‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಟೈಟಲ್‌ಗೆ ಭಾರಿ ಡಿಮ್ಯಾಂಡ್

ಶನಿವಾರ, ಏಪ್ರಿಲ್ 20, 2019
30 °C
ಕಳ್ಳೆತ್ತು–ಜೋಡೆತ್ತಿಗೂ ಉಂಟು ಬೇಡಿಕೆ

‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಟೈಟಲ್‌ಗೆ ಭಾರಿ ಡಿಮ್ಯಾಂಡ್

Published:
Updated:

ಬೆಂಗಳೂರು: ನಟಿ ಸುಮಲತಾ ಮತ್ತು ನಟ ನಿಖಿಲ್‌ ಕುಮಾರಸ್ವಾಮಿ ನಡುವಿನ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಪ್ರಚಾರ ರಂಗೇರಿದೆ. ಪ್ರಚಾರದ ವೇಳೆ ಎರಡು ಕಡೆಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಅವರ ಬೈಗುಳದ ಪದಗಳನ್ನೇ ಸಿನಿಮಾದ ಬಂಡವಾಳ ಮಾಡಿಕೊಳ್ಳಲು ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರು ಮುಂದಾಗಿದ್ದಾರೆ.

‘ಕಳ್ಳೆತ್ತು’, ‘ಜೋಡೆತ್ತು’, ‘ನಿಖಿಲ್‌ ಎಲ್ಲಿದ್ದೀಯಪ್ಪ’ ಹೆಸರಿನ ಟೈಟಲ್‌ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಮಾ‍ಪಕರು ದುಂಬಾಲು ಬಿದ್ದಿದ್ದಾರೆ. ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಡಳಿಯು ಈ ಟೈಟಲ್‌ಗಳನ್ನು ನೀಡಲು ನಿರಾಕರಿಸಿದೆ.

ಸಮಾರಂಭವೊಂದರಲ್ಲಿ ತಮ್ಮ ಪುತ್ರನನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ‘ನಿಖಿಲ್‌ ಎಲ್ಲಿದ್ದೀಯಪ್ಪ’ ಎಂದು ಕರೆದಿದ್ದರು. ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ನಟರಾದ ದರ್ಶನ್‌ ಮತ್ತು ಯಶ್‌ ಅವರ ಹೆಸರು ಪ್ರಸ್ತಾಪಿಸದೆ ‘ಕಳ್ಳೆತ್ತು’, ‘ಜೋಡೆತ್ತು’ ಎಂದು ಟೀಕಿಸಿದ್ದರು. ಕುಮಾರಸ್ವಾಮಿ ಅವರ ಈ ಪದ ಬಳಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 

ನಟ ಅಂಬರೀಷ್‌ ‘ಮಂಡ್ಯದ ಗಂಡು’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ನಿರ್ಮಾಪಕರು ‘ಮಂಡ್ಯದ ಹೆಣ್ಣು’, ‘ಮಂಡ್ಯದ ಗೌಡ್ತಿ’ ಹೆಸರಿನ ಟೈಟಲ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. 

‘ಚುನಾವಣೆಯ ಪ್ರಚಾರದಲ್ಲಿ ಬಳಕೆಯಾಗುವ ಪದಗಳನ್ನೇ ತಮ್ಮ ಸಿನಿಮಾಕ್ಕೆ ಟೈಟಲ್‌ ಆಗಿ ನೀಡುವಂತೆ ಮಂಡಳಿಗೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಚುನಾವಣೆ ಮುಗಿಯುವವರೆಗೂ ಮಂಡಳಿಯು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಸಮಿತಿಯ ಮುಂದೆ ಕಥೆ ಸಲ್ಲಿಸಲು ಸೂಚಿಸಲಾಗಿದೆ. ಆ ನಂತರ ಪರಿಶೀಲನೆ ನಡೆಸಿ ಟೈಟಲ್‌ ನೀಡಬೇಕೇ ಅಥವಾ ತಿರಸ್ಕರಿಸಬೇಕೇ ಎನ್ನುವುದನ್ನು ನಿರ್ಧರಿಸಲಾಗುವುದು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 16

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !