ಚಿತ್ರೀಕರಣದ ಮನೆಗಳು

7

ಚಿತ್ರೀಕರಣದ ಮನೆಗಳು

Published:
Updated:
Deccan Herald

ಶ್ವೇತವರ್ಣದ ಸುಂದರ ಮನೆಯ ಮುಂದೆ ಕ್ಯಾರಾವಾನ್‌, ಜನರೇಟರ್‌ ವಾಹನ ನಿಂತಿದ್ದವು. ಮನೆಯಂಗಳದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ದಾರಿಹೋಕರೂ ರಸ್ತೆಯಲ್ಲಿ ನಿಂತು ನೋಡುತ್ತಿದ್ದರು.

ನಗರದ ಬಲ್ಲಾಳ್‌ ವೃತ್ತದ ಸಮೀಪವಿರುವ ಹಳೆಯ ಮನೆಯಲ್ಲಿ ಆಗಾಗ ಸಿನಿಮಾ ಚಿತ್ರೀಕರಣ ನಡೆಯುತ್ತಿರುತ್ತದೆ. ಜನರು ನಿಂತು ಕುತೂಹಲದಿಂದ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳುತ್ತಾರೆ.

ನೂರು ವರ್ಷ ದಾಟಿರುವ ಈ ಹಳೆಯ ಮನೆ ಸಿನಿಮಾ ಮಂದಿಗೆ ಇಷ್ಟವಾಗಿ, ಚಿತ್ರೀಕರಣ ಮಾಡಲು ಮುಗಿಬೀಳುತ್ತಿದ್ದಾರೆ. ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾಕ್ಕೂ ಈ ಮನೆ ಬಳಕೆ ಮಾಡಿಕೊಂಡಿರುವುದು ವಿಶೇಷ.

ಅರಮನೆ, ಚಾಮುಂಡಿ ಬೆಟ್ಟ, ಕೆಆರ್‌ಎಸ್‌ನಲ್ಲಿ ಕನ್ನಡದ ಬಹಳಷ್ಟು ಸಿನಿಮಾಗಳ ಚಿತ್ರೀಕರಣವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲ ಪುರಾತನ ಮನೆಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗುತ್ತಿದೆ. ಧಾರಾವಾಹಿ ಚಿತ್ರೀಕರಣಕ್ಕೂ ಐಷಾರಾಮಿ, ಪುರಾತನ ಬಂಗಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ

‘ಚಕ್ರವರ್ತಿ’ ಮನೆ

ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಮನೆಯನ್ನು ಕೊಟ್ಟಿರುವ ಮಾಲೀಕ ಲೋಕೇಶ್‌ ಬಾಬು ‘ಮೆಟ್ರೊ’ದೊಂದಿಗೆ ಮಾತನಾಡಿದರು.

‘ದರ್ಶನ್‌ ತಾಯಿ ಹಾಗೂ ನಮ್ಮ ತಾಯಿ ಇಬ್ಬರೂ ಪರಿಚಿತರು. ಹಾಗಾಗಿ, ಅವರು ನಮ್ಮ ಮನೆಯನ್ನು ಚಿತ್ರೀಕರಣಕ್ಕೆ ಕೇಳಿಕೊಂಡರು, ಪರಿಚಯವಿದ್ದುದರಿಂದ ಕೊಟ್ಟೆವು. ಚಕ್ರವರ್ತಿ ಸಿನಿಮಾ 12 ದಿನ ಶೂಟಿಂಗ್‌ ಮಾಡಿದ್ದಾರೆ. ಮದುವೆಯಾಗಿ ಬರುವ ದರ್ಶನ್‌ ಇದೇ ಮನೆಯಲ್ಲಿ ಸಂಸಾರ ಮಾಡುವ ಸನ್ನಿವೇಶವದು. ಬೆಳಿಗ್ಗೆ 6ರಿಂದ ಸಂಜೆವರೆಗೂ ಚಿತ್ರೀಕರಣ ಮಾಡುತ್ತಿದ್ದರು. ಚಕ್ರವರ್ತಿ ಸಿನಿಮಾ ತೆರೆಯ ಮೇಲೆ ನೋಡಿದಾಗ ನಮ್ಮ ಮನೆ ಇಷ್ಟೊಂದು ಸುಂದರವಾಗಿದೆಯಾ ಎನಿಸಿತು’ ಎಂದು ಮನೆಯನ್ನು ಚಿತ್ರೀಕರಣಕ್ಕೆ ಕೊಟ್ಟ ಕಾರಣ ವಿವರಿಸುತ್ತಾರೆ ಮಾಲೀಕ ಲೋಕೇಶ್‌ ಬಾಬು.

ಚಕ್ರವರ್ತಿ ಸಿನಿಮಾ ಅಲ್ಲದೇ ‘ಅತೀರಥ’, ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’ ಎರಡು ದಿನ ಚಿತ್ರೀಕರಣವಾಗಿದೆ. ಹಾಗೂ ‘ಗಿಫ್ಟ್‌ ಬಾಕ್ಸ್‌’ ಸಾಕ್ಷ್ಯಚಿತ್ರವನ್ನೂ ಚಿತ್ರೀಕರಿಸಲಾಗಿದೆ.

ಸುಮಾರು 125 ವರ್ಷ ಹಳೆಯ ಮನೆಯಾದರೂ ಸುಂದರವಾಗಿದೆ. ನಡುಮನೆ, ಕೊಠಡಿ, ಗಾರ್ಡನ್‌ ಹಾಗೂ ಅಡುಗೆಮನೆಯನ್ನು ಹೆಚ್ಚಾಗಿ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ.

ದರ್ಶನ್‌ ಸಿನಿಮಾಕ್ಕಾಗಿ ಮನೆಗೆ ಬೇರೆ ಬಣ್ಣ ಬಳಿದರು. ಪೀಠೋಪಕರಣಗಳನ್ನು ಬದಲಿಸಲಾಯಿತು. ಕೆಲವರು ನಮ್ಮ ಪೀಠೋಪಕರಣಗಳನ್ನೇ ಬಳಸಿಕೊಳ್ಳುತ್ತಾರೆ ಎಂದರು ಲೋಕೇಶ್‌ ಬಾಬು

ಗಲಾಟೆ ಮಾಡೋದಿಲ್ಲ: ಹಣಕ್ಕಾಗಿ ಮನೆಯನ್ನು ಚಿತ್ರೀಕರಣಕ್ಕೆ ಕೊಡುತ್ತಿಲ್ಲ, ನಮ್ಮ ಖುಷಿ ಅಷ್ಟೇ. ಚಿತ್ರೀಕರಣವಿದ್ದಾಗ ಮನೆಯ ಮುಂದೆ ಜನ ಸೇರುತ್ತಾರೆ, ಗಲಾಟೆ ಮಾಡುವುದಿಲ್ಲ ಎಂದು ಹೇಳುತ್ತಾರೆ.

ಮನೆಗೆ ಮದ್ರಾಸ್‌ ತಾರಸಿ ಹಾಕಲಾಗಿದೆ. 15 ಅಡಿ ಎತ್ತರವಿದೆ. ನಾಲ್ಕು ರೂಮ್‌ಗಳು, ಒಂದು ಅಡುಗೆ ಕೋಣೆ ಹಾಗೂ ಮನೆಯ ಮುಂದೆ ಗಾರ್ಡನ್‌ ಏರಿಯಾ ಇದೆ. ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ.

ಮನೆಯ ಬಾಗಿಲು, ಕಿಟಕಿ ಹಾಗೂ ತಾರಸಿ ಹಾಳಾಗದಂತೆ ಕಾಲಕಾಲಕ್ಕೆ ನಿರ್ವಹಣೆ ಮಾಡಲಾಗಿದೆ. ಸಿನಿಮಾದವರೂ ಅಷ್ಟೇ ಚಿತ್ರೀಕರಣವಾದ ಮೇಲೆ ಸ್ವಚ್ಛ ಮಾಡುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಮಾತ್ರ ಚಿತ್ರೀಕರಣಕ್ಕೆ ಅವಕಾಶ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ವಾಹನ ನಿಲ್ಲಿಸಲು ಸ್ಥಳಾವಕಾಶದ ಕೊರತೆ ಹಾಗೂ ಜನರನ್ನು ನಿಭಾಯಿಸಲು ಕಷ್ಟವಾಗುವುದರಿಂದ ಚಿತ್ರೀಕರಣಕ್ಕೆ ಮೈಸೂರಿಗೆ ಬರುವುದು ಹೆಚ್ಚಾಗಿದೆ ಎಂದು ಹೇಳುತ್ತಾರೆ ಲೋಕೇಶ್‌ ಬಾಬು.

ಹಳೆಯ ಮನೆಗಳೇ ಅಚ್ಚುಮೆಚ್ಚು: ಮೈಸೂರಿನಲ್ಲಿ ಹಳೆ, ಸುಂದರ ಮನೆಗಳನ್ನೇ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಯಾದವಗಿರಿ, ಗೋಕುಲಂ, ಸರಸ್ವತಿಪುರಂ ಬಡಾವಣೆಗಳಲ್ಲಿ ನೂರು ವರ್ಷಕ್ಕೂ ಹಳೆಯ ಕಟ್ಟಡಗಳಿವೆ. ‘ನಾನು ಮತ್ತು ವರಲಕ್ಷ್ಮಿ’, ‘ಪಂಚತಂತ್ರ’ ಸಿನಿಮಾಗಳು ಇದೇ ಬಡಾವಣೆಗಳ ಮನೆಗಳಲ್ಲಿ ಚಿತ್ರೀಕರಣಗೊಂಡಿವೆ. ಇತ್ತೀಚೆಗೆ ಹಳೆಯ ಮನೆಗಳನ್ನು ಒಡೆದು ಹಾಕುತ್ತಿರುವುದರಿಂದ ಚಿತ್ರೀಕರಣಕ್ಕೆ ಕೊಂಚ ತೊಡಕಾಗುತ್ತಿದೆ ಎಂದು ಹೇಳುತ್ತಾರೆ ಸಿನಿಮಾ ಪ್ರೊಡಕ್ಷನ್‌ನ ರಾಘವೇಂದ್ರ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !