳ್ಳಲಿದೆ’ ಎನ್ನುತ್ತಾರೆ ಬಿಂದು ರಕ್ಷಿದಿ. ‌

ಚಿತ್ರರಂಗಕ್ಕೆ ಬಂದ ನಂತರವೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ನಟಿ ಬಿಂದು ರಕ್ಷಿದಿ ಅವರು ಈಗ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ‘ಆ್ಯಕ್ಟ್‌–ರಿಯಾಕ್ಟ್‌’ ಎಂಬ ತಂಡ ಕಟ್ಟಿಕೊಂಡು ಮಕ್ಕಳಲ್ಲಿ ರಂಗಪ್ರೀತಿ ಬೆಳೆಸುತ್ತಿದ್ದಾರೆ. ಪ್ರಸ್ತುತ ಅವರು ಮಕ್ಕಳಿಗಾಗಿ 15 ದಿನಗಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮಕ್ಕಳಿಗೆ ರಂಗ ಕಲೆಯ ಪಟ್ಟುಗಳನ್ನು ಹೇಳಿಕೊಡುತ್ತಿದ್ದಾರೆ. ಈಗಾಗಲೇ ಮಕ್ಕಳಿಂದಲೇ ಒಂದು ನಾಟಕ ಮಾಡಿಸಿ, ಪ್ರದರ್ಶನ ನೀಡಿದ್ದಾರೆ.

‘‍ಪ್ರವೇಶ’ ಸಿನಿಮಾದ ನಂತರ ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಆದರೆ, ನಿರ್ದೇಶಕ ಚೇತನ್‌ ಮುಂಡಾಡಿ ಅವರದ್ದೇ ಮತ್ತೊಂದು ಸಿನಿಮಾ ಆಗಸ್ಟ್‌ನಲ್ಲಿ ಪ್ರಾರಂಭಗೊಳ್ಳಲಿದ್ದು, ಆ ಚಿತ್ರದಲ್ಲೂ ನಾನು ನಟಿಸುತ್ತಿದ್ದೇನೆ. ಚೇತನ್‌ ಮುಂಡಾಡಿ ಅವರ ಜತೆಗೆ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ತುಂಬ ಖುಷಿ ಇದೆ. ಅವರ ಕೈಯಲ್ಲಿ ಈಗ ಒಂದು ಕನ್ನಡ ಹಾಗೂ ಮತ್ತೊಂದು ತುಳು ಸ್ಕ್ರಿಪ್ಟ್‌ ಇದೆ. ಅದರಲ್ಲಿ ಯಾವ ಚಿತ್ರವನ್ನು ಮೊದಲಿಗೆ ಪ್ರಾರಂಭಿಸುತ್ತಾರೆ ಎಂದು ತಿಳಿದಿಲ್ಲ. ಚೇತನ್‌ ಮುಂಡಾಡಿ ಅವರ ಮುಂದಿನ ಸಿನಿಮಾ ಕಲಾತ್ಮಕ ಚಿತ್ರ ಆಗಿರುವುದಿಲ್ಲ. ಅದೊಂದು ಕಮರ್ಷಿಯಲ್‌ ಸಿನಿಮಾ. ಈ ಚಿತ್ರದಲ್ಲಿ ಅವರು ನನ್ನನ್ನು ತುಂಬ ವಿಭಿನ್ನವಾಗಿ ತೋರಿಸಲಿದ್ದಾರೆ ಎಂಬುದಷ್ಟೇ ತಿಳಿದಿದೆ. ಚಿತ್ರದ ಕತೆಯನ್ನು ಇನ್ನೂ ಕೇಳಿಲ್ಲ. ಏಕೆಂದರೆ, ನಿರ್ದೇಶಕರು ಈಗ ತುಂಬ ಬ್ಯುಸಿಯಾಗಿದ್ದಾರೆ’ ಎಂದು ತಮ್ಮ ಹೊಸ ಚಿತ್ರದ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ ನಟಿ ಬಿಂದು ರಕ್ಷಿದಿ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ ಮುಂಡಾಡಿ ಅವರು ತಮ್ಮ ಹೊಸ ಚಿತ್ರ ‘‍ಪ್ರವೇಶ’ ಸಿನಿಮಾದಲ್ಲಿ ಸೌಹಾರ್ದದಿಂದ ಬದುಕುತ್ತಿರುವ ಮುಗ್ಧ ಜನರಿರುವ ಒಂದು ಹಳ್ಳಿಯಲ್ಲಿ ರಾಜಕೀಯ ಮತ್ತು ದನದ ವಿಚಾರದಿಂದ ಏನೆಲ್ಲಾ ಸಂಗತಿಗಳು ಘಟಿಸುತ್ತವೆ ಹಾಗೂ ಮಾಧ್ಯಮಗಳು ಆ ವಿಚಾರಗಳನ್ನು ಹೇಗೆಲ್ಲಾ ವೈಭವೀಕರಿಸಿ ತೋರಿಸುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ನಿರೂಪಿಸಿದ್ದಾರೆ. ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿದ್ದು, ಬಿಡುಗಡೆಯ ದಿನಾಂಕ ತಿಳಿದಿಲ್ಲ ಎನ್ನುತ್ತಾರೆ ಬಿಂದು ರಕ್ಷಿದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT