ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ಹೊಸ ಮುಖ ವೈಜಯಂತಿ ಅಡಿಗ

Last Updated 9 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಂಗಶಂಕರ ತಂಡದವರ ‘ಅಕ್ಕು‌’ ನಾಟಕ ನೋಡಿದ್ದೆ. ಕಲಾವಿದರ ಅಭಿನಯ ಹಾಗೂ ಇಡೀ ನಾಟಕ ಬಹಳ ಇಷ್ಟವಾಗಿ ತಂಡದೊಂದಿಗೆ ಮಾತನಾಡಿದೆ. ನಾನೂ ಅಭಿನಯಿಸಬೇಕು ಎಂದು ಹೇಳಿದೆ. ತಂಡಕ್ಕೆ ಸೇರಿಸಿ ಪಾತ್ರ ಕೊಟ್ಟರು. ನಾಟಕದಲ್ಲಿ ಕಂಡು ಖುಷಿಪಟ್ಟಿದ್ದ ಅಮ್ಮಚ್ಚಿಯ ಪಾತ್ರ ನಾನಾದೆ. ಎಂಟು ಬಾರಿ ಅಮ್ಮಚ್ಚಿ ಪಾತ್ರಕ್ಕೆ ರಂಗಭೂಮಿಯಲ್ಲಿ ಬಣ್ಣ ಹಚ್ಚಿದೆ. ಸಿನಿಮಾದಲ್ಲೂ ಅದೇ ಪಾತ್ರ ನಿರ್ವಹಿಸಿದೆ...’ ಹೀಗೆಂದು ನಟನೆ ಹಿಂದಣ ರಂಗದ ನೆನಪುಗಳನ್ನು ತೆರೆದಿಡುತ್ತಾರೆ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ನಟಿ ವೈಜಯಂತಿ ಅಡಿಗ.

ವೈಜಯಂತಿ ಅಡಿಗ ಕನ್ನಡ ಚಿತ್ರರಂಗಕ್ಕೆ ಹೊಸಮುಖ. ‘ಎಲ್ಲೋ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ವ್ಯಾಸಂಗ ಮಾಡುತ್ತಿದ್ದ ನನಗೆ ಮರಳಿ ಬೆಂಗಳೂರಿಗೆ ಬಂದಾಗ ಇಂತಹ ಅವಕಾಶ ಕೈ ಹಿಡಿಯುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ಅವಕಾಶ ಬಹಳ ಖುಷಿಕೊಟ್ಟಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್‌ ಸಿನಿಮಾ ಸ್ಕೂಲ್‌ನಲ್ಲಿ 4 ತಿಂಗಳು ತರಬೇತಿ ಪಡೆದಿದ್ದ ನನಗೆ, ನಟಿಸುವುದಾದರೆ ಒಳ್ಳೆಯ ಚಿತ್ರದಲ್ಲೇ ನಟಿಸಬೇಕು ಎನ್ನುವ ಹಂಬಲ ಇತ್ತು. ಅದಕ್ಕೋಸ್ಕರ ಈ ಮೊದಲು ಸಿಕ್ಕಿದ್ದ ಅವಕಾಶಗಳನ್ನು ಕೈಬಿಟ್ಟಿದ್ದೆ. ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದೆ' ಎನ್ನುತ್ತಾರೆ ವೈಜಯಂತಿ.

ವೈಜಯಂತಿ ಅವರ ತಂದೆ ವಾಸುದೇವ ಅಡಿಗ ಕುಂದಾಪುರದವರು. ಉದ್ಯೋಗದ ಜತೆಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರಿಂದ ವೈಜಯಂತಿ ತಮ್ಮ ಬಾಲ್ಯವನ್ನು ಬೆಂಗಳೂರಿನಲ್ಲಿ ಕಳೆದರು. ‘ಮನೆಯಲ್ಲಿ ಬೆಂಗಳೂರು ಕನ್ನಡವೇ ಮಾತನಾಡುತ್ತೇವೆ. ಆದರೆ, ಕುಂದಾಪುರದ ಸಂಬಂಧಿಕರು ಮನೆಗೆ ಬಂದಾಗಭಾಷೆ ಬದಲಾಗುತ್ತದೆ. ಅವರ ಜತೆಗೆ ಕುಂದಗನ್ನಡದಲ್ಲೇ ಮಾತನಾಡ್ತೇವೆ’ ಎನ್ನುತ್ತಾರೆ ಅವರು.

‘ಚಿತ್ರರಂಗದ ಬಗ್ಗೆ ನನ್ನಲ್ಲಿ ಬೇರೆಯದೇ ಆದ ಕಲ್ಪನೆಗಳಿದ್ದವು. ಆದರೆ ಚಿತ್ರರಂಗ ಅದಕ್ಕಿಂತಲೂ ಭಿನ್ನವಾಗಿದೆ‌. ನಾನು ಅಂದುಕೊಂಡಂತೆ ಏನೂ ಇರಲಿಲ್ಲ. ಸಿನಿಮಾ ಅಂದ್ರೆ ಹೀಗೂ ಇರುತ್ತದಲ್ಲ ಅಂತ ಖುಷಿಯಾಯ್ತು. ಸಿನಿಮಾ ಸೆಟ್‌ನಲ್ಲಿ ಸಾಕಷ್ಟು ಎಂಜಾಯ್‌ ಮಾಡಿದ್ದೇನೆ. ಆ ಇಡೀ ವಾತಾವರಣವೇ ನನಗೆ ಸಿನಿಮಾಕ್ಕಿಂತಲೂ ಹೆಚ್ಚಾಗಿ ನೈಜ ಬದುಕಿನಂತೆಯೇ ಅನಿಸುತ್ತಿತ್ತು.ಕೆಲವೊಮ್ಮೆ ಶೂಟಿಂಗ್‌ ಇಲ್ಲದಿದ್ದರೂ ಆ ಮನೆಯ ಸುತ್ತ ಇಡೀ ವಾತಾವರಣವನ್ನು ಹೀಗೇ ಸುಮ್ಮನೆ ಅನುಭವಿಸಲು ಓಡಾಡುತ್ತಿದ್ದೆ.. ನಾವೆಲ್ಲರೂ ಒಂದು ಕುಟುಂಬದವರಂತೆ ಆಗಿ ಹೋಗಿದ್ದೆವು’ ಎನ್ನುತ್ತಾರೆ ಅವರು.

‘ನಟನೆಗಿಂತಲೂ ಮುಖ್ಯವಾಗಿ ನನಗೆ ಡಾನ್ಸ್ ಅಂದ್ರೆ ಇಷ್ಟ. ಭರತನಾಟ್ಯ ಹಾಗೂ ಕಥಕ್ ನೃತ್ಯ ಮಾಡುತ್ತೇನೆ. ಕಥಕ್‌ ನೃತ್ಯದ ಪಿತಾಮಹ ಎಂದೇ ಖ್ಯಾತರಾದ ಪಂಡಿತ್ ಬಿರ್ಜು ಮಹರಾಜ್ ಅವರಿಂದ ಕಥಕ್ ಕಲಿಯುತ್ತಿದ್ದೇನೆ. ನೃತ್ಯ ಕೇಂದ್ರಿತ ಸಿನಿಮಾಗಳಲ್ಲಿನಟಿಸುವಾಸೆ ಇದೆ ಎನ್ನುತ್ತಾರೆ ವೈಜಯಂತಿ.

ಪಕ್ಕಾ ಮಾಡರ್ನ್‌ ಲುಕ್‌ ಹೊಂದಿರುವ ವೈಜಯಂತಿ ಅವರಿಗೆ ಮೊದಲ ಸಿನಿಮಾದಲ್ಲಿ ಸಿಕ್ಕಿದ ಪಾತ್ರ ಮಾತ್ರ ಪಕ್ಕಾ ಹಳ್ಳಿ ಹುಡುಗಿಯದ್ದು. ಹಳ್ಳಿಯ ಸೊಗಡಿಗೂ ಸೂಕ್ತವೆನಿಸುವಂತೆ ವೈಜಯಂತಿ ಮುಖದ ಮುಗ್ಧತೆ ಚಿತ್ರದ ದೃಶ್ಯಗಳಲ್ಲಿ ಎದ್ದು ಕಾಣುತ್ತದೆ. ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಹಿಟ್‌ ಆಗಿವೆ.

‘ಮುಖ್ಯವಾಗಿ ಪಂಡಿತ್ ಕಾಶೀನಾಥ್ ಪತ್ತಾರ್ ಅವರ ಸಂಗೀತ ನಮ್ಮ ಮನಸ್ಸನ್ನು ಹಿಡಿದಿಡುತ್ತದೆ.ರಾಜ್‌ ಬಿ. ಶೆಟ್ಟಿ. ಅತ್ಯಂತ ಸರಳ ವ್ಯಕ್ತಿತ್ವದ ನಟ ಹಾಗೂ ನಿರ್ದೇಶಕ. ಮೊದ ಮೊದಲು ಅವರ ಜತೆ ಹೇಗೆ ನಟಿಸುವುದು ಎಂಬ ಅಂಜಿಕೆ ಇತ್ತು ನನಗೆ. ಕಾರಣ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ ಅವರು ಮೊದಲೇ ಸಿನಿಮಾದಲ್ಲಿ ತೊಡಗಿಸಿಕೊಂಡವರು. ಆದರೆ ಸೆಟ್‌ನಲ್ಲಿ ಅವರ ಸಹಕಾರ, ಸಲಹೆ ತುಂಬಾ ಖುಷಿಕೊಟ್ಟಿತು. ನಟನೆಯಲ್ಲೂ ಅವರು ಅತ್ಯಂತ ಸರಳವಾಗಿ, ರಿಯಲಿಸ್ಟಿಕ್‌ ಆಗಿ ನಟಿಸುತ್ತಾರೆ.

ಸಿನಿಮಾರಂಗದಲ್ಲಿ ತಮಗೆ ಗೊತ್ತಿರುವುದನ್ನು, ಕಲಿತಿರುವುದನ್ನು ನಮ್ಮ ತಂಡದೊಂದಿಗೆ ಕುಳಿತು ಹಂಚುತ್ತಾರೆ. ಅವರ ಜತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ’ ಎಂದು ನಟ ರಾಜ್‌ ಬಿ. ಶೆಟ್ಟಿ ಜತೆ ನಟಿಸಿದ ಅನುಭವದ ಕುರಿತು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ ನಟಿ.

‘ಎಲ್ಲವನ್ನೂ ಕಲಿಯಬೇಕು ಎನ್ನುವ ಹಂಬಲ. ಸಿನಿಮಾ, ನೃತ್ಯ,ರಂಗಭೂಮಿ ಹೀಗೆ ನನಗೆ ಕಲಿಯಬೇಕೆನಿಸಿದ್ದನ್ನು ಕಲಿಯುತ್ತಲೇ ಇರುತ್ತೇನೆ. ಮುಂದೆ 80 ವರ್ಷದ ಮುದುಕಿಯಾದಾಗ, ‘ಅಯ್ಯೋ ನಾನೇನನ್ನೂ ಕಲಿತಿಲ್ಲವಲ್ಲ’ ಎಂದು ಸಂಕಟಪಡುವ ಸ್ಥಿತಿ ಬರಬಾರದು’ ಎಂದು ನಗುತ್ತಾರೆ ಅವರು.

‘ಸಿನಿಕ್ಷೇತ್ರದಲ್ಲಿ ನನ್ನ ಭವಿಷ್ಯ ಮೊದಲ ಸಿನಿಮಾದ ಯಶಸ್ಸಿನ ಮೇಲೆ ನಿಂತಿದೆ’ ಎನ್ನುವ ವೈಜಯಂತಿ ಅವರ ಚಂದನವನದ ಪಯಣ ಮೊದಲ ಚಿತ್ರದ ಯಶಸ್ಸಿನ ಬಹು ನಿರೀಕ್ಷೆಯೊಂದಿಗೆ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT