ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲೂ ಪುಟಿದೆದ್ದ ಉತ್ಸಾಹ

Last Updated 20 ಮೇ 2021, 19:30 IST
ಅಕ್ಷರ ಗಾತ್ರ

ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡು ಸುಮಾರು 10 ದಿನಗಳಾಗಿವೆ. ಈ ಅವಧಿಯಲ್ಲಿ ಚಂದನವನದ ಅನೇಕರು ಅಲ್ಲಲ್ಲಿ ಆಹಾರ ಕಿಟ್‌ ವಿತರಿಸುವುದು, ಅಂಬುಲೆನ್ಸ್‌, ಆಮ್ಲಜನಕ ಒದಗಿಸುವುದು, ಆಕ್ಸಿಜನ್‌ ಬಸ್‌ ವ್ಯವಸ್ಥೆ ಕಲ್ಪಿಸಿರುವುದು ನಡೆದೇ ಇದೆ. ಈ ನಡುವೆ ಇನ್ನೂ ಕೆಲವರು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಿನಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಇದೆ.

‘ಚಂದು–ಚಿನ್ನು’ ಮದುವೆ: ಕಿರುತೆರೆ ಧಾರಾವಾಹಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಕಲಾವಿದರಾದ ಚಂದನ್‌ಕುಮಾರ್‌–ಕವಿತಾಗೌಡ ಜೋಡಿ ಮೇ 14ರಂದು ಮದುವೆಯಾಗಿದೆ. ಮಾಸ್ಕ್‌ ಧರಿಸಿಕೊಂಡೇ ಮದುವೆಯಾದ ಈ ಜೋಡಿ ಮಾಧ್ಯಮಗಳಲ್ಲಿ ಗಮನ ಸೆಳೆದಿತ್ತು.

ತೋಟದ ಮನೆಯಲ್ಲಿ ನಿಖಿಲ್‌: ನಟ ನಿಖಿಲ್‌ ಕುಮಾರಸ್ವಾಮಿ ಅವರು ಬಿಡದಿಯ ತೋಟದ ಮನೆಯಲ್ಲಿ ಕುಟುಂಬ ಸಮೇತ ಇದ್ದಾರೆ. ಇತ್ತೀಚೆಗೆ ತಮ್ಮ ತೋಟದ ಮನೆಗೆ ಗಿರ್‌ ತಳಿಯ ನಾಲ್ಕು ಹಸುಗಳನ್ನು ತರಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಹುಟ್ಟೂರಿನಲ್ಲಿ ಧನಂಜಯ: ನಟ ಧನಂಜಯ ಅವರು ತಮ್ಮ ಹುಟ್ಟೂರು ಅರಸಿಕೆರೆ ಸಮೀಪದ ಕಾಳೇನಹಳ್ಳಿಯಲ್ಲಿ ನೆಲೆಯಾಗಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನ ಅವಧಿಯಲ್ಲಿ ಕುಟುಂಬದೊಡನೆ ಕಾಲಕಳೆಯುವುದು ಬಹಳ ಮುಖ್ಯ. ನಮ್ಮ ಉಪಸ್ಥಿತಿ ಜೊತೆಗೆ ಭಾವನಾತ್ಮಕ ಬೆಸುಗೆ ಹೊಂದುವುದು ಈಗಿನ ಅಗತ್ಯ ಎಂದಿದ್ದಾರೆ ಧನಂಜಯ್‌. ಕೋವಿಡ್‌ ಸಂದರ್ಭದ ಅಸಹಾಯಕರಿಗೆ ಧನಂಜಯ್‌ ಹಾಗೂ ಅವರ ಕುಟುಂಬ ಅಲ್ಲಿಯೂ ನೆರವಾಗುತ್ತಿದೆ.

ಚಿತ್ರಕಥೆ ಬರೆಯುತ್ತಿದ್ದಾರೆ ಪೃಥ್ವಿ ಅಂಬರ್‌: ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್‌ ಅವರು ಹುಟ್ಟೂರು ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಚಿತ್ರಕತೆ ಬರೆಯುತ್ತಿದ್ದಾರೆ. ಜೊತೆಗೆ ಮಲ್ಲಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ತರಕಾರಿ ಬೆಳೆಯುತ್ತಿದ್ದಾರೆ. ‘ಚಿಕ್ಕವನಿದ್ದಾಗ ಕೃಷಿ ಮಾಡುತ್ತಿದ್ದೆ. ಹೀಗಾಗಿ, ಅದನ್ನು ಮರೆತಿಲ್ಲ’ ಎನ್ನುತ್ತಾರೆ ಪೃಥ್ವಿ.

ಶಿವರಾಜ್‌ ಕುಮಾರ್‌ ‘ಆಸರೆ’: ನಟ ಶಿವರಾಜ್ ಕುಮಾರ್-ಗೀತಾ ದಂಪತಿ ‘ಆಸರೆ’ ಯೋಜನೆ ಆರಂಭಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಸುಮಾರು 500 ಮಂದಿಗೆ ನಿತ್ಯ ಊಟ, ಉಪಾಹಾರ ಒದಗಿಸುತ್ತಿದ್ದಾರೆ. ನಾಗವಾರ ಪ್ರದೇಶದಲ್ಲಿ ಈ ಯೋಜನೆ ಚಾಲನೆಯಲ್ಲಿದೆ. ಆಹಾರ ವಿತರಣೆಗಾಗಿಯೇ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ ಎಂದು ಶಿವರಾಜ್‌ ಕುಮಾರ್ ಅವರ ಆಪ್ತರು ಹೇಳಿದ್ದಾರೆ.
ಉಪೇಂದ್ರ ನೆರವಿನಲ್ಲಿ ಮಗ್ನ: ಉಪೇಂದ್ರ ಅವರು ಈಗಾಗಲೇ ಘೋಷಿಸಿರುವಂತೆ ಆಹಾರ ಧಾನ್ಯ, ತರಕಾರಿ ವಿತರಿಸುವ ಕೆಲಸ ಆರಂಭಿಸಿದ್ದಾರೆ. ರೈತರಿಂದಲೇ ಧಾನ್ಯ, ತರಕಾರಿಗಳನ್ನು ಮಾರುಕಟ್ಟೆ ಬೆಲೆಯಲ್ಲೇ ಖರೀದಿಸಿ ಹಂಚುತ್ತಿರುವುದು ವಿಶೇಷ.

ದರ್ಶನ್‌, ಯಶ್‌ ಜಾಗೃತಿ: ದರ್ಶನ್‌ ಮತ್ತು ಯಶ್‌ ಅವರ ಅಭಿಮಾನಿಗಳ ತಂಡಗಳೂ ಅಲ್ಲಲ್ಲಿ ಅಸಹಾಯಕರಿಗೆ ನೆರವಾಗುತ್ತಿವೆ. ಮಾತ್ರವಲ್ಲ ಉಭಯ ನಟರೂ ಕೂಡಾ ಸಾಮಾಜಿಕ ಜಾಲ ತಾಣಗಳ ಮೂಲಕ ಆರೋಗ್ಯ ಇಲಾಖೆಯ ಪರವಾಗಿ ಕೋವಿಡ್‌ ಸಂಬಂಧಿಸಿದ ಜಾಗೃತಿ ವಿಡಿಯೊ ತುಣುಕುಗಳನ್ನು ಹರಿಯಬಿಟ್ಟಿದ್ದಾರೆ. ದರ್ಶನ್‌ ಅವರು ಇತ್ತೀಚೆಗೆ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ನೆರವು ನೀಡುವಲ್ಲಿ ಸುದೀಪ್‌ ಕೂಡಾ ಮುಂಚೂಣಿಯಲ್ಲಿದ್ದಾರೆ.

ನಿಜಜೀವನದಲ್ಲೂ ಹಸೆಮಣೆ ಏರಿದ ಚಂದನ್‌ ಕುಮಾರ್‌ ಹಾಗೂ ಕವಿತಾ ಗೌಡ
ನಿಜಜೀವನದಲ್ಲೂ ಹಸೆಮಣೆ ಏರಿದ ಚಂದನ್‌ ಕುಮಾರ್‌ ಹಾಗೂ ಕವಿತಾ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT