ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ಕಾಯ್ದೆ ಜನಸಾಮಾನ್ಯರ ಬ್ರಹ್ಮಾಸ್ತ್ರ

ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಕುರಿತು ಕಾರ್ಯಾಗಾರ
Last Updated 28 ಏಪ್ರಿಲ್ 2018, 12:21 IST
ಅಕ್ಷರ ಗಾತ್ರ

ಕೊಪ್ಪಳ: ಸಕಾಲ ಕಾಯ್ದೆ ಜನಸಾಮಾನ್ಯರ ಬ್ರಹ್ಮಾಸ್ತ್ರ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ ಹೇಳಿದರು.

ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಹಾಗೂ ಸಂರಕ್ಷಣೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರದಿಂದ 2001ರಲ್ಲಿ ಸಕಾಲ ಕಾಯ್ದೆ ಜಾರಿಗೊಳಿಸಲಾಯಿತು. ಈ ಮೂಲಕ 500ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದು. ಇದರಲ್ಲಿ ಅಧಿಕಾರಿಗಳು ನಿರ್ದಿಷ್ಟ ಸಮಯದಲ್ಲಿ ಸೇವೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಉನ್ನತ ಅಧಿಕಾರಿಗಳಿಗೆ ದೂರು ನೀಡಬಹುದು. ಇದರಿಂದ ಲಂಚ ನೀಡುವುದು ತಪ್ಪುತ್ತದೆ. ಆದರೆ, ಈ  ಕುರಿತು ಜನರಿಗೆ ಮಾಹಿತಿ ಇಲ್ಲ ಎಂದರು.

ಕಾನೂನು ತಿಳಿಯದಿದ್ದರೆ ಏನು ದುಷ್ಪರಿಣಾಮಗಳು ಇವೆ ಎಂದು ಅರಿತಿದ್ದರೂ, ಜನರು ಕಾನೂನು ತಿಳಿಯಲು ಆಸಕ್ತಿ ವಹಿಸುವುದಿಲ್ಲ. ಬದಲಿಗೆ ತೊಂದರೆಗಳು ಎದುರಾದಾಗ ಕಾನೂನು ತಿಳಿಯಲು ಮುಂದಾಗುತ್ತೇವೆ.  ವಕೀಲರು ಇದ್ದಾರೆ, ನ್ಯಾಯಾಲಯ ಇದೆ ಎಂದು ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತೇವೆ. ಇದರಿಂದ ವಕೀಲರಿಗೆ ನೀಡುವ ಸಂಭಾವನೆಯಿಂದ ಹಣ ಹಾಗೂ ನ್ಯಾಯಾಲಯಕ್ಕೆ ಅಲೆದಾಡಿ ಮಾನಸಿಕ ನೆಮ್ಮದಿ ಎರಡನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ಎಲ್ಲ ಕಾನೂನುಗಳನ್ನು ತಿಳಿಯದಿದ್ದರೂ ದಿನನಿತ್ಯದ ಜೀವನಕ್ಕೆ ಅವಶ್ಯವಿರುವ ಕಾನೂನು ತಿಳಿಯುವುದು ಅಗತ್ಯ ಎಂದರು.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸರ್ಕಾರ ಫೋಕ್ಸೊ ಕಾಯ್ದೆಯನ್ನು 2012ರಲ್ಲಿ ಜಾರಿಗೊಳಿಸಿದೆ. ಇದರ ಉದ್ದೇಶ ಮಹಿಳೆ ಹಾಗೂ ಮಕ್ಕಳ ಮೇಲೆ ಆಗುವ ದೌರ್ಜನ್ಯ ತಡೆಗಟ್ಟುವುದಾಗಿದೆ. ಆದರೆ ಅಮಾನವೀಯತೆ ಹಾಗೂ ಮನೋಧರ್ಮದ ಕೊರತೆಯಿಂದ ದೌರ್ಜನ್ಯಗಳು ಇನ್ನೂ ನಡೆಯುತ್ತಿವೆ. ಇದನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ. ಈ ಕಾಯ್ದೆ ಜಾರಿಮಾಡಲು ಕಾರಣವಾಗಿದ್ದು ನಿರ್ಭಯ ಪ್ರಕರಣ. ಇದಕ್ಕೂ ಮುಂಚಿತವಾಗಿ ಕಾಯ್ದೆಗಳು ಇದ್ದವು. ಆದರೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ ಎಂದರು.

ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ.ಮನೋಜ್ ಡೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀರೇಂದ್ರ ನಾವದಗಿ, ಸಹಾಯಕ ಪ್ರಾಧ್ಯಾಪಕ ಪ್ರಕಾಶ ಅಳವಟ್ಟಿ, ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಇದ್ದರು.

**
ಪ್ರಕರಣ ಗೆಲ್ಲಲಿ ಅಥವಾ ಸೋಲಲಿ ವಕೀಲರಿಗೆ ಸಂಭಾವನೆ ನೀಡಬೇಕು. ಅಲ್ಲದೇ ನ್ಯಾಯಲಯಕ್ಕೆ ಅಲೆದಾಡುವುದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ
– ಟಿ.ಶ್ರೀನಿವಾಸ,ಸದಸ್ಯ ಕಾರ್ಯಾದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT