ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿಯಲ್ಲಿ ಚಿತ್ರೋತ್ಸವ: ಸೃಜನಾತ್ಮಕ ಚಿತ್ರಗಳಿಗೆ ಮನಸೋತ ಪ್ರೇಕ್ಷಕರು

ಮಂಗಳೂರು ವಿವಿಯಲ್ಲಿ ‘ರಿಫ್ಲೆಕ್ಷನ್‌’ ಚಲನಚಿತ್ರೋತ್ಸವ
Last Updated 12 ಏಪ್ರಿಲ್ 2019, 3:08 IST
ಅಕ್ಷರ ಗಾತ್ರ

ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದರೆ ಅದು ಸಿನಿಮಾ. ಸಿನಿಮಾ ಪ್ರೇಕ್ಷಕನ ಮನಸ್ಸನ್ನು ತಲುಪುವಷ್ಟು ಬೇರೆ ಯಾವುದೂ ತಲುಪದು. ಸಿನಿಮೋತ್ಸವಗಳಲ್ಲಿ ತಮ್ಮ ಇಷ್ಟದ ಸಿನಿಮಾಗಳನ್ನು ವೀಕ್ಷಿಸಲು ಮನಸ್ಸಿನ ಕಣ್ಣು ತೆರೆದು ಕೂತಿರುತ್ತಾರೆ ಸಿನಿಪ್ರಿಯರು. ಬಹುತೇಕ ಪ್ರಶಸ್ತಿ ವಿಜೇತ ಸಿನಿಮಾಗಳನ್ನೇ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವುದು ಸಹಜ. ಕಲಾತ್ಮಕ ಸಿನಿಮಾಗಳು ಎಲ್ಲೋ ಒಂದೆಡೆ ಯುವಮನಸ್ಸುಗಳನ್ನು ಗೆಲ್ಲುವುದಕ್ಕೆ ದೊಡ್ಡ ಪಾಡು ಪಡುತ್ತದೆ. ಆದರೆ ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಆಯೊಜಿಸಲಾಗಿದ್ದ ‘ರಿಫ್ಲೆಕ್ಷನ್‌’ ರಾಜ್ಯ ಮಟ್ಟದ ಸಿನಿಮೋತ್ಸವ ಒಂದು ಭಿನ್ನ ಅನುಭವ ನೀಡಿದೆ.

ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು. ಮೊದಲ ದಿನದಂದು ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರದರ್ಶನಗೋಂಡ ಚಿತ್ರ, ತುಳುವಿನ ‘ಪಡ್ಡಾಯಿ’. ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಪಡೆದಿತ್ತು ಪಡ್ಡಾಯಿ ಚಿತ್ರ. ನಿರ್ದೇಶಕ ಅಭಯಸಿಂಹ, ನಟ ಚಂದ್ರಹಾಸ ಉಳ್ಳಾಲ, ನಾ. ದಾಮೋದರ ಶೆಟ್ಟಿ, ನಟಿ ಬಿಂದು ರಕ್ಷಿದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿರ್ದೇಶಕರ ಜತೆ ವಿದ್ಯಾರ್ಥಿಗಳು ಸಿನಿಮಾಕ್ಕೆ ಸಂ‌ಬಂಧಿಸಿದ ಚರ್ಚೆ ನಡೆಸಿದರು.

ಎರಡನೇ ಸಿನಿಮಾ ಕನ್ನಡ ಚಿತ್ರ ‘ಶುದ್ಧಿ’. ತೀರಾ ಕಲಾತ್ಮಕ ನೆಲೆಗಟ್ಟು ಹೊಂದಿರುವ ಈ ಚಿತ್ರ, ವಿದ್ಯಾರ್ಥಿಗಳನ್ನು ಕಾಡುವಂತೆ ಮಾಡಿತು. ಸಿನಿಮಾ ಕುರಿತ ಅವರ ಕುತೂಹಲವನ್ನು ಚಿತ್ರ ಉಳಿಸಿಕೊಂಡು ಬಂದಿತ್ತು. ಮೊದಲ ದಿನದ ಈ ಎರಡು ಚಿತ್ರಗಳ ಪ್ರದರ್ಶನ ಯಶಸ್ವಿಯಾಗಿ ನಡೆದು, ಎರಡನೇ ದಿನದಂದು ‘ಮಂಗಳ ಸಭಾಂಗಣ’ ವಿದ್ಯಾರ್ಥಿಗಳ ಪಾಲಿಗೆ ಚಿತ್ರಮಂದಿರವೇ ಆಗಿ ಹೋಗಿತ್ತು.

ನಟಿ ಶ್ರುತಿ ಹರಿಹರನ್‌ ಹಾಗೂ ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರ ಎರಡನೇ ದಿನ ಪ್ರದರ್ಶನಗೊಂಡಿತು. ಯುವ ಹಾಗೂ ಪ್ರತಿಭಾವಂತ ನಿರ್ದೇಶಕ ಮಂಸೋರೆ ಕೂಡಾ ಚಿತ್ರದ ಜತೆಗೆ ಸಭಾಂಗಣದಲ್ಲಿ ಪ್ರತ್ಯಕ್ಷರಾಗಿದ್ದರು. ಚಿತ್ರದ ಪ್ರತಿ ಸನ್ನಿವೇಶವನ್ನೂ ಪ್ರೇಕ್ಷಕರು ಗಂಭೀರ ನೆಲೆಯಲ್ಲಿಯೇ ವೀಕ್ಷಿಸಿದರು. ಎಲ್ಲರೂ ಚಿತ್ರದೊಳಗಿನ ಪಾತ್ರಗಳಾದಂತೆ ಭಾಸವಾಗುತ್ತಿತ್ತು. ಹೆಣ್ಣಿನ ಬದುಕಿನ ಬಹುಮುಖ್ಯ ಹಾಗೂ ಸೂಕ್ಷ್ಮ ಅಂಶಗಳನ್ನು ಗಟ್ಟಿ ನೆಲೆಯಲ್ಲಿಯೇ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ, ಚಿತ್ರದುದ್ದಕ್ಕೂ ಪ್ರೇಕ್ಷಕನನ್ನು ಮೂಕನನ್ನಾಗಿಸಿದ್ದರು.

ನಾತಿಚರಾಮಿ ಪ್ರದರ್ಶನದ ಬಳಿಕ ಚಿತ್ರದ ಕುರಿತು ಸಂವಾದ ನಡೆಯಿತು. ನಟಿ ಶ್ರುತಿ ಹರಿಹರನ್‌ ಕುರಿತಂತೆ ಸೃಷ್ಟಿಸಲಾದ ವಿವಾದಗಳ ಕುರಿತು ಬಹಳ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಅವರು, ಹೆಣ್ಣಿನ ಕುರಿತ ಗಂಡಿನ ದೃಷ್ಟಿಕೋನಕ್ಕೆ ಹೊಸ ಆಯಾಮ ಒದಗಿಸಿಕೊಟ್ಟರು. ‘ಹೆಣ್ಣಿನ ಕುರಿತು ಗಂಡು ಎಷ್ಟೇ ಮಾತನಾಡಿದರೂ ಹೆಣ್ಣು ಹೆಣ್ಣೇ’ ಎಂಬ ಅವರ ಮಾತು ಬಹು ಆಯಾಮಗಳಲ್ಲಿ ಗಾಢವಾದ ಅರ್ಥವನ್ನು ಒಳಗೊಂಡಿತ್ತು. ನಾತಿಚರಾಮಿಯ ಜತೆಗೆ ಮಂಸೋರೆ ಮಾತುಗಳೂ ಪ್ರೇಕ್ಷಕರ ಮನ ತಟ್ಟಿದವು.

ನಾತಿಚರಾಮಿ ಬಳಿಕ ಚಂಪಾ ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರ ಪ್ರದರ್ಶನಗೊಂಡಿತು. ಕಡಲ ತಡಿಯಲ್ಲಿ ಕುಳಿತು ನೆನಪುಗಳನ್ನು ಮೆಲುಕು ಹಾಕುವ ಚಿತ್ರದ ಕತೆ ಬರೆದ ಲೇಖಕಿ ವೈದೇಹಿ ಅವರ ದೃಶ್ಯ, ಅವರದೇ ನಿರೂಪಣೆಯೊಂದಿಗೆ ಚಿತ್ರ ಶುರುವಾಗುತ್ತದೆ. ಇದು, ಚಿತ್ರಕ್ಕೆ ಆಪ್ತಭಾವವನ್ನೂ ತಂದುಕೊಟ್ಟಿದೆ ಎನ್ನಬಹುದು. ಹಾಸ್ಯ, ಸಂಕಟ, ಸಂವೇದನೆಗಳ ಜತೆಗೆ ಪ್ರತಿರೋಧದ ಧ್ವನಿ ಚಿತ್ರದುದ್ದಕ್ಕೂ ಕಂಡಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟಿತು. ಅಕ್ಕು, ಅಮ್ಮಚ್ಚಿ ಮನಸ್ಸಿನಲ್ಲಿ ಉಳಿಯುವ ಪಾತ್ರಗಳಾಗಿ ಕಂಡವು. ವೆಂಕಪ್ಪಯ್ಯ ಬಲವಂತವಾಗಿ ತನ್ನನ್ನು ಮದುವೆಯಾದ ಬಳಿಕ, ಸ್ವಲ್ಪ ದಿನಗಳ ನಂತರ ಒಂಟಿಯಾಗಿ ಮನೆಗೆ ಬರುವ ಅಮ್ಮಚ್ಚಿ, ‘ಒಬ್ಬಳೇ ಏಕೆ ಬಂದೆ’ ಎಂಬ ಪುತ್ತಮ್ಮತ್ತೆಯ ಪ್ರಶ್ನೆಗೆ ಉತ್ತರಿಸುತ್ತಾ, ‘ವೆಂಕಪ್ಪಯ್ಯ ಸತ್ತ’ ಎಂದು ಲೆಕ್ಕಕ್ಕೇ ಇಲ್ಲದಂತೆ ಹೇಳಿ ನಗೆ ಬೀರಿದಾಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ ಸದ್ದು ಕೇಳಿಸಿತು. ಸೇಸಮ್ಮತ್ತೆಯ ಪಾತ್ರ ನಿರ್ವಹಿಸಿ ಚಿತ್ರಕ್ಕೆ ಬಂಡವಾಳ ಹೂಡಿದ ಗೀತಾ ಸುರತ್ಕಲ್, ಪುಟ್ಟಮ್ಮತ್ತೆಯ ಪಾತ್ರ ನಿರ್ವಹಿಸಿದ ನಟ ಭಾಗಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT