ಸೋಮವಾರ, ಆಗಸ್ಟ್ 2, 2021
28 °C

Video | ಲಾಕ್‌ಡೌನ್‌ನಲ್ಲಿ ಹೀಗಿತ್ತು ಭಾರತ: ಉಠೇಂಗೆ ಹಮ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಉಠೇಂಗೆ ಹಮ್‌ ಚಿತ್ರ

ಬೆಂಗಳೂರು: ವೈರಸ್‌ ಸೋಂಕು ನಿಯಂತ್ರಿಸುವ ಕಾರಣದಿಂದಾಗಿ ಇಡೀ ದೇಶವೇ 9 ವಾರಗಳ ಲಾಕ್‌ಡೌನ್‌ಗೆ ಒಳಗಾಗಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಸಾರಿಗೆ, ಸಂಚಾರ, ಕಾರ್ಖಾನೆ, ವಹಿವಾಟುಗಳಿಲ್ಲದೆ ಸ್ತಬ್ಧವಾದ ಭಾರತವನ್ನು 117 ಜನರ ತಂಡ ಕ್ಯಾಮೆರಾಗಳಲ್ಲಿ ಸೆರೆ ಮಾಡಿದೆ. ಆ ದೃಶ್ಯಗಳು ಉಠೇಂಗೆ ಹಮ್‌ (ಎದ್ದು ನಿಲ್ಲುವೆವು ನಾವು) ಹೆಸರಿನ ವಿಡಿಯೊ ಮೂಲಕ ಜನರ ಮುಂದಿವೆ.

ಎ.ಆರ್‌.ರಹಮಾನ್‌ ಹಾಡಿರುವ ವಂದೇ ಮಾತರಂ ಗೀತೆಗೆ ವಿಡಿಯೊ ಮೂಲಕ ದೇಶದ ಸೊಬಗನ್ನು ವೀಕ್ಷಕರ ಕಣ್ಣೆದುರಿಗೆ ತಂದಿದ್ದ ಚಿತ್ರ ನಿರ್ದೇಶಕ ಭರತ್‌ಬಾಲ, ಲಾಕ್‌ಡೌನ್‌ ಭಾರತವನ್ನು ಉಠೇಂಗೆ ಹಮ್‌ ಮೂಲಕ ತೋರಿಸಿದ್ದಾರೆ.

ಮಾರ್ಚ್‌ 25ರಿಂದ ಮೇ 31ರ ವರೆಗಿನ ಲಾಕ್‌ಡೌನ್‌ನಲ್ಲಿ ಚಿತ್ರೀಕರಣ ನಡೆಸಿರುವ 117 ಜನರ ತಂಡ ದೇಶದಾದ್ಯಂತ ಸಾವಿರಾರು ಕಿ.ಮೀ. ಸಂಚಾರ ಮಾಡಿದೆ. 15 ಜನರನ್ನು ಒಳಗೊಂಡ ತಂಡಗಳು ಕರ್ನಾಟಕ, ಅಸ್ಸಾಂ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ್, ದೆಹಲಿ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 14 ರಾಜ್ಯಗಳಲ್ಲಿ ಚಿತ್ರೀಕರಿಸಿವೆ.

ಲಾಕ್‌ಡೌನ್‌ ಅವಧಿಯಲ್ಲಿನ ಖಾಲಿತನ 4 ನಿಮಿಷಗಳ ಚಿತ್ರದಲ್ಲಿ ಕಾಣಸಿಗುತ್ತದೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗುವುದಕ್ಕೂ ಮುನ್ನ ಮಾರ್ಚ್‌ 24ರಂದು ಪ್ರಧಾನಿ ನರೇಂದ್ರ ಮೋದಿ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಹಿನ್ನೆಲೆ ಧ್ವನಿಯೊಂದಿಗೆ ಚಿತ್ರ ತೆರೆದುಕೊಳ್ಳುತ್ತದೆ. ರಾಷ್ಟ್ರ ಧ್ವಜದ ಹಾರಾಟದೊಂದಿಗೆ ಮುಕ್ತಾಯವಾಗುತ್ತದೆ.

ದೆಹಲಿಯ ಕೆಂಪು ಕೋಟೆಯಿಂದ ಹಿಮಾಚಲದ ಕಣಿವೆಗಳು, ಮುಂಬೈ ಸಮುದ್ರದಿಂದ ಕೇರಳದ ಕರಾವಳಿ ಸೇರಿದಂತೆ ದೇಶದ ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಚಿತ್ರೀಕರಿಸಲಾಗಿದೆ. ವರಾಣಸಿ, ಬೆಂಗಳೂರಿನ ವಿಧಾನಸೌಧ, ಚೆನ್ನೈನ ಕಪಾಲೇಶ್ವರ ದೇವಸ್ಥಾನ, ಲಖನೌ, ಮುಂಬೈ ವಿಮಾನ ನಿಲ್ದಾಣ, ಹೀಗೆ ಜನರಿಂದ ತುಂಬಿರುತ್ತಿದ್ದ ಸ್ಥಳಗಳು ಶಾಂತವಾಗಿರುವುದನ್ನು ಕಾಣಬಹುದು.

'ಏನಾಗಿದೆ ಗೊತ್ತಿಲ್ಲ, ಒಂದು ಕ್ಷಣದಲ್ಲಿ ನಮ್ಮೆಲ್ಲರ ಬದುಕು ಬದಲಾಗಿರುವಂತೆ ತೋರುತ್ತಿದೆ. ಆದರೆ, ನಾಳೆ ಸೂರ್ಯ ಮತ್ತೆ ಉದಯಿಸುತ್ತಾನೆ, ನಾವೂ ಸಹ ಅದರೊಂದಿಗೆ ಮೇಲೇಳುತ್ತೇವೆ..' ಎಂಬ ಸಾಲುಗಳೊಂದಿಗೆ ಚಿತ್ರ ಪೂರ್ಣಗೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು