ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಂಠೀರವ’ದಲ್ಲಿ ಪುನೀತ; ಅಂತಿಮ ದರ್ಶನಕ್ಕೆ ಜನಸಾಗರ

ರಾಜಧಾನಿಯಲ್ಲಿ ನೀರವ ಮೌನ; ನಾಗರಿಕರ ಕಂಬನಿ l ಜನರ ನಿಯಂತ್ರಣಕ್ಕೆ ಲಘು ಲಾಠಿ ಪ್ರಹಾರ l ಮುಗಿಲು ಮುಟ್ಟಿದ ಪುನೀತ್‌ ಪರ ಘೋಷಣೆ
Last Updated 30 ಅಕ್ಟೋಬರ್ 2021, 1:07 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಶುಕ್ರವಾರ ಸಂಜೆಯಿಂದಲೇ ಜನಸಾಗರವೇ ಹರಿದು ಬಂತು.

ಸದಾಶಿವನಗರದ ಮನೆಯಲ್ಲಿ ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿದ ನಂತರ, ಸಂಜೆ 7 ಗಂಟೆ ಸುಮಾರಿಗೆ ಪಾರ್ಥಿವ ಶರೀರರನ್ನು ಕ್ರೀಡಾಂಗಣಕ್ಕೆ ತರಲಾಯಿತು. ಇದಕ್ಕೂ ಮುನ್ನವೇ, ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಾಗೂ ಬ್ಯಾನರ್‌ಗಳನ್ನು ಹಾಕಿ ಹೂವಿನ ಅಲಂಕಾರದೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದೇ ಸ್ಥಳದಲ್ಲಿ ಶರೀರವನ್ನು ಇರಿಸಿ, ಅಭಿಮಾನಿಗಳ ದರ್ಶನಕ್ಕೆ ಅವಕಾಶ ನೀಡಲಾಯಿತು.

ನೆಚ್ಚಿನ ನಟನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ನಗರ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಕ್ರೀಡಾಂಗಣ ಸುತ್ತಲಿನ ವಿಠ್ಠಲ್ ಮಲ್ಯ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರ್‌ಬಾ ರಸ್ತೆ, ಕಾರ್ಪೋರೇಷನ್ ವೃತ್ತ ಹಾಗೂ ಕೆಂಪೇಗೌಡ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು.

ಪ್ರತಿಯೊಂದು ರಸ್ತೆಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಯಾವುದನ್ನೂ ಲೆಕ್ಕಿಸದ ಅಭಿಮಾನಿಗಳು, ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಕ್ರೀಡಾಂಗಣದೊಳಗೆ ಎಲ್ಲ ದ್ವಾರಗಳ ಮೂಲಕ ಒಳ ನುಗ್ಗಲು ಯತ್ನಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸರು, ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಅಭಿಮಾನಿಗಳು ದಿಕ್ಕಾಪಾಲಾಗಿ ಓಡಿದರು. ಸ್ಥಳದಲ್ಲಿದ್ದ ಬ್ಯಾರಿಕೇಡ್‌ಗಳು, ಪ್ಲೈವುಡ್‌ಗಳು ಹಾಗೂ ಜನರ ಚಪ್ಪಲಿಗಳು ಎಲ್ಲೆಂದರಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂತು. ಕೆಲವರು ಗಾಯಗೊಂಡರು.

ಸಾಲಿನಲ್ಲಿ ಹೋಗಿ ದರ್ಶನ: ಪ್ರತಿಯೊಬ್ಬರು ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಕ್ರೀಡಾಂಗಣದ ಮಧ್ಯದಲ್ಲಿ ಶೆಡ್ ನಿರ್ಮಿಸಿ ಶರೀರವನ್ನು ಇರಿಸಲಾಗಿದೆ. ಕ್ರೀಡಾಂಗಣದ ದ್ವಾರದಿಂದಲೇ ಸಾಲಾಗಿ ಶೆಡ್‌ ಬಳಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಕೆಲ ಅಭಿಮಾನಿಗಳು ಏಕಾಏಕಿ ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಯಿತು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ನಿಗ್ರಹಿಸಿದರು.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆ ಅಭಿಮಾನಿಗಳನ್ನು ಸಾಲಿನಲ್ಲಿ ಕ್ರೀಡಾಂಗಣದ ಒಳಗೆ ಕಳುಹಿಸಲಾಯಿತು. ಜನರ ಸಾಲು ಸಮಯ ಕಳೆದಂತೆ ದೊಡ್ಡದಾಗುತ್ತಲೇ ಇತ್ತು. ಪುನೀತ್‌ ರಾಜ್‌ಕುಮಾರ್ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಪಾರ್ಥಿವ ಶರೀರದ ಫೋಟೊ ಹಾಗೂ ವಿಡಿಯೊ ಸೆರೆ ಹಿಡಿಯಲು ಅಭಿಮಾನಿಗಳು ಮುಗಿಬಿದ್ದರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

‘ಪವರ್ ಸ್ಟಾರ್‌ಗೆ ಜೈ...’, ‘ಅಪ್ಪು ಬಾಸ್‌ಗೆ ಜೈ’, ‘ಜೂನಿಯರ್‌ ರಾಜ್‌ಕುಮಾರ್‌ಗೆ ಜೈ’ ಎಂಬ ಘೋಷಣೆ
ಗಳನ್ನು ಕೂಗಿದರು. ಪಾರ್ಥಿವ ಶರೀರಕ್ಕೆ ಕೆಲವರು ಕೈ ಮುಗಿದು ನಮಸ್ಕರಿಸಿದರೆ, ಹಲವರು ಸಾಷ್ಟಾಂಗ ನಮಸ್ಕಾರ ಹೇಳಿದರು.

ಅಂತಿಮ ದರ್ಶನ ಮಾಡುತ್ತಿದ್ದ ವೇಳೆ ಯುವಕರೊಬ್ಬರು, ಪ್ರಜ್ಞೆ ತಪ್ಪಿ ಬಿದ್ದರು. ಅವರನ್ನು ಪೊಲೀಸರು, ಹೊತ್ತೊಯ್ದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದರು.

ಮುಖ್ಯಮಂತ್ರಿ ಮೊಕ್ಕಾಂ: ಪಾರ್ಥಿವ ಶರೀರಕ್ಕೂ ಮುನ್ನವೇ ಕ್ರೀಡಾಂಗಣಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್‌. ಅಶ್ವತ್ಥ
ನಾರಾಯಣ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ಆರ್. ಅಶೋಕ, ಕೆ.ಸಿ. ನಾರಾಯಣಗೌಡ ಜೊತೆಗಿದ್ದರು.

ಮುಖ್ಯಮಂತ್ರಿ ಅವರೇ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸಹ ಹಾಜರಿದ್ದರು.

‘ರೋಗಿಗಳ ಸಂಬಂಧಿಕರ ಪರದಾಟ’

ವಿಕ್ರಮ್ ಆಸ್ಪತ್ರೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಅವರನ್ನು ದಾಖಲಿಸಿದ್ದರಿಂದ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸಂಬಂಧಿಕರು ಹಾಗೂ ಕಾಯಿಲೆಗೆ ಚಿಕಿತ್ಸೆ ಪಡೆಯಲು ವೈದ್ಯರಿಂದ ಸಮಯ ಪಡೆದಿದ್ದ ಜನ, ಆಸ್ಪತ್ರೆಯೊಳಗೆ ಹೋಗಲು ಪರದಾಡಿದರು.

ಆಸ್ಪತ್ರೆ ಸುತ್ತಲೂ ಪೊಲೀಸರು ನಿಂತಿದ್ದರು. ಸ್ಥಳಕ್ಕೆ ಬಂದ ರೋಗಿಗಳ ಸಂಬಂಧಿಕರನ್ನು ಒಳಗೆ ಬಿಡಲಿಲ್ಲ. ಅದನ್ನು ಪ್ರಶ್ನಿಸಿದ ಸಂಬಂಧಿಕರು, ದಾಖಲೆಗಳನ್ನು ತೋರಿಸಿದರು. ‘ರೋಗಿಗಳಿಗೆ ಔಷಧಿಗಳನ್ನು ನೀಡಬೇಕು. ಒಳಗೆ ಬಿಡಿ’ ಎಂದರು. ದಾಖಲೆ ಪರಿಶೀಲನೆ ನಡೆಸಿ ಪೊಲೀಸರು, ಒಳಗೆ ಬಿಟ್ಟರು.

ಆಸ್ಪತ್ರೆ ಬಳಿಯೇ ಶಾಲೆ–ಕಾಲೇಜುಗಳು ಇವೆ. ಮಧ್ಯಾಹ್ನ ತರಗತಿ ಮುಗಿಸಿದ್ದ ವಿದ್ಯಾರ್ಥಿಗಳು, ಜನಸ್ತೋಮದ ನಡುವೆಯೇ ಸಾಲಾಗಿ ನಡೆದುಕೊಂಡು ಮನೆಯತ್ತ ಹೋದರು.

ಕಾನ್‌ಸ್ಟೆಬಲ್ ಗಾಯ

ಅಭಿಮಾನಿಗಳನ್ನು ನಿಯಂತ್ರಿಸುವ ವೇಳೆ ತಳ್ಳಾಟ ನಡೆದು, ಸಂಚಾರ ಕಾನ್‌ಸ್ಟೆಬಲ್ ಗಣೇಶ್ ಎಂಬುವರ ಕಾಲಿಗೆ ಪೆಟ್ಟಾಗಿದೆ.

ವಿಠ್ಠಲ್ ಮಲ್ಯ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್, ಸ್ಥಳದಲ್ಲಿ ಉಂಟಾದ ಜನ ದಟ್ಟಣೆಯಲ್ಲಿ ಸಿಲುಕಿದ್ದರು. ಪೊಲೀಸರ ಜೊತೆ ಸೇರಿ ಎಲ್ಲರನ್ನೂ ಚದುರಿಸಲು ಮುಂದಾಗಿದ್ದರು. ಇದೇ ವೇಳೆ ಅವರನ್ನು ತಳ್ಳಲಾಗಿತ್ತು. ಅವಾಗಲೇ ಅವರ ಕಾಲಿಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಧಾನಿಯಲ್ಲಿ ನೀರವ ಮೌನ; ನಾಗರಿಕರ ಕಂಬನಿ

ಪುನೀತ್ ರಾಜ್‌ಕುಮಾರ್ ನಿಧನದಿಂದಾಗಿ ಬೆಂಗಳೂರಿನಲ್ಲಿ ನೀರವ ಮೌನ ಆವರಿಸಿದೆ. ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆ ಆಗಿತ್ತು. ಜನ ಸಂಚಾರವೂ ತಗ್ಗಿತ್ತು.

ಪಾರ್ಥಿವ ಶರೀರದ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದತ್ತ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ನಗರದ ಬಹುತೇಕ ಆಟೊ ಹಾಗೂ ಕ್ಯಾಬ್ ಚಾಲಕರು, ಪುನೀತ್‌ ಅಭಿಮಾನಿಯಾಗಿದ್ದಾರೆ.

ಕ್ರೀಡಾಂಗಣ ಬಳಿ ದಟ್ಟಣೆ ಉಂಟಾಗಿರುವುದರಿಂದ, ಬಿಎಂಟಿಸಿ ಬಸ್‌ಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.

ಚಿತ್ರಮಂದಿರ, ಹೋಟೆಲ್‌, ಉದ್ಯಾನ, ಅಂಗಡಿ, ಮಳಿಗೆ, ಬಸ್ ತಂಗುದಾಣ ಹಾಗೂ ಇತರೆಡೆ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಾಕಲಾಗಿದೆ. ಪುಷ್ಪ ನಮನ ಅರ್ಪಿಸಿದ ನಾಗರಿಕರು, ಪುನೀತ್‌ ರಾಜ್‌ಕುಮಾರ್ ನಿಧನಕ್ಕೆ ಕಂಬನಿ ಮಿಡಿದರು.

ಚರ್ಚ್‌ಸ್ಟ್ರೀಟ್, ಎಂ.ಜಿ. ರಸ್ತೆ, ಗಾಂಧಿನಗರ, ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ಹಲವು ಮಾರುಕಟ್ಟೆ ಸ್ಥಳಗಳಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಅಂಗಡಿ ಎದುರು ಪುನೀತ್ ರಾಜ್‌ಕುಮಾರ್ ಭಾವಚಿತ್ರಗಳನ್ನು ಅಂಟಿಸಿ, ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT