ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಾಹಸ ಪರಿಕರಗಳ ಮಳಿಗೆ

soul tree -matighatta
Last Updated 17 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಅದು ‘ಚಕ್ರವ್ಯೂಹ’ ಸಿನಿಮಾದ ಹೊಡೆದಾಟದ ದೃಶ್ಯ. ವಿಲನ್ ಅನ್ನು ಅಟ್ಟಾಡಿಸಿಕೊಂಡು ಹೊಡೆಯುವ ಹೀರೋ ಕೈಗೆ ಸಿಕ್ಕ ಆಕ್ಸಿಜನ್ ಸಿಲಿಂಡರ್ ಅನ್ನೇ ವಿಲನ್ ಮೇಲೆ ಎತ್ತಿ ಬಿಸಾಡುತ್ತಾನೆ. ಸೀಟಿನ ತುದಿಯಲ್ಲಿ ಕುಳಿತ ಹೊಡೆದಾಟದ ದೃಶ್ಯ ವೀಕ್ಷಿಸುವ ಪ್ರೇಕ್ಷಕರಿಗೆ ಅದೆಲ್ಲವೂ ನೈಜವೆಂಬಂತೆ ಕಾಣುತ್ತದೆ. ಆದರೆ, ಆ ನೈಜತೆಯ ಹಿಂದೆ ಡಮ್ಮಿ ಪರಿಕರಗಳ ಕಮಾಲ್ ಇದೆ!

–ಹೌದು. ಸಿನಿಮಾದ ಸಾಹಸ ದೃಶ್ಯಗಳಲ್ಲಿ ಬಳಸುವ ಆಯುಧಗಳು, ಪರಿಕರಗಳ ಹಿಂದೆ ಕಲಾ ನಿರ್ದೇಶಕರ ಕೈಚಳಕವಿರುತ್ತದೆ. ಸಾಹಸ ದೃಶ್ಯಗಳಿಗೆ ಒರಿಜನಲ್ ಪರಿಕರಗಳನ್ನು ಬಳಸಿದರೆ ಕಲಾವಿದರಿಗೆ ಹಾನಿಯಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಜೀವವೂ ಹೋಗಬಹುದು. ಸಿನಿಮಾದಲ್ಲಿ ಎಲ್ಲವೂ ನೈಜವಾಗಿದೆ ಎಂದು ತೋರಿಸಿಕೊಡಲು ನೈಜತೆ ಪ್ರತಿರೂಪವಾಗಿರುವ ಡಮ್ಮಿ ಪರಿಕರಗಳನ್ನು ಬಳಸಲಾಗುತ್ತದೆ.

ಹೊಡೆದಾಟದ ದೃಶ್ಯಗಳು ನೈಜವಾಗಿ ಮೂಡಿಬರಲು ಸಾಹಸ ದೃಶ್ಯಗಳಿಗೆ ಬೇಕಾದ ಡಮ್ಮಿ ಪರಿಕರಗಳನ್ನು ಮಾಡುವ ಕಲಾವಿದರ ಗುಂಪೇ ಸಿನಿಮಾದ ನೇಪಥ್ಯದಲ್ಲಿರುತ್ತದೆ. ಅಂಥ ಡಮ್ಮಿ ಪರಿಕರಗಳನ್ನು ಮಾಡಿಕೊಡುವಲ್ಲಿ ನೈಪುಣ್ಯ ಸಾಧಿಸಿರುವ ಕಲಾ ನಿರ್ದೇಶಕ ಮಲ್ಲಿಕಾರ್ಜುನ ಮತಿಘಟ್ಟ, ಸೋಲ್ ಟ್ರೀ ಕ್ರಿಯೇಷನ್ಸ್‌ ಹೆಸರಿನಲ್ಲಿ ಡಮ್ಮಿ ಪರಿಕರಗಳ ಮಳಿಗೆ ಆರಂಭಿಸಿದ್ದಾರೆ.

ಒಂದೂವರೆ ದಶಕದಿಂದ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮಲ್ಲಿಕಾರ್ಜುನ ಮತಿಘಟ್ಟ ತಿಪಟೂರು ಮೂಲದವರು. ರಂಗಶಿಕ್ಷಣಕ್ಕೆ ಸಂಬಂಧಿಸಿದಂತೆ ನೀನಾಸಂ ಪದವಿ ಪಡೆದಿದ್ದಾರೆ. ಕೆಲಕಾಲ ತಿರುಗಾಟದಲ್ಲಿ ತೊಡಗಿಕೊಂಡಿದ್ದ ಅವರಿಗೆ ಜೀವನದ ಪ್ರಶ್ನೆ ಎದುರಾದಾಗ ಕೈಹಿಡಿದದ್ದು ನೇಪಥ್ಯ ಕಲೆ.

ನಾಟಕಗಳಲ್ಲಿ ಭಾಗವಹಿಸುತ್ತ ರಂಗದ ಹಿಂದಿನ ಕಲೆಯನ್ನೂಮಲ್ಲಿಕಾರ್ಜುನ ಕರಗತ ಮಾಡಿಕೊಂಡಿದ್ದಾರೆ. ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲೂ ಬಹುಮಾನ ಪಡೆದಿದ್ದಾರೆ. ಬೆಳಕು ವಿನ್ಯಾಸ ಮತ್ತು ಸೆಟ್‌ ಹಾಕುವುದರಲ್ಲಿ ನಿಸ್ಸೀಮರಾಗಿದ್ದ ಅವರನ್ನು ನಾಗತಿಹಳ್ಳಿ ರಮೇಶ್ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಳಿ ಸಿನಿಮಾದ ಕೆಲಸಕ್ಕೆ ಸೇರಿಸಿದರಂತೆ. ರಂಗಭೂಮಿಯ ಅನುಭವ ಸಿನಿಮಾದ ನೇಪಥ್ಯದಲ್ಲಿ ಕೆಲಸ ಮಾಡಲು ಸಹಕಾರಿಯಾಯಿತು ಅನ್ನುತ್ತಾರೆ ಮಲ್ಲಿಕಾರ್ಜುನ.

ಹಿರಿಯ ಕಲಾನಿರ್ದೇಶಕ ಶಶಿಧರ ಅಡಪ ಅವರ ಬಳಿ ಸಹಾಯಕನಾಗಿ ಕೆಲ ಕಾಲ ಕೆಲಸ ಮಾಡಿದ ಮಲ್ಲಿಕಾರ್ಜುನ, ಸ್ವಂತ ಸ್ಟುಡಿಯೊ ಹೊಂದಿದ್ದಾರೆ. ಡಮ್ಮಿ ಪರಿಕರಗಳು ಮತ್ತು ನೇಪಥ್ಯ ಕಲೆ ಬಗ್ಗೆ ಅನೇಕ ಕಾರ್ಯಾಗಾರಗಳನ್ನೂ ನಡೆಸಿರುವ ಅವರು, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ದಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಯಾವುದೇ ಸಿನಿಮಾ ನಿರ್ದೇಶಕನಿಗೆ ಕ್ಯಾಮೆರಾಮ್ಯಾನ್ ಮತ್ತು ಕಲಾನಿರ್ದೇಶಕ ಎರಡು ಕಣ್ಣುಗಳಿದ್ದಂತೆ ಅನ್ನುವುದು ಮಲ್ಲಿಕಾರ್ಜುನ ಅವರ ಅನುಭವದ ನುಡಿ. ಕಲಾ ನಿರ್ದೇಶನಕ್ಕಾಗಿ ಈ ಹಿಂದೆ ನಮ್ಮಲ್ಲಿ ತಮಿಳುನಾಡು ಇಲ್ಲವೇ ಕೇರಳದಿಂದ ಕಲಾವಿದರನ್ನು ಕರೆಸುವ ಪರಿಪಾಠವಿತ್ತು. ನಾವೂ ಅಂಥದ್ದನ್ನು ಮಾಡಬಹುದಲ್ಲ ಅನಿಸಿದಾಗ ರೂಪು ತಳೆದಿದ್ದೇ ‘ಸೋಲ್ ಟ್ರೀ ಕ್ರಿಯೇಷನ್ಸ್‌ನ ಡಮ್ಮಿ ಪರಿಕರಗಳ ಮಳಿಗೆ’. ಬಹುಶಃ ದಕ್ಷಿಣ ಭಾರತದಲ್ಲೇ ಇಂಥದ್ದೊಂದು ಮಳಿಗೆ ಇದೇ ಮೊದಲಿರಬಹುದು ಅನ್ನುತ್ತಾರೆ ಅವರು.

ಆರ್‌ಎಕ್ಸ್ ಸೂರಿ, ಹಾಫ್ ಮೆಂಟಲ್, ಕಿರಗೂರಿನ ಗಯ್ಯಾಳಿಗಳು, ಜಗ್ಗುದಾದಾ, ಚಕ್ರವ್ಯೂಹ ಹೀಗೆ ನೂರಾರು ಸಿನಿಮಾಗಳ ಸಾಹಸ ದೃಶ್ಯಗಳಿಗೆ ಡಮ್ಮಿ ಪರಿಕರಗಳನ್ನು ಮಾಡಿಕೊಟ್ಟಿರುವ ಹೆಗ್ಗಳಿಕೆ ಮಲ್ಲಿಕಾರ್ಜುನ ಅವರದ್ದು.

‘ಈ ಹಿಂದೆ ಧಾರಾವಾಹಿಗಳ ಅಭಿನಯದಲ್ಲಿ ತೊಡಗಿಸಿಕೊಂಡಿದ್ದೆ. ಆದರೀಗ ಡಮ್ಮಿ ಪರಿಕರಗಳ ಕೆಲಸವೇ ಹೆಚ್ಚಾಗಿರುವುದರಿಂದ ಅಭಿನಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಸಿನಿಮಾ ಕ್ಷೇತ್ರದಲ್ಲಿ ತಿಂಗಳ ನಿಗದಿ ಸಂಬಳದಂತೆ ಆದಾಯವಿರುವುದಿಲ್ಲ. ಕೆಲವೊಮ್ಮೆ ಎರಡ್ಮೂರು ತಿಂಗಳು ಕೆಲಸವೇ ಇರೋದಿಲ್ಲ. ಆಗೆಲ್ಲಾ ತುಂಬಾ ಕಷ್ಟಪಡಬೇಕಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ದಶಕವೇ ಕಳೆದರೂ ಇನ್ನೂ ಸೂಕ್ತ ನೆಲೆ ದೊರೆತಿಲ್ಲ. ಕೆಲವೊಮ್ಮೆ ನಾವಂದುಕೊಂಡಂತೆ ಸೆಟ್‌ ಅಥವಾರ ಪರಿಕರಗಳು ಮೂಡಿಬರೋದಿಲ್ಲ. ಮತ್ತೆ ಕೆಲವೊಮ್ಮೆ ಮೋಸವೂ ಆಗುತ್ತದೆ. ಆದರೆ, ಅವೆಲ್ಲವನ್ನೂ ಸರಿದೂಗಿಸಿಕೊಂಡು ಕೆಲಸ ಮಾಡಿಕೊಡಬೇಕಷ್ಟೆ’ ಎನ್ನುತ್ತಾಅವರು ನೇಪಥ್ಯ ಕ್ಷೇತ್ರದ ವಾಸ್ತವ ಬಿಚ್ಚಿಟ್ಟರು.

ಮಲ್ಲಿಕಾರ್ಜುನ ಬರೀ ಡಮ್ಮಿ ಪರಿಕರಗಳನ್ನಷ್ಟೇ ಅಲ್ಲದೇ ಸ್ತಬ್ಧಚಿತ್ರ ತಯಾರಿಕೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ದಸರಾ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಗಳಿಸಿದ್ದಾರೆ. ಜಿಕೆವಿಕೆಯ ಕೃಷಿಮೇಳದಲ್ಲಿ ಮುಖ್ಯದ್ವಾರ, ಸ್ವಾಗತ ಕಮಾನು ಸೇರಿದಂತೆ ಮಳೆನೀರಿನ ಪ್ರಾಮುಖ್ಯತೆ ಕುರಿತು ಮಾಡಿದ್ದ ಮಾದರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ‘ಯಾರ‍್ರಿ ಇದು ಸೆಟ್ ಹಾಕಿದ್ದು ಅಂತ ಸಿದ್ದರಾಮಯ್ಯ ಅವರು ಕೇಳುತ್ತಿದ್ದರೆ, ನಾನು ಅದೇ ಸ್ಟೇಜಿನ ಹಿಂದೆ ಸುಸ್ತಾಗಿ ಮಲಗಿಬಿಟ್ಟಿದ್ದೆ...’ ಎನ್ನುವ ಮಲ್ಲಿಕಾರ್ಜುನ ಅಮೆಜಾನ್‌ಗೂ ನವಿಲು, ಆಟೋರಿಕ್ಷಾ ಮಾದರಿಗಳನ್ನು ಮಾಡಿಕೊಟ್ಟಿದ್ದಾರೆ. ಕಲಾ ನಿರ್ದೇಶನದಲ್ಲಿ ನಾನಿನ್ನೂ ಹೊಸಬ ಎಂದು ವಿನಮ್ರವಾಗಿ ನುಡಿಯುವ ಅವರು, ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ಸಂಪರ್ಕ ಸಂಖ್ಯೆ: 97435 70110

**

ಯಾವುದೇ ಸಿನಿಮಾ ನಿರ್ದೇಶಕನಿಗೆ ಕ್ಯಾaಮೆರಾಮ್ಯಾನ್ ಮತ್ತು ಕಲಾನಿರ್ದೇಶಕ ಎರಡು ಕಣ್ಣುಗಳಿದ್ದಂತೆ. ಕಲಾ ನಿರ್ದೇಶನಕ್ಕಾಗಿ ಈ ಹಿಂದೆ ನಮ್ಮಲ್ಲಿ ತಮಿಳುನಾಡು ಇಲ್ಲವೇ ಕೇರಳದಿಂದ ಕಲಾವಿದರನ್ನು ಕರೆಸುವ ಪರಿಪಾಠವಿತ್ತು. ನಾವೂ ಅಂಥದ್ದನ್ನು ಮಾಡಬಹುದಲ್ಲ ಅನಿಸಿದಾಗ ರೂಪು ತಳೆದಿದ್ದೇ ‘ಸೋಲ್ ಟ್ರೀ ಕ್ರಿಯೇಷನ್ಸ್‌ನ ಡಮ್ಮಿ ಪರಿಕರಗಳ ಮಳಿಗೆ’. ಬಹುಶಃ ದಕ್ಷಿಣ ಭಾರತದಲ್ಲೇ ಇಂಥದ್ದೊಂದು ಮಳಿಗೆ ಇದೇ ಮೊದಲಿರಬಹುದು.
- ಮಲ್ಲಿಕಾರ್ಜುನ, ಕಲಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT