ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಈಶಾನ್ಯ ರಾಜ್ಯಗಳ ನೈಜ ಚಿತ್ರಣ ಕಟ್ಟಿಕೊಡಿ’

ಮಾಧ್ಯಮಗಳ ಧೋರಣೆಗೆ ನಿರ್ದೇಶಕರ ಅಸಮಾಧಾನ
Last Updated 23 ಫೆಬ್ರುವರಿ 2019, 11:08 IST
ಅಕ್ಷರ ಗಾತ್ರ

ಬೆಂಗಳೂರು: ‘ಈಶಾನ್ಯ ರಾಜ್ಯಗಳ ಕುರಿತು ಇಂದಿಗೂ ಮಾಧ್ಯಮಗಳ ಧೋರಣೆ ಬದಲಾಗಿಲ್ಲ. ನೈಜವಾಗಿ ಅಲ್ಲಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವೇ ನಡೆಯುತ್ತಿಲ್ಲ’ ಎಂದು ನಟಿ ಮತ್ತು ನಿರ್ದೇಶಕಿ ಸುಲಕ್ಷನಾ ಬರುವಾ ವಿಷಾದಿಸಿದರು.

ನಗರದ ಒರಾಯನ್‌ ಮಾಲ್‌ನಲ್ಲಿ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶನಿವಾರ ನಡೆದ ನಿರ್ದೇಶಕರ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.

‘ಈಶಾನ್ಯ ರಾಜ್ಯಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಚಿತ್ರಿಸಲಾಗುತ್ತಿದೆ. ಮಾಧ್ಯಮಗಳು ಈ ವೃತ್ತದಿಂದ ಹೊರಹೊರಬೇಕು. ಈಗ ಅಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಹಾಗಾಗಿ, ಅಲ್ಲಿನ ನೈಜ ಚಿತ್ರಣ ಕಟ್ಟಿಕೊಡಲು ಮುಂದಾಗಬೇಕು’ ಎಂದರು.

ಅಸ್ಸಾಂನಲ್ಲಿ ಪ್ರತಿಯೊಂದು ಬುಡಕಟ್ಟು ಜನರಿಗೂ ಒಂದೊಂದು ಭಾಷೆಯಿದೆ. ಆದರೆ ಹಿಂದಿಯು ಎಲ್ಲ ಸ್ಥಳೀಯ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ನಿಜ ಎಂದು ಹೇಳಿದರು.

ಶೌಚಾಲಯದ ಮಹತ್ವ ಸಾರುವ ‘ಭೋರ್’ ಚಿತ್ರದ ನಿರ್ದೇಶಕ ಕಮಖಿಯಾ ನಾರಾಯಣ ಸಿಂಗ್‌ ಕೂಡ ಸುಲಕ್ಷನಾ ಬರುವಾ ಅವರ ಮಾತಿಗೆ ಧ್ವನಿಗೂಡಿದರು. ‘ನಾನು ಕೂಡ ಈಶಾನ್ಯ ಭಾಗದ‍ಪ್ರತಿನಿಧಿ. ಈಶಾನ್ಯ ರಾಜ್ಯಗಳಲ್ಲಿ ಎರಡು ದಶಕದ ಹಿಂದೆ ಇದ್ದಂತಹ ಪರಿಸ್ಥಿತಿಗೂ, ಈಗಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅದನ್ನು ಗುರುತಿಸುವ ಕೆಲಸವಾಗುತ್ತಿಲ್ಲ’ ಎಂದು ವಿಷಾದಿಸಿದರು.

ಇಪ್ಪತ್ತು ವರ್ಷಗಳ ಹಿಂದೆ ಈಶಾನ್ಯ ಭಾಗದ ಜನರು, ವಿದ್ಯಾರ್ಥಿಗಳು ದೆಹಲಿಗೆ ಹೋಗುತ್ತಿರಲಿಲ್ಲ. ಬೆಂಗಳೂರಿಗಂತೂ ಬರುತ್ತಿರಲಿಲ್ಲ. ಅಲ್ಲಿಗೆ ಭೇಟಿ ನೀಡಿದರೂ ದೆಹಲಿಯ ಜನರು ನಮ್ಮನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಇದಕ್ಕೆ ಹಲವು ಕಾರಣಗಳಿವೆ.ಈಗಿನ ಯುವಜನರು ಸುಶಿಕ್ಷಿತರಾಗಿದ್ದಾರೆ. ದೇಶದ ಎಲ್ಲ ರಾಜ್ಯಗಳಲ್ಲೂ ಶಿಕ್ಷಣ ಸೇರಿದಂತೆ ವಿವಿಧ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

‘ನಾನು ನಾಗಾಲ್ಯಾಂಡ್‌ ಭಾಗದಲ್ಲಿ ಸುತ್ತಿದ್ದೇನೆ. ಅಲ್ಲಿನ ಗಡಿ ಪ್ರದೇಶದ ಪರಿಚಯವೂ ಇದೆ. ಅಲ್ಲಿನ ಯುವಜನರು ವಿದ್ಯಾವಂತರಾಗಿದ್ದಾರೆ’ ಎಂದರು.

ನಿರ್ದೇಶಕಿ ಬೇಬಿ ಶರ್ಮ ಬರುವಾ ಈಶಾನ್ಯ ಭಾಗದ ಜನರ ಬಗ್ಗೆ ದೆಹಲಿ ಜನರಲ್ಲಿರುವ ಮನೋಭಾವವನ್ನು ಬಿಡಿಸಿಟ್ಟರು. ‘ನಾನು ಎರಡು ದಶಕದಿಂದಲೂ ದೆಹಲಿಯಲ್ಲಿ ಇದ್ದೇನೆ. ಈಶಾನ್ಯ ರಾಜ್ಯಗಳ ಜನರ ಮುಖಚರ್ಯೆ ಮಂಗೋಲಿಯನ್ನರಂತೆ ಕಾಣುತ್ತದೆ. ದೆಹಲಿ ಜನರು ನಮ್ಮನ್ನು ಮಂಗೋಲಿಯ ಪ್ರಜೆಗಳಂತೆ ಕಾಣುತ್ತಿದ್ದರು. ಆಧುನಿಕ ಯುಗದಲ್ಲಿ ಕೊಂಚಮಟ್ಟಿಗೆ ನಮ್ಮನ್ನು ನೋಡುವ ಅಲ್ಲಿನವರ ನೋಟ ಬದಲಾಗಿದೆ’ ಎಂದು ಹೇಳಿದರು.

ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌. ವಿದ್ಯಾಶಂಕರ್, ಇಂಡೋನೇಷ್ಯಾದ ನಿರ್ದೇಶಕ ರವಿ ಎಲ್. ಭರ್ವಾನಿ, ಶ್ರೀಲಂಕಾದ ನಿರ್ದೇಶಕ ಅನುರುದ್ಧ್‌ ಜೈಸಿಂಘೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT