ಬಹುತೇಕ ಹೊಸಬರಿಂದಲೇ ಕೂಡಿರುವ ‘1st ಲವ್ ಗುರು’ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಗುರುಪ್ರಸಾದ್ ಬರೆದು, ನಿರ್ದೇಶಿಸುತ್ತಿದ್ದು, ಕೊಳನಕಲ್ ಮಹಾಗಣಪತಿ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
‘13–14 ವರ್ಷಗಳಿಂದ ಸಾಕಷ್ಟು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಸಿದರೆ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ. ಮನರಂಜನೆ ಜೊತೆಗೆ ಒಂದು ಸಂದೇಶ ಹೊಂದಿದೆ. ಆ್ಯಕ್ಷನ್ ಕೂಡ ಇದೆ. ಸೆಪ್ಟೆಂಬರ್‌ನಿಂದ ಮೊದಲ ಹಂತದ ಚಿತ್ರೀಕರಣ. ಬೆಂಗಳೂರು ಮತ್ತು ಮಂಗಳೂರಿನಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಇದೆ’ ಎಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು ನಿರ್ದೇಶಕರು.
ನಟಿ ಶ್ರುತಿ, ನಾಯಕಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಕಷ್ಟು ಕಿರುಚಿತ್ರಗಳಿಂದ ಗುರುತಿಸಿಕೊಂಡಿರುವ ಪ್ರತೀಕ್‌ಗೆ ಕಿರುತೆರೆ ನಟಿ ತನ್ವಿ ಬಾಲರಾಜ್ ಜೋಡಿಯಾಗಿದ್ದಾರೆ. ನಾಲ್ಕು ಹಾಡುಗಳಿದ್ದು ಮನೋಜವಂ ಆತ್ರೇಯ ಅವರ ಸಂಗೀತ, ಸತೀಶ್ ಜೀ ಛಾಯಾಚಿತ್ರಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.